ಉನ್ನತ ಶಿಕ್ಷಣದ ಯಾವುದೇ ಕೋರ್ಸ್‌ನ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಕ್ರಮ ಸ್ವಾಗತಾರ್ಹ. ಸ್ಥಳೀಯ ಭಾಷೆಗಳನ್ನು ಬಲಪಡಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ದಿಸೆಯಲ್ಲಿ ಯುಜಿಸಿ ಮಹತ್ವದ ಹೆಜ್ಜೆಯಿಟ್ಟಿದೆ. ಬೋಧನಾ ಮಾಧ್ಯಮ ಇಂಗ್ಲಿಷ್‌ನಲ್ಲಿದ್ದರೂ ಪರೀಕ್ಷೆಯನ್ನು ಸ್ಥಳೀಯ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ವಿಶ್ವವಿದ್ಯಾಲಯಗಳಿಗೆ ಯುಜಿಸಿ ಸೂಚಿಸಿದೆ. ಬೋಧನೆ ಮತ್ತು ಕಲಿಕೆಯಲ್ಲಿ ಸ್ಥಳೀಯ ಭಾಷೆಗಳ ಬಳಕೆಯನ್ನು ಉತ್ತೇಜಿಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎನ್ನುವ ಯುಜಿಸಿ ಅಭಿಪ್ರಾಯ ಸರಿಯಾದುದು. ಪ್ರಾದೇಶಿಕ ಭಾಷೆಯಲ್ಲಿ ಬರೆಯುವುದರಿಂದ ವಿದ್ಯಾರ್ಥಿಗೆ ತನ್ನ ಸಾಮರ್ಥ್ಯವನ್ನು ಅತ್ಯುತ್ತಮ ರೀತಿಯಲ್ಲಿ ಅಭಿವ್ಯಕ್ತಗೊಳಿಸುವುದು ಸಾಧ್ಯವಾಗುತ್ತದೆ ಹಾಗೂ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಹೊಂದುವುದು ಸಾಧ್ಯವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತದೆಂದು ನಿರೀಕ್ಷಿಸಲಾಗಿರುವ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ’ ಕೂಡ ಶಿಕ್ಷಣದಲ್ಲಿ ಭಾರತೀಯ ಭಾಷೆಗಳ ಬಳಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದ್ದು, ಆ ಉದ್ದೇಶಕ್ಕೆ ಪೂರಕವಾಗಿ ವಿಶ್ವವಿದ್ಯಾಲಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಮಹತ್ವ ದೊರಕಿಸಿಕೊಡಲು ಯುಜಿಸಿ ಮುಂದಾಗಿದೆ. ಬೋಧನೆ ಹೆಚ್ಚು ಪರಿಣಾಮಕಾರಿಯಾಗಲು ಹಾಗೂ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಸ್ಥಳೀಯ ಭಾಷೆಗಳಲ್ಲಿನ ಸಂವಹನ ಪ್ರಮುಖ ಪಾತ್ರ ವಹಿಸಲಿದೆ. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನ ಯಾಜಮಾನ್ಯವನ್ನು ತಪ್ಪಿಸಿ, ಪ್ರಾದೇಶಿಕ ಭಾಷೆಗಳಿಗೂ ಸಮಾನ ಅವಕಾಶವನ್ನು ಕಲ್ಪಿಸುವಂತೆ ದಕ್ಷಿಣ ಭಾರತದ ರಾಜ್ಯಗಳು ನಿರಂತರವಾಗಿ ಒತ್ತಾಯಿಸುತ್ತಲೇ ಇವೆ.
ಈ ಒತ್ತಾಯದ ಕಾರಣದಿಂದಾಗಿಯೇ, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಕನ್ನಡ ಸೇರಿದಂತೆ ಎಲ್ಲ ರಾಜ್ಯ ಭಾಷೆಗಳಲ್ಲಿ ಬರೆಯಲು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಹಸಿರು ನಿಶಾನೆ ತೋರಿದೆ. ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್‌ಸಿ) ಕೂಡ ಕನ್ನಡವೂ ಸೇರಿದಂತೆ ಹದಿಮೂರು ಪ್ರಾದೇಶಿಕ ಭಾಷೆಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆಗಳನ್ನು ಬರೆಯಲು ಈಗಾಗಲೇ ಅವಕಾಶ ಕಲ್ಪಿಸಿದೆ. ಈಗ ಉನ್ನತ ಶಿಕ್ಷಣದ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಯುಜಿಸಿ ಅವಕಾಶ ನೀಡಿದೆ. ಇವೆಲ್ಲ ಕ್ರಮಗಳು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನ ಅನಗತ್ಯ ಮಹತ್ವವನ್ನು ತಪ್ಪಿಸಿ, ಅವಕಾಶಗಳನ್ನು ಎಲ್ಲ ಭಾಷಿಕರಿಗೂ ಮುಕ್ತಗೊಳಿಸುವ ಪ್ರಯತ್ನಗಳಾಗಿವೆ.
ಉನ್ನತ ಶಿಕ್ಷಣದ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡುವಷ್ಟಕ್ಕೆ ಮಾತ್ರ ಯುಜಿಸಿ ತನ್ನ ಹೊಣೆಗಾರಿಕೆಯನ್ನು ಸೀಮಿತಗೊಳಿಸಿಕೊಳ್ಳಬಾರದು. ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿ ಎದುರಿಸಬೇಕಾದ ಸವಾಲುಗಳ ಬಗ್ಗೆಯೂ ಚಿಂತನೆ ನಡೆಯಬೇಕಾಗಿದೆ. ಇಂಗ್ಲಿಷ್‌ನಲ್ಲಿ ಬೋಧನೆ ನಡೆಯವಾಗ, ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯುವುದು ಯಾವ ವಿದ್ಯಾರ್ಥಿಗೂ ಸುಲಭವಲ್ಲ. ಬೋಧನೆ, ಕಲಿಕೆ ಮತ್ತು ಪರೀಕ್ಷೆಯ ಭಾಷೆಗಳು ಒಂದೇ ಆದಾಗ ಉತ್ತಮ ಫಲಿತಾಂಶ ಸಾಧ್ಯ. ಈ ನಿಟ್ಟಿನಲ್ಲಿ ಮೊದಲು ಆಗಬೇಕಾದುದು ಪಠ್ಯಗಳನ್ನು ಪ್ರಾದೇಶಿಕ ಭಾಷೆಗಳಿಗೆ ರೂಪಾಂತರಿಸುವುದು. ಇಂಗ್ಲಿಷ್‌ನಲ್ಲಿ ಕಲಿತು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದರಿಂದ ಹೆಚ್ಚಿನ ಉಪಯೋಗವಾಗದು. ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವ ಯುಜಿಸಿ ಕ್ರಮ, ಜ್ಞಾನವನ್ನು ವಿಕೇಂದ್ರೀಕರಿಸುವ ದಿಸೆಯಲ್ಲಿ ಮೊದಲ ಹೆಜ್ಜೆಯಷ್ಟೇ. ಈ ಉದ್ದೇಶ ಪೂರ್ಣ ರೂಪದಲ್ಲಿ ಯಶಸ್ವಿಯಾಗಬೇಕಾದರೆ, ಪ್ರಾದೇಶಿಕ ಭಾಷೆಗಳಲ್ಲಿ ಅತ್ಯುತ್ತಮ ಪಠ್ಯಗಳನ್ನು ರೂಪಿಸುವ ಕೆಲಸ ನಡೆಯಬೇಕು ಹಾಗೂ ಆ ಪಠ್ಯಗಳನ್ನು ಬೋಧಿಸುವ ಸ್ಥಿತಿಯೂ ರೂಪುಗೊಳ್ಳಬೇಕು. ಬೋಧನೆ, ಕಲಿಕೆ, ಮೌಲ್ಯಮಾಪನ ಪ್ರಕ್ರಿಯೆಯು ಸ್ಥಳೀಯ ಭಾಷೆಗಳಲ್ಲಿ ನಡೆದರೆ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯ ಪ್ರಮಾಣ ಹೆಚ್ಚಾಗುತ್ತದೆ ಎಂದು ಯುಜಿಸಿ ಹೇಳಿದ್ದರೂ, ಈ ಆಶಯವನ್ನು ಕಾರ್ಯರೂಪಕ್ಕೆ ತರುವಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಏನನ್ನೂ ಹೇಳಿಲ್ಲ.
ಪ್ರಸ್ತುತ ಇಂಗ್ಲಿಷ್ ಮಾಧ್ಯಮದಲ್ಲಿರುವ ಉನ್ನತ ಶಿಕ್ಷಣವನ್ನು ಸ್ಥಳೀಯ ಭಾಷೆಗಳಿಗೆ ಒಗ್ಗಿಸಲು ಅಗತ್ಯವಾದ ಸಂಪನ್ಮೂಲಗಳ ಕ್ರೋಡೀಕರಣ ಸುಲಭದ ಸವಾಲೇನೂ ಅಲ್ಲ. ಈ ಸವಾಲಿಗೆ ಉತ್ತರ ಕಂಡುಕೊಳ್ಳುವ ದಾರಿಗಳನ್ನು ಕಂಡುಕೊಳ್ಳುವವರೆಗೂ, ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿರುವುದು ಒಂದು ಆಶಯವಾಗಿಯಷ್ಟೇ ಕಾಣಿಸುತ್ತದೆ. ಸ್ಥಳೀಯ ಭಾಷೆಯಲ್ಲಿ ಕಲಿತು ಪರೀಕ್ಷೆ ಎದುರಿಸುವ ವಿದ್ಯಾರ್ಥಿ, ಉದ್ಯೋಗದ ಸಂದರ್ಭದಲ್ಲಿ ತನ್ನ ಕಲಿಕೆಯನ್ನು ಪ್ರಾದೇಶಿಕ ಭಾಷೆಯಲ್ಲಿಯೇ ಕಾರ್ಯರೂಪಕ್ಕೆ ತರುವಲ್ಲಿ ಎದುರಾಗುವ ಸವಾಲುಗಳ ಬಗ್ಗೆಯೂ ಯೋಚಿಸಬೇಕಾಗಿದೆ. ಜಾಗತಿಕ ಸನ್ನಿವೇಶಗಳಲ್ಲಿ ಉದ್ಯೋಗದ ಭಾಷೆ ಇಂಗ್ಲಿಷ್ ಆಗಿರುವುದರಿಂದ, ಆ ಭಾಷೆಯಲ್ಲಿ ಉತ್ತಮ ಸಾಮರ್ಥ್ಯ ಹೊಂದುವುದು ಅಗತ್ಯ. ಇಲ್ಲದೆ ಹೋದಲ್ಲಿ, ಕೀಳರಿಮೆ ಉಂಟಾಗಬಹುದು. ಹಾಗಾಗಿ, ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸುವುದೂ ಅಪೇಕ್ಷಣೀಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.