ಕರ್ನಾಟಕದ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳು ವಿಷವರ್ತುಲದೊಳಗೆ ಸಿಲುಕಿವೆ. ಈ ವಾಸ್ತವವನ್ನು ನೇರವಾಗಿ ಎದುರಿಸುವುದಕ್ಕೆ ರಾಜಕೀಯ ನಾಯಕತ್ವದಿಂದ ತೊಡಗಿ ಶೈಕ್ಷಣಿಕ ನಾಯಕತ್ವದ ತನಕ ಯಾರೂ ಸಿದ್ಧರಿಲ್ಲ. ಪರಿಣಾಮವಾಗಿ ಸತತವಾಗಿ ತೇಪೆ ಹಾಕುವ ಪ್ರಕ್ರಿಯೆಯೊಂದು ಜಾರಿಯಲ್ಲಿದೆ. ಈಗ ಪರಿಸ್ಥಿತಿ ಎಷ್ಟು ವಿಷಮ ಸ್ವರೂಪ ತಳೆದಿದೆಯೆಂದರೆ ವಿಶ್ವವಿದ್ಯಾಲಯಗಳ ಸುಧಾರಣೆಯಿರಲಿ, ಅವುಗಳ ಸ್ಥಿತಿ ಏನಾಗಿದೆ ಎಂದು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯೊಂದನ್ನು ಆರಂಭಿಸುವುದಕ್ಕಾಗಿ ಒತ್ತಾಯಿಸಬೇಕಾಗಿದೆ. ಯಾವುದೇ ಪರಿಹಾರವನ್ನು ಯೋಜಿಸುವ ಮುನ್ನ ಸದ್ಯದ ಸ್ಥಿತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮೊದಲೇ ಪರಿಹಾರವೊಂದನ್ನು ಮನಸ್ಸಿನಲ್ಲಿಟ್ಟುಕೊಂಡು ಇದನ್ನು ಅರಿಯಲು ಹೊರಟರೆ ಅದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ನಮ್ಮ ವಿಶ್ವವಿದ್ಯಾಲಯಗಳ ಸ್ಥಿತಿಯನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸಬೇಕಾಗಿದೆ. ಶೈಕ್ಷಣಿಕ ಆಡಳಿತ ಎಂಬುದು ಕೇವಲ ಔಪಚಾರಿಕತೆಗಳಿಗೆ ಸೀಮಿತವಾಗಿದೆ. ಶೈಕ್ಷಣಿಕ ಯೋಜನೆಯ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಇನ್ನು ಸಿಬ್ಬಂದಿ ಮತ್ತು ಮೂಲ ಸೌಕರ್ಯ ನಿರ್ವಹಣೆ ಇತ್ಯಾದಿಗಳ ಕುರಿತು ಹೇಳದೇ ಇರುವುದೇ ಉತ್ತಮ. ಯಾವೊಂದು ಸಣ್ಣ ಸಮಸ್ಯೆಯ ಎಳೆ ಹಿಡಿದು ಹೊರಟರೂ ಅದು ಕೊನೆಗೊಳ್ಳುವುದು ವಿಶ್ವವಿದ್ಯಾಲಯ ಎಂಬ ವ್ಯವಸ್ಥೆಯೇ ಸಿಲುಕಿರುವ ವಿಷವರ್ತುಲದ ಒಳಗೆ. ಸರಳವಾಗಿ ಹೇಳಬೇಕೆಂದರೆ ವಿಶ್ವವಿದ್ಯಾಲಯ ವ್ಯವಸ್ಥೆಯನ್ನು ಈ ವಿಷವರ್ತುಲದಿಂದ ಹೊರತರುವುದಕ್ಕೆ ತಕ್ಷಣದ ಯಾವ ಪರಿಹಾರಗಳೂ ಇಲ್ಲ. ಏಕೆಂದರೆ ಸಮಸ್ಯೆಯನ್ನು ದಶಕಗಳ ಕಾಲದ ಅದಕ್ಷತೆ, ಸ್ವಜನಪಕ್ಷಪಾತ ಮತ್ತು ಶಿಕ್ಷಣೇತರವಾದ ಆದ್ಯತೆಗಳನ್ನು ಮುಂದು ಮಾಡಿಕೊಂಡು ಸೃಷ್ಟಿಸಲಾಗಿದೆ. ಪರಿಣಾಮವಾಗಿ ಇಡೀ ವ್ಯವಸ್ಥೆ ಒಳಗಿನಿಂದ ಶಿಥಿಲವಾಗಿದೆ. ಕುಲಪತಿಗಳ ಆಯ್ಕೆಯಿಂದ ತೊಡಗಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಸಿಬ್ಬಂದಿ ನೇಮಕಾತಿಯ ತನಕ ವ್ಯಾಪಿಸಿರುವ ಭ್ರಷ್ಟಾಚಾರವು ಸಮಸ್ಯೆಯ ಸಣ್ಣದೊಂದು ತುಣುಕು ಮಾತ್ರ. ಈ ಭ್ರಷ್ಟಾಚಾರವನ್ನು ನಿಯಂತ್ರಿಸುವುದಕ್ಕಾಗಿ ಮೇಲಿಂದ ಮೇಲೆ ಬಂದ ಸರ್ಕಾರಗಳು ರೂಪಿಸಿದ ತಂತ್ರ ಭ್ರಷ್ಟಾಚಾರದ ಕೇಂದ್ರಗಳನ್ನು ಬದಲಾಯಿಸಿದವೇ ಹೊರತು ಮೂಲ ಸಮಸ್ಯೆಯನ್ನು ನಿವಾರಿಸಲಿಲ್ಲ.
ಕಳೆದ ಹತ್ತು ವರ್ಷಗಳ ಅವಧಿಯನ್ನು ತೆಗೆದುಕೊಂಡರೆ ಹಗರಣ ಮುಕ್ತವಾದ ಒಂದೇ ಒಂದು ವಿಶ್ವವಿದ್ಯಾಲಯವೂ ಕರ್ನಾಟಕದಲ್ಲಿಲ್ಲ. ಸರಳವಾಗಿ ಹೇಳಬೇಕೆಂದರೆ ರಾಜಕೀಯ ನಾಯಕತ್ವದ ಮಟ್ಟಿಗೆ ವಿಶ್ವವಿದ್ಯಾಲಯಗಳು ‘ತಮ್ಮವರಿಗೆ’ ಕೆಲವು ಹೊಸ ಕುರ್ಚಿಗಳನ್ನು ಸೃಷ್ಟಿಸುವ ಸಂಸ್ಥೆಗಳು ಮಾತ್ರ. ಈ ಸ್ಥಿತಿಯಲ್ಲಿ ವಿಶ್ವವಿದ್ಯಾಲಯಗಳನ್ನು ಸುಧಾರಣೆಗೆ ಒಳಪಡಿಸುವುದು ಅಥವಾ ಸಮಸ್ಯೆಯ ಸುಳಿಯಿಂದ ಅವುಗಳನ್ನು ಹೊರಗೆ ತರುವುದು ಎಂಬುದು ಅತಿ ಆಶಾವಾದ ಮಾತ್ರ. ಒಂದು ಸಮಗ್ರವಾದ ಸುಧಾರಣೆಗೆ ಹೊರಟರೆ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿಯ ಸಾಮರ್ಥ್ಯವನ್ನು ನಿಕಷಕ್ಕೆ ಒಡ್ಡಬೇಕು. ಇದನ್ನು ಮಾಡುವುದು ಹೇಗೆ ಎಂಬ ಸಮಸ್ಯೆ ಇದೆ. ಕಷ್ಟಪಟ್ಟು ಅದನ್ನು ಸಾಧಿಸಿದರೂ ನಿಗದಿತ ಮಟ್ಟದ ಸಾಮರ್ಥ್ಯವಿಲ್ಲದೇ ಇರುವವರನ್ನು ಏನು ಮಾಡಬೇಕೆಂಬ ಸಮಸ್ಯೆ ಉಳಿಯುತ್ತದೆ. ವಿಶ್ವವಿದ್ಯಾಲಯವೊಂದು ಕಾಯ್ದುಕೊಳ್ಳಬೇಕಾದ ನೈತಿಕ ಮಟ್ಟವನ್ನು ಉಳಿಸಿಕೊಳ್ಳಲು ಅವು ವಿಫಲವಾಗಿರುವಾಗ ಯೋಜಿಸಿದ ಸುಧಾರಣೆಗಳು ಕೇವಲ ಔಪಚಾರಿಕ ಮಟ್ಟದಲ್ಲಿ ಜಾರಿಯಾಗಬಹುದೇ ಹೊರತು ಗುಣಾತ್ಮಕವಾದ ರೂಪದಲ್ಲಲ್ಲ. ಇಂಥದ್ದೊಂದು ನಿರಾಶಾದಾಯಕ ಸ್ಥಿತಿಯಲ್ಲಿ ಉಳಿದಿರುವುದು ಒಂದೇ ಮಾರ್ಗ. ಪರ್ಯಾಯಗಳ ಬಗ್ಗೆ ಚಿಂತಿಸುವುದು. ಈ ಪ್ರಕ್ರಿಯೆಯನ್ನು ವಿಶ್ವವಿದ್ಯಾಲಯ ವ್ಯವಸ್ಥೆಯ ಒಳಗಿನಿಂದಲೇ ಆರಂಭಿಸಬೇಕೇ ಅಥವಾ ಸಂಪೂರ್ಣ ಭಿನ್ನವಾದ ಮತ್ತೊಂದು ವ್ಯವಸ್ಥೆಯನ್ನು
ಸೃಷ್ಟಿಸಬೇಕೇ ಎಂಬ ಸಮಸ್ಯೆಯೂ ಇಲ್ಲಿದೆ. ಹೀಗೆ ಸೃಷ್ಟಿಸಿದ ಪರ್ಯಾಯ ವ್ಯವಸ್ಥೆಯೊಳಗೆ ನೈತಿಕವಾದ ಮತ್ತು ಗುಣಾತ್ಮಕವಾದ ಆದರ್ಶಗಳು ಸತತವಾಗಿ ಉಳಿದು ಬೆಳೆಯುವಂತೆ ಮಾಡುವುದು ಹೇಗೆ? ಈ ಪ್ರಶ್ನೆಗಳಿಗೆ ಸುಲಭವಾದ ಉತ್ತರಗಳಿಲ್ಲ. ವಿಶ್ವವಿದ್ಯಾಲಯಗಳು ಒಟ್ಟಾರೆಯಾಗಿ ನೈತಿಕತೆ ಮತ್ತು ಗುಣಾತ್ಮಕತೆಯ ಕುಸಿತಕ್ಕೆ ಒಳಗಾಗಿವೆ ಎಂಬುದನ್ನು ಅರಿತು ಮುಂದುವರಿಯಲು ಹೊರಟರೆ ನಮ್ಮೆದುರು ಉಳಿಯುವುದು ಒಂದು ಆಯ್ಕೆ ಮಾತ್ರ. ಹೊಸ ಬಗೆಯ ಸಾರ್ವಜನಿಕ ವಿಶ್ವವಿದ್ಯಾಲಯ ಸಂಸ್ಕೃತಿ ಮತ್ತು ವ್ಯವಸ್ಥೆಯನ್ನು ರೂಪಿಸುವ ಆಯ್ಕೆ. ಇದು ಮತ್ತಷ್ಟು ಉತ್ಕೃಷ್ಟತೆಯ ದ್ವೀಪಗಳನ್ನು ಸೃಷ್ಟಿಸುವ ಬದಲಿಗೆ ಒಟ್ಟು ವಿಶ್ವವಿದ್ಯಾಲಯ ವ್ಯವಸ್ಥೆಗೆ ನಿಜ ಅರ್ಥದ ಪರ್ಯಾಯವಾಗಬೇಕು. ಇದನ್ನು ಮಾಡುವುದಕ್ಕೆ ಮೊದಲು ಸಮಸ್ಯೆ ಅಥವಾ ಬಿಕ್ಕಟ್ಟನ್ನು ಅರಿಯುವ ಪ್ರಕ್ರಿಯೆಗೆ ಚಾಲನೆ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.