ಜಾಗತಿಕ ಹಸಿವು ಸೂಚ್ಯಂಕದ (ಡಬ್ಲ್ಯುಎಚ್‌ಐ) ವರದಿಯು ಕಳೆದ ವಾರ ಬಿಡುಗಡೆಯಾಗಿದ್ದು, ಅದರ ಬಗ್ಗೆ ಭಾರತ ಸರ್ಕಾರ ನೀಡಿರುವ ಪ್ರತಿಕ್ರಿಯೆ ನಿರೀಕ್ಷಿತವೇ ಆಗಿದೆ. 125 ದೇಶಗಳ ಪಟ್ಟಿಯಲ್ಲಿ ಭಾರತವು 111ನೇ ಸ್ಥಾನ ಪಡೆದಿದೆ ಎಂದು ವರದಿ ಹೇಳಿದೆ.
ಬೆಳವಣಿಗೆ ಕುಂಠಿತಗೊಂಡ ಮಕ್ಕಳ ಪ್ರಮಾಣವು ನಮ್ಮಲ್ಲಿಯೇ ಅತಿ ಹೆಚ್ಚು ಇದೆ. ಇಂತಹ ಮಕ್ಕಳ ಪ್ರಮಾಣವು ಶೇಕಡ 18.7ರಷ್ಟಿದೆ ಎಂದು ವರದಿ ವಿವರಿಸಿದೆ. ದೇಶದಲ್ಲಿ ಹಸಿವು ಮತ್ತು ಅಪೌಷ್ಟಿಕತೆ ವ್ಯಾಪಕವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
ವರದಿಯು ಅಸಮರ್ಪಕವಾಗಿದ್ದು ಲೋಪದಿಂದ ಕೂಡಿದೆ, ವರದಿ ಸಿದ್ಧಪಡಿಸುವಿಕೆಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂದು ಸರ್ಕಾರ ಹೇಳಿದೆ. ಕಳೆದ ವರ್ಷ ಡಬ್ಲ್ಯುಎಚ್‌ಐನಲ್ಲಿ ಭಾರತದ ರ‍್ಯಾಂಕ್ 107 ಇತ್ತು. ಆಗಲೂ ಭಾರತ ಸರ್ಕಾರವು ಹೀಗೆಯೇ ಹೇಳಿತ್ತು. ವರದಿ ಸಿದ್ಧಪಡಿಸಿದ ವಿಧಾನವೇ ಸರಿ ಇಲ್ಲ, ವರದಿಯು ದುರುದ್ದೇಶದಿಂದ ಕೂಡಿದೆ ಎಂದೂ ಸರ್ಕಾರ ಹೇಳಿದೆ.
ದೇಶದಲ್ಲಿ ಸಮಸ್ಯೆಗಳು ಇವೆ ಎಂದು ಹೇಳುವ ವರದಿಗಳು ಅಥವಾ ಸಮೀಕ್ಷೆಗಳ ಕುರಿತು ಸರ್ಕಾರ ಪ್ರತಿ ಬಾರಿಯೂ ಇಂತಹ ಪ್ರತಿಕ್ರಿಯೆಯನ್ನೇ ನೀಡಿದೆ. ಸಮೀಕ್ಷೆಗೆ ಮಿತಿಗಳು ಇವೆ ಎಂದು ಭಾವಿಸಿದರೂ ಅದು ಕೊಟ್ಟ ಆಘಾತಕಾರಿ ಚಿತ್ರಣವನ್ನು ತಿರಸ್ಕರಿಸುವುದರಲ್ಲಿ ಪ್ರಾಮಾಣಿಕತೆಯಾಗಲೀ ಸದುದ್ದೇಶವಾಗಲೀ ಇಲ್ಲ. ಹಸಿವಿನ ವಿಚಾರದಲ್ಲಿ ವಿವಿಧ ದೇಶಗಳ ಸ್ಥಿತಿಗತಿ ಹೇಗಿದೆ ಎಂಬ ಈ ತುಲನಾತ್ಮಕ ವರದಿಯನ್ನು ಜಗತ್ತು ಒಪ್ಪಿಕೊಂಡಿದೆ. ಈ ವರದಿಯನ್ನು ಭಾರತ ಪ್ರಶ್ನಿಸಿದ ರೀತಿಯಲ್ಲಿ ಬೇರೆ ಯಾವ ದೇಶವೂ ಪ್ರಶ್ನಿಸಿಲ್ಲ.
ಹಸಿವು ಮತ್ತು ಅಪೌಷ್ಟಿಕತೆ ದೊಡ್ಡ ಮಟ್ಟದಲ್ಲಿಯೇ ಇವೆ ಎಂಬುದನ್ನು ಸರ್ಕಾರ ನೀಡಿದ ಅಂಕಿಅಂಶಗಳೇ ಹೇಳುತ್ತವೆ. ಆರು ತಿಂಗಳಿಂದ 23 ತಿಂಗಳೊಳಗಿನ ಶೇ 11.3ರಷ್ಟು ಮಕ್ಕಳಿಗೆ ಮಾತ್ರ ಸಮತೋಲಿತ ಆಹಾರ ದೊರೆಯುತ್ತಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್)– 5ರ ವರದಿಯು ಹೇಳಿದೆ. ಆರು ವರ್ಷದೊಳಗಿನ ಮಕ್ಕಳು, ಹದಿಹರೆಯದ ಬಾಲಕ–ಬಾಲಕಿಯರು ಮತ್ತು 15 ವರ್ಷದಿಂದ 49 ವರ್ಷ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ವ್ಯಾಪಕವಾಗಿದೆ ಎಂಬುದರತ್ತಲೂ ಈ ವರದಿ ಬೊಟ್ಟು ಮಾಡಿದೆ. ಭಾರತದಲ್ಲಿ 43 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ ಇದೆ ಎಂದು ‘ಪೋಷಣ್ ಟ್ರ್ಯಾಕರ್’ ಕಳೆದ ತಿಂಗಳು ಹೇಳಿದೆ. ದೇಶದ ಶೇ 74ರಷ್ಟು ಜನರಿಗೆ ಆರೋಗ್ಯಕರ ಆಹಾರವನ್ನು ಪಡೆದುಕೊಳ್ಳುವ ಸಾಮರ್ಥ್ಯ ಇಲ್ಲ ಎಂದು ನೀತಿ ಆಯೋಗವು ಜುಲೈನಲ್ಲಿ ಬಿಡುಗಡೆ ಮಾಡಿದ ವರದಿಯು ಹೇಳಿದೆ. 2030ರೊಳಗೆ ಹಸಿವಿನ ಪ್ರಮಾಣವನ್ನು ಸೊನ್ನೆಗೆ ಇಳಿಸಬೇಕು ಎಂದು ವಿಶ್ವಸಂಸ್ಥೆಯು ಹಾಕಿಕೊಂಡಿರುವ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಭಾರತವು ತಲುಪುವ ಸಾಧ್ಯತೆ ಕ್ಷೀಣವಾಗಿದೆ.
ಡಬ್ಲ್ಯುಎಚ್‌ಐ ವರದಿಯನ್ನೇ ಪ್ರಶ್ನಿಸುವ ಬದಲು, ಭಾರತದಲ್ಲಿ ಹಸಿವಿನ ಪ್ರಮಾಣವು ಅತಿ ಹೆಚ್ಚು ಇರಲು ಕಾರಣವೇನು, ಅದು ಹೆಚ್ಚುತ್ತಲೇ ಇದೆ ಏಕೆ ಎಂಬುದನ್ನು ಸರ್ಕಾರವು ಪರಿಶೀಲನೆಗೆ ಒಳಪಡಿ ಸಬೇಕಿತ್ತು. 2014ರಲ್ಲಿ ಸಿದ್ಧಪಡಿಸಲಾಗಿದ್ದ 76 ದೇಶಗಳ ಪಟ್ಟಿಯಲ್ಲಿ ಭಾರತವು 55ನೇ ಸ್ಥಾನವನ್ನು ಪಡೆದಿತ್ತು. ಆಗ, ನೇಪಾಳ ಮತ್ತು ಶ್ರೀಲಂಕಾಕ್ಕಿಂತ ಕೆಳಗಿದ್ದರೂ ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕಿಂತ ಮೇಲೆಯೇ ಇತ್ತು. ಆದರೆ, ವರ್ಷಗಳು ಕಳೆದಂತೆ ಭಾರತದ ಸ್ಥಾನವು ಕೆಳಕ್ಕೆ ಜಾರುತ್ತಲೇ ಹೋಗಿದೆ.
ಈಗಂತೂ ನಮ್ಮ ನೆರೆಯ ದೇಶಗಳಷ್ಟೇ ಅಲ್ಲದೆ, ಆಫ್ರಿಕಾದ ದೇಶಗಳಿಗಿಂತಲೂ ಕೆಳಗಿದೆ. ವರದಿಯ ದತ್ತಾಂಶಗಳನ್ನು ನಿರಾಕರಿಸುವುದು ಮತ್ತು ವರದಿ ಸಿದ್ಧಪಡಿಸಿದವರನ್ನು ಮೂದಲಿಸುವುದರ ಬದಲಿಗೆ ವರದಿಯನ್ನು ಒಪ್ಪಿಕೊಂಡು ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಪ್ರಯತ್ನಿಸಬೇಕು.
2013ರ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಪ್ರಕಾರ, ಪ್ರತಿ ಪ್ರಜೆಯ ಆಹಾರದ ಮೂಲಭೂತ ಅಗತ್ಯ
ಗಳನ್ನು ಪೂರೈಸುವುದು ಸರ್ಕಾರದ ಹೊಣೆಗಾರಿಕೆ. ಆದರೆ, ಹಸಿವು ಮತ್ತು ಅಪೌಷ್ಟಿಕತೆ ನಿವಾರಣೆಗೆ ರೂಪಿಸಿರುವ ಹಲವು ಯೋಜನೆಗಳು ಲಕ್ಷಾಂತರ ಜನರನ್ನು ತಲುಪಿಯೇ ಇಲ್ಲ. ಜಗತ್ತಿನ ಪ್ರಮುಖ ಆಹಾರಧಾನ್ಯ ರಫ್ತುದಾರ ದೇಶಗಳಲ್ಲಿ ಭಾರತವೂ ಒಂದಾಗಿದೆ. ಹಾಗಿದ್ದರೂ ದೇಶದಲ್ಲಿರುವ ಲಕ್ಷಾಂತರ ಪ್ರಜೆಗಳ ಹಸಿವು ನೀಗಿಸಲು ಸಾಧ್ಯವಾಗಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.