ADVERTISEMENT

ಸಂಪಾದಕೀಯ | ಕಾಂಚನ್‌ಜುಂಗಾ ರೈಲು ಅಪಘಾತ: ಪ್ರಯಾಣಿಕರ ಸುರಕ್ಷತೆ ಆದ್ಯತೆಯಾಗಲಿ

ಸಂಪಾದಕೀಯ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
   

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸೋಮವಾರ ನಡೆದ ರೈಲು ಅಪಘಾತದಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ, ಹಲವರಿಗೆ ಗಾಯಗಳಾಗಿವೆ. ರೈಲ್ವೆ ಇಲಾಖೆಯು ಪ್ರಯಾಣಿಕರ ಸುರಕ್ಷತೆಯ ವಿಚಾರವಾಗಿ ಹೆಚ್ಚಿನ ಆಸ್ಥೆ ತೋರುತ್ತಿಲ್ಲ ಎಂಬುದಕ್ಕೆ ಇದು ಇನ್ನೊಂದು ನಿದರ್ಶನ. ನಿಂತಿದ್ದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ಪ್ರಯಾಣಿಕ ರೈಲಿಗೆ ಸರಕು ಸಾಗಣೆ ರೈಲೊಂದು ಡಿಕ್ಕಿ ಹೊಡೆದಾಗ ಈ ದುರ್ಘಟನೆ ಸಂಭವಿಸಿದೆ. ಈ ಅಪಘಾತಕ್ಕೆ ಮನುಷ್ಯನ ಲೋಪವೇ ಕಾರಣ ಎಂದು ಭಾವಿಸಲಾಗಿದೆ. ಆದರೆ ಇದು ತನಿಖೆಯಿಂದ ಇನ್ನಷ್ಟೇ ಖಚಿತವಾಗಬೇಕಿದೆ. ಒಡಿಶಾದ ಬಾಲೇಶ್ವರದಲ್ಲಿ ಕಳೆದ ವರ್ಷ ನಡೆದ ರೈಲ್ವೆ ಅಪಘಾತದಲ್ಲಿ ಕನಿಷ್ಠ 290 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಾದ ನಂತರ ಚೆನ್ನೈ–ಹೌರಾ ರೈಲು ಮಾರ್ಗದಲ್ಲಿ ನಡೆದ ಅಪಘಾತವೊಂದರಲ್ಲಿ 15 ಮಂದಿ ಸತ್ತಿದ್ದರು. ಈ ವರ್ಷದ ಫೆಬ್ರುವರಿಯಲ್ಲಿ ಸರಕು ಸಾಗಣೆ ರೈಲೊಂದು ಚಾಲಕನೇ ಇಲ್ಲದೆ ಜಮ್ಮುವಿನಿಂದ ಪಂಜಾಬ್‌ ಕಡೆಗೆ ಅಂದಾಜು 70 ಕಿ.ಮೀ. ಚಲಿಸಿತ್ತು! ದೇಶದ ಇತರ ಹಲವೆಡೆ ರೈಲು ಅಪಘಾತಗಳು ನಡೆದಿವೆ, ಅಲ್ಲೆಲ್ಲ ಮೃತರ ಸಂಖ್ಯೆ ಕಡಿಮೆ ಇದ್ದಿರಬಹುದು. ರೈಲು ಅಪಘಾತಗಳು ಪ್ರಾಣಹರಣಕ್ಕೆ ಕಾರಣವಾಗುತ್ತವೆ, ರೈಲ್ವೆ ಇಲಾಖೆಗೆ ನಷ್ಟ ಉಂಟುಮಾಡುತ್ತವೆ ಹಾಗೂ ರೈಲ್ವೆ ಸೇವೆಗಳಿಗೆ ಅಡ್ಡಿ ಸೃಷ್ಟಿಸುತ್ತವೆ. ಲಕ್ಷಾಂತರ ಮಂದಿಯ ಪ್ರಯಾಣಕ್ಕೆ ಹಾಗೂ ಭಾರಿ ಪ್ರಮಾಣದ ಸರಕು ಸಾಗಣೆಗೆ ನೆರವು ಒದಗಿಸುತ್ತ, ದೇಶದಲ್ಲಿ ಸಾರಿಗೆ ಸೇವೆ ಒದಗಿಸುವ ಅತಿದೊಡ್ಡ ವ್ಯವಸ್ಥೆಯಾಗಿರುವ ರೈಲ್ವೆಯ ಪಾಲಿಗೆ ಇವು ಕೆಟ್ಟ ಹೆಸರು ತರುತ್ತವೆ.

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ನ ದುರಂತಕ್ಕೆ ಸಂಬಂಧಿಸಿದಂತೆ, ರೈಲು ಮಾರ್ಗದ ಒಂದು ಕಡೆ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ಸರಕು ಸಾಗಣೆ ರೈಲಿನ ಚಾಲಕ ಸಿಗ್ನಲ್‌ಗಳನ್ನು ಅಲಕ್ಷಿಸಿದ ಎಂದು ಕೆಲವು ವರದಿಗಳು ಹೇಳಿವೆ. ಬಾಲೇಶ್ವರದ ದುರಂತ ನಡೆದ ನಂತರದಲ್ಲಿ, ದುರ್ಘಟನೆಗಳನ್ನು ತಡೆಯಲು ಅಥವಾ ಅವುಗಳ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ತರಲು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗುತ್ತದೆ ಎಂದು ಘೋಷಿಸಲಾಗಿತ್ತು. ರೈಲುಗಳು ಪರಸ್ಪರ ಡಿಕ್ಕಿಯಾಗುವುದನ್ನು ತಡೆಯುವ ‘ಕವಚ್’ ವ್ಯವಸ್ಥೆಯನ್ನು ಕೆಲವು ವರ್ಷಗಳ ಹಿಂದೆ ಅನಾವರಣಗೊಳಿಸಲಾಗಿದೆ. ಆದರೆ ಈ ವ್ಯವಸ್ಥೆಯನ್ನು ರೈಲ್ವೆ ಜಾಲದ ಆದ್ಯಂತ ಇನ್ನೂ ಅಳವಡಿಸಲಾಗಿಲ್ಲ. ಕವಚ್ ವ್ಯವಸ್ಥೆಯ ಅಳವಡಿಕೆ ಕಾರ್ಯವು ಈಗಿನ ವೇಗದಲ್ಲೇ ನಡೆದರೆ, ಅಳವಡಿಕೆ ಪೂರ್ಣಗೊಳ್ಳಲು ಇನ್ನೂ ಹಲವು ವರ್ಷಗಳು ಬೇಕಾಗುತ್ತವೆ. ರೈಲು ಅಪಘಾತಕ್ಕೆ ಹಲವು ಅಂಶಗಳು ಕಾರಣವಾಗುತ್ತಿವೆ. ಮೂಲಸೌಕರ್ಯದಲ್ಲಿ ಲೋಪಗಳು ಇರುವುದು ಅಥವಾ ಅವು ಸಮರ್ಪಕವಾಗಿ ಇಲ್ಲದಿರುವುದು, ತಾಂತ್ರಿಕವಾಗಿ ಪರಿಣತಿ ಇಲ್ಲದೇ ಇರುವುದು, ಕ್ರಾಸಿಂಗ್‌ಗಳಲ್ಲಿನ ಸಮಸ್ಯೆಗಳು ಇಂತಹ ಕಾರಣಗಳ ಪೈಕಿ ಪ್ರಮುಖವಾದವು. ಮೂಲಸೌಕರ್ಯವನ್ನು ಮೆಲ್ದರ್ಜೆಗೆ ಏರಿಸುವುದು, ಸ್ವತಂತ್ರವಾದ ಸುರಕ್ಷಾ ಆಯೋಗವನ್ನು ರಚಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಹಲವು ಸಮಿತಿಗಳ ಶಿಫಾರಸುಗಳಲ್ಲಿ ಹೇಳಲಾಗಿದೆ. ಆದರೆ ಆ ಶಿಫಾರಸುಗಳ ಪೈಕಿ ಹಲವನ್ನು ಇನ್ನೂ ಅನುಷ್ಠಾನಕ್ಕೆ ತಂದಿಲ್ಲ.

ಹೆಚ್ಚಿನ ವೇಗದಲ್ಲಿ ಸಾಗುವ ವಂದೇ ಭಾರತ್ ಹಾಗೂ ನಮೋ ಭಾರತ್ ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರವು ಈಚಿನ ವರ್ಷಗಳಲ್ಲಿ ಹೆಚ್ಚು ಆದ್ಯತೆ ನೀಡುತ್ತಿದೆ. ಬುಲೆಟ್ ರೈಲುಗಳ ಕಡೆಗೂ ಗಮನಹರಿದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನಿನ ಪ್ರಧಾನಿ ಫುಮಿಯೊ ಕಿಷಿದಾ ಅವರು, ಭಾರತದಲ್ಲಿ ಬುಲೆಟ್ ರೈಲು ಯೋಜನೆಗೆ ವೇಗ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಇವೆಲ್ಲ ಬಹಳ ಮಹತ್ವಾಕಾಂಕ್ಷೆಯ ಯೋಜನೆಗಳು. ಇವು ರೈಲ್ವೆ ಕುರಿತ ಚಿತ್ರಣವನ್ನು ಬದಲಾಯಿಸುವಂಥವು. ಆದರೆ ಎಲ್ಲ ರೈಲುಗಳಲ್ಲಿ ಇರುವ ಸುರಕ್ಷಾ ಮಾನದಂಡಗಳನ್ನು ಹೆಚ್ಚಿಸುವುದು ಬಹಳ ಮುಖ್ಯವಾಗಿ ಆಗಬೇಕಾದ ಕೆಲಸ. ರೈಲಿನಲ್ಲಿ ಪ್ರಯಾಣಿಸುವವರ ಜೀವಕ್ಕೆ ಯಾವುದೇ ಅಪಾಯ ಇರುವುದಿಲ್ಲ ಎಂಬುದನ್ನು ಖಾತರಿಪಡಿಸುವ ಕೆಲಸ ಆಗಬೇಕು. 2017ರ ನಂತರದಲ್ಲಿ ರೈಲ್ವೆಯ ಮೂಲಭೂತ ನಿರ್ವಹಣಾ ಕೆಲಸಗಳಿಗೆ ಮಾಡುವ ವೆಚ್ಚ ಕಡಿಮೆ ಆಗಿದೆ ಎಂದು ಮಹಾಲೇಖಪಾಲರ ವರದಿಯೊಂದು ಹೇಳಿದೆ. ಪ್ರಯಾಣಿಕರಿಗೆ ಸುರಕ್ಷಿತವಾದ ಪ್ರಯಾಣದ ಸೇವೆ ಒದಗಿಸುವುದು ರೈಲ್ವೆಯ ಅತ್ಯಂತ ಪ್ರಮುಖ ಆದ್ಯತೆ ಆಗಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.