ಪೆಗಾಸಸ್ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಿದ ಆರೋಪದ ಪ್ರಕರಣದ ಸತ್ಯಾಂಶವೇನು ಎಂದು ತಿಳಿಯುವ ಸುಪ್ರೀಂ ಕೋರ್ಟ್‌ನ ಪ್ರಯತ್ನ ಅರ್ಧ ದಾರಿಯಲ್ಲಿ ನಿಂತಿದೆ. ಆದರೆ, ಪೆಗಾಸಸ್ ಕುತಂತ್ರಾಂಶ ಬಳಸಿ ಜನರ ಮೇಲೆ ಗೂಢಚರ್ಯೆ ನಡೆಸಿದ ಪ‍್ರಕರಣದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯಾವ ತಪ್ಪನ್ನೂ ಎಸಗಿಲ್ಲ ಎಂಬುದಕ್ಕೆ ಇದುವೇ ಪುರಾವೆ ಎಂದು ಜನರನ್ನು ನಂಬಿಸಲು ಬಿಜೆಪಿ ನಡೆಸುತ್ತಿರುವ ಪ‍್ರಯತ್ನ ಕಪಟತನದಿಂದ ಕೂಡಿದೆ. ನ್ಯಾಯಪೀಠದ ಅಭಿಪ್ರಾಯ ಗಳನ್ನು ತೋರಿಸಿ ಸರ್ಕಾರವನ್ನು ‘ನಿರ್ದೋಷಿ’ ಎಂದು ಹೇಳಲಾಗಿದೆ ಎಂದು ಬಿಂಬಿಸಲಾಗುತ್ತಿದೆ. ಇಸ್ರೇಲ್‌ನಲ್ಲಿ ತಯಾರಾದ ಪೆಗಾಸಸ್ ಕುತಂತ್ರಾಂಶವನ್ನು ರಾಜಕಾರಣಿಗಳು, ನ್ಯಾಯಮೂರ್ತಿಗಳು, ಸರ್ಕಾರದ ಟೀಕಾಕಾರರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಮತ್ತು ಕೆಲವು ಸಚಿವರ ಮೊಬೈಲ್‌ಗಳಿಗೆ ಕೂಡ ಅಳವಡಿಸಿ, ಬೇಹುಗಾರಿಕೆ ನಡೆಸಲಾಗಿದೆ ಎಂಬ ಪ್ರಕರಣದ ಕುರಿತು ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ನೇತೃತ್ವದ ಸಮಿತಿಯು ತನಿಖೆ ನಡೆಸಿದೆ. ಸುಪ್ರೀಂ ಕೋರ್ಟ್ ಈ ಸಮಿತಿಯನ್ನು ನೇಮಿಸಿತ್ತು. ಪರಿಶೀಲನೆಗೆ ಒಳಪಡಿಸಲಾದ 29 ಮೊಬೈಲ್‌ಗಳ ಪೈಕಿ ಐದರಲ್ಲಿ ಕುತಂತ್ರಾಂಶ ಅಳವಡಿಸಿದ್ದು ತಿಳಿದುಬಂದಿದೆ. ಆದರೆ, ಈ ಕುತಂತ್ರಾಂಶವು ಪೆಗಾಸಸ್ ಹೌದೇ ಅಲ್ಲವೇ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಸರ್ಕಾರವು ಬೇಹುಗಾರಿಕೆ ನಡೆಸುತ್ತಿರಬಹುದು ಮತ್ತು ತಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡಿರಬಹುದು ಎಂಬ ಭೀತಿಯನ್ನು ವರದಿಯು ಜನರ ಮನಸ್ಸಿನಿಂದ ದೂರ ಮಾಡುವ ಸಾಧ್ಯತೆ ಇಲ್ಲ.
ಸರ್ಕಾರವುತನಿಖೆಗೆ ಸಹಕರಿಸಿಲ್ಲ ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಅದನ್ನು ನ್ಯಾಯಾಲಯದಲ್ಲಿಯೇ ಉಲ್ಲೇಖಿಸಿದ್ದಾರೆ. ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದ್ದಾಗ ಸರ್ಕಾರವು ಯಾವ ನಿಲುವು ತೆಗೆದುಕೊಂಡಿತ್ತೋ ಅದೇ ನಿಲುವನ್ನು ತನಿಖೆಯ ಸಂದರ್ಭದಲ್ಲಿಯೂ ಮುಂದುವರಿಸಿತು ಎಂಬುದು ವಿಷಾದಕರ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಇಸ್ರೇಲ್‌ನ ಕಂಪನಿಯಿಂದ ಪೆಗಾಸಸ್ ಕುತಂತ್ರಾಂಶವನ್ನು
ಖರೀದಿಸಲಾಗಿದೆಯೇ ಎಂಬ ಪ್ರಶ್ನೆಗೆ ಸರ್ಕಾರವು ಸಾರ್ವಜನಿಕವಾಗಿ, ಸಂಸತ್ತಿನಲ್ಲಿ ಅಥವಾ
ನ್ಯಾಯಾಲಯದಲ್ಲಿ ಉತ್ತರಿಸಲೇ ಇಲ್ಲ. ರಾಷ್ಟ್ರೀಯ ಭದ್ರತೆಯ ಕಾರಣದಿಂದಾಗಿ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಸರ್ಕಾರವು ಪ್ರತಿಪಾದಿಸುತ್ತಲೇ ಬಂದಿದೆ. ಆದರೆ, ಪ್ರತಿಯೊಂದು ವಿಚಾರದಲ್ಲಿಯೂ ರಾಷ್ಟ್ರೀಯ ಭದ್ರತೆಯ ನೆಪವನ್ನು ಮುಂದಿಟ್ಟು ಉತ್ತರ ಕೊಡುವುದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ವಿಚಾರಣೆ ಸಂದರ್ಭದಲ್ಲಿಯೇ ಹೇಳಿತ್ತು. ನ್ಯಾಯಾಲಯವು ನೇಮಿಸಿದ ಸಮಿತಿಯ ತನಿಖೆಗೆ ಸರ್ಕಾರವು ಸಹಕರಿಸಿದ್ದಿದ್ದರೆ ರಾಷ್ಟ್ರೀಯ ಭದ್ರತೆಗೆ ಯಾವ ಧಕ್ಕೆಯೂ ಆಗುತ್ತಿರಲಿಲ್ಲ.
ಏಕೆಂದರೆ, ಸರ್ಕಾರ ನೀಡಿದ ಯಾವುದೇ ಮಾಹಿತಿಯು ಗೋಪ್ಯವಾಗಿಯೇ ಉಳಿಯುವಂತೆ ಸಮಿತಿ ನೋಡಿಕೊಳ್ಳುತ್ತಿತ್ತು.
ಹಾಗಾಗಿಯೇ, ಸಮಿತಿಯ ವರದಿಯು ಸರ್ಕಾರವನ್ನು ‘ನಿರ್ದೋಷಿ’ ಎಂದು ಹೇಳಿದೆ ಎಂದು ಬಿಜೆಪಿ ಬಿಂಬಿಸುತ್ತಿರುವುದು ತಪ್ಪು. ಸರ್ಕಾರವು ಪೆಗಾಸಸ್ ಕುತಂತ್ರಾಂಶವನ್ನು ಬಳಸಿರಬಹುದು ಎಂದು ಭಾವಿಸಲು ವಿಶ್ವಾಸಾರ್ಹವಾದ ಸಾಂದರ್ಭಿಕ ಅಂಶಗಳು ಇವೆ. ಅಂತಹ ಸಂದರ್ಭದಲ್ಲಿ, ಪೆಗಾಸಸ್ ಕುತಂತ್ರಾಂಶವನ್ನು ಬಳಸಿಲ್ಲ ಎಂಬುದನ್ನು ಸಾಬೀತು ಮಾಡುವುದು ಸರ್ಕಾರದ ಉತ್ತರದಾಯಿತ್ವವೇ ಆಗಿದೆ. ಪೆಗಾಸಸ್ ಕುತಂತ್ರಾಂಶ ಬಳಸಿಲ್ಲ ಎಂದು ಸರ್ಕಾರವು ದೃಢವಾಗಿ ಈವರೆಗೆ ಹೇಳಿಲ್ಲ. ಈ ಬೇಹುಗಾರಿಕೆ ಪ್ರಕರಣವನ್ನು ಅತ್ಯಂತ ಮಹತ್ವದ್ದು ಎಂದು ಸುಪ್ರೀಂ ಕೋರ್ಟ್ ಭಾವಿಸಿದೆ. ಬೇಹುಗಾರಿಕೆ ನಡೆದಿದ್ದರೆ ಅದು ಪೌರರ ಖಾಸಗಿತನದ ಹಕ್ಕೂ ಸೇರಿದಂತೆ ಮೂಲಭೂತ ಹಕ್ಕಿನ ಉಲ್ಲಂಘನೆ ಎನಿಸಿ
ಕೊಳ್ಳುತ್ತದೆ. ಹಾಗಿದ್ದರೂ ಸರ್ಕಾರವುತನಿಖೆಗೆ ಸಹಕರಿಸುವಂತೆ ಮಾಡಲು ಸುಪ್ರೀಂ ಕೋರ್ಟ್‌ಗೆ ಕೂಡ ಸಾಧ್ಯವಾಗಿಲ್ಲ ಎಂಬುದು ದುರದೃಷ್ಟಕರ. ತನಿಖೆಗಾಗಿ ನೇಮಿಸಿದ ಸಮಿತಿಗೆ ಪೂರ್ಣ ಸಹಕಾರ ನೀಡಬೇಕು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿತ್ತು. ಅದನ್ನು ಅನುಸರಿಸದೇ ಇರಲು ಸರ್ಕಾರವು ನಿರ್ಧರಿಸಿತು. ಸುಪ್ರೀಂ ಕೋರ್ಟ್‌ನ ಪ್ರಯತ್ನ ವನ್ನೇ ತಡೆಯಬಹುದು ಎಂದಾದರೆ, ಸರ್ಕಾರದ ಯಾವುದಾದರೂ ನಿರ್ಧಾರ ಅಥವಾ ಕ್ರಮದ ಕುರಿತು ತನಿಖೆ ನಡೆಸುವುದು ಸಾಧ್ಯವೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ ಈಗಿನ ಪ್ರಕರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.