ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಆಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಸುಶೀಲ್‌ಕುಮಾರ್ ಶಿಂಧೆ ಅವರು ಮಹಾರಾಷ್ಟ್ರದ ಸೊಲ್ಲಾಪುರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಶಿಂಧೆ ವಿರುದ್ಧ ಬಿಜೆಪಿಯು ಲಿಂಗಾಯತ ಸ್ವಾಮೀಜಿ ಡಾ.ಜೈಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಯನ್ನು ಕಣಕ್ಕೆ ಇಳಿಸಿದೆ. ವಂಚಿತ ಬಹುಜನ ಅಘಾಡಿಯಿಂದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕಣಕ್ಕೆ ಇಳಿದಿದ್ದಾರೆ.
* ಸೊಲ್ಲಾಪುರದಲ್ಲಿ ನಿಮಗೆ ಪ್ರಬಲ ಪೈಪೋಟಿ ಇದ್ದಂತಿದೆಯಲ್ಲ?
ಸೊಲ್ಲಾಪುರದಲ್ಲಿ ನಾನು ಬಹಳ ವರ್ಷಗಳಿಂದ ಸ್ಪರ್ಧಿಸುತ್ತಿದ್ದೇನೆ. 2014ರ ಚುನಾವಣೆಯಲ್ಲಿ ಮಾತ್ರ ನಾನು ಸೋತಿದ್ದು. ಈಗ ಜನರ ಬಳಿ ನೇರವಾಗಿ ಹೋಗುತ್ತಿದ್ದೇನೆ. ನಾನು ಮತ್ತು ನನ್ನ ಕೆಲಸಗಳ ಬಗ್ಗೆ ಜನರಿಗೆ ಗೊತ್ತಿದೆ. ನನ್ನ ಕೆಲಸಗಳೇ ಮಾತನಾಡುತ್ತವೆ.
* ಬಿಜೆಪಿಯು ಲಿಂಗಾಯತ ಸ್ವಾಮೀಜಿಯನ್ನು ಕಣಕ್ಕೆ ಇಳಿಸಿದೆ. ಅಂಬೇಡ್ಕರ್ ಅವರ ಮೊಮ್ಮಗನೂ ಕಣದಲ್ಲಿರುವುದರಿಂದ ಸೊಲ್ಲಾಪುರದ ಕಣ ಕುತೂಹಲ ಹೆಚ್ಚಿಸಿದೆ ಅಲ್ಲವೇ?
ಬಿಜೆಪಿ ಸದಾ ಧ್ರುವೀಕರಣ ಮಾಡುತ್ತದೆ, ಹೀಗಾಗಿಯೇ ಆ ಪಕ್ಷ ಸ್ವಾಮೀಜಿಯನ್ನು ಕಣಕ್ಕೆ ಇಳಿಸಿದೆ. ಮತಗಳನ್ನು ಒಡೆಯಲೆಂದೇ ಪ್ರಕಾಶ್ ಅಂಬೇಡ್ಕರ್ ಸ್ಪರ್ಧಿಸುತ್ತಿದ್ದಾರೆ. ಈ ಇಬ್ಬರ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ನನ್ನ ವಿರುದ್ಧ ಅವರು ಒಂದಾಗಿದ್ದಾರೆ. ಆದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.
* ಸಿಪಿಎಂ ಸಹ ಪ್ರಕಾಶ್ ಅಂಬೇಡ್ಕರ್ ಅವರಿಗೆ ಬೆಂಬಲ ನೀಡಿದೆ. ಅದು ಯಾವ ಪರಿಣಾಮವನ್ನೂ ಬೀರುವುದಿಲ್ಲವೇ?
ಅದನ್ನೇ ನಾನು ಮಾತನಾಡುತ್ತಿರುವುದು. ಯಾರು ಯಾರೊಟ್ಟಿಗೆ ಹೋಗುತ್ತಿದ್ದಾರೆ ಎಂಬುದನ್ನು ಗಮನಿಸಿ. ಸಿಪಿಎಂನ ಈ ನಿರ್ಧಾರದಿಂದ ನನಗೆ ಆಶ್ಚರ್ಯವಾಗಿದೆ. ನಾನು ಬಹಳ ಚುನಾವಣೆಗಳನ್ನು ನೋಡಿದ್ದೇನೆ ಮತ್ತು ಎದುರಿಸಿದ್ದೇನೆ. ಜನರು ನನ್ನೊಂದಿಗಿದ್ದಾರೆ. ಈ ಐದು ವರ್ಷಗಳನ್ನು ನಾನು ಜನರ ಮಧ್ಯೆಯೇ ಕಳೆದಿದ್ದೇನೆ.
* ಕಳೆದ ಚುನಾವಣೆಯಲ್ಲಿ ತನ್ನ ಭದ್ರಕೋಟೆಯಲ್ಲೇ ಕಾಂಗ್ರೆಸ್ ಕಳಪೆ ಸಾಧನೆ ಮಾಡಿದೆ. ಈ ಬಗ್ಗೆ ಏನು ಹೇಳುತ್ತೀರಿ?
ನೋಡಿ, ಎಲ್ಲಾ ಚುನಾವಣೆಯೂ ಒಂದೇ ಅಲ್ಲ. ಪ್ರತಿ ಬಾರಿ ಪರಿಸ್ಥಿತಿ ಬದಲಾಗುತ್ತಿರುತ್ತದೆ. ಈಗಿನ ಪರಿಸ್ಥಿತಿಯೇ ಬೇರೆ. ಈ ಬಾರಿ ಮಹಾರಾಷ್ಟ್ರ ಮಾತ್ರವಲ್ಲ ದೇಶದ ಎಲ್ಲೆಡೆ ಫಲಿತಾಂಶ ನಮ್ಮ ಪರವಾಗಿ ಇರಲಿದೆ ಎಂಬ ವಿಶ್ವಾಸ ನಮಗಿದೆ.
* ನೀವು ‘ಹಿಂದೂ ಭಯೋತ್ಪಾದನೆ’ ಎಂಬ ಪದ ಬಳಸಿದ್ದಿರಿ ಎಂದು ಬಿಜೆಪಿ ನಿಮ್ಮನ್ನು ಗುರಿಮಾಡುತ್ತಿದೆಯಲ್ಲಾ?
ಅಮುಖ್ಯವಾದ ವಿಚಾರವನ್ನು ಬಿಜೆಪಿ ದೊಡ್ಡದು ಮಾಡುತ್ತಿದೆ. ಬಿಜೆಪಿಯು ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ. ಅವರು ಹೇಳುತ್ತಿರುವ ಪದದ ಚರ್ಚೆ ಈಗ ಪ್ರಸ್ತುತವೇ? ಐದು ವರ್ಷಗಳಲ್ಲಿ ಅವರು (ಬಿಜೆಪಿ) ಏನೇನು ಮಾಡಿದ್ದಾರೆ ಎಂಬುದರ ಬಗ್ಗೆ ಮಾತನಾಡಲಿ. ಜನ ಅವರಿಂದ ಅದನ್ನೇ ಬಯಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.