ಕೋವಿಡ್ ಸಾಂಕ್ರಾಮಿಕದ ಎರಡನೆಯ ಅಲೆಯು ಗ್ರಾಹಕರ ಆತ್ಮವಿಶ್ವಾಸದ ಮೇಲೆ ಬಹುಕಾಲ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಐಸಿಆರ್‌ಎ ರೇಟಿಂಗ್ಸ್ ಸಂಸ್ಥೆಯ ಪ್ರಧಾನ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ. ಅವರ ಜೊತೆಗಿನ ಮಾತುಕತೆಯ ಆಯ್ದಭಾಗ ಇಲ್ಲಿದೆ.
***
ವೈರಾಣು ಈಗ ಗ್ರಾಮೀಣ ಭಾರತವನ್ನೂ ಪ್ರವೇಶಿಸಿದೆ. ಎರಡನೆಯ ಅಲೆಯ ನಂತರದಲ್ಲಿ ಆರ್ಥಿಕ ಪುನಶ್ಚೇತನ ಹೇಗಿರಲಿದೆ?
ಎರಡನೆಯ ಅಲೆಯ ಸಂದರ್ಭದಲ್ಲಿ ಪ್ರತಿದಿನ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳಿಗೂ ಈ ಮಾತು ಅನ್ವಯ. ಇದು ಗ್ರಾಹಕರ ಆತ್ಮವಿಶ್ವಾಸದ ಮೇಲೆ ಬಹುಕಾಲ ಕೆಟ್ಟ ಪರಿಣಾಮ ಬೀರಲಿದೆ. ಕೋವಿಡ್ ಚಿಕಿತ್ಸೆಗೆ ಮಾಡುವ ಭಾರಿ ವೆಚ್ಚ ಹಾಗೂ ಇಂಧನ ದರ ದುಬಾರಿಯಾಗಿರುವ ಪರಿಣಾಮವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಗ್ರಾಹಕರು ಮಾಡಬಹುದಾದ ಇತರ ವೆಚ್ಚಗಳು ಗಣನೀಯವಾಗಿ ತಗ್ಗಬಹುದು. ಹಿಂದಿನ ಲಾಕ್‌ಡೌನ್ ವೇಳೆ ಖರೀದಿಸಲು ಆಗದಿದ್ದಂತಹ ಗೃಹೋಪಯೋಗಿ ವಸ್ತುಗಳನ್ನು ಗ್ರಾಹಕರು 2020ರ ಹಬ್ಬಗಳ ಸಂದರ್ಭದಿಂದ ಖರೀದಿಸಲಾರಂಭಿಸಿದರು. ಇಂತಹ ಖರೀದಿಗಳು ಮುಂದೆ ಕಡಿಮೆ ಆಗಬಹುದು. ತೀರಾ ಅಗತ್ಯವಲ್ಲದ ವಸ್ತುಗಳ ಖರೀದಿಯು ಸದ್ಯದ ಸಂದರ್ಭದಲ್ಲಿ ಸೀಮಿತ ಆಗಬಹುದು.
ಜಿಡಿಪಿ, ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ), ವಿದೇಶಗಳ ಜೊತೆಗಿನ ವಹಿವಾಟು ಅಂಕಿ–ಅಂಶಗಳೆಲ್ಲ ಮುಂದಿನ ತಿಂಗಳುಗಳಲ್ಲಿ ಉತ್ತಮವಾಗಿ ಕಾಣಿಸಬಹುದು. ಏಕೆಂದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ಅಂಕಿ–ಅಂಶಗಳು ತಳಮಟ್ಟದಲ್ಲಿದ್ದವು. ಈಗ ಈ ಅಂಕಿ–ಅಂಶಗಳು ಅರ್ಥಶಾಸ್ತ್ರಜ್ಞರು ಮತ್ತು ನೀತಿ ನಿರೂಪಕರ ಪಾಲಿಗೆ ಹೇಗೆ ಧ್ವನಿಸುತ್ತವೆ?
ಆಟೊಮೊಬೈಲ್ ಉತ್ಪಾದನೆ, ವಾಹನಗಳ ನೋಂದಣಿ, ತೈಲ ಹೊರತಾದ ಇತರ ಉತ್ಪನ್ನಗಳ ರಫ್ತು, ಜಿಎಸ್‌ಟಿ ಇ–ವೇ ಬಿಲ್ ಇತ್ಯಾದಿಗಳಿಗೆ ಸಂಬಂಧಿಸಿದ ಅಂಕಿ–ಅಂಶಗಳು ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌ನಲ್ಲಿ ಭಾರಿ ಏರಿಕೆ ದಾಖಲಿಸಿವೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಲಾಕ್‌ಡೌನ್ ಕಾರಣದಿಂದಾಗಿ ಇವೆಲ್ಲ ಕಡಿಮೆ ಮಟ್ಟದಲ್ಲಿದ್ದವು. ಹಾಗಾಗಿ, ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದಾಗ ಈ ವರ್ಷದ ಏಪ್ರಿಲ್‌ನಲ್ಲಿ ಐಐಪಿ ಸೂಚ್ಯಂಕವು ಶೇಕಡ 140ರಿಂದ ಶೇ 150ರಷ್ಟು ಬೆಳವಣಿಗೆ ಕಾಣಬಹುದು. ಆದರೆ ಈ ಬೆಳವಣಿಗೆಗೆ ಯಾವ ಅರ್ಥವೂ ಇಲ್ಲ.
ನಾವು 2021ರ ಏಪ್ರಿಲ್ ತಿಂಗಳ ಆರ್ಥಿಕ ಸೂಚಕಗಳನ್ನು ಕೋವಿಡ್ ಪೂರ್ವದ ಮಟ್ಟದ (2019ರ ಏಪ್ರಿಲ್) ಜೊತೆ ಹೋಲಿಸಿದ್ದೇವೆ. ದೇಶಿ ಪ್ರಯಾಣಿಕ ವಿಮಾನ ಸಂಚಾರ, ವಾಹನ ನೋಂದಣಿ, ವಾಹನ ಉತ್ಪಾದನೆ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಸೇರಿದಂತೆ ಒಟ್ಟು 13 ಸೂಚಕಗಳು 2019ರ ಏಪ್ರಿಲ್‌ಗಿಂತ ಈ ವರ್ಷದ ಏಪ್ರಿಲ್‌ನಲ್ಲಿ ಕಡಿಮೆ ಪ್ರಮಾಣದಲ್ಲಿವೆ. ವಿದ್ಯುತ್ ಉತ್ಪಾದನೆ, ರೈಲ್ವೆ ಸರಕು ಸಾಗಣೆ, ಬಂದರುಗಳ ಮೂಲಕ ಸರಕು ಸಾಗಣೆ, ಜಿಎಸ್‌ಟಿ ಇ–ವೇ ಬಿಲ್ ಸೃಷ್ಟಿ ಇವು ಈ ವರ್ಷದ ಏಪ್ರಿಲ್‌ನಲ್ಲಿ ಹೆಚ್ಚಾಗಿವೆ.
ಕೆಲವು ಸೂಚಕಗಳು ಈ ಬಾರಿಯ ಏಪ್ರಿಲ್‌ನಲ್ಲಿಯೂ ಇಳಿಕೆಯ ಹಾದಿಯಲ್ಲಿವೆ. ಇದು ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ದೇಶದ ವಿವಿಧ ಭಾಗಗಳಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಿದ್ದರ ಪ್ರತಿಫಲನದಂತೆ ಇದೆ. ಈ ಸ್ಥಿತಿಯು ಮೇ ತಿಂಗಳಲ್ಲೂ ಮುಂದುವರಿದಿದೆ.
ಹೆಚ್ಚಿನ ರಾಜ್ಯಗಳು ಲಾಕ್‌ಡೌನ್ ಜಾರಿಗೊಳಿಸಿವೆ. ಇದು ಆರ್ಥಿಕ ಪುನಶ್ಚೇತನದ ಗತಿಯ ಮೇಲೆ ಪರಿಣಾಮ ಬೀರಲಿದೆಯೇ? ಆರ್ಥಿಕ ಚಟುವಟಿಕೆಗಳು ಮಾಮೂಲಿನಂತೆ ಯಾವಾಗ ಆಗಬಹುದು?
2020ರ ಏಪ್ರಿಲ್–ಮೇ ತಿಂಗಳಲ್ಲಿ ಜಾರಿಯಲ್ಲಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗೆ ಹೋಲಿಸಿದರೆ ಈ ಬಾರಿಯ ಲಾಕ್‌ಡೌನ್ ನಿರ್ಬಂಧಗಳು ಅಷ್ಟೊಂದು ಕಠಿಣವಾಗಿಲ್ಲ. ಸ್ಥಳೀಯ ಲಾಕ್‌ಡೌನ್‌ಗಳು ಈಗ ವ್ಯಾಪಕವಾಗಿ ಜಾರಿಗೆ ಬಂದಿವೆ. ಹಾಲಿ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇ 27.5ರಷ್ಟು ಇರಲಿದೆ ಎಂದು ಮೊದಲು ಅಂದಾಜು ಮಾಡಿದ್ದೆವು. ಈಗ ಅದನ್ನು ಶೇ 15ರಿಂದ ಶೇ 20ಕ್ಕೆ ತಗ್ಗಿಸಿದ್ದೇವೆ. ಹಾಲಿ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಸಹಜವಾಗುವತ್ತ ಸಾಗಬಹುದು ಎಂಬುದು ನಮ್ಮ ನಂಬಿಕೆ. ಆದರೆ, ಇದು ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಹಾಕುವುದರ ಮೇಲೆ ಅವಲಂಬಿತವಾಗಿದೆ.
ಲಾಕ್‌ಡೌನ್ ಹಾಗೂ ಬೇಡಿಕೆ ಕುಸಿತದ ಕಾರಣದಿಂದ ಪರೋಕ್ಷ ತೆರಿಗೆ ಮೂಲಕ ಬರುವ ಆದಾಯವು ಮೇ–ಜೂನ್ ಅವಧಿಯಲ್ಲಿ ತಗ್ಗಬಹುದು. ನೇರ ತೆರಿಗೆಯ ಸಂಗ್ರಹವೂ ಕಡಿಮೆ ಆಗಬಹುದೇ?
ಮೇ–ಜೂನ್ ಅವಧಿಯಲ್ಲಿ ಪರೋಕ್ಷ ತೆರಿಗೆ ಸಂಗ್ರಹದ ಮೇಲೆ ಕೆಟ್ಟ ಪರಿಣಾಮ ಆಗುವ ನಿರೀಕ್ಷೆ ಇದೆ. ತೀರಾ ಅವಶ್ಯಕವಲ್ಲದ ವಸ್ತುಗಳ ಖರೀದಿಯ ಮೇಲೆ ಲಾಕ್‌ಡೌನ್ ನಿರ್ಬಂಧಗಳು ಪರಿಣಾಮ ಉಂಟುಮಾಡಲಿವೆ. ಬೇಡಿಕೆ ತಗ್ಗಿರುವ ಸಂದರ್ಭದಲ್ಲಿ ಕೆಲವು ವಸ್ತುಗಳ ಬೆಲೆ ಭಾರಿ ಮಟ್ಟದಲ್ಲಿ ಏರಿಕೆ ಕಂಡಿರುವುದು ಹಲವು ವಲಯಗಳ ಕಂಪನಿಗಳ ಲಾಭವನ್ನು ಕಡಿಮೆ ಮಾಡಬಹುದು. ಇದರಿಂದಾಗಿ ನೇರ ತೆರಿಗೆ ಸಂಗ್ರಹದಲ್ಲಿ ದೊಡ್ಡ ಮಟ್ಟದ ಹೆಚ್ಚಳ ಸಾಧ್ಯವಾಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.