ನೆರೆ ರಾಷ್ಟ್ರದಲ್ಲಿ ಉಗ್ರರ ದಾಳಿ ನಡೆದಿರುವ ಈ ಹೊತ್ತಿನಲ್ಲಿ ಬೆಂಗಳೂರು ಎಷ್ಟು ಸುರಕ್ಷಿತ?
ಶ್ರೀಲಂಕಾದಲ್ಲಿ ದಾಳಿ ನಡೆದ ನಂತರ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ವಿಮಾನ ನಿಲ್ದಾಣ, ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಿದ್ದೇವೆ. ಪ್ರಾರ್ಥನಾ ಮಂದಿರಗಳ ಮುಖ್ಯಸ್ಥರು, ಹೋಟೆಲ್ ಹಾಗೂ ಮಾಲ್‌ಗಳ ಮಾಲೀಕರ ಜತೆ ಸಮಾಲೋಚನೆ ನಡೆಸಿ, ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದೇವೆ. ಆತಂಕವೇ ಬೇಡ, ಬೆಂಗಳೂರು ಸುರಕ್ಷಿತವಾಗಿದೆ.
ಸುರಕ್ಷತೆ ವಿಚಾರದಲ್ಲಿ ಜನರ ಜವಾಬ್ದಾರಿ ಏನು?
ತಾವೂ ಭೀತಿಗೆ ಒಳಗಾಗಬಾರದು, ಬೇರೆಯವರನ್ನೂ ಆತಂಕಕ್ಕೆ ದೂಡಬಾರದು. ಜಾಲತಾಣಗಳ ವದಂತಿಗಳಿಗೆ ಕಿವಿಗೊಡಬಾರದು. ಯಾರದ್ದೇ ನಡೆ ಸಂಶಯ ಬರುವಂತಿದ್ದರೆ ಸಂಖ್ಯೆ 100ಕ್ಕೆ ಕರೆ ಮಾಡಬೇಕು. ಮಾಧ್ಯಮಗಳೂ ಜವಾಬ್ದಾರಿಯಿಂದ ವರ್ತಿಸಬೇಕು. ವದಂತಿಯನ್ನೇ ಸುದ್ದಿ ಮಾಡಿದರೆ ತಪ್ಪಾಗುತ್ತದೆ. ಈಗ ಬೆಂಗಳೂರಿನ ವಾಚ್ ವ್ಯಾಪಾರಿ ರಿಯಾಜ್ ಅಹಮದ್ ಅವರನ್ನು ಉಗ್ರನಂತೆ ಬಿಂಬಿಸಲಾಗಿದೆ.
ಅವರ ಗೌರವಕ್ಕೆ ಆಗಿರುವ ಹಾನಿಯನ್ನು ಯಾರು ತುಂಬುತ್ತಾರೆ? ನಾಗರಿಕರಲ್ಲಿ ಆತಂಕ ಸೃಷ್ಟಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳ
ಲಾಗುವುದು.
ರಾಜಧಾನಿಯು ಉಗ್ರರ ಅಡಗುತಾಣ ಆಗುತ್ತಿರುವ ಆತಂಕವಿದೆಯಲ್ಲ?
ನಗರದಲ್ಲಿ ಉಗ್ರರು ಅಡಗಿರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಈಗ ಠಾಣಾ ಮಟ್ಟದಲ್ಲೂ ಭಯೋತ್ಪಾದನಾ ನಿಗ್ರಹ ಪಡೆ ರಚಿಸಿದ್ದೇವೆ. ಪ್ರತಿ ಠಾಣೆಯ ಪಿಎಸ್‌ಐ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳು ತಮ್ಮ ವ್ಯಾಪ್ತಿಯಲ್ಲಿ ನೆಲೆಸಿರುವ ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಹೊರಗಿನಿಂದ ಬಂದವರ ಮೇಲೆ ನಿಗಾ ಇಡುತ್ತಿದ್ದಾರೆ.
ಮೆಟ್ರೊ ನಿಲ್ದಾಣಗಳಿಗೆ ಭದ್ರತೆ ಹೆಚ್ಚಿಸಿದ್ದೀರಾ?
ಮೆಟ್ರೊ ನಿಲ್ದಾಣಗಳಿಗೆ ಸದ್ಯ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಐಎಸ್‌ಎಫ್) ಸಿಬ್ಬಂದಿ ಭದ್ರತೆ ಒದಗಿಸುತ್ತಿದ್ದಾರೆ. ಶ್ರೀಲಂಕಾದಲ್ಲಿ ದಾಳಿ ನಡೆದ ನಂತರ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಸಂಬಂಧಪಟ್ಟ ಡಿಸಿಪಿಗಳು ದಿನಕ್ಕೆ ಒಮ್ಮೆ ನಿಲ್ದಾಣಗಳಿಗೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.