ಬೆಂಗಳೂರು: ಬಹುಮುಖ್ಯವಾಗಿ ಜನರಲ್ಲಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿರುವ, ಸಮುದಾಯದಲ್ಲಿ ಸೌಹಾರ್ದ ಮೂಡಿಸುವ ವಾತಾವರಣ ನಿರ್ಮಾಣವಾಗಬೇಕಾದ ಅಗತ್ಯವಿದೆ. ಬಹುಸಂಸ್ಕೃತಿಯನ್ನು ಜನರು ಒಪ್ಪಿಕೊಳ್ಳುವಂತಹ ಕೆಲಸವಾಗಬೇಕು. ಅದುವೇ ನಿಜವಾದಂತಹ ಪ್ರಜಾಪ್ರಭುತ್ವದ ಲಕ್ಷಣ ಎಂದು ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿರುವ ಅವರು, ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದರು.
ನುಡಿಹಬ್ಬದಲ್ಲಿ ಚರ್ಚೆಯಾಗಬೇಕಾದ ವಿಷಯಗಳೇನು?
‘ರಾಜ್ಯದ ಹಲವು ಭಾಗದ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಸಾಹಿತ್ಯಿಕ ವಿಷಯಗಳ ಜೊತೆಗೆ ಜನರ ಬದುಕಿಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚೆ ಮಾಡಬೇಕಾದ ಅಗತ್ಯವಿದೆ’ ಎಂದರು.
‘ಅದರಲ್ಲೂ ಸಮಕಾಲೀನ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಿ, ಆ ವೇದಿಕೆ ಮೂಲಕ ಸಾರ್ವತ್ರಿಕ ಸಂದೇಶ ನೀಡಬೇಕು. ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲದಿದ್ದರೂ ತುರ್ತು ವಿಚಾರಗಳಿಗೆ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.
ಕನ್ನಡದ ಆತಂಕಗಳನ್ನು ದಾಟಲು ಆಗಬೇಕಾಗಿರುವುದೇನು?
ರಾಜ್ಯದಲ್ಲಿ ನೆಲಸಿರುವಂತಹ ಹೊರ ರಾಜ್ಯದವರಿಗೆ ಕನ್ನಡ ಕಲಿಸಲೇಬೇಕು. ಅವರು ಗರಿಷ್ಠ ಐದು ವರ್ಷದಲ್ಲಿ ಕನ್ನಡ ಕಲಿಯಲು ಕಾಲಮಿತಿ ನಿಗದಿ ಮಾಡಬೇಕು. ಈ ಇದಕ್ಕಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕನ್ನಡ ಮಾತನಾಡಲೇಬೇಕೆಂಬ ಅನಿವಾರ್ಯ ಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗಬೇಕು. ಕನ್ನಡದ ಸತ್ವ, ಸೊಗಸು, ಕನ್ನಡ ಬಳಕೆಯಿಂದಾಗುವಂತಹ ಲಾಭದ ಬಗ್ಗೆ ಕನ್ನಡೇತರರಿಗೆ ಮನದಟ್ಟು ಮಾಡಿಕೊಡಬೇಕು. ಇದರ ಜೊತೆಗೆ, ಸಾಹಿತ್ಯದ ಮೂಲಕ ಎಲ್ಲ ಮಾಧ್ಯಮಗಳಲ್ಲಿ ಕನ್ನಡಿಗರಲ್ಲೂ ಭಾಷೆ ಬಗ್ಗೆ ಅಭಿಮಾನ ಮೂಡಿಸಬೇಕು.
‘ನಮ್ಮ ಮುಖ್ಯಮಂತ್ರಿಯವರು ಇತ್ತೀಚೆಗೆ ಎಲ್ಲರೂ ಕನ್ನಡ ಕಲಿಯಬೇಕು ಎಂದು ಘೋಷಿಸಿದ್ದಾರೆ. ಅದು ದೊಡ್ಡ ಪ್ರಮಾಣದಲ್ಲಾಗಬೇಕು. ಕಾಲಮಿತಿ ಹಾಕದಿದ್ದರೆ ಯಾವುದೂ ಸಾಧ್ಯವಾಗುವುದಿಲ್ಲ.
ಕನ್ನಡದ ಹಿತಕ್ಕೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳೇನು?
ಜನರಲ್ಲಿ ಭಾಷೆ ಬಗ್ಗೆ ಅಭಿಮಾನ ಉಂಟು ಮಾಡಬೇಕಾದ ಕೆಲಸವನ್ನು ಸರ್ಕಾರ ಮಾತ್ರ ಮಾಡಿದರೆ ಸಾಲದು. ಶಿಕ್ಷಣ ಸಂಸ್ಥೆಗಳು, ಸಾಹಿತ್ಯ ಪರಿಷತ್ತು ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಭಾಷೆಯನ್ನು ಉತ್ತೇಜಿಸುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಪೋಷಕರೊಂದಿಗೆ ಹೆಚ್ಚು ನಿಕಟ ಸಂಪರ್ಕ ಹೊಂದಿರುವ ಶಿಕ್ಷಕರು, ಭಾಷೆ ಕಲಿಯುವ ಬಗ್ಗೆ ಅರಿವು ಮೂಡಿಸಬೇಕು. ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದುವ ಮೂಲಕ ಸಾಹಿತಿಗಳೂ ಕನ್ನಡ ಭಾಷೆ ಬೆಳವಣಿಗೆಗೆ ಸಹಕಾರಿಯಾಗಬೇಕು. ಇದಕ್ಕೆಲ್ಲ ಸರ್ಕಾರ ಉತ್ತೇಜನ ನೀಡಬೇಕು. ಅದಕ್ಕೆ ಅಗತ್ಯವಾದ ನೀತಿಗಳನ್ನು ರೂಪಿಸಿ ಅವು ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು.
ಕನ್ನಡ, ಕರ್ನಾಟಕಕ್ಕೆ ಎದುರಾಗಿರುವ ಆತಂಕಗಳನ್ನು ದಾಟಲು ಸರ್ಕಾರ ಮತ್ತು ಕನ್ನಡಿಗರು ತುರ್ತಾಗಿ ಮಾಡಬೇಕಾದುದೇನು?
ಭಾಷೆ, ಗಡಿ, ಜಲ, ವಲಸಿಗರ ಸಮಸ್ಯೆಗಳಲ್ಲಿ ಕೆಲವನ್ನು ರಾಜ್ಯ ಸರ್ಕಾರವೇ ನಿರ್ಣಯ ಮಾಡಿ ಪರಿಹರಿಸಲು ಸಾಧ್ಯವಿದೆ. ಅದಕ್ಕೆ ಬೇಕಾದ ಒತ್ತಡ ನಮ್ಮ ಜನಸಮುದಾಯ ಹಾಗೂ ಸಾಹಿತಿಗಳಿಂದಲೇ ಬರಬೇಕು. ಸಮಸ್ಯೆಯನ್ನು ಪರಿಹರಿಸುವುದು ಅಗತ್ಯ ಎಂಬುದನ್ನು ಸರ್ಕಾರಕ್ಕೆ ಅರ್ಥ ಮಾಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಜನರ ಒತ್ತಾಯವೇ ಅತಿಮುಖ್ಯ. ಅಂತರ ರಾಜ್ಯ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕು. ಕೇಂದ್ರ ಸರ್ಕಾರ ಎರಡೂ ರಾಜ್ಯಗಳ ಮುಖ್ಯಸ್ಥರನ್ನು ಅಂತರ ರಾಜ್ಯ ಸಮಸ್ಯೆಗಳನ್ನು ಬಗೆಹರಿಸಬೇಕು. ಹಾಗೆ ಮಾಡಬೇಕು ಎಂದು ಒತ್ತಡ ಹಾಕುವುದು ಜನರ ಜವಾಬ್ದಾರಿ.
ಪರಿಷತಗೆ ಅನುದಾನದ ಅಗತ್ಯವಿದೆಯೇ?
ಸರ್ಕಾರದ ಹಂಗಿಲ್ಲದೆ ಕನ್ನಡ ಸಾಹಿತ್ಯ ಪರಿಷತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು ಎಂಬುದು ನನ್ನ ಆಸೆಯಾಗಿತ್ತು. ಅದಕ್ಕಾಗಿಯೇ ‘ಒಬ್ಬ ಕನ್ನಡಿಗ ಒಂದು ರೂಪಾಯಿ’ ಎಂಬ ಹಣ ಸಂಗ್ರಹ ಕಾರ್ಯಕ್ರಮ ಆರಂಭಿಸಿದ್ದೆ. ಆದರೆ ಅದು ಮುಂದುವರಿಯಲಿಲ್ಲ. ಸರ್ಕಾರದ ಅನುದಾನವನ್ನು ಬೇಡ ಎಂದು ಹೇಳುವ ಅಗತ್ಯ ಇಲ್ಲ. ಅನುದಾನ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಆ ಅನುದಾನ ಸದುಪಯೋಗವಾಗಬೇಕು ಎಂಬುದು ನನ್ನ ನಿರೀಕ್ಷೆ.
‘ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಲಿ’
‘ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು. ಇದನ್ನು ಜಗತ್ತಿನ ಎಲ್ಲ ಶಿಕ್ಷಣ ತಜ್ಞರು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಸರ್ಕಾರ ಶಿಕ್ಷಣ ನೀತಿಯನ್ನು ರೂಪಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು. ಒಂದು ಬಾರಿ ಕಡ್ಡಾಯವಾದರೆ ಜನರೂ ಅದಕ್ಕೆ ಒಗ್ಗಿಕೊಂಡು ಒಪ್ಪಿಕೊಂಡುಬಿಡುತ್ತಾರೆ’ ಎಂದು ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು. ‘ಕನ್ನಡಕ್ಕೆ ಈಗಿನ ತೊಂದರೆ ಎಂದರೆ ಇಂಗ್ಲಿಷ್. ಪೋಷಕರಿಗೆ ನಮ್ಮ ಮಕ್ಕಳ ಭವಿಷ್ಯ ಭದ್ರವಾಗಬೇಕೆಂಬ ಉದ್ದೇಶದಿಂದ ಜಗತ್ತಿನಲ್ಲಿ ಹೆಚ್ಚು ವ್ಯಾವಹಾರಿಕ ಭಾಷೆಯಾಗಿರುವ ಇಂಗ್ಲಿಷ್‌ಗೆ ಪ್ರಾಮುಖ್ಯ ನೀಡುತ್ತಿದ್ದಾರೆ. ನಾವು ಇಂಗ್ಲಿಷ್ ಕಲಿಯುವುದನ್ನು ಬೇಡ ಎನ್ನುವ ಅಗತ್ಯವಿಲ್ಲ. ಆದರೆ ಕನ್ನಡ ಮೊದಲಾಗಬೇಕು. ಬೇರೆಬೇರೆ ವಿಷಯಗಳಿಗೆ ನೀಡಲಾಗುತ್ತಿರುವ ತರಬೇತಿಯನ್ನು ಇಂಗ್ಲಿಷ್ ಕಲಿಕೆಗೂ ನೀಡಬೇಕು. ಇಂತಹ ತರಬೇತಿ ಪ್ರಾಥಮಿಕ ಶಿಕ್ಷಣದಲ್ಲೇ ಸಿಗುತ್ತದೆ ಎಂಬ ಭರವಸೆ ಪೋಷಕರಲ್ಲಿ ಬಂದು ಅದು ಮನದಟ್ಟಾದರೆ ಯಾರೂ ವಿರೋಧ ಮಾಡುವುದಿಲ್ಲ’ ಎಂದರು.
ಗೊರುಚ ಹೇಳಿದ್ದೇನು?
* ಯಾವುದೇ ಸಂಸ್ಕೃತಿಯನ್ನು ಹತ್ತಿಕ್ಕುವ ಅಥವಾ ಉಪೇಕ್ಷೆ ಮಾಡುವುದು ಒಳ್ಳೆಯದಲ್ಲ. ಎಲ್ಲರೂ ಬದುಕುವಂತಹ ಸೌಹಾರ್ದಯುತ ವಾತಾವರಣಕ್ಕೆ ಪೂರಕವಾಗುವ ಸಾಹಿತ್ಯವೂ ಸೃಷ್ಟಿಯಾಗಬೇಕು. ಸರ್ಕಾರವೂ ಅದಕ್ಕೆ ಮನ್ನಣೆ ಕೊಡಬೇಕು.
* ಹಲವು ಸಂದರ್ಭದಲ್ಲಿ ರಾಜಕೀಯ ಕಾರಣಗಳಿಂದ ಕೆಲವು ಸಮಸ್ಯೆಗಳನ್ನು ಜೀವಂತವಾಗಿಡುವಂತಹ ಹುನ್ನಾರವೂ ಇದೆ. ಅದು ಒಳ್ಳೆಯದಲ್ಲ ಅದು ರಾಷ್ಟ್ರದ ಪ್ರಗತಿಗೆ ಭಂಗ ತರುವಂತಹದ್ದು.
* ಸಾಹಿತ್ಯದಲ್ಲಿ ಬಿಕ್ಕಟ್ಟಿಲ್ಲ ಸಾಹಿತಿಗಳಲ್ಲಿ ಇರಬಹುದು. ಒಬ್ಬೊಬ್ಬರ ವಿಚಾರಧಾರೆ ಒಂದೊಂದು ರೀತಿ ಇರುತ್ತದೆ. ಅದು ಚರ್ಚೆಯ ವಸ್ತುವಾದರೆ ಅದರಿಂದ ಹೊಸ ವಿಚಾರಗಳು ಹೊಮ್ಮುತ್ತದೆ.
* ಬೆಂಗಳೂರಿನಲ್ಲಿ ಕನ್ನಡ ಮಲಿನಗೊಂಡಿದೆ. ಇಲ್ಲಿ ಭಾಷೆ ಬಳಸುವಾಗ ಯಾವ ಮಾನದಂಡವೂ ಇಲ್ಲದಂತಾಗಿದೆ. ಕನ್ನಡಿಗರಲ್ಲಿ ಮೊದಲು ಭಾಷೆ ಬಗ್ಗೆ ಅಭಿಮಾನ ಇರಬೇಕು. ಆ ಅಭಿಮಾನವನ್ನು ಕನ್ನಡೇತರರಲ್ಲೂ ಬೆಳೆಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.