ADVERTISEMENT

‘ಕ್ರೌರ್ಯ ತಡೆಗೆ ಸುಸಂಸ್ಕೃತ ನಡವಳಿಕೆಯೇ ದಾರಿ’

ಬಿ.ಎಸ್.ಷಣ್ಮುಖಪ್ಪ
Published 21 ಜುಲೈ 2018, 19:43 IST
Last Updated 21 ಜುಲೈ 2018, 19:43 IST
ಧೀರೇಂದ್ರ ಹೀರಾಲಾಲ್‌ ವಘೇಲಾ
ಧೀರೇಂದ್ರ ಹೀರಾಲಾಲ್‌ ವಘೇಲಾ   

ಕರ್ನಾಟಕ, ಒಡಿಶಾ ಮತ್ತು ಬಾಂಬೆ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಯಾಗಿದ್ದ ಧೀರೇಂದ್ರ ಹೀರಾಲಾಲ್‌ ವಘೇಲಾ ನಿವೃತ್ತರಾದ ನಂತರ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಕೆಲವೆಡೆ ಸಾರ್ವಜನಿಕರು ಅಪರಿಚಿತರನ್ನು ಮಕ್ಕಳ ಕಳ್ಳರೆಂದು ಭಾವಿಸಿ ಮನಬಂದಂತೆ ಥಳಿಸಿರುವ ಪ್ರಕರಣಗಳು ಹಾಗೂ ಲಂಗುಲಗಾಮಿಲ್ಲದೆ ಬೆಳೆಯುತ್ತಿರುವ ಬೆಂಗಳೂರಿನ ಬಗ್ಗೆ ಅವರು ತಮ್ಮ ಕಳಕಳಿಯನ್ನು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ...

ರಾಜ್ಯದಲ್ಲಿ ಮಕ್ಕಳ ಕಳ್ಳರು ಎಂಬ ಶಂಕೆಯಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಈ ಸಾವುಗಳಿಗೆ ಯಾರು ಹೊಣೆ?

ಚಾಮರಾಜಪೇಟೆಯ ಪೆನ್ಶನ್‌ ರಸ್ತೆಯಲ್ಲಿ ಮೇ 23ರಂದು ರಾಜಸ್ಥಾನದ ಕಾಲೂರಾಮ್‌ ಹಾಗೂ ಬೀದರ್ ಜಿಲ್ಲೆಯ ಕಮಲ್‌ನಗರ ತಾಲ್ಲೂಕಿನ ಮುರ್ಕಿ ಗ್ರಾಮದಲ್ಲಿ ಜುಲೈ 13ರಂದು ಹೈದರಾಬಾದ್‌ನ ಮಹಮ್ಮದ್ ಆಜಂ ಹತ್ಯೆ ನಡೆದಿರುವುದು ದುರದೃಷ್ಟಕರ. ನಾಗರಿಕ ಸಮಾಜವೊಂದರ ಕ್ರೌರ್ಯದ ಪರಮಾವಧಿ ಇದು.

ADVERTISEMENT

ಈ ಪ್ರಕರಣದಲ್ಲಿ ಕರ್ತವ್ಯ ನಿರತ ಪೊಲೀಸರ ಜವಾಬ್ದಾರಿ ಇದೆ. ಒಂದು ವೇಳೆ ಅವರು ನಿರ್ಲಕ್ಷ್ಯ ತೋರಿದ್ದರೆ ಅವರ ವಿರುದ್ಧ ಖಂಡಿತಾ ಕ್ರಮ ಕೈಗೊಳ್ಳಬೇಕು.

ಈ ಬಗ್ಗೆ ಆಯೋಗವು ಏನು ಕ್ರಮ ಕೈಗೊಂಡಿದೆ?

ಈಗಾಗಲೇ ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಸುಪ್ರೀಂ ಕೋರ್ಟ್ ಕೂಡಾ ಇಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಂತದಲ್ಲಿ ನಾನು ವೈಯಕ್ತಿಕವಾಗಿ ಅಥವಾ ಆಯೋಗದ ಅಧ್ಯಕ್ಷನಾಗಿ ಹೆಚ್ಚೇನೂ ಹೇಳ ಬಯಸುವುದಿಲ್ಲ ಮತ್ತು ಮಧ್ಯ ಪ್ರವೇಶಿಸುವುದೂ ತರವಲ್ಲ. ಆದಾಗ್ಯೂ ಇಂತಹವುಗಳನ್ನೆಲ್ಲಾ ಪೊಲೀಸರು, ಸರ್ಕಾರ ಅಥವಾ ವ್ಯವಸ್ಥೆಯೇ ನಿಯಂತ್ರಿಸಬೇಕು ಎಂಬುದು ಕಷ್ಟ. ಯಾಕೆಂದರೆ ಇವೆಲ್ಲಾ ಹೇಳಿ ಕೇಳಿ ಆಗುವಂತಹ ಘಟನೆಗಳಲ್ಲ. ಜನರೇ ಜಾಗೃತರಾಗಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಇಂತಹ ಸುಳ್ಳು ಸಂದೇಶಗಳನ್ನು ನಿಯಂತ್ರಿಸುವ ದಿಸೆಯಲ್ಲಿ, ಸರ್ಕಾರಕ್ಕೆ ಏನಾದರೂ ಶಿಫಾರಸು ಮಾಡುವಿರಾ?

ಇವುಗಳ ನಿಯಂತ್ರಣಕ್ಕೆ ಜನಪ್ರತಿನಿಧಿಗಳು ಕೂಡಲೇ ಜಾಗೃತರಾಗಬೇಕು. ಎಲ್ಲ ಕ್ಷೇತ್ರಗಳ ಜನರೂ ಮುಂದೆ ಬಂದು ಇಂತಹ ಘಟನೆಗಳನ್ನು ಖಂಡಿಸಿ ಭವಿಷ್ಯದಲ್ಲಿ ಮರುಕಳಿಸದಂತೆ ತಡೆಯಲು ಕಾರ್ಯಪ್ರವೃತ್ತರಾಗಬೇಕು. ಜನರು ತಮ್ಮ ಸಾಮಾಜಿಕ ಕಾಳಜಿ ವ್ಯಕ್ತಮಾಡಬೇಕಾದ ಸಮಯವಿದು.

ಇಂತಹ ಘಟನೆಗಳನ್ನು ತಡೆಗಟ್ಟುವುದು ಹೇಗೆ?

ನೋಡಿ, ಬೆಂಗಳೂರು ಇವತ್ತು ದೇಶದಲ್ಲಿ ಮಾತ್ರವಲ್ಲ, ವಿಶ್ವಮಾನ್ಯ ಅಗ್ಗಳಿಕೆ ಹೊಂದಿದೆ. ನಿತ್ಯವೂ ಇಲ್ಲಿಗೆ ಅನ್ಯ ರಾಜ್ಯ, ದೇಶಗಳಿಂದ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಎಷ್ಟೋ ವಿದೇಶಿಯರು ಇಲ್ಲೇ ನೆಲೆಸಿದ್ದಾರೆ. ಇದೊಂದು ಬಹು ಸಂಸ್ಕೃತಿಗಳ ನಗರವಾಗಿದೆ. ಹಿಗ್ಗುತ್ತಿರುವ ಬಹುಸಂಸ್ಕೃತಿಯ ನಗರದಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬ ವ್ಯಕ್ತಿಗೆ ಗೌರವ ಕೊಡುವುದನ್ನು ಕಲಿಯಬೇಕು. ಮಕ್ಕಳು ಮತ್ತು ಮಹಿಳೆಯರ ಮೇಲೆ ಗೌರವಭಾವ ಹೆಚ್ಚಾಗಬೇಕು. ನಮ್ಮ ನಡತೆ ಈ ನೆಲದ ಸಂಸ್ಕೃತಿಯಾಗಿರಬೇಕು. ವ್ಯಕ್ತಿಗತವಾಗಿ ಮತ್ತು ಸಾರ್ವತ್ರಿಕವಾಗಿ ಉತ್ತಮ ನಡವಳಿಕೆ ರೂಢಿಸಿಕೊಂಡು ಹೋಗಲು ಪ್ರಯತ್ನಿಸಬೇಕು. ಇದೆಲ್ಲಾ ಒಂದೇ ದಿನದಲ್ಲಿ ಆಗುವಂತಹುದಲ್ಲ. ಸಾರ್ವಜನಿಕರು ಸುಸಂಸ್ಕೃತ ನಡವಳಿಕೆಯನ್ನು ಸ್ವಯಂ ಮೈಗೂಡಿಸಿಕೊಳ್ಳುತ್ತಾ ಹೋದರೆ ಅಪರಾಧಗಳನ್ನು ಕ್ರಮೇಣವಾಗಿ ತಡೆಗಟ್ಟಬಹುದು.

ರಾಜ್ಯ ಪೊಲೀಸರ ಕಾರ್ಯ ವೈಖರಿ ಬಗ್ಗೆ ನಿಮಗೆ ಏನನನ್ನಿಸುತ್ತದೆ?

ಇಲ್ಲಿನ ಪೊಲೀಸ್‌ ವ್ಯವಸ್ಥೆ ನಿಜಕ್ಕೂ ಉತ್ತಮವಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪೊಲೀಸರು ಸದಾ ಎಚ್ಚರವುಳ್ಳವರು. ಏನೇ ದೂರುಗಳು ಬಂದರೂ ತಕ್ಷಣ ಕ್ರಮ ಕೈಗೊಳ್ಳುತ್ತಾರೆ.

ಜೈಲು ಮತ್ತು ಕೈದಿಗಳ ಪರಿಸ್ಥಿತಿ ಸಮಾಧಾನ ತರುವಂತಿದೆಯೇ?

ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಜೈಲುಗಳ ಸ್ಥಿತಿ ಚೆನ್ನಾಗಿಯೇ ಇದೆ. ರಾಜ್ಯದ ಎಲ್ಲಾ ಜೈಲುಗಳೂ ತುಂಬಿ ತುಳುಕುತ್ತಿವೆ ಎಂಬುದೇನೋ ನಿಜ. ಇವುಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆಯೇ ಹೆಚ್ಚಿದೆ.

ಗುಜರಾತ್‌ನ ಜೈಲುಗಳಲ್ಲಿ ಕೈದಿಗಳು ರಾತ್ರಿ ಮಲಗಲು ಬ್ಯಾರಕ್‌ಗಳಲ್ಲಿ ಹೊಡೆದಾಡುವ ಪರಿಸ್ಥಿತಿ ಇದೆ. ಸದ್ಯ, ಇಲ್ಲಿ ಹಾಗಿಲ್ಲ!

ಆಯೋಗದ ಅಧ್ಯಕ್ಷರಾದ ಮೇಲೆ ನೀವು ಏನು ಮಾಡಿದ್ದೀರಿ?

ನಾನು ಅಧ್ಯಕ್ಷನಾಗಿ ಹತ್ತಿರ ಹತ್ತಿರ ಎರಡು ತಿಂಗಳಾಗುತ್ತಿದೆ ಅಷ್ಟೇ. ನನಗೆ ಮನೆ ಇನ್ನೂ ಕೊಟ್ಟಿಲ್ಲ. ಬೇಕಾದ ಸಿಬ್ಬಂದಿ ಇಲ್ಲ. ರಾಜ್ಯದ ವಿವಿಧೆಡೆ ಮಾನವ ಹಕ್ಕು ಆಯೋಗದ ಕೇಂದ್ರಗಳ ಸ್ಥಾಪನೆ ಆಗಬೇಕು. ಹೀಗಾಗಿ ಪೂರ್ಣಪ್ರಮಾಣದ ಕೆಲಸ ಆರಂಭಿಸಿಲ್ಲ. ನಾನು ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ಕೆಲಸವೇ ಮಾತಾಡಬೇಕು.

ಆಯೋಗದ ಮುಂದೆ ಸದ್ಯ 4 ಸಾವಿರಕ್ಕೂ ಹೆಚ್ಚು ದೂರು ಬಾಕಿ ಇವೆ. ಮೂವರು ಸದಸ್ಯರು ಜೊತೆಗಿದ್ದಾರೆ. ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ. ನಿತ್ಯ ಹೊಸ ಹೊಸ ದೂರು ಬರುತ್ತಿವೆ.

ತಪ್ಪಿತಸ್ಥರು ಎಂದು ಕಂಡುಬಂದ ಪ್ರಕರಣಗಳಲ್ಲಿ ಆಯೋಗ ಕೈಗೊಂಡಿರುವ ಪರಿಣಾಮಕಾರಿ ಕ್ರಮಗಳೇನು?

ನಮಗೆ ಶಿಕ್ಷಿಸುವ ಅಧಿಕಾರವಿಲ್ಲ. ಏನಿದ್ದರೂ ರಾಜ್ಯ ಸರ್ಕಾರಕ್ಕೆ ನಮ್ಮ ಶಿಫಾರಸುಗಳನ್ನು ಕಳುಹಿಸುತ್ತೇವೆ. ಈಗಿನ ಸಮ್ಮಿಶ್ರ ಸರ್ಕಾರ ನಮ್ಮ ಶಿಫಾರಸುಗಳನ್ನು ಗಂಭೀರವಾಗಿಯೇ ಪರಿಗಣಿಸುತ್ತಿದೆ ಮತ್ತು ಆಯೋಗದ ಮಾತಿಗೆ ಹೆಚ್ಚಿನ ಬೆಲೆ ಕೊಡುತ್ತಿದೆ. ನಮ್ಮ ಕೆಲಸಗಳಿಗೆ ಮತ್ತು ಸಮಾಜದ ಸುಧಾರಣೆಗೆ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರ ನೆರವೂ ಅಗತ್ಯ ಎಂದು ನನ್ನ ಭಾವನೆ.

ಆಯೋಗದ ಕಣ್ಣಿಗೆ ಕಾಣಿಸುತ್ತಿರುವ ಸಮಸ್ಯೆ, ಅವುಗಳ ಪರಿಹಾರಕ್ಕೆ ಕ್ರಮಗಳೇನು?

ಪ್ರಾಕೃತಿಕ ವಿಕೋಪ, ಸೇತುವೆ ಕುಸಿತ, ನೀರಿನ ಕೊರತೆ, ಕಡ್ಡಾಯ ಶಿಕ್ಷಣ ಹಕ್ಕು, ಅಶುದ್ಧ ಗಾಳಿ, ನೀರು, ಶಬ್ದ ಮಾಲಿನ್ಯ ತಡೆ ಬಗ್ಗೆ ಹೆಚ್ಚಿನ ಗಮನ ನೀಡಿದ್ದೇವೆ. ಮಾನವ ಕಳ್ಳಸಾಗಣೆ ದೂರುಗಳ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದೇವೆ. ಕಾರ್ಮಿಕರ ಶೋಷಣೆ, ಮಕ್ಕಳ ಮೇಲಿನ ದೌರ್ಜನ್ಯದ ದೂರುಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಆಹಾರ ಪದಾರ್ಥಗಳಲ್ಲಿ ಕಲಬೆರಕೆ, ಶುದ್ಧ ಕುಡಿಯುವ ನೀರಿನ ಕೊರತೆ, ಮಲಿನಯುಕ್ತ ನೀರಿನ ಬಳಕೆ, ಕಾರ್ಮಿಕರ ಜೀವನ ಸುಧಾರಣೆ, ನಿಗದಿತ ವೇತನ ಪಡೆಯದೇ ಶೋಷಣೆಗೊಳಾಗಿರುವ
ಕಾರ್ಮಿಕರು, ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗ ಪ್ರಕ್ರಿಯೆ ಸುಧಾರಣೆಗೆ ಆದ್ಯತೆ ನೀಡಿದ್ದೇವೆ.

ಬೆಂಗಳೂರಿನಲ್ಲಿ ಫುಟ್‌ಪಾತ್‌ಗಳೇ ಇಲ್ಲವಲ್ಲಾ?

ಹೌದು. ಇದು ಸತ್ಯ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ರಸ್ತೆ ಅಪಘಾತ ತಡೆಯಲು ಮತ್ತು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪ್ರತ್ಯೇಕ ಪೊಲೀಸ್‌ ಬಲದ ಅಗತ್ಯವಿದೆ. ಮುಂದಿನ 50 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಸ್ತೆ, ವಾಹನ ಸಂಚಾರ, ಅವುಗಳ ನಿಲುಗಡೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ಕಡೆಗೆ ಒತ್ತು ನೀಡಬೇಕಿದೆ. ಸಾರ್ವಜನಿಕ ವಾಹನ ಬಳಕೆ ಹೆಚ್ಚಬೇಕಿದೆ.

ಇವೆಲ್ಲಾ ಸರ್ಕಾರದ ಆಡಳಿತ ಮತ್ತು ನೀತಿ ನಿಯಮಕ್ಕೆ ಸಂಬಂಧಪಟ್ಟ ವಿಷಯಗಳು. ಜನರ ಜೀವಕ್ಕೆ ಭದ್ರತೆ ಮತ್ತು ಕಿಮ್ಮತ್ತು ನೀಡಬೇಕಾದ ದೃಷ್ಟಿಯಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.