ADVERTISEMENT

ಕಾವ್ಯ ತಪಸ್ವಿ ಎಚ್ಚೆಸ್ವಿ ಸಂದರ್ಶನ| ಕಾವ್ಯ ಪ್ರವಾಹದ ಅಲೆ ನಾನು

ಸಾಹಿತ್ಯ ದಿಗ್ಗಜ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 19:30 IST
Last Updated 15 ಜೂನ್ 2019, 19:30 IST
ಓದಿನ ಸುಖದಲ್ಲಿ ಎಚ್‌.ಎಸ್. ವೆಂಕಟೇಶಮೂರ್ತಿ ಚಿತ್ರಗಳು: ಇರ್ಷಾದ್‌ ಮಹಮ್ಮದ್
ಓದಿನ ಸುಖದಲ್ಲಿ ಎಚ್‌.ಎಸ್. ವೆಂಕಟೇಶಮೂರ್ತಿ ಚಿತ್ರಗಳು: ಇರ್ಷಾದ್‌ ಮಹಮ್ಮದ್   

ಎಚ್‌.ಎಸ್‌. ವೆಂಕಟೇಶಮೂರ್ತಿ ಸಮಕಾಲೀನ ಕನ್ನಡ ಕಾವ್ಯದ ಮಂದಾರ. ಕಾವ್ಯದ ಜೊತೆಜೊತೆಗೆ ತಮ್ಮದೇ ಆದ ಕಾವ್ಯಮೀಮಾಂಸೆಯನ್ನು ರೂಪಿಸಿಕೊಂಡು, ಕಾವ್ಯವನ್ನೇ ಜೀವಿಸುತ್ತ ಪಸರಿಸುತ್ತಿರುವ ಈ ಕಾವ್ಯಪ್ರೇಮಿ ಮೇಷ್ಟ್ರಿಗೆ ಜೂನ್‌ 23ಕ್ಕೆ 75! ಈ ಸಂದರ್ಭದಲ್ಲಿ ಎಚ್ಚೆಸ್ವಿ ಅವರನ್ನು ಯುವ ಕವಿ– ಕಥೆಗಾರ ವಿಕ್ರಮ ಹತ್ವಾರ ‘ಭಾನುವಾರ ಪುರವಣಿ’ಗಾಗಿ ಮಾತನಾಡಿಸಿದ್ದಾರೆ. ಈ ವಿಶೇಷ ಸಂದರ್ಶನ ಕನ್ನಡ ಸಾಹಿತ್ಯ ಸಂದರ್ಭದ ಮುಂಗಾರಿನ ಕಾವು–ಚೆಲುವನ್ನು ಸಹೃದಯರ ಅನುಭವಕ್ಕೆ ತರುವಷ್ಟು ಸೊಗಸಾಗಿದೆ.

*

ನೀವು 75ರ ಸಂಭ್ರಮದಲ್ಲಿದ್ದೀರಿ. ಅಷ್ಟು ವರ್ಷಗಳಾದರೂ ಇನ್ನೂ25ರ ಚೈತನ್ಯ ಕಾಣಿಸ್ತಿದೆ. ಸದಾ ಒಂದಿಲ್ಲೊಂದು ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿದ್ದೀರಿ. ನಿಮಗೆ ಯಾವತ್ತಾದರೂ ‘ಸಾಕಪ್ಪ,ನನ್ನ ಏಕಾಂತವನ್ನು ನನ್ನ ಪಾಡಿಗೆ ನಾನು ಅನುಭವಿಸಿಕೊಂಡು ಇದ್ದುಬಿಡೋಣ’ ಅಂತ ಅನಿಸಿದ್ದಿದೆಯೇ?
ಎಚ್ಚೆಸ್ವಿ
: ಆ ರೀತಿ ನಾನು ಇರೋದು ಸಾಧ್ಯವಾಗಿಲ್ಲ. ನಾನು ಬಯಸುವುದು ಸಾಮುದಾಯಿಕ ಬದುಕನ್ನು; ನಮ್ಮ ದೇಶದಲ್ಲಿ ಇವತ್ತು ಯಾವುದು ಕಡಿಮೆ ಆಗುತ್ತಿದೆಯೋ, ಅಂಥ ಬದುಕನ್ನು ನಾನು ಬಹಳಪ್ರೀತಿಸೋನು. ನಾನು ಬಂದಿದ್ದು ಹಳ್ಳಿಯಿಂದ. ಅಲ್ಲಿ ಆ ಥರದ್ದೊಂದು ಗುಣ ಇದೆ. ಇಡೀ ಹಳ್ಳಿ ಒಂದಾಗಿ ಬದುಕುತ್ತದೆ. ಹಾಗೆ,ಇನ್ನೊಬ್ಬರ ನೋವನ್ನು ನಲಿವನ್ನು ತನ್ನದಾಗಿ ಮಾಡಿಕೊಳ್ಳುವಂಥ, ಅದರಲ್ಲಿ ಪಾಲುದಾರನಾಗುವಂಥ ಪ್ರವೃತ್ತಿ ನನಗೆ ಬಾಲ್ಯದಿಂದಲೂ ಬಂದಿದೆ. ಹಾಗಾಗಿ ನನ್ನ ಪಾಡಿಗೆ ಏಕಾಂಗಿ ಆಗಿರೋದು,ನನ್ನ ಬರವಣಿಗೆ ಮತ್ತು ಚಿಂತನೆ ಸಂದರ್ಭದಲ್ಲಿ ಮಾತ್ರ.

ADVERTISEMENT

ಕಾರ್ಯಪ್ರವೃತ್ತನಾದಾಗ ನನ್ನ ಸುತ್ತಲೂ ನನ್ನ ಸ್ನೇಹಿತರು, ಬಂಧುಗಳು ಇರಬೇಕು ಅಂತ ಬಯಸುವೆ. ಇದೇ ‘ಸಹ ನೌ’ ತತ್ವ. ಇದೊಂದು ಅದ್ಭುತವಾದಂಥಸೂಕ್ತಿ. ನಾವೆಲ್ಲರೂ ಒಟ್ಟಿಗೆ ಇರೋಣ,ಓದೋಣ,ಒಟ್ಟಿಗೆ ಕ್ರಿಯಾಶೀಲರಾಗಿರೋಣ ಎನ್ನುವುದು ಎಂಥಮಂತ್ರ! ಈ ‘ಒಟ್ಟಿಗೆ’ ಅನ್ನುವ ಪರಿಕಲ್ಪನೆ ಇದೆಯಲ್ಲ,ಅದು ನನ್ನ ಬದುಕಿನಲ್ಲಿ ಚೇತನವನ್ನು ಕೊಡುವ ಶಕ್ತಿ.ನನ್ನ ಜೊತೆಗೆ ನನ್ನ ಸಾಕಿದೋರು, ಬಂಧುಗಳು,ಸುಖ ದುಃಖ ಹಂಚಿಕೊಂಡೋರು,ವಿದ್ಯಾರ್ಥಿಗಳು, ಗುರುಗಳು, ನಮ್ಮ ಹಿಂದೆ ಆಗಿ ಹೋದಂಥವರೂ ಇದಾರೆ. ಪಂಪ, ಕುಮಾರವ್ಯಾಸ, ವಚನಕಾರರ ಧ್ವನಿ ಕೇಳಿಸ್ತಾ ಇದೆ. ಈ ಅನಂತವಾದ,ಅವಿರತವಾದ ಸತತ ಕಾವ್ಯ ಪ್ರವಾಹದ ಈ ಕ್ಷಣದಒಂದು ಅಲೆ ನಾನು.

ಸಮೃದ್ಧವಾದ ತುಂಬುಜೀವನವನ್ನು ನೀವು ಆಸ್ವಾದಿಸಿದ್ದೀರಿ, ಅಲ್ಲವೇ?
ಬದುಕನ್ನು ಎಲ್ಲಾ ರೀತಿಯಲ್ಲೂ ಪ್ರೀತಿಸೋನು ನಾನು. ಸಂಬಂಧದ ವಿಷಯದಲ್ಲಿ,ಊಟಮಾಡೋದ್ರಲ್ಲೂ ಒಂದು ಸಂಭ್ರಮ– ಸಂತೋಷ ಕಾಣಬೇಕು. ಅದನ್ನು ನೂರಕ್ಕೆ ನೂರು ಪೂರ್ಣವಾಗಿ ಅನುಭವಿಸಬೇಕು. ಇದನ್ನೇ ಬೇಂದ್ರೆ‘ಬೆಳಗು’ಪದ್ಯದಲ್ಲಿ ಹೇಳಿರೋದು. ಒಂದು ಬೆಳಗನ್ನು ನೋಡುತ್ತಿದ್ದರೆ,ಆ ಬೆಳಕು,ವಾಸನೆ,ಹೊಳಪು ಅದೆಲ್ಲವನ್ನೂ ಒಮ್ಮೆಲೇ ಪಂಚೇಂದ್ರಿಯಗಳಿಂದ ಸ್ವೀಕರಿಸಬೇಕು. ‘ಶಾಂತಿ ರಸವೇ ಪ್ರೀತಿಯಿಂದ ಮೈದೋರಿತಣ್ಣಾ’ ಎಂದಿಲ್ಲವೇ? ಇದು ಕೇವಲ ಬೆಳಗು ಎಂದು ತಿಳಿದುಕೊಳ್ಳಬೇಡ. ಅಂದರೆ,ಕಂಡ ಸಂಗತಿಯಿಂದ ಕಾಣದ್ದನ್ನು ಕಲ್ಪಸುವ ಶಕ್ತಿ ಇದೆಯಲ್ಲ; ಅದು ಕವಿಗೆ ದಕ್ಕಿದ ವರ. ಅದಿಲ್ಲದೇ ಹೋದರೆ ನಾವು ಫೋಟೊಗ್ರಾಫರ್‌ ಥರ ಆಗಿ ಬಿಡುತ್ತಿದ್ದೆವು.

ಕಾಣುವುದರ ಹಿಂದೆ ಕಾಣದ್ದೂ ಇದೆ. ಆ ಕಾಣದ್ದು, ಕಂಡಾಗ ಅದನ್ನೇ ‘ದರ್ಶನ’ ಅಂತ ಹೇಳೋದು. ನೋಟಅಲ್ಲ, ಅದು ದರ್ಶನ.ಅಂದರೆ,ಅದು ನಮಗೆ ಒಲಿದಿದ್ದು. ‘ಕಂಡವರಿಗಲ್ಲ,ಕಂಡವರಿಗಷ್ಟೇ ಕಂಡೀತು ಇದರ ನೆಲೆಯು’ ಎಂದು ಬೇಂದ್ರೆ ಹೇಳ್ತಾರಲ್ಲ,ಆ ಮಾತಿನ ಅರ್ಥ ಇದು. ನೋಡಿ,ಆ ಕಾಣೋದು ಅನ್ನೋ ಪದನ ಯಾವ ರೀತಿ ಬಳಸ್ತಾರೆ. ನಾವು ನೋಡಿದ್ದಲ್ಲ; ತಾನು ಕಂಡದ್ದು. ಹೀಗೆ ಅನಿರೀಕ್ಷಿತವಾಗಿ,ನಮ್ಮನ್ನ ಮೀರಿ ಏನೋ ಕಾಣುತ್ತಲ್ಲ, ಅದು ಕವಿತೆ ಆಗುತ್ತದೆ. ಜೀವನವನ್ನೂ ಹೀಗೇ ಆಸ್ವಾದಿಸುತ್ತಾ ಬಂದೋನು ನಾನು.

ಆ ‘ದರ್ಶನ’ ಆಗಬೇಕಾದರೆ ಅಂತಹ ಮನಃಸ್ಥಿತಿ ಬೇಕಲ್ಲವೇ?
ಹಾ... ಆ ರೀತಿ ತೊಡಗಿಸಿಕೊಂಡಿರುವ ಮನಃಸ್ಥಿತಿ ಬೇಕು. ನಿದ್ದೆ–ಎಚ್ಚರದಲ್ಲಿಯೂ ಸದಾ ತಮ್ಮ ಬರವಣಿಗೆಯ ಸಾಧ್ಯತೆ ಕುರಿತು ಚಿಂತನೆ ಮಾಡುತ್ತಿರುವವರಿಗೆ ಸಾಧ್ಯವಾಗತ್ತೆ ಇದು.ಹಳೆಯ ಕವಿಗಳು ‘ನನಗೆ ಕನಸಲ್ಲಿ ಸಾಲು ಸಿಗ್ತು’ ಅಂತ ಹೇಳ್ತಾ ಇದ್ರು.ಅಂದ್ರೆ,ಕನಸಲ್ಲೂ ಅವರು ಕವಿತೆ ಬರೆಯುತ್ತಾರೆ! ಜಾಗೃತ– ಸಪ್ನಾವಸ್ಥೆ ಎರಡರಲ್ಲಿಯೂ ಅವರು ಕವಿತೆಯಲ್ಲಿ ತೊಡಗಿದ್ದಾರೆ.
‘ಪುತಿನ’ ಒಂದು ಮಾತು ಹೇಳುತ್ತಿದ್ದರು: ‘ಕವಿತೆ ಅನ್ನೋದು ಭಾಳ ನಾಚಿಕೆ ಸ್ವಭಾವದ್ದಪ್ಪ. ಆ ಹೆಣ್ಣುಮಗಳನ್ನು ಒಲಿಸಿಕೊಳ್ಳಬೇಕು; ಮುದ್ದಿಸಬೇಕು. ನೀವು ಸ್ವಲ್ಪ ಕೆಂಪು ಕಣ್ಣು ಮಾಡಿದ್ರೆ ಹೊರಟು ಹೋಗುತ್ತಾಳೆ, ಬರೋದೇ ಇಲ್ಲ. ಅವಳು ಮಗು ಥರ’.

ಹೆಚ್ಚೂ ಕಡಿಮೆ60ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಕೊಂಡಿದ್ದೀರಿ. ನೀವು ಬರಿಯೋದಕ್ಕೆ ಶುರುಮಾಡಲು ಪ್ರೇರಣೆ ಏನು?
ನಾನು ಬರವಣಿಗೆ ಶುರು ಮಾಡಿದಾಗನನಗೆ16ವರ್ಷ.

ನಮ್ಮ ಅಜ್ಜನಿಗೆ (ತಾಯಿಯತಂದೆ) ಯಕ್ಷಗಾನದ ಹುಚ್ಚು. ಪಾರ್ಥಿಸುಬ್ಬ ಅವರ ಪುಸ್ತಕಗಳು ನಮ್ಮ ಮನೆಯಲ್ಲಿ ಇದ್ದವು. ಅದನ್ನು ಓದೋಕೆ ಶುರು ಮಾಡಿದೆ. ಅಜ್ಜ ಪ್ರಸಂಗ ಹಾಡ್ತಾ ಇದ್ದರು. ಮೃದಂಗ ನುಡಿಸೋಕೆ ಬರ್ತಿತ್ತು. ಆಗಾಗಪಕ್ಕದಮನೆಯಲ್ಲಿ ಬೆಳಿಗ್ಗೆ ಕುಮಾರವ್ಯಾಸ ಭಾರತವನ್ನು ಓದುತ್ತಿದ್ದರು. ನಾನು ಮಲಗಿದ್ದಾಗಲೇ ಕುಮಾರವ್ಯಾಸನ ಕಾವ್ಯ ನನ್ನ ಮನಸ್ಸಿಗೆ ತಲುಪುತ್ತಾ ಇತ್ತು.

ಊರಿನಲ್ಲಿ ಭಜನಾ ಮಂಡಳಿ ಇತ್ತು. ತತ್ವಪದಕಾರರನ್ನು ಹಾಡುತ್ತಾ ಇದ್ದರು. ನಿಜಗುಣ ಶಿವಯೋಗಿ ಅವರಪರಿಚಯಆದದ್ದು ಹಾಗೆ. ಯಕ್ಷಗಾನದ ಪ್ರಸಂಗ ಅಂದರೆ,ವೇಷಧಾರಿಗಳು ಕುಣಿಯೋದಲ್ಲ, ಗೊಂಬೆಗಳನ್ನು ಕುಣಿಸೋರು. ಇದರಿಂದ ನನಗೆ ಮಹಾಭಾರತ, ರಾಮಾಯಣದಎಲ್ಲಾ ಕಥೆಗಳು ಮನಸ್ಸಲ್ಲಿ ಕೂತವು.

ಮನೆಯಲ್ಲಿ ಗಳಗನಾಥರ ಕೃತಿಗಳು ಇದ್ದವು. ನಮ್ಮ ಅಜ್ಜಿ ಓದುತ್ತಿದ್ದರು. ಆ ಕಥೆಗಳನ್ನು ಹೇಳುತ್ತಿದ್ದರು. ಆಮೇಲಿನ ನನ್ನ ಗುರುಗಳು ನರಸಿಂಹ ಶಾಸ್ತ್ರಿಗಳು. ಅವರು ಬರೀ ಪುಸ್ತಕವನ್ನಷ್ಟೇ ಓದಿ ಪಾಠ ಮಾಡುತ್ತಿರಲಿಲ್ಲ. ವಿ.ಸೀ. ಅವರ ಒಂದು ಪ್ರಬಂಧ ಓದೋರು. ಪುಟ್ಟಪ್ಪನೋರ ‘ಅಜ್ಜಯ್ಯನ ಅಭ್ಯಂಜನ’ ನನಗೆ ಓದಿಹೇಳಿದ್ದು ಅವರು. ಅವರಿಗೆ ಅಂಥ ರುಚಿ ಇತ್ತು. ಮೇಷ್ಟ್ರ ರುಚಿ ಚೆನ್ನಾಗಿದ್ದರೆ,ಮಕ್ಕಳ ರುಚಿ ಚೆನ್ನಾಗಿರುತ್ತೆ.ಕಾರಂತರು,ಅನಕೃ,ತರಾಸು ಅವರ ಕಾದಂಬರಿಗಳನ್ನು ಮಿಡ್ಲ್ ಸ್ಕೂಲ್‌ನಲ್ಲಿ ಇದ್ದಾಗಲೇ ಓದಿ ಮುಗಿಸಿದ್ದೆ.ಹೈಸ್ಕೂಲಿನಲ್ಲಿ ಬೇಂದ್ರೆಯನ್ನು ಓದೋಕೆ ಶುರು ಮಾಡಿದೆ. ಅವಾಗ ‘ಅರಳು ಮರಳು’ ಬಂದಿತ್ತು. ಅರ್ಥ ಆಗುತ್ತಿರಲಿಲ್ಲ. ಆದರೂ ಓದಬೇಕು ಅನ್ನೋ ಹುಚ್ಚು. ನಮಗೆ ಲೆಕ್ಕ ಹೇಳಿಕೊಡುವ ಮೇಷ್ಟ್ರು ಬೇಂದ್ರೆ ಪದ್ಯ ಹಾಡೋರು.ಈಗಿನ ಮಕ್ಕಳಿಗೆಈ ರೀತಿಸಿಗೋದು ಕಷ್ಟ. ಒಬ್ಬ ಒಳ್ಳೆ ಮೇಷ್ಟ್ರು ಇದ್ದರೆ ಅನೇಕ ಪೀಳಿಗೆಯನ್ನು ಉದ್ಧಾರ ಮಾಡುತ್ತಾರೆ.

ನವ್ಯರ ಪ್ರಭಾವ ನಿಮ್ಮ ಮೇಲೆ ಹೇಗಾಯಿತು?
ನಾನು ಬರಹ ಶುರು ಮಾಡಿದಾಗ ನವ್ಯದತ್ತ ಆಕರ್ಷಣೆ ಇತ್ತು. ಆಗ ಅಡಿಗರು ದೊಡ್ಡ ಹೆಸರು ಮಾಡಿದ್ದರು. ಅವರುನಮಗೆ ಮಾದರಿ. ನನ್ನ ಮೊದಲ ಸಂಗ್ರಹಕ್ಕೆ ಅಡಿಗರು ಬೆನ್ನು ತಟ್ಟಿದ್ದರು. ‘ನೀನು ಮಾಡುವ ಪ್ರತಿಯೊಂದು ಕವಿತೆಯ ಪ್ರಯೋಗವೂ ನಿಜವಾಗ ಕಾವ್ಯ ಪ್ರಯೋಗ’ ಅಂದಿದ್ದರು. ಆದರೆ, ನನ್ನ ಬರವಣಿಗೆಯಲ್ಲಿ ಅಡಿಗರ ಕಾವ್ಯ ಪ್ರಭಾವ ಕಾಣೋದೆ ಇಲ್ಲ.

ಅಡಿಗರನ್ನು ಓದುವಷ್ಟೇ ಪ್ರೀತಿಯಿಂದ ನಾನು ಕುವೆಂಪು ಅವರನ್ನು ಓದುತ್ತಾ ಇದ್ದೆ. ಬೇಂದ್ರೆ,ಪುತಿನ ಅವರನ್ನೂ ಓದುತ್ತಿದ್ದೆ. ಪಂಪ,ಕುಮಾರವ್ಯಾಸ, ಮಹಾಭಾರತ,ರಾಮಾಯಣ, ಭಾಗವತ... ಆ ಪರಂಪರೆಯ ಪರಿಚಯವೂ ನನಗಿತ್ತು. ವಚನಕಾರರು,ಪುರಂದರದಾಸರುಎಂದರೆನನಗೆ ಹುಚ್ಚು. ಇವೆಲ್ಲ ಪ್ರಭಾವದಿಂದ ನವ್ಯದ ಜೊತೆಗೇ ಬೇರೆ ಅನೇಕ ಕವಿಗಳ ಉತ್ಕೃಷ್ಟ ಕಾವ್ಯದ ಪ್ರಭಾವ ನನ್ನ ಮೇಲೆ ಆಗುತ್ತಿತ್ತು. ಹಾಗಾಗಿ,ನಾನು ಕಾವ್ಯವನ್ನೂ ಬೇರೆ ಥರ ಕಾಣುತ್ತಾ ಇದ್ದೆ.

ಯಾವುದೇ ಮಾದರಿಯ ಕಟ್ಟುಪಾಡು ಹಾಕಿಕೊಳ್ಳದೇ,ನಿಮಗೆ ಏನು ಅನ್ನಿಸುತ್ತದೋ ಅದನ್ನು ಬರೆದಿರಿ ಅಲ್ಲವೇ?
ಸ್ವತಂತ್ರವಾಗಿ ನನ್ನಅನುಭವವನ್ನು ನನ್ನ ಭಾಷೆಯಲ್ಲಿ ಬರೆದೆ. ಅದಕ್ಕೆ ‘ಜೀವಿ’ ಒಂದು ಸಲ ‘ನಿನ್ನ ಕಾವ್ಯದಲ್ಲಿ ಪದಕೋಶದಲ್ಲಿ ಇಲ್ಲದೇ ಇರುವ ಅನೇಕ ಪದಗಳು ಬರುತ್ತಾವಪ್ಪ’ ಅಂತ ಹೇಳಿದ್ರು. ಬೇಂದ್ರೆ– ಕಂಬಾರರ ಹಾಗೆ ಜಾನಪದವೂ ಅಲ್ಲ. ಜಾನಪದ ಮತ್ತು ಶಿಷ್ಟ ಸೇರಿದಂಥ ಒಂದು ವಿಶಿಷ್ಟವಾದ ಪಾಕ.ಅದು ನನ್ನ ಭಾಷೆ.ಹಾಗಾಗಿ ಅನಂತಮೂರ್ತಿ ಅವರಾಗಲಿ,ಡಿ.ಆರ್. ನಾಗರಾಜ್ ಅವರಾಗಲಿ ಬಹಳ ವಿಮರ್ಶಕರು ‘ಇಂಥಾ ಭಾಷಾಪ್ರಜ್ಞೆ ಇರೋ ಕವಿ ನಮಗೆ ಬೇಕು’ ಅಂತ ನನ್ನ ಕುರಿತು ಹೇಳುತ್ತಿದ್ದರು. ನನ್ನ ಸಮಕಾಲೀನ ಬರಹಗಾರರಿಗಿಂತ ನಾನು ಭಿನ್ನವಾಗಿದ್ದೆ. ರಗಳೆಯಲ್ಲಿ,ವಚನಗಳಲ್ಲಿ ಬರೆಯುತ್ತಿದ್ದೆ. ವೃತ್ತಕಂದಗಳಲ್ಲಿ ಬರೆದಿದ್ದೇನೆ. ಭಾಮಿನಿ, ವಾರ್ಧಕ ಷಟ್ಪದಿಗಳಲ್ಲಿ ಬರೆದಿದ್ದೇನೆ.

ನಾಟಕ,ಸಿನಿಮಾ,ಭಾವಗೀತೆ,ಕಾದಂಬರಿ,ಮಕ್ಕಳ ಸಾಹಿತ್ಯ ಹೀಗೆ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿರುವ ನಿಮಗೆ ತೃಪ್ತಿ ನೀಡಿದ್ದು ಯಾವುದು?
ನನ್ನ ಓದುಗರ ರೇಂಜ್‌ ವಿಸ್ತಾರವಾದುದು. ಮಕ್ಕಳಿಂದ ಮುದುಕರ ತನಕ ಎಲ್ಲಾ ರೀತಿಯ ಓದುಗರೂ ನನಗಿದ್ದಾರೆ. ಆದರೆ, ಬಹಳ ಸಮಾಧಾನ ಆಗುವುದು ಕವಿತೆ ಬರೆದಾಗ. ‘ಉತ್ತರಾಯಣ’ ಮತ್ತು ‘ಆಪ್ತಗೀತ’ ಪದ್ಯ ಬರೆದಾಗ ಮನಸ್ಸು ಒಂದು ರೀತಿಯ ನಿರಾಳ ಆಯಿತು.

‘ವಿಶ್ವ ಕುಟುಂಬ’ ಎಂಬುದು ಹೇಳಿಕೆಯಾಗಿ ಅಲ್ಲ. ಅದು ಆತ್ಮಾನುಭವಾಗಬೇಕು. ನನ್ನ ಕುಟುಂಬ,ನನ್ನ ಹಳ್ಳಿ, ನನ್ನ ದೇಶ ಎನ್ನುವ ಭಾವವಿಸ್ತಾರವಾದರೆ ವಿಶ್ವರೂಪದ ಕಲ್ಪನೆ ಬರುತ್ತೆ. ಇದನ್ನೇ ಗೀತೆಯಲ್ಲಿ ಹೇಳಿರೋದಲ್ವಾ? ಯಾರಿಗೆ ಪ್ರೀತಿಸೋದಕ್ಕೆ ಸಾಧ್ಯವಾಗೋದಿಲ್ವೋ ಕವಿ ಆಗೋಕೂ ಸಾಧ್ಯ ಇಲ್ಲ. ಎಷ್ಟೊ ಸಾರಿ, ಸಂಬಂಧಗಳಲ್ಲಿ ವಿಮುಖತೆ–ವಿಷಮತೆ ಬರಬಹುದು. ಆದರೆ ನಾನು ಇವತ್ತಿನವರೆಗೂ ಯಾವ ಸ್ನೇಹಿತನನ್ನೂ ಕಳೆದುಕೊಂಡಿಲ್ಲ.

ನನಗೆಪ್ರತಿಯೊಬ್ಬರೂ ಬೇಕು. ಇನ್ನೊಬ್ಬರಿಗೋಸ್ಕರ ಬದುಕೋದು ದೊಡ್ಡದು. ಅದು ಎಲ್ಲೋ ಒಂದು ಕಡೆ ನಮ್ಮ ವ್ಯಕ್ತಿತ್ವದ ವಿಸ್ತರಣೆ ಆಗಿ ಕಾಣುತ್ತೆ. ನಾವುಯಾಕೆ ಚಂದ್ರಮತಿಗಾಗಿ,ಹರಿಶ್ಚಂದ್ರನಿಗಾಗಿ ಮರುಗುತ್ತೇವೆ ಹೇಳಿ? ಅವರೂ ನನ್ನ ಕುಟುಂಬವೇ. ಲೋಹಿತಾಶ್ವನ ಮರಣದಲ್ಲಿ ಚಂದ್ರಮತಿ ಜೊತೆಗೆ ನನಗೂ ಕಣ್ಣೀರು ಬರುತ್ತದೆಯಲ್ಲಾ,ಇದು ನಮಗೆ ಕಾವ್ಯ ಕಲಿಸುವ ಸಂಸ್ಕೃತಿ ಪಾಠ. ವಾಲ್ಮೀಕಿ ಹೇಳುತ್ತಾನೆ, ‘ಯಾರು ಕಣ್ಣೀರಿನ ಹಿಂದೆ ಹೋಗುತ್ತಾನೋ ಆತ ಕವಿ ಆಗುತ್ತಾನೆ’. ಇದು ನನ್ನ ತತ್ವ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್‌ 30ರಂದು ಎಚ್ಚೆಸ್ವಿ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ

ನಿಮ್ಮ ಆರಂಭಿಕ ಬರಹಕ್ಕೆ ಹೋಲಿಸಿದರೆ ‘ಉತ್ತರಾಯಣ’ ಸಂಕಲನದ ನಂತರದ ಬರಹ ತುಂಬಾ ಭಿನ್ನವಾಗಿದೆಯಲ್ಲವೇ?
ಒಂದು ಸಲ ಲಂಕೇಶ್‌ ಹೇಳಿದ್ರು, ‘ನೀನು ಒಳ್ಳೆಯ ಕವಿ. ಕವಿಗೆ ಬೇಕಾದ ಸಲಕರಣೆ ಇದೆ, ಶಕ್ತಿಯೂ ಇದೆ. ಆದರೆ, ನಿನಗೇನಾದರೂ ಒಂದು ದೊಡ್ಡ ಪೆಟ್ಟು ಬೀಳಬೇಕು. ಆಗ ಮಾತ್ರ ಪ್ರಮುಖ ಕವಿ ಆಗಲು ಸಾಧ್ಯ’ ಅಂತ. ನನ್ನ ಹೆಂಡತಿ ತೀರಿಕೊಂಡಾಗ ನನಗಾದ ಅನುಭವ ಇದೆಯಲ್ಲ, ಅದು ನನ್ನ ವ್ಯಕ್ತಿತ್ವವನ್ನೇ ಅಲ್ಲಾಡಿಸಿಬಿಟ್ಟಿತು. ಇಂಥ ದೊಡ್ಡ ಆಘಾತ ಅನುಭವಿಸಿ ದೊಡ್ಡ ಕವಿ ಆಗಬೇಕಾಗಿರಲಿಲ್ಲ. ನನಗೆ ಮೊದಲಿನಿಂದಲೂ ಬುದ್ಧನ ಕಾವ್ಯ ಬರೀಬೇಕು ಅಂತ ಆಸೆಯಿತ್ತು. ಈಗ ಆ ಮನಃಸ್ಥಿತಿ ಬಂದಿದೆ.

ದುಃಖದ ಅನುಭವ ಆಗದೆ ಬುದ್ಧನನ್ನು ಮುಟ್ಟಲಿಕ್ಕೆ ಆಗಲ್ಲ. ಪುತಿನ ಹೇಳುತ್ತಿದ್ದರು: ಸಂತೋಷದಿಂದ ಗೀತೆಗಳು ಬರುತ್ತವೆ, ವಿಷಾದದಿಂದ ಕವಿತೆಗಳು ಬರುತ್ತವೆ ಅಂತ. ಈಗ ಬುದ್ಧನ ಬಗ್ಗೆ ಬರೆಯೋಕೆ ಶುರು ಮಾಡಿದ್ದೇನೆ. ಇದು ಬುದ್ಧನನ್ನೂ ಮತ್ತು ನನ್ನನ್ನೂ ಒಮ್ಮೆಗೇ ನೋಡುವಂಥ ಕಾವ್ಯ. ಬುದ್ಧಜೀವಿತದ ಮೂಲಕ ಅವನ ತತ್ವವನ್ನು ಹಿಡಿದಿಡುವ ಪ್ರಯತ್ನ ನನ್ನದು. ಕಂದಪದ್ಯದ ಲಯಗಾರಿಕೆ ಇಲ್ಲಿದೆ. ‘ಬುದ್ಧಸ್ಮಿತ’ ಅಂತ ಅದರ ಹೆಸರು.

ಕನ್ನಡ ಕಾವ್ಯ ತನ್ನ ಉತ್ತುಂಗದ ಸ್ಥಿತಿ ತಲುಪಿದ್ದು ಯಾವಾಗ?
ನವೋದಯದ ಕಾಲ ಅಂತ ಅನ್ನಿಸುತ್ತೆ; ‘ನೂರು ಮರ, ನೂರು ಸ್ವರ, ಒಂದೊಂದೂ ಅತಿ ಮಧುರ, ಬಂಧವಿರದೆ ಬಂಧುರ, ಸ್ವಚ್ಛಂದ ಸುಂದರ’ ಅಂತ ಬೇಂದ್ರೆ ಹೇಳಿದ್ದು. ಬೇಂದ್ರೆ, ಕುವೆಂಪು, ಪುತಿನ, ಮಾಸ್ತಿ, ಪಂಜೆ ಮಂಗೇಶರಾಯ, ಸೇಡಿಯಾಪು ಕೃಷ್ಣಭಟ್ಟ, ಗೋವಿಂದ ಪೈ, ಕೈಲಾಸಂ, ಕಾರಂತ... ಅಬ್ಬಬ್ಬಾ ಎಂತಹ ಸಾಹಿತಿಗಳು, ಎಂತೆಂಥಾ ಕಾವ್ಯಗಳು, ಕಾದಂಬರಿಗಳು, ನಾಟಕಗಳು! ಪಂಪ, ಕುಮಾರವ್ಯಾಸನ ಕಾಲ ಮುಗಿದ ಮೇಲೆ ಆ ರೀತಿಯ ವಿಸ್ತಾರ ದಕ್ಕಿದ್ದು, ನವೋದಯ ಕಾಲದಲ್ಲೇ. ಮತ್ತೆ ಆ ಕಾಲ ಬರಲಿಲ್ಲ.

ಈಗಿನ ಸಾಹಿತ್ಯದ ವಾತಾವರಣ ಹೇಗಿದೆ?
ಎಲ್ಲಾ ಕಡೆ ಸಿಕ್ಕಾಪಟ್ಟೆ ಶಿಕ್ಷಣ ಬಂತು. ಸಮಾಜದ ಎಲ್ಲಾ ವರ್ಗದವರು ಮಾತಾಡೋಕೆ ಶುರುಮಾಡಿದರು. ನನಗೆ ಈಗ ವಚನ ಕಾಲದ ನೆನಪಾಗುತ್ತದೆ. ಅಲ್ಲಿ ಹೇಗೆ ಸಮಾಜದ ಎಲ್ಲ ಸ್ತರದಿಂದಲೂ ಧ್ವನಿಗಳು ಹೊಮ್ಮಿದವೋ, ಆ ರೀತಿಯ ಧ್ವನಿಜಗತ್ತು ಈಗಲೂ ಶುರುವಾಗಿದೆ. ಸಾವಿರಾರು ಜನ ಬರೆಯುತ್ತಿದ್ದಾರೆ. ಎಲ್ಲಾ ಧರ್ಮ, ಜಾತಿ, ವರ್ಗ, ಬೇರೆ ಬೇರೆ ನಂಬಿಕೆಯವರೂ ಬರೆಯುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಅಸ್ಮಿತೆ ಕಂಡುಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ; ಧ್ವನಿ ಕಂಡುಕೊಳ್ಳುತ್ತಿದ್ದಾರೆ. ಹಾಗಾಗಿ, ಇದೊಂದು ಸಮೃದ್ಧಿ ಯುಗವೇ.

ಆದರೆ, ಈಗಿನ ಕಾಲಕ್ಕೂ, ನವೋದಯ ಕಾಲಕ್ಕೂ ವ್ಯತ್ಯಾಸ ಇದೆ. ಅಲ್ಲಿ ಸಮೃದ್ಧಿಯೊಂದಿಗೆ ಸಾರ್ಥಕತೆಯೂ ಇತ್ತು. ಮಹತ್ವದ ಕೃತಿಗಳು ಬಂದವು. ಈಗ ಅಂಥಾ ಕೃತಿಗಳು ಯಾವುವು ಬಂದಿವೆ ಅಂತ ಹುಡುಕಬೇಕು. ಕೆಲವು ಬಂದಿವೆ. ಆದರೆ, ಆ ಸಮೃದ್ಧಿ ಕಾಣಿಸ್ತಾ ಇಲ್ಲ. ಹೊಸ ಆಲೋಚನೆ ಇದೆ, ಖುಷಿ ಆಗತ್ತೆ. ಆದರೆ, ಮಹತ್ವಾಕಾಂಕ್ಷೆ ಕಡಿಮೆ. ಭಾಷೆ ಮತ್ತು ಲಯದ ಬಗ್ಗೆ ಅವರು ಸಾಕಷ್ಟು ಧ್ಯಾನ ಮಾಡಿಲ್ಲ ಅನ್ನಿಸುತ್ತೆ. ಹೆಚ್ಚು ಮಂದಿ ಗದ್ಯ ಬರೀತಾ ಇದಾರೆ; ಪದ್ಯ ಬರೀತಾ ಇಲ್ಲ. ಈಗ ಹೊಸ ರೀತಿಯ ಪೊಯಟಿಕ್ಸ್ ಶುರು ಆಗಿದೆಯೇ? ಹೊಸ ರೀತಿಯ ಸಾಹಿತ್ಯ ನಿರ್ಮಾಣದ ದಾರಿಗಳನ್ನು ಹುಡುಕುತ್ತಿರಬಹುದೇ? ದೇವನೂರ ಅವರ ‘ಒಡಲಾಳ’ ಬಂದಾಗ ಇಡೀ ಕರ್ನಾಟಕ ನಿಬ್ಬೆರಗಾಗಿ ನೋಡಿತು. ಹಾಗೆ, ಈಗಲೂ ಆಗಬೇಕಲ್ಲ?

ಹಕ್ಕಿಗೆ ಇಳಿಯಲಿಕ್ಕೆ ಜಾಗವೇ ಇಲ್ಲ
75 ವರ್ಷ ಅನ್ನೋದು ಬಹಳ ದೀರ್ಘವಾದ ಅಳತೆ. ಸಾವಿರಾರು ಜನರನ್ನು ನಾನು ಭೇಟಿಯಾಗಿದ್ದೇನೆ. ಅವರ ಮಾತು, ಅವರ ಅನುಭವ ಅರ್ಥ ಮಾಡಿಕೊಂಡಿದ್ದೇನೆ. ಇವರನ್ನು ಬಿಟ್ಟಿರಲಾರೆ ಅಂತ ಕೆಲವರ ಬಗೆಗೆ ಅಂದುಕೊಂಡೆ. ಆದರೆ, ಜೀವನ ಎಷ್ಟು ಕಠೋರ ಅಂದರೆ, ನಾವು ಯಾರನ್ನು ಬಿಡಲಿಕ್ಕೆ ಸಾಧ್ಯವಿಲ್ಲ ಎಂದುಕೊಂಡಿದ್ದೆವೋ, ಅವರು ಹೋದ ಮೇಲೂ ಇದ್ದೇವೆ. ಇದೊಂದು ವಿಚಿತ್ರ. ಬದುಕಿನ ಬಗ್ಗೆ ತಿಳಿದುಕೊಳ್ಳೋದು ಬಹಳ ಇದೆ.

ಹಿಂದಿರುಗಿ ನೋಡಿದರೆ, ನನಗೆ ಭಯ ಅನ್ನಿಸುತ್ತೆ. ಇಷ್ಟು ದೀರ್ಘಕಾಲ ನಡೆದುಕೊಂಡು ಬಂದಿದ್ದೇನೆ. ಅನೇಕರ ಹೆಸರುಗಳು ನೆನಪಾಗುತ್ತವೆ. ಆಯಾಕಾಲಕ್ಕೆ ನಿಮ್ಮ ಮನಸ್ಸಿನ ಸಂಸ್ಕಾರಕ್ಕೆ ತಕ್ಕಂತೆ ಸ್ನೇಹಭಾವವನ್ನು ಕೊಡುವಂಥ ಶಕ್ತಿಯೊಂದು ಬರುತ್ತೆ ನಿಮಗೆ. ಇದು ನಿರಂತರ ರೂಪಾಂತರ. ಬುದ್ಧ ಹೇಳುತ್ತಾನೆ: ‘ಇದು ಸದಾ ಚಲನಶೀಲವಾದ ಬದುಕು’. ಅಡಿಗರು ಭಾಳ ಚೆನ್ನಾಗಿ ಹೇಳಿದ್ದಾರೆ. ‘ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ’ ಅಂತ. ಎಲ್ಲವನ್ನೂ ಕಳೆದುಕೊಳ್ಳುತ್ತಾ ಮತ್ತೆ ಕೆಲವನ್ನು ಪಡೆದುಕೊಳ್ಳುತ್ತಾ ಬದುಕು ಸಾಗಿಸಿದ್ದೇವೆ.

ಬುದ್ಧ ಈಗ ನನಗೆ ಒಂದು ರೀತಿಯ ಕನಸು. ಅತನನ್ನು ಹೇಗೆ ಹಿಡಿಯೋಕೆ ಆಗುತ್ತೆ? ನನ್ನ ಕಾವ್ಯದಲ್ಲಿ ಬುದ್ಧನ ಹೃದಯದ ಮಿಡಿತ ಇದ್ದರೂ ಸಾಕು. ಆತ ಒಂದು ಪದ್ಯದಲ್ಲಿ ಹೇಳುತ್ತಾನೆ: ವಿಸ್ತಾರವಾದ ಆಕಾಶ, ಮೇಲೆ ಶೂನ್ಯ, ಕೆಳಗೆ ಶೂನ್ಯ, ಮೇಲೆ ನೀಲಿ ಕೆಳಗೆ ನೀಲಿ, ಒಂದು ಹಕ್ಕಿ ಹಾರುತ್ತಿದೆ, ಆ ಹಕ್ಕಿಯ ರೆಕ್ಕೆಗಳು ನಿಧಾನಕ್ಕೆ ಸೋಲುತ್ತಿವೆ. ಆದರೆ, ಇಳಿಯಲಿಕ್ಕೆ ಜಾಗ ಇಲ್ಲ. ಅದು ಹಾರಲೇ ಬೇಕು. ಬದುಕಲು ಹಾರಲೇಬೇಕು. ಇದು ಮನುಷ್ಯನ ಸ್ಥಿತಿ.

(ನೆರವು: ಎಸ್‌. ಸುಕೃತ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.