ADVERTISEMENT

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಸಂದರ್ಶನ

‘ಮೀಸಲಾತಿ ಹೆಚ್ಚಳದೊಂದಿಗೆ ಉದ್ಯೋಗದ ಖಾತರಿಯೂ ಬೇಕು‘

ವಿ.ಎಸ್.ಸುಬ್ರಹ್ಮಣ್ಯ
Published 4 ನವೆಂಬರ್ 2022, 19:45 IST
Last Updated 4 ನವೆಂಬರ್ 2022, 19:45 IST
ನಾಗಮೋಹನ ದಾಸ್‌
ನಾಗಮೋಹನ ದಾಸ್‌   

ಸಂದರ್ಶನ: ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌

ಎಸ್‌.ಸಿ ಮೀಸಲಾತಿಯನ್ನು ಶೇಕಡ 15ರಿಂದ 17ಕ್ಕೆ ಮತ್ತು ಎಸ್‌.ಟಿ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಈ ಹೆಚ್ಚಳ ತಕ್ಷಣ ಅನುಷ್ಠಾನಕ್ಕೆ ಬರಬಹುದೆ? ಇತರ ಸಮುದಾಯಗಳ ಮೀಸಲಾತಿ ಬೇಡಿಕೆ ಈಡೇರಿಸಲು ಸಾಧ್ಯವೆ? ಯಾವ ಪ್ರವರ್ಗದ ಮೀಸಲಾತಿ ಕಡಿತ ಮಾಡಬೇಕು ಎಂಬ ಪ್ರಶ್ನೆಗಳಿಗೆ ಮೀಸಲಾತಿ ಹೆಚ್ಚಳ ಕುರಿತು ಅಧ್ಯಯನ ನಡೆ ಸಿದ್ದ ಆಯೋಗದ ಮುಖ್ಯಸ್ಥ ರಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಅವರು ಉತ್ತರಿಸಿದ್ದಾರೆ

– ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಕಾನೂನಾತ್ಮಕವಾಗಿ ಸರಿ ಇವೆಯೆ?

ADVERTISEMENT

ಕಾರ್ಯಕಾರಿ ಆದೇಶವೊಂದರ ಮೂಲಕವೂ ಅನುಷ್ಠಾನಕ್ಕೆ ತರಬಹುದಿತ್ತು. ವಿಧಾನಮಂಡಲದಲ್ಲಿ ಮಸೂದೆ ಮಂಡಿಸಿ, ಅಂಗೀಕರಿಸಿ ಅದಕ್ಕೆ ರಾಷ್ಟ್ರಪತಿಯವರ ಅಂಕಿತ ಪಡೆದು ಅನುಷ್ಠಾ ನಕ್ಕೆ ತರುವ ಮಾರ್ಗವೂ ಇತ್ತು. ರಾಷ್ಟ್ರಪತಿ ಅವರ ಅಂಕಿತ ಪಡೆದ ಮಸೂದೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಂಸತ್ತಿನಲ್ಲಿ ಮಂಡಿಸಿ, ಒಪ್ಪಿಗೆ ಪಡೆದು ಅದನ್ನು ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೆ ಸೇರಿಸಿ ಸಂರಕ್ಷಿಸಿಕೊಳ್ಳಲೂ
ಬಹುದಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಕಾರಿ ಆದೇಶ, ಮಸೂದೆ ಎಲ್ಲವನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಸಂವಿಧಾನದ ಒಂಬತ್ತನೆ ಪರಿಚ್ಛೇದದಲ್ಲಿ ಸೇರಿಸಿದರೂ ವಿನಾಯ್ತಿ ಇಲ್ಲ. ‘ಒಂಬತ್ತನೆ ಪರಿಚ್ಛೇದದಲ್ಲಿ ಸೇರಿಸಲಾಗಿದೆ ಎಂಬ ಏಕೈಕ ಕಾರಣಕ್ಕಾಗಿ ನ್ಯಾಯಾಂಗ ಪರಿಶೀಲನೆಯಿಂದ ಹೊರಗಿಡಲು ಸಾಧ್ಯವಿಲ್ಲ. ಆಗಲೂ, ಅದು ಸಾಂವಿಧಾನಿಕವೆ ಅಥವಾ ಅಸಾಂವಿಧಾನಿಕವೆ ಎಂಬುದನ್ನು ನ್ಯಾಯಾಲಯ ಪರಿಶೀಲನೆಗೆ ಒಳಪಡಿಸಬಹುದು’ ಎಂದು ಐ.ಆರ್‌. ಕೊಯ್ಲೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಅಧ್ಯಯನ ವರದಿಯನ್ನು ಸರ್ಕಾರವು ಸರ್ವಪಕ್ಷಗಳ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದೆ. ಸಂಪುಟದ ಒಪ್ಪಿಗೆಯನ್ನೂ ಪಡೆದು ಸುಗ್ರೀವಾಜ್ಞೆ ಮೂಲಕ ಮೀಸಲಾತಿ ಹೆಚ್ಚಳ ಅನುಷ್ಠಾನಗೊಳಿಸುವ ಕ್ರಮ ಸರಿಯಾಗಿಯೇ ಇದೆ.

– ಮೀಸಲಾತಿ ಪ್ರಮಾಣದ ಹೆಚ್ಚಳದ ಅನುಕೂಲ ಜನರಿಗೆ ನಿಜವಾಗಿಯೂ ತಲುಪಬೇಕಾದರೆ ಮಾಡಬೇಕಿರುವ ಕೆಲಸಗಳೇನು?

ಎಸ್‌.ಸಿ ಮೀಸಲಾತಿಯನ್ನು ಶೇಕಡ 17ಕ್ಕೆ ಮತ್ತು ಎಸ್‌.ಟಿ ಮೀಸಲಾತಿಯನ್ನು ಶೇಕಡ 7ಕ್ಕೆ ಹೆಚ್ಚಿಸಿದರೆ ಸಾಲದು. ಅದರ ಫಲಿತಾಂಶ ಜನರಿಗೆ ತಲುಪಬೇಕಾದರೆ ರಾಜ್ಯ ಸರ್ಕಾರದ ವಿವಿಧ ಹಂತಗಳಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಹೂಡಿಕೆ ಹಿಂತೆಗೆತದ ಹೆಸರಿನಲ್ಲಿ ಸಾರ್ವಜನಿಕ ವಲಯದ ಉದ್ದಿಮೆ
ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲಿ ಇದ್ದ ಮೀಸಲಾತಿಯೇ ಕೈತಪ್ಪಿ ಹೋಗುತ್ತಿದೆ. ಅದು ನಿಲ್ಲಬೇಕು. ಗುತ್ತಿಗೆ ನೌಕರಿ ಮತ್ತು ಹೊರಗುತ್ತಿಗೆ ವ್ಯವಸ್ಥೆಗಳು ನಿಲ್ಲಬೇಕು.

– ಸುಪ್ರೀಂ ಕೋರ್ಟ್‌ ವಿಧಿಸಿರುವ ಶೇಕಡ 50ರ ಮಿತಿಗಿಂತಲೂ ಹೆಚ್ಚು ಮೀಸಲಾತಿಯನ್ನು ನೀಡಲು ನಿಜವಾಗಿಯೂ ಸಾಧ್ಯವಿದೆಯೆ?

‘ಮೀಸಲಾತಿ ನೀಡಬೇಕು’ ಎಂಬ ಅಂಶ ಮಾತ್ರ ನಮ್ಮ ಸಂವಿಧಾನದಲ್ಲಿದೆ. ಎಷ್ಟು ಪ್ರಮಾಣದ ಮೀಸಲಾತಿ ಎಂದು ಹೇಳಿಲ್ಲ. ಬಾಲಾಜಿ ಮತ್ತು ಕರ್ನಾಟಕ ಸರ್ಕಾರದ ನಡುವಣ ಪ್ರಕರಣ
ದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯ
ಮೂರ್ತಿಗಳ ಪೀಠವು ಒಟ್ಟು ಮೀಸಲಾತಿ ಪ್ರಮಾಣ ಶೇಕಡ 50ರಷ್ಟನ್ನು ಮೀರಬಾರದು ಎಂದು ಹೇಳಿತ್ತು. 1992ರಲ್ಲಿ ಇಂದಿರಾ ಸಾಹ್ನಿ ಪ್ರಕರಣ ದಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಪೀಠವು 1992ರಲ್ಲಿ ಅದನ್ನು ಮತ್ತೆ ಎತ್ತಿ ಹಿಡಿಯಿತು. ‘ವಿಶೇಷ ಸಂದರ್ಭಗಳಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ 50ರಷ್ಟನ್ನು ಮೀರಬಹುದು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈಗಾಗಲೇ ಒಂಬತ್ತು ರಾಜ್ಯಗಳಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ 50ರಷ್ಟನ್ನು ಮೀರಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಶೇ 10ರಷ್ಟು ಮೀಸಲಾತಿ ಒದಗಿಸುವುದರೊಂದಿಗೆ ಕೇಂದ್ರ ಸರ್ಕಾರದ ಒಟ್ಟು ಮೀಸಲಾತಿ ಪ್ರಮಾಣವೂ ಶೇ 59.5ರಷ್ಟಾಗಿದೆ. ಕೇಂದ್ರ ಸರ್ಕಾರ ಮತ್ತು ಇತರ ಒಂಬತ್ತು ರಾಜ್ಯಗಳು ಶೇ 50ಕ್ಕಿಂತ ಹೆಚ್ಚಿನ ಮೀಸಲಾತಿ ಕೊಡಲು ಸಾಧ್ಯವಾಗುವುದಾದರೆ ಕರ್ನಾಟಕ ಏಕೆ ಕೊಡಬಾರದು?

– ಮೀಸಲಾತಿ ಹೆಚ್ಚಿಸಲು ಪೂರಕವಾಗಿರುವ ವಿಶೇಷ ಸನ್ನಿವೇಶಗಳು ಯಾವುವು?

ವಿಶೇಷ ಸನ್ನಿವೇಶಗಳು ಯಾವುವು ಎನ್ನುವು ದನ್ನು ಈವರೆಗೆ ಯಾವ ತೀರ್ಪಿನಲ್ಲೂ ವಿವರಿಸಿಲ್ಲ. ನಮ್ಮ ಆಯೋಗವು ಅನೇಕ ತೀರ್ಪುಗಳನ್ನು ಅಧ್ಯಯನ ಮಾಡಿ, ಅವುಗಳ ಆಧಾರದ ಮೇಲೆ ವಿಶೇಷ ಸನ್ನಿವೇಶಗಳು ಎಂದರೆ ಏನು ಎಂಬು ದನ್ನು ವರದಿಯಲ್ಲಿ ಹೇಳಿದ್ದೇವೆ. ಜನಸಂಖ್ಯೆ ಹೆಚ್ಚಳ ಮೊದಲನೆಯದು. 1947ರ ಜನ ಸಂಖ್ಯೆಗೆ ಹೋಲಿಸಿದರೆ ಈಗ ಎಲ್ಲ ಜಾತಿಗಳ ಜನಸಂಖ್ಯೆಯೂ ಹೆಚ್ಚಳವಾಗಿದೆ. ಎಸ್‌.ಸಿ ಮತ್ತು ಎಸ್‌.ಟಿಗಳದ್ದು ವಿಶೇಷ ಸಂದರ್ಭ. ಹೇಗೆಂದರೆ, 1950ರಲ್ಲಿ ಈ ಸಮುದಾಯಗಳಿಗೆ ಮೀಸಲಾತಿ ನೀಡಿದಾಗ, ಕರ್ನಾಟಕದಲ್ಲಿ ಒಂಬತ್ತು ಜಿಲ್ಲೆಗಳು ಮಾತ್ರ ಇದ್ದವು. ಏಕೀಕರಣದ ಬಳಿಕ 19 ಜಿಲ್ಲೆಗಳಿದ್ದವು. ಆಗ, ಎಸ್‌.ಸಿಯಲ್ಲಿ ಒಂಬತ್ತು ಮತ್ತು ಎಸ್‌.ಟಿಯಲ್ಲಿ ಆರು ಜಾತ್ರಿಗಳು ಮಾತ್ರ ಇದ್ದವು. ಈಗ ಎಸ್‌.ಸಿ ಪಟ್ಟಿಯಲ್ಲಿ 101 ಮತ್ತು ಎಸ್‌.ಟಿ ಪಟ್ಟಿಯಲ್ಲಿ 54 ಜಾತಿಗಳಿವೆ. ಹಿಂದೆ ಪ್ರದೇಶ ನಿರ್ಬಂಧ ಕಾಯ್ದೆ ಇತ್ತು. ಅದರ ಪ್ರಕಾರ, ಕೆಲವೊಂದು ಜಾತಿಗಳನ್ನು ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿ ಎಸ್‌.ಸಿ ಅಥವಾ ಎಸ್‌.ಟಿ ಪಟ್ಟಿಯಲ್ಲಿ ಸೇರಿಸಲಾಗುತ್ತಿತ್ತು. ಈ ಕಾಯ್ದೆ ರದ್ದಾಗಿದ್ದು, ಈಗ ಎಸ್‌.ಸಿ ಮತ್ತು ಎಸ್‌.ಟಿ ಪಟ್ಟಿ ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದ ಹಲವು ಜಾತಿಗಳನ್ನು
ಎಸ್‌.ಸಿ ಮತ್ತು ಎಸ್‌.ಟಿ ಪಟ್ಟಿಗೆ ಸೇರಿಸಲಾಗಿದೆ. ಅದಕ್ಕೆ ಪೂರಕವಾಗಿ ಈ ಸಮುದಾಯಗಳ ಮೀಸಲಾತಿ ಹೆಚ್ಚಿಸಿಲ್ಲ. ಈ ಸಮುದಾಯಗಳ ಜನರ ಸಾಕ್ಷರತಾ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಅವರ ಕೋಟಾ ಭರ್ತಿಯಾಗುತ್ತಿದೆ. ಆದರೆ, ಎ ಮತ್ತು ಬಿ ದರ್ಜೆ ಹುದ್ದೆಗಳಲ್ಲಿ ಕೋಟಾ ಭರ್ತಿಯಾಗುತ್ತಿಲ್ಲ. ಔದ್ಯೋಗಿಕವಾಗಿ ಅವರು ತೀರಾ
ಹಿಂದುಳಿದಿರುವುದಕ್ಕೆ ಇದು ಪುರಾವೆ. ಆರೋಗ್ಯ, ವಸತಿ, ಭೂ ಹಿಡುವಳಿ, ಕೈಗಾರಿಕೆ, ಮಾಧ್ಯಮ ಸೇರಿದಂತೆ ಖಾಸಗಿ ಕ್ಷೇತ್ರದ ಪ್ರಾತಿನಿಧ್ಯದಲ್ಲೂ ಅವರು ತೀರಾ ಹಿಂದೆ ಇದ್ದಾರೆ. ಇವೆಲ್ಲವೂ ವಿಶೇಷ ಸನ್ನಿವೇಶಗಳು.

– ಮೀಸಲಾತಿಗೆ ಸಂಬಂಧಿಸಿದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿದೆಯೆ?

ಮೀಸಲಾತಿ ಹೆಚ್ಚಳ, ಪ್ರವರ್ಗ ಬದಲಾವಣೆ ಸೇರಿದಂತೆ ರಾಜ್ಯದಲ್ಲಿ ಈಗ 44 ಜಾತಿಗಳು ಮೀಸಲಾತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಿವೆ. ನಿಖರವಾದ ಅಂಕಿಅಂಶಗಳ (ಎಂಪರಿಕಲ್‌ ಡೇಟಾ) ಆಧಾರದಲ್ಲಿ ಮೀಸಲಾತಿ ನೀತಿಯನ್ನು ತಿದ್ದುಪಡಿ ಮಾಡಬೇಕಿದೆ. ಕಾಂತರಾಜ್‌ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿ ನಡೆಸಿ ಸಲ್ಲಿಸಿರುವ ವರದಿಯಲ್ಲಿನ ಅಂಕಿಅಂಶಗಳನ್ನು ಇದಕ್ಕಾಗಿ ಬಳಸಿಕೊಳ್ಳಬಹುದು. ಇಲ್ಲವಾದರೆ ಮತ್ತೊಂದು ಸಮೀಕ್ಷೆ ನಡೆಸಿ ಮೀಸಲಾತಿ ಪಟ್ಟಿಯನ್ನು ವೈಜ್ಞಾನಿಕವಾಗಿ ಮರುರೂಪಿಸಬೇಕು. ಸಮಾನ ಸಾಮರ್ಥ್ಯದ ಜಾತಿಗಳನ್ನು ಒಂದು ಪಟ್ಟಿಯಲ್ಲಿ ಇರಿಸುವಂತಹ ವೈಜ್ಞಾನಿಕವಾದ ವರ್ಗೀಕರಣ ಕೂಡ ಮಾಡಬೇಕು. ಈವರೆಗೆ ಹೆಚ್ಚು ಲಾಭ ಪಡೆದಿರುವ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿ, ಮೀಸಲಾತಿಯನ್ನೇ ಅನುಭವಿಸದ ಸಮುದಾಯಗಳಿಗೆ ಹೆಚ್ಚಳ ಮಾಡಬೇಕು.

– ಎಲ್ಲ ಸಮುದಾಯಗಳ ಮೀಸಲಾತಿ ಬೇಡಿಕೆಯನ್ನೂ ಪರಿಹರಿಸಲು ಸಾಧ್ಯವೆ?

ಪಂಚಮಸಾಲಿಗಳು, ಒಕ್ಕಲಿಗರು, ಕುರುಬರು ಸೇರಿದಂತೆ ಅನೇಕ ಸಮುದಾಯಗಳು ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ. ಈ ಜಾತಿಗಳಲ್ಲಿ ಶೇಕಡ 80ರಷ್ಟು ಜನರು ಕೃಷಿಕರಾಗಿದ್ದಾರೆ. 1950ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಮೀಸಲಾತಿ ಕಲ್ಪಿಸಿದಾಗ ದೇಶದ ರೈತರು ಅದನ್ನು ವಿರೋಧಿಸಿರಲಿಲ್ಲ. ನಮಗೂ ಮೀಸಲಾತಿ ಕೊಡಿ ಎಂದೂ ಕೇಳಿರಲಿಲ್ಲ. 75 ವರ್ಷಗಳಲ್ಲಿ ಸರ್ಕಾರ ಅನುಸರಿಸಿದ ನೀತಿಗಳ ಪರಿಣಾಮವಾಗಿ ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ರೈತರು ದಿವಾಳಿಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ಮೀಸಲಾತಿ ಕೇಳುತ್ತಿರುವ ವರ್ಗಗಳಲ್ಲಿ ಶೇ 80ರಷ್ಟು ಮಂದಿ ಈಗ ಕಷ್ಟದಲ್ಲಿದ್ದಾರೆ. ಅವರ ನೋವಿನ ಬಗ್ಗೆ ನನಗೆ ಕಳಕಳಿ ಇದೆ. ಆದರೆ, ಸರಿ ಮಾರ್ಗ ಯಾವುದು ಎಂದು ಅವರಿಗೆ ಯಾರೂ ಹೇಳುತ್ತಿಲ್ಲ. ‘ಅವರೆಲ್ಲರೂ ಮೀಸಲಾತಿ ಪಡೆದು ಚೆನ್ನಾಗಿದ್ದಾರೆ. ನೀವೂ ಮೀಸಲಾತಿ ಕೇಳಿ’ ಎಂದು ಕೆಲವರು ಹೇಳುತ್ತಾರೆ. ಇವರು ಜೈ ಎನ್ನುತ್ತಾ ಝಂಡಾ ಎತ್ತುತ್ತಿದ್ದಾರೆ. ಅವರೆಲ್ಲರ ಮೀಸಲಾತಿ ಬೇಡಿಕೆಯನ್ನು ಈಡೇರಿಸಿದರೂ ಆ ಸಮುದಾಯಗಳ ಶೇ 4ರಿಂದ 5ರಷ್ಟು ಪ್ರಮಾಣದ ಯುವಜನರಿಗೆ ಮಾತ್ರ ಅನುಕೂಲ ಆಗಬಹುದು. ಉಳಿದವರಿಗೆ ಏನು ಮಾಡುತ್ತೀರಿ? ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟು ಪರಿಹರಿಸುವುದೊಂದೇ ದಾರಿ. ಯಾವ ಸಮುದಾಯವೂ ಆ ದಿಕ್ಕಿನಲ್ಲಿ ಧ್ವನಿ ಎತ್ತುತ್ತಿಲ್ಲ.

– ಕೆಲವೇ ಜನರು ಮೀಸಲಾತಿಯ ಲಾಭ ಪಡೆಯುವುದನ್ನು ತಪ್ಪಿಸಬೇಕು ಎಂಬ ಆಗ್ರಹದ ಬಗ್ಗೆ ನಿಮ್ಮ ನಿಲುವೇನು?

ಕೆನೆಪದರದ ಪ್ರಶ್ನೆ ಹಿಂದುಳಿದ ವರ್ಗಗಳಿಗೆ ಮಾತ್ರ ಅನ್ವಯವಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಆಗಲೇ ಹೇಳಿದೆ. ಈ ತೀರ್ಪು ಬಂದು 30 ವರ್ಷಗಳಾಗಿವೆ. ಎಷ್ಟು ಮಂದಿ ನಿರಂತರ
ವಾಗಿ ಅಂತಹ ಸೌಲಭ್ಯ ಪಡೆದಿದ್ದಾರೆ ಎಂಬುದರ ಕುರಿತು ಆಯೋಗವೊಂದರ ಮೂಲಕ ದತ್ತಾಂಶ ಸಂಗ್ರಹಿಸಬಹುದು. ಅದಕ್ಕೆ ತಡೆಯೊಡ್ಡಬೇಕಾದ ಅನಿವಾರ್ಯ ಕಂಡುಬಂದರೆ ಅದನ್ನೂ ಮಾಡಬ ಹುದು. ಆದರೆ, ಆ ಸೌಲಭ್ಯ ಅದೇ ಸಮುದಾಯದ ಮತ್ತೊಬ್ಬ ವ್ಯಕ್ತಿಗೆ ಸಿಗುವಂತೆ ಆಗಬೇಕು.

– ಒಳ ಮೀಸಲಾತಿ ಅನುಷ್ಠಾನಕ್ಕೆ ತರದೇ ಎಸ್‌.ಸಿ ಮತ್ತು ಎಸ್‌.ಟಿ ಮೀಸಲಾತಿ ಪ್ರಮಾಣದ ಹೆಚ್ಚಳವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವೆ?

ಒಳ ಮೀಸಲಾತಿ ಬೇಕು ಎಂದೇ ನಮ್ಮ ಆಯೋಗ ಶಿಫಾರಸು ಮಾಡಿತ್ತು. ಆದರೆ, ದತ್ತಾಂಶ ಸಂಗ್ರಹಿಸಿ ಅದರ ಆಧಾರದಲ್ಲಿ ವೈಜ್ಞಾನಿಕವಾಗಿ ವರ್ಗೀಕರಣ ಮಾಡಿ, ಆದ್ಯತೆಯ ಮೇರೆಗೆ ಮೀಸ ಲಾತಿ ಕಲ್ಪಿಸಬೇಕು ಎಂದು ನಮ್ಮ ಆಯೋಗ ಹೇಳಿದೆ. ಆಯಾ ಪ್ರವರ್ಗಗಳಲ್ಲಿನ ಯಾವ ಸಮುದಾಯವೂ ಮೀಸಲಾತಿಯ ಲಾಭದಿಂದ ವಂಚಿತವಾಗದಂತೆ ಒಳಮೀಸಲು ಕಲ್ಪಿಸಿದರೆ ಮಾತ್ರವೇ ನಿಜವಾಗಿ ಎಲ್ಲರಿಗೂ ನ್ಯಾಯ ದೊರಕಿಸಿದಂತಾಗುತ್ತದೆ. v

– ಎಸ್‌.ಸಿ ಮತ್ತು ಎಸ್‌.ಟಿ ಸಮುದಾಯಗಳಿಗೆ ನೀಡಿರುವ ಹೆಚ್ಚುವರಿ ಮೀಸಲಾತಿಯ ಪ್ರಮಾಣವನ್ನು ಯಾವ ಪ್ರವರ್ಗದಿಂದ ಕಟಾವು ಮಾಡಬೇಕು?

ಈ ವಿಚಾರದಲ್ಲಿ ಆಯೋಗ ಸ್ಪಷ್ಟವಾಗಿ ಶಿಫಾರಸು ಮಾಡಿತ್ತು. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಒಟ್ಟು ಜನಸಂಖ್ಯೆ ಶೇ 52ರಷ್ಟಿದೆ. ಅವರಿಗೆ ನೀಡಿರುವ ಒಟ್ಟು ಮೀಸಲಾತಿ ಪ್ರಮಾಣ ಶೇ 32. 207 ಜಾತಿಗಳು ಒಬಿಸಿ ಪಟ್ಟಿಯಲ್ಲಿವೆ. ಅವುಗಳ ಮೀಸಲಾತಿಯನ್ನು ಕಡಿತ ಮಾಡಲು ಸಾಧ್ಯವಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡಿರುವುದರಿಂದ ಅಲ್ಲಿರುವ ಯಾರಿಗೂ ಈಗ ತೊಂದರೆ ಆಗುವುದಿಲ್ಲ. ಆದ್ದರಿಂದ ಸಾಮಾನ್ಯ ವರ್ಗಕ್ಕೆ ದೊರೆಯುವ ಸ್ಥಾನಗಳಲ್ಲಿಯೇ ಕಡಿತ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.