ADVERTISEMENT

INTERVIEW| ನಮ್ಮ ಸಮ್ಮತಿ ಇಲ್ಲದೆ ಮೇಕೆದಾಟಿನಲ್ಲಿ ಡ್ಯಾಂ ಕಟ್ಟಲಾಗದು: ಅಣ್ಣಾಮಲೈ 

ಪ್ರಜಾವಾಣಿ ವಿಶೇಷ
Published 3 ಆಗಸ್ಟ್ 2021, 4:42 IST
Last Updated 3 ಆಗಸ್ಟ್ 2021, 4:42 IST
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ    

ಬೆಂಗಳೂರು: ನದಿ ಕೆಳಗಿನ ರಾಜ್ಯವಾಗಿರುವ ತಮಿಳುನಾಡಿನ ಸಮ್ಮತಿ ಇಲ್ಲದೆ ಮೇಕೆದಾಟಿನಲ್ಲಿ ಕರ್ನಾಟಕವು ಅಣೆಕಟ್ಟು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ತಮಿಳುನಾಡನ್ನು ಬಿಟ್ಟುಕೊಡುವುದಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.

ಪ್ರಜಾವಾಣಿಯ ಸೋದರ ಪತ್ರಿಕೆ ‘ಡೆಕ್ಕನ್‌ ಹೆರಾಲ್ಡ್‌’ಗೆ ನೀಡಿರುವ ಸಂದರ್ಶನದಲ್ಲಿ ಅಣ್ಣಾಮಲೈ ಅವರು ತಮ್ಮ ರಾಜಕೀಯ ಜೀವನ, ತಮಿಳುನಾಡಿನಲ್ಲಿ ಬಿಜೆಪಿ ಸಂಘಟನೆ ಬಗ್ಗೆ ಮಾತನಾಡಿದ್ದಾರೆ. ಆದರೆ, ಮೆಕೆದಾಟು ಜಲಾಶಯದ ಕುರಿತ ಅವರ ಅಭಿಪ್ರಾಯಗಳನ್ನು ಮಾತ್ರ ಇಲ್ಲಿ ದಾಖಲಿಸಲಾಗಿದೆ.

–ಬಿಜೆಪಿಯೇ ಅಧಿಕಾರದಲ್ಲಿರುವ ಕರ್ನಾಟಕವು ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಜಲಾಶಯವನ್ನು ನಿರ್ಮಿಸುವುದಾಗಿ ಹೇಳುತ್ತಿದೆದೆ. ಈ ವಿಷಯದಲ್ಲಿ ತಮಿಳುನಾಡು ಬಿಜೆಪಿ ನಿಲುವು ಏನು?

ADVERTISEMENT

ತಮಿಳುನಾಡು ಬಿಜೆಪಿಯ ನಿಲುವು ಸ್ಪಷ್ಟವಾಗಿದೆ. ನಾವು ಯೋಜನೆಯನ್ನು ವಿರೋಧಿಸುತ್ತೇವೆ. ಅದೇ ನಮ್ಮ ನಿಲುವು. ಮೇಕದಾಟು ಜಲಾಶಯ ಯೋಜನೆ ವಿವಾದ 2017ರಿಂದಲೂ ಸುಪ್ರೀಂ ಕೋರ್ಟ್‌ನಲ್ಲಿದೆ. ಅಲ್ಲದೆ, ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳೂ ಸ್ಪಷ್ಟವಾಗಿವೆ. ನದಿ ಕೆಳಗಿನ ರಾಜ್ಯದ ಅನುಮತಿಯಿಲ್ಲದೆ ಯಾರೂ ಅಣೆಕಟ್ಟುಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕಾವೇರಿ ಕೊಳ್ಳದಲ್ಲಿ ತಮಿಳುನಾಡು ನದಿ ಕೆಳಗಿನ ರಾಜ್ಯ. ಹೀಗಾಗಿ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಿಸಲು ಕರ್ನಾಟಕಕ್ಕೆ ನಮ್ಮ ಅನುಮತಿ ಬೇಕು. ಇದಲ್ಲದೆ, ಅಣೆಕಟ್ಟು ನಿರ್ಮಿಸುವುದು ಮತ್ತು ಅದಕ್ಕೆ ಅನುಮತಿ ನೀಡುವುದು ಕರ್ನಾಟಕಕ್ಕೆ ಸಂಬಂಧಿಸಿದ ವಿಚಾರವಲ್ಲ. ಕೇಂದ್ರ ಸರ್ಕಾರದಿಂದ ಅನುಮತಿ ಸಿಗಬೇಕು. ಡ್ಯಾಂ ನಿರ್ಮಾಣವಾದರೆ, ಇಲ್ಲಿನ ರೈತರ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

– ಡ್ಯಾಂ ನಿರ್ಮಿಸಲು ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದು ಕರ್ನಾಟಕ ಹೇಳುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

‘ನದಿ ಕೆಳಗಿನ ರಾಜ್ಯಗಳ ಸಹಮತವಿಲ್ಲದೆ ಅಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವೂ ಸ್ಪಷ್ಟವಾಗಿ ಹೇಳಿದೆ. ಕೇಂದ್ರವು ತಮಿಳುನಾಡನ್ನು ಬಿಟ್ಟುಕೊಡುವುದಿಲ್ಲ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ,‘ ಎಂದಿದ್ದಾರೆ.

– ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಿಜೆಪಿ ಆಗಸ್ಟ್‌ 5ರಂದು ಕೈಗೊಳ್ಳಲಿರುವ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರಲ್ಲ?

‘ನಾನು ತಮಿಳುನಾಡು ಬಿಜೆಪಿಯ ನಿಲುವನ್ನು ಸ್ಪಷ್ಟಪಡಿಸಿದ್ದೇನೆ ಮತ್ತು ಈ ವಿಷಯದ ಬಗ್ಗೆ ಹೆಚ್ಚು ಮಾತನಾಡಲು ಅಥವಾ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ,’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.