ಇನ್ನೂ ಕಳೆಗಟ್ಟದ, ನೀರಸವಾಗಿರುವ ಬಿಹಾರದ ಲೋಕಸಭಾ ಚುನಾವಣೆಯಲ್ಲಿ ಒಂದಿಷ್ಟು ಉತ್ಸಾಹ ಕಂಡುಬಂದಿದೆ ಎಂದರೆ ಅದು ಕನ್ಹಯ್ಯಾ ಕುಮಾರ್ ಅವರಿಂದಾಗಿ ಮಾತ್ರ. ಸಿಪಿಐ ಅಭ್ಯರ್ಥಿಯಾಗಿ ಬಿಹಾರದ ಬೇಗುಸರಾಯ್‌ನಿಂದ ಸ್ಪರ್ಧಿಸುತ್ತಿರುವ ಅವರಿಗೆ ಬಿಜೆಪಿಯ ಗಿರಿರಾಜ್ ಸಿಂಗ್ ಎದುರಾಳಿ. ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೇ ಕನ್ಹಯ್ಯಾ ಅವರು ‘ಪ್ರಜಾವಾಣಿ’ಯ ಅಭಯ್ ಕುಮಾರ್ ಅವರೊಂದಿಗೆ ಮಾತನಾಡಿದ್ದಾರೆ.
* ಐದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀವು ಟೀಕೆಗೆ ಗುರಿಯಾಗಿಸಿಕೊಂಡಿದ್ದೀರಿ. ನಿಮ್ಮ ಮೇಲೆ ದೇಶದ್ರೋಹ ಪ್ರಕರಣ ದಾಖಲಾದಾಗಿನಿಂದ, ಮೋದಿ ವಿರುದ್ಧ ಮಾತನಾಡಲು ನಿಮಗೆ ಹಕ್ಕು ಇಲ್ಲ ಎಂದು ಬಿಜೆಪಿ ಹೇಳುತ್ತಿದೆಯಲ್ಲಾ?
ನಾನು ಕ್ರಿಮಿನಲ್ ಆಗಿದ್ದರೆ, ತಪ್ಪು ಮಾಡಿದ್ದರೆ, ನನ್ನನ್ನು ಜೈಲಿನಲ್ಲಿಡಬೇಕಿತ್ತು. ನನಗೇಕೆ ಪೊಲೀಸ್ ರಕ್ಷಣೆ ನೀಡಲಾಯಿತು? ನೈಜ ವಿಷಯಗಳನ್ನು ಮರೆಮಾಚಲು ನನ್ನ ಮೇಲೆ ಹೊರಿಸಿದ ದೇಶದ್ರೋಹ ಆರೋಪಗಳಿಗೆ ತಲೆಬುಡ ಇಲ್ಲ. ನನ್ನ ವಿರುದ್ಧದ ಆರೋಪಗಳು ನಕಲಿ ಎಂಬುದಕ್ಕೆ, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದಕ್ಕಿಂತ ಬೇರೆ ಸಾಕ್ಷ್ಯ ಬೇಕೇ?
* ನಿಮ್ಮ ಎದುರಾಳಿಗಳು ದುಡ್ಡಿನಲ್ಲಿ ದೊಡ್ಡವರು. ನಿಮ್ಮ ತಾಯಿ ಅಂಗನವಾಡಿ ಕಾರ್ಯಕರ್ತೆ, ತಂದೆ ಕೃಷಿಕರಾಗಿದ್ದರು. ನೀವು ಈ ಚುನಾವಣೆಯ ಖರ್ಚನ್ನು ಹೇಗೆ ನಿಭಾಯಿಸುತ್ತೀರಿ?
ಜನರ ದೇಣಿಗೆ ಮೂಲಕ ನಾವು ಸುಮಾರು ₹70 ಲಕ್ಷ ಸಂಗ್ರಹಿಸಿದ್ದೇವೆ. ಜನರು ದೇಣಿಗೆ ನೀಡಲು ಮುಂದೆ ಬರುತ್ತಿದ್ದಾರೆ. ಆದರೆ ಇದಕ್ಕೆ ಆಯೋಗದ ಮಿತಿಯೂ ಇದೆ. ಸ್ವಯಂಸೇವಕರು ಬೇಗುಸರಾಯ್‌ಗೆ ಬರುತ್ತಿದ್ದಾರೆ. ವಿದ್ಯಾರ್ಥಿಗಳು, ಬುದ್ಧಿಜೀವಿ ಗಳು, ಬಾಲಿವುಡ್ ತಾರೆ ಶಬಾನಾ ಆಜ್ಮಿ ಮೊದಲಾದವರು ನನ್ನ ಬೆಂಬಲಕ್ಕಿದ್ದಾರೆ. ನನ್ನ ಭಾರವನ್ನು ಅವರೆಲ್ಲರೂ ಹೊತ್ತುಕೊಂಡಿದ್ದಾರೆ.
* ಶಬಾನಾ ಅವರು ನಿಮ್ಮ ಪರ ಪ್ರಚಾರ ಮಾಡಲಿದ್ದಾರೆಯೇ?
ಹೌದು, ಚುನಾವಣಾ ಪ್ರಚಾರ ಕೊನೆಗೊಳ್ಳುವ ಎರಡು ದಿನ ಮೊದಲು, ಅಂದರೆ ಏಪ್ರಿಲ್ 25ರಂದು ಅವರು ಇಲ್ಲಿಗೆ ಬರಲಿದ್ದಾರೆ. ಸ್ವರಾ ಭಾಸ್ಕರ್ ಅವರು ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ.
* ಯಾರು ನಿಮ್ಮ ಮುಖ್ಯ ಎದುರಾಳಿ? ಬಿಜೆಪಿಯ ಗಿರಿರಾಜ್ ಸಿಂಗ್ ಅಥವಾ ಆರ್‌ಜೆಡಿಯ ತನ್ವೀರ್ ಹಸನ್? ನೀವು ಮಹಾಮೈತ್ರಿಯ ಭಾಗವಾಗಿಲ್ಲದಿರುವುದಕ್ಕೆ ಕಾರಣ ಏನು?
ಇದು ಸತ್ಯ ಮತ್ತು ಸುಳ್ಳುಗಳ ನಡುವಿನ ಹೋರಾಟ. 20 ಗಂಟೆ ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ಹೇಳಿಕೊಳ್ಳುತ್ತಾರೆ. ಆದರೆ ಅವರು ತಮ್ಮ ಅಧಿಕಾರಾವಧಿಯಲ್ಲಿ ಎಲ್ಲ ಸಾಂಸ್ಥಿಕ ವ್ಯವಸ್ಥೆಗಳನ್ನೂ ಬುಡಮೇಲು ಮಾಡಿದರು. ಪಕೋಡಾ ಮಾರಿ ಎಂಬ ಸಲಹೆ ನೀಡಿದ್ದ ಮೋದಿ ಮೇಲೆ ಯುವಜನಾಂಗಕ್ಕೆ ಭಾರಿ ಸಿಟ್ಟಿದೆ.
* ನಿಮ್ಮ ಜಯದ ಬಗ್ಗೆ ನಿಮಗೆ ಎಷ್ಟು ನಂಬಿಕೆಯಿದೆ?
ಪ್ರಾಮಾಣಿಕತೆ ಮತ್ತು ಕಠಿಣ ದುಡಿಮೆ ಬಗ್ಗೆ ಮಾತ್ರ ನನಗೆ ನಂಬಿಕೆಯಿದೆ. ಬೇಗುಸರಾಯ್‌ನಲ್ಲಿ ಹುಟ್ಟಿ ಬೆಳೆದ ನಾನು, ಜೆಎನ್‌ಯು ವಿದ್ಯಾರ್ಥಿಯಾಗುತ್ತೇನೆ, ಅಲ್ಲಿನ ವಿದ್ಯಾರ್ಥಿ ಸಂಘಟನೆಯ ನಾಯಕತ್ವ ವಹಿಸುತ್ತೇನೆ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಯೋಚಿಸಿಯೂ ಇರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.