ADVERTISEMENT

ವಿಧಾನಸಭೆ ಚುನಾವಣೆ–2023: ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸಂದರ್ಶನ

'ಚುನಾವಣೆ ಘೋಷಣೆಗೂ ಮುನ್ನ ಆಮಿಷ ತಡೆ ಕಷ್ಟ'

ವಿ.ಎಸ್.ಸುಬ್ರಹ್ಮಣ್ಯ
Published 25 ಫೆಬ್ರುವರಿ 2023, 4:26 IST
Last Updated 25 ಫೆಬ್ರುವರಿ 2023, 4:26 IST
ಮನೋಜ್‌ ಕುಮಾರ್‌ ಮೀನಾ
ಮನೋಜ್‌ ಕುಮಾರ್‌ ಮೀನಾ   

ರಾಜ್ಯ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಆರಂಭಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಈ ಸಂದರ್ಭದಲ್ಲಿ ಚುನಾವಣಾ ಸಿದ್ಧತೆ ಹೇಗೆ ನಡೆದಿದೆ? ಮತದಾರರಿಗೆ ಆಮಿಷ ಒಡ್ಡುವುದನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ? ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮದ ಕುರಿತ ಆರೋಪಗಳು ನಿಜವೆ ಎಂಬ ಪ್ರಶ್ನೆಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ‘ಪ್ರಜಾವಾಣಿ’ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

***

ರಾಜ್ಯ ವಿಧಾನಸಭಾ ಚುನಾವಣೆ ನಡೆಸಲು ಏನೆಲ್ಲಾ ತಯಾರಿಗಳು ಆಗಿವೆ?

ADVERTISEMENT

ಚುನಾವಣೆ ನಡೆಸಲು ಮತದಾರರ ಪಟ್ಟಿ, ವಿದ್ಯುನ್ಮಾನ ಮತಯಂತ್ರ ಮತ್ತು ಮತಗಟ್ಟೆಗಳನ್ನು ಸಜ್ಜುಗೊಳಿಸಬೇಕಾಗಿರುವುದು ಪ್ರಾಥಮಿಕ ಹಂತದ ಪ್ರಮುಖ ಕೆಲಸ. 221 ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಜನವರಿ 5ಕ್ಕೆ ಮತ್ತು ಮೂರು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಜ.15ಕ್ಕೆ ಪ್ರಕಟಿಸಲಾಗಿದೆ. ಈಗ ನಿರಂತರ ಪರಿಷ್ಕರಣೆ ನಡೆಯುತ್ತಲೇ ಇದೆ. ಮತದಾರರ ಪಟ್ಟಿ ತಯಾರಿಸುವ ಕೆಲಸ ಬಹುತೇಕ ಅಂತಿಮ ಹಂತ ತಲುಪಿದೆ.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತ ತನಿಖೆ ಯಾವ ಹಂತದಲ್ಲಿದೆ?

ಪ್ರಾದೇಶಿಕ ಆಯುಕ್ತರು ತನಿಖೆ ಪೂರ್ಣಗೊಳಿಸಿ ಜನವರಿ ಅಂತ್ಯದಲ್ಲಿ ವರದಿ ನೀಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಅವರ ವರದಿ ಹೇಳಿದೆ. ಆದರೆ, ಮತದಾರರ ಜಾಗೃತಿ ಕಾರ್ಯಕ್ರಮ (ಸ್ವೀಪ್‌) ಆಯೋಜನೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಉಲ್ಲಂಘನೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ‘ಚಿಲುಮೆ’ ಸಂಸ್ಥೆಯವರು ‘ಸ್ವೀಪ್‌’ ಹೆಸರಿನಲ್ಲಿ ಮತದಾರರ ಮಾಹಿತಿ ಸಂಗ್ರಹಿಸಿರುವುದು ಕಂಡುಬಂದಿದೆ. ಅದನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸಬೇಕೆಂಬ ಶಿಫಾರಸು ವರದಿಯಲ್ಲಿದೆ.

ಈ ಚುನಾವಣೆಗೆ ಇವಿಎಂಗಳನ್ನು ಯಾವ ರಾಜ್ಯಗಳಿಂದ ತರಲಾಗುತ್ತಿದೆ?

ಹೈದರಾಬಾದ್‌ನ ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಇಸಿಐಎಲ್‌) ತಯಾರಿಸಿರುವ ಎಂ–3 ಹೊಸ ವಿದ್ಯುನ್ಮಾನ ಮತಯಂತ್ರಗಳನ್ನು ಈ ಚುನಾವಣೆಗೆ ಬಳಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳಿವೆ. ಶೇಕಡ 125ರಷ್ಟು ಕಂಟ್ರೋಲ್‌ ಯೂನಿಟ್‌ ಮತ್ತು ಬ್ಯಾಲೆಟ್‌ ಯೂನಿಟ್‌ ಹಾಗೂ ಶೇ 150ರಷ್ಟು ವಿವಿಪ್ಯಾಟ್‌ಗಳನ್ನು ತರಿಸಲಾಗಿದೆ. 22 ಜಿಲ್ಲೆಗಳಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಎದುರಿನಲ್ಲೇ ಮತಯಂತ್ರಗಳ ಮೊದಲ ಹಂತದ ಪರಿಶೀಲನೆಯೂ ಪೂರ್ಣಗೊಂಡಿದೆ. ಆರು ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಮೂರು ಜಿಲ್ಲೆಗಳಲ್ಲಿ ಇದೇ 26ರಿಂದ ಆರಂಭವಾಗಲಿದೆ.

ಮತಗಟ್ಟೆಗಳ ಹಂತದಲ್ಲಿ ಯಾವ ರೀತಿಯ ಸಿದ್ಧತೆಗಳು ಆಗುತ್ತಿವೆ?

ರಾಜ್ಯದ ಎಲ್ಲ ಮತಗಟ್ಟೆಗಳಿಗೂ ಸ್ಥಳೀಯ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡಿಯುವ ನೀರು, ಶೌಚಾಲಯ, ರ‍್ಯಾಂಪ್‌ ಮತ್ತು ವಿದ್ಯುತ್‌ ಸಂಪರ್ಕ ಇಲ್ಲದ ಮತಗಟ್ಟೆಗಳನ್ನು ಗುರುತಿಸಿ, ಅಲ್ಲಿಗೆ ಆ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಭದ್ರತೆಯ ದೃಷ್ಟಿಯಿಂದ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ?

ಹಿಂದಿನ ಘಟನೆಗಳು, ಸದ್ಯದ ಬೆಳವಣಿಗೆಗಳು, ಮತದಾರರ ಮೇಲೆ ದಬ್ಬಾಳಿಕೆ ನಡೆಸಬಹುದಾದ ವ್ಯಕ್ತಿಗಳಿರುವ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ. ಅಂತಹ ಪ್ರದೇಶಗಳಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಲ್ಲಿಗೆ ವಿಶೇಷ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರನ್ನು ಸೆಳೆಯಲು ಹೆಚ್ಚು ವೆಚ್ಚ ಮಾಡುವ ಸಾಧ್ಯತೆ ಇರುವ ಪ್ರದೇಶಗಳನ್ನೂ ಗುರುತಿಸಲಾಗಿದೆ. ಅಂತಹ ಪ್ರದೇಶಗಳಲ್ಲಿ ವಿಶೇಷ ಕಣ್ಗಾವಲು ವ್ಯವಸ್ಥೆ ಮಾಡಲಾಗುವುದು.

ಚುನಾವಣೆಗೆ ಭದ್ರತೆ ಒದಗಿಸಲು ಕೇಂದ್ರೀಯ ಪಡೆಗಳನ್ನು ನಿಯೋಜಿಸಲು ಬೇಡಿಕೆ ಸಲ್ಲಿಸಲಾಗಿದೆಯೆ?

ಸಹಜವಾಗಿಯೇ ಚುನಾವಣಾ ಭದ್ರತೆಗೆ ಕೇಂದ್ರೀಯ ಭದ್ರತಾ ಪಡೆಗಳ ಸೇವೆಯನ್ನು ಪಡೆಯಲಾಗುತ್ತದೆ. ಈ ಬಾರಿಯೂ ಬೇಡಿಕೆ ಸಲ್ಲಿಸಿದ್ದೇವೆ. ಅದರ ಪೂರ್ಣ ವಿವರವನ್ನು ಬಹಿರಂಗಪಡಿಸುವಂತಿಲ್ಲ. ನಾವು ಸಲ್ಲಿಸಿದ ಬೇಡಿಕೆಯನ್ನು ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸುತ್ತದೆ. ನಂತರ ರಾಜ್ಯದಲ್ಲಿ ಚುನಾವಣೆ ಅವಧಿಯಲ್ಲಿ ಭದ್ರತೆ ಒದಗಿಸಲು ಎಷ್ಟು ಪಡೆಗಳನ್ನು ನಿಯೋಜಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.

ಮತದಾರರನ್ನು ಸೆಳೆಯಲು ಟಿ.ವಿ, ಕುಕ್ಕರ್‌, ಸೀರೆ ಹಂಚುವುದು, ತೀರ್ಥಯಾತ್ರೆಗೆ ಕಳಿಸುವುದು, ಹಣದ ಆಮಿಷ ಒಡ್ಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆ?

ಚುನಾವಣೆ ಘೋಷಣೆ ಆಗುವವರೆಗೂ ನಾವು ನೇರವಾಗಿ ಕ್ರಮ ಕೈಗೊಳ್ಳಲು ಅಧಿಕಾರ ವಿಲ್ಲ. ಆದರೂ, ಆಗಸ್ಟ್‌ ತಿಂಗಳಲ್ಲೇ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸರಕು ಮತ್ತು ಸೇವಾ ತೆರಿಗೆ, ವಾಣಿಜ್ಯ ತೆರಿಗೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಮತದಾರರಿಗೆ ಆಮಿಷ ಒಡ್ಡುತ್ತಿರುವ ಪ್ರಕರಣಗಳ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಲು ಕೋರಲಾಗಿದೆ. ದೊಡ್ಡ ಪ್ರಮಾಣದಲ್ಲಿ ಅಂತಹ ವಸ್ತುಗಳ ಖರೀದಿ, ಸಾಗಣೆ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಕಾನೂನು ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ದಂಡ ಸೇರಿದಂತೆ ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿದೆ. ಕೆಲವು ಕಡೆಗಳಲ್ಲಿ ಕ್ರಮಗಳೂ ಆಗಿವೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕವಷ್ಟೇ ಆಯೋಗವು ನೇರವಾಗಿ ಕ್ರಮ ಜರುಗಿಸಲು ಅವಕಾಶವಿದೆ.

ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆಯಲು ನಿಗಾ ವ್ಯವಸ್ಥೆ ಇದೆಯೆ?

ವಿವಿಧ ವಸ್ತುಗಳನ್ನು ಮತದಾರರಿಗೆ ಹಂಚುವುದನ್ನು ತಡೆಯಲು ಸರಕು ಸಾಗಣೆ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ರೈಲು, ವಿಮಾನ ನಿಲ್ದಾಣ, ಬಂದರುಗಳಲ್ಲಿ ಕಣ್ಗಾವಲು ಮತ್ತು ಗುಪ್ತಚರ ವ್ಯವಸ್ಥೆ ಬಲಪಡಿಸುವಂತೆ ನಿರ್ದೇಶನ ನೀಡಲಾಗಿದೆ. ದುಬಾರಿ ಬೆಲೆಯ ಲೋಹದ ಆಮದು ಹಾಗೂ ಮಾದಕ ವಸ್ತುಗಳ ಸಾಗಣೆ ಕುರಿತೂ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.

ಅಧಿಕಾರಿಗಳು ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷ ಅಥವಾ ವ್ಯಕ್ತಿಯ ಪರ ಕೆಲಸ ಮಾಡುವುದನ್ನು ನಿಯಂತ್ರಿಸಲು ಏನು ಕ್ರಮ ಕೈಗೊಳ್ಳಲಾಗಿದೆ?

ನೇರವಾಗಿ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸುವ ಕಂದಾಯ, ಪೊಲೀಸ್‌ ಮತ್ತಿತರ ಇಲಾಖೆಗಳ ಅಧಿಕಾರಿಗಳ ಮೇಲೆ ನಿಗಾ ವಹಿಸಲಾಗಿದೆ. ಅಧಿಕಾರಿಗಳು ಸ್ವಂತ ಜಿಲ್ಲೆಯಲ್ಲಿರಬಾರದು ಹಾಗೂ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮೂರು ವರ್ಷ ಒಂದೇ ಜಿಲ್ಲೆಯಲ್ಲಿರಬಾರದು ಎಂಬ ಮಾರ್ಗಸೂಚಿ ಇದೆ. ಅದರ ಪ್ರಕಾರ ಈಗಾಗಲೇ ವರ್ಗಾವಣೆಗಳನ್ನು ಮಾಡಲಾಗಿದೆ. ವೈಯಕ್ತಿಕವಾಗಿ ಯಾವುದಾದರೂ ಅಧಿಕಾರಿಯು ಒಂದು ಪಕ್ಷ ಅಥವಾ ವ್ಯಕ್ತಿಯ ಪರ ಕೆಲಸ ಮಾಡುತ್ತಿರುವ ಕುರಿತು ದೂರುಗಳು ಬಂದರೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲಾಗುವುದು. ಪಕ್ಷಪಾತ ಮಾಡುತ್ತಿರುವುದು ದೃಢಪಟ್ಟರೆ ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆದು, ಕ್ರಮ ಕೈಗೊಳ್ಳುವಂತೆ ಕೋರಲಾಗುವುದು. ಚುನಾವಣೆ ಘೋಷಣೆಯಾದ ಬಳಿಕ ಅಂತಹ ಪ್ರಕರಣಗಳು ಕಂಡುಬಂದರೆ ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿ ಕ್ರಮಕ್ಕೆ ಆದೇಶಿಸಲಾಗುವುದು.

ಈ ಬಾರಿ ಹೊಸ ಮತದಾರರ ಸಂಖ್ಯೆ ಎಷ್ಟಿದೆ? ಅವರನ್ನು ಮತಗಟ್ಟೆಗೆ ಕರೆತರಲು ಯಾವ ಯೋಜನೆ ರೂಪಿಸಲಾಗಿದೆ?

ಈವರೆಗೆ ಹೊಸದಾಗಿ ನೋಂದಣಿಯಾದ 18ರಿಂದ 19 ವರ್ಷ ವಯೋಮಾನದ ಏಳು ಲಕ್ಷ ಮತದಾರರಿದ್ದಾರೆ. 18 ವರ್ಷ ಸಮೀಪಿಸುತ್ತಿರುವವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಮುಂಗಡವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಂತಹ 40,000 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಹೊಸ ಮತದಾರರ ಸಂಖ್ಯೆ ಇನ್ನೂ ಹೆಚ್ಚಾಗಬಹುದು.

ಮತದಾನದ ಪ್ರಮಾಣ ಹೆಚ್ಚಿಸಲು ಯಾವ ಯೋಜನೆ ಇದೆ?

2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸರಾಸರಿ ಶೇಕಡ 72ರಷ್ಟು ಮತದಾನ ನಡೆದಿತ್ತು. ಆದರೆ, ಬಿಬಿಎಂಪಿ ವ್ಯಾಪ್ತಿಯ 28 ಕ್ಷೇತ್ರಗಳೂ ಸೇರಿದಂತೆ 90 ಕ್ಷೇತ್ರಗಳಲ್ಲಿ ರಾಜ್ಯದ ಸರಾಸರಿಗಿಂತ ಕಡಿಮೆ ಮತದಾನ ಆಗಿತ್ತು. ಅಂತಹ ಕ್ಷೇತ್ರಗಳಲ್ಲಿ ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಕಡಿಮೆ ಮತದಾನಕ್ಕೆ ಕಾರಣ ಏನು ಎಂಬುದನ್ನು ತಿಳಿಯಲು ಮತಗಟ್ಟೆ ಹಂತದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಕಾರಣ ಹುಡುಕಿ, ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಮತದಾರರಿಗೂ ‘ವೋಟರ್‌ ಸ್ಲಿಪ್‌’ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಮತಗಟ್ಟೆಯ ಸ್ಥಳದ ಮಾಹಿತಿ ಒದಗಿಸಲಾಗುವುದು. ನಗರ ಪ್ರದೇಶಗಳಲ್ಲಿ ಹೆಚ್ಚು ಮತದಾರರಿರುವ ಕಡೆ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವ ಯೋಚನೆ ಇದೆ. ಮತಗಟ್ಟೆಯಲ್ಲಿ ಸರದಿಯಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದನ್ನು ಆ್ಯಪ್‌ ಮೂಲಕ ಮಾಹಿತಿ ಒದಗಿಸಲಾಗುವುದು.

ಚುನಾವಣಾ ಆಯೋಗ ಪಕ್ಷಪಾತಿಯಾಗಿರುತ್ತದೆ ಎಂಬ ಆರೋಪವನ್ನು ಹೇಗೆ ಮೀರುತ್ತೀರಿ?

ಚುನಾವಣಾ ಆಯೋಗ ಸ್ವತಂತ್ರ ಸಾಂವಿಧಾನಿಕ ಸಂಸ್ಥೆ. ಮುಕ್ತ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ಚುನಾವಣೆ ನಡೆಸುವುದು ಆಯೋಗದ ಗುರಿ. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಪಾರದರ್ಶಕ ಮತ್ತು ತಟಸ್ಥವಾಗಿ ಕಾರ್ಯನಿರ್ವಹಿಸಬೇಕು ಎಂಬುದು ಕೇಂದ್ರ ಚುನಾವಣಾ ಆಯೋಗದ ಸ್ಪಷ್ಟ ಸೂಚನೆ. ಅದಕ್ಕೆ ವಿರುದ್ಧವಾಗಿ ಯಾರಾದರೂ ಕೆಲಸ ಮಾಡಿದರೆ ಕ್ರಮ ನಿಶ್ಚಿತ. ಆಯೋಗ ಈಗಾಗಲೇ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಅಂತಹ ಎಚ್ಚರಿಕೆಯನ್ನು ನೀಡಿದೆ.

ಭ್ರಷ್ಟಾಚಾರದ ಆರೋಪವಿರುವ ಅಧಿಕಾರಿಗಳನ್ನು ಚುನಾವಣಾ ಪ್ರಕ್ರಿಯೆಯಿಂದ ದೂರ ಇಡಬೇಕು ಎಂಬ ಆಗ್ರಹಕ್ಕೆ ಆಯೋಗ ಹೇಗೆ ಸ್ಪಂದಿಸಲಿದೆ?

ಚುನಾವಣಾ ಅಕ್ರಮದಲ್ಲಿ ಭಾಗಿಯಾದರೆ ಅಥವಾ ಪಕ್ಷಪಾತದಿಂದ ಕೂಡಿದ ದೂರುಗಳಿದ್ದರೆ ಆಯೋಗ ಕ್ರಮ ಜರುಗಿಸುತ್ತದೆ. ಇತರ ಸ್ವರೂಪದ ಆರೋಪಗಳಿದ್ದರೆ ಅದನ್ನು ಸರ್ಕಾರದ ಹಂತದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.