ಕೆ.ರಾಜಶೇಖರ ಹಿಟ್ನಾಳ ಕಾಂಗ್ರೆಸ್ ಅಭ್ಯರ್ಥಿ. ಪಿಯುಸಿವರೆಗೆ ಓದಿರುವ ಇವರು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದ ಇವರು ಸಿದ್ದರಾಮಯ್ಯನವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.
ತಂದೆ ಕೆ.ಬಸವರಾಜ ಹಿಟ್ನಾಳ ಮಾಜಿ ಶಾಸಕ, ಹಿರಿಯ ಸಹೋದರ ಕೆ.ರಾಘವೇಂದ್ರ ಹಿಟ್ನಾಳ ಶಾಸಕ, ಸಂಸದೀಯ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ, ಕಾಂಗ್ರೆಸ್ ಯುವ ಘಟಕದಲ್ಲಿ ಸಕ್ರಿಯ. ಪ್ರತಿಸ್ಪರ್ಧಿ ಸಂಗಣ್ಣ ಕರಡಿ ಅವರ ಸಂವಹನ ಕೊರತೆಯಿಂದ ಜಿಲ್ಲೆ ನಿರೀಕ್ಷಿತ ಅಭಿವೃದ್ಧಿ ಕಾಣಲಿಲ್ಲ. ತಾವು ಯುವಕರಾಗಿದ್ದು, ಹಿಂದಿ, ಇಂಗ್ಲಿಷ್ ಭಾಷಾ ಸಮಸ್ಯೆ ಇಲ್ಲ. ದೆಹಲಿ ಮಟ್ಟದಲ್ಲಿ ಕೆಲಸ ಮಾಡಿಸಿಕೊಂಡು ಬರುವಷ್ಟು ಸಂಪರ್ಕ ತಮಗೆ ಇರುವುದರಿಂದ ತಾವೇ ಸಮರ್ಥ ಎದುರಾಳಿ ಎಂಬುವುದು ರಾಜಶೇಖರ ಅವರ ವಿಶ್ವಾಸ. ಬಿರುಸಿನ ಪ್ರಚಾರದ ನಡುವೆ ಒಂದಿಷ್ಟು ಮನಬಿಚ್ಚಿ ಮಾತನಾಡಿದ್ದು ಹೀಗೆ.
ರಾಜಶೇಖರ ಹಿಟ್ನಾಳ ಯಾಕೆ ಗೆಲ್ಲಬೇಕು?
ಕ್ಷೇತ್ರದ ಅಭಿವೃದ್ಧಿಗಾಗಿ ಗೆಲ್ಲಬೇಕು. ಮತದಾರರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕಾಗಿ, ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿಯನ್ನಾಗಿಸುವ ಕನಸು ನನಸಾಗಿಸಲು ಗೆಲ್ಲಬೇಕು. ನನಗೊಂದಿಷ್ಟು ದೂರದೃಷ್ಟಿ ಇದೆ. ಅವೆಲ್ಲವೂ ಈಡೇರಿಸಲು ಈ ಗೆಲುವು ಮುಖ್ಯ.
ಯೋಜನೆಗಳಿಗೆ ಕೇವಲ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಮರಳು ಮಾಫಿಯಾಕ್ಕೆ ಬೆಂಬಲ ಕೊಡುತ್ತಿದ್ದಾರೆ ಎಂದು ಪ್ರತಿಸ್ಪರ್ಧಿಗಳು ಆರೋಪಿಸುತ್ತಿದ್ದಾರಲ್ಲಾ?
ಬನ್ನಿ ತೋರಿಸುತ್ತೇನೆ. ಯತ್ನಟ್ಟಿ ಸೇತುವೆ, ಸಿಂದೋಗಿ ಬಳಿ ಚನ್ನಹಳ್ಳ ಸೇತುವೆ, ಕೋಳೂರಿನಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್. ಅದರಲ್ಲಿ ಈಗಲೂ ನೀರು ತುಂಬಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆಯಿಂದ ಅಳವಂಡಿ ಗಡಿ ಭಾಗದವರೆಗೂ ನೀರು ಹರಿಸಿದ್ದೇವೆ. ಕೊಪ್ಪಳ ವೈದ್ಯಕೀಯ ಕಾಲೇಜು ಆರಂಭವಾಗಿದೆ. ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕಗಳು ಇವನ್ನೆಲ್ಲಾ ಪ್ರತಿಪಕ್ಷದವರು ನೋಡಿಕೊಂಡು ಬರಲಿ. ಇವೆಲ್ಲಾ ಬರೀ ಶಂಕುಸ್ಥಾಪನೆ ಅಥವಾ ಪೂಜೆಗೆ ಸೀಮಿತವಾಗಿವೆಯೇ?: ಅನುಷ್ಠಾನವಾಗಿವೆಯಲ್ಲಾ. ಟೀಕಿಸಲು ವಿರೋಧ ಪಕ್ಷದವರಿಗೆ ವಿಷಯ ಬೇಕು. ಅದನ್ನವರು ಮಾಡುತ್ತಿದ್ದಾರೆ. ಮಾಡಲಿ ಬಿಡಿ.
ಅಭಿವೃದ್ಧಿ, ಸಿದ್ದರಾಮಯ್ಯ ಅವರು ನೀಡಿದ ಭಾಗ್ಯಗಳ ಹೊರತಾಗಿ ರಾಘವೇಂದ್ರ ಹಿಟ್ನಾಳರ ಸ್ವಂತ ಶಕ್ತಿ (ಇಮೇಜ್), ಕೊಡುಗೆ ಏನು?
ಎಲ್ಲ ಸಮುದಾಯದ ಮತಬಾಂಧವರ ಜತೆಗೆ ಪಾರದರ್ಶಕವಾಗಿದ್ದೇನೆ. ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಇದೇನನ್ನ ಶಕ್ತಿ.
ಹಣ, ಜಾತಿ, ವರ್ಚಸ್ಸು ಇವುಗಳ ಪೈಕಿ ತಮಗೆ ಹೆಚ್ಚು ಶಕ್ತಿ ತುಂಬುವ ಅಂಶ ಯಾವುದು?
ಹಣವೇ ಎಲ್ಲವನ್ನೂ ಮಾಡುವುದಾದರೆ ಟಾಟಾ ಬಿರ್ಲಾ ಯಾವತ್ತೋ ಪ್ರಧಾನಿಗಳಾಗುತ್ತಿದ್ದರು. ಜಾತಿಯೇ ಪ್ರಧಾನ ಆಗುವುದೂ ಸಾಧ್ಯವಿಲ್ಲ. ವ್ಯಕ್ತಿ ಸಮಾಜದೊಂದಿಗೆ ಹೇಗೆ ಇದ್ದಾನೆ. ಅವನ ವಿಶ್ವಾಸಾರ್ಹತೆ ಏನು ಎಂಬುದು ಮುಖ್ಯವಾಗುತ್ತದೆ. ಹಾಗೆಂದು ಉಳಿದ ಅಂಶಗಳು ನಗಣ್ಯ ಎಂದು ಹೇಳುತ್ತಿಲ್ಲ. ಆದರೆ, ಅವೇ ಪ್ರಧಾನ ಅಲ್ಲ ಅಷ್ಟೆ.
ಪ್ರತಿಪಕ್ಷಗಳ ಬಿಕ್ಕಟ್ಟನ್ನು ಹೇಗೆ ನಗದೀಕರಿಸಿಕೊಳ್ಳುತ್ತೀರಿ?
ವಿಶೇಷವಾಗಿ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಕಾಂಗ್ರೆಸ್‌ಗೆ ಲಾಭವಾಗಲಿದೆ. ಸಿ.ವಿ.ಚಂದ್ರಶೇಖರ್ ಅವರಂಥ ಸಜ್ಜನರಿಗೆ ಕೊಟ್ಟ ಟಿಕೆಟ್ ಹಾಗೂ ಬಿ. ಫಾರಂನ್ನು ಬ್ಲ್ಯಾಕ್‌ಮೇಲ್ ತಂತ್ರ ಹೂಡಿ ತಮ್ಮ ಪಾಲಾಗಿಸಿಕೊಂಡ ಸಂಸದ ಸಂಗಣ್ಣ ಕರಡಿ ಹಾಗೂ ಅವರ ಪುತ್ರನ ನಡವಳಿಕೆಯನ್ನು ಜನ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಈ ಬಗ್ಗೆ ಅಸಹನೆ ಇದೆ. ಸಹಜವಾಗಿ ನಮ್ಮತ್ತ ಒಲವು ತೋರಿಸುತ್ತಾರೆ. ಆ ವಿಶ್ವಾಸ ನಮಗಿದೆ.
ಕುಟುಂಬ ರಾಜಕಾರಣ ಜಿಲ್ಲಾ ಕಾಂಗ್ರೆಸ್‌ನಲ್ಲೂ ಇದೆ ಅನಿಸುತ್ತಿಲ್ಲವೇ?
ಕುಟುಂಬ ರಾಜಕಾರಣ ಎಂಬುದು ನಾವೇನು ಪಡೆದದ್ದಲ್ಲ. ಪಕ್ಷ ಕೊಟ್ಟಿದೆ. ಜನರು ನಮ್ಮ ಮೇಲೆ ವಿಶ್ವಾಸ ಇಟ್ಟು ಆರಿಸಿದ್ದಾರೆ. ನನ್ನ ಯಶಸ್ಸಿನ ಹಿಂದೆ ತಂದೆಯವರಾದ ಬಸವರಾಜ ಹಿಟ್ನಾಳ್ ಅವರ ಶ್ರಮ, ಕೊಡುಗೆ ಇದೆ. ಹಾಗೆಂದು ನಾವು ಅಧಿಕಾರಕ್ಕೆ ಅಂಟಿ ಕುಳಿತುಕೊಂಡವರಲ್ಲ. ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇವೆ ಅಷ್ಟೇ. ಪ್ರತಿಸ್ಪರ್ಧಿ ಪಕ್ಷದಲ್ಲಿ ನಡೆಯುತ್ತಿರುವುದೇನು? ಕುಟುಂಬ ರಾಜಕಾರಣವೇ ಅಲ್ಲವೇ? ಆ ಮಟ್ಟಕ್ಕೆ ನಾವು ಹೋಗಿಲ್ಲ.
ಜಾತಿ ರಾಜಕಾರಣ ಮಾಡುತ್ತಾರೆ ಎಂಬ ಆರೋಪವಿದೆಯಲ್ಲ?
ಅದು ವಿರೋಧ ಪಕ್ಷದವರ ಸುಳ್ಳು ಆರೋಪ. ಲಿಂಗಾಯತರೂ ಸೇರಿ, ಕುರುಬ, ಅಲ್ಪಸಂಖ್ಯಾತ ಮತ್ತು ಇತರೆ ಹಿಂದುಳಿದ ವರ್ಗದ ಮತದಾರರು ನಮ್ಮ ಮೇಲೆ ಭರವಸೆ ಇಟ್ಟಿದ್ದಾರೆ. ಬ್ಯಾಕ್‌ವರ್ಡ್ ವರ್ಸ್‌ಸ್ ಫಾರ್ವಡ್ ಎಂದು ಬಿಂಬಿಸಲಾಗುತ್ತದೆ. ಎಲ್ಲರನ್ನು ಒಳಗೊಂಡು ಚುನಾವಣೆ ಎದುರಿಸಿದ್ದೇವೆ. ಜಾತಿ ರಾಜಕಾರಣ ಎಂದೂ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.