ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಸ್ಪರ್ಧಿಗಳ ನಡುವೆ ಆರೋಪ–ಪ್ರತ್ಯಾರೋಪ ಬಿರುಸಾಗಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಆದ್ಯತೆ ಕುರಿತಂತೆ ಅಭ್ಯರ್ಥಿಗಳ ಜೊತೆ ಎಸ್.ರವಿಪ್ರಕಾಶ್,ರಾಜೇಶ್ ರೈ ಚಟ್ಲ ಅವರು ನಡೆಸಿದ ಕಿರು ಸಂದರ್ಶನಗಳು ಇಲ್ಲಿವೆ.
ಯಾವ ಕಾರಣಕ್ಕಾಗಿ ಜನ ನಿಮಗೆ ಮತ ಹಾಕಬೇಕು? ಕ್ಷೇತ್ರಕ್ಕಾಗಿ ಏನು ಮಾಡುತ್ತೀರಿ?
ನಾನು ಕ್ಷೇತ್ರದ ಶಾಸಕನಾಗಿ ಏನು ಮಾಡಿದ್ದೇನೆ ಎನ್ನುವುದು ಒಂದು ತೆರೆದ ಪುಸ್ತಕದಂತಿದೆ. ನನ್ನ ಪರವಾಗಿ ನಾನು ಮಾಡಿರುವ ಕೆಲಸಗಳೇ ಮಾತನಾಡುತ್ತವೆ. ಮಲ್ಲೇಶ್ವರ ಕ್ಷೇತ್ರವನ್ನು ಆರೋಗ್ಯ, ಶಿಕ್ಷಣ, ಮೂಲಸೌಲಭ್ಯ, ಸೌಂದರ್ಯೀಕರಣ, ಕ್ರೀಡೆ, ನಾಗರಿಕ ಸೇವೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಇಡೀ ಬೆಂಗಳೂರು ಮತ್ತು ರಾಜ್ಯಕ್ಕೆ ಮಾದರಿ ಎನ್ನುವಂತೆ ಅಭಿವೃದ್ಧಿಪಡಿಸಲಾಗಿದೆ. ಹತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನಡೆಸಲಾಗಿದೆ. ಸ್ಯಾಂಕಿ ಕೆರೆ ದಂಡೆಯಲ್ಲೇ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಇವೆಲ್ಲವೂ ಈಗ ‘ಮಲ್ಲೇಶ್ವರ ಮಾಡೆಲ್’ ಎಂದೇ ಹೆಸರಾಗಿವೆ.
ನೀವು ಗೆಲ್ಲುತ್ತೀರಿ ಎನ್ನುವುದಕ್ಕೆ ನಿಮಗಿರುವ ಬೆಂಬಲ ಎಂಥದ್ದು?
ಮಲ್ಲೇಶ್ವರ ಕ್ಷೇತ್ರವು ಈಗ ಕಂಡಿರುವಷ್ಟು ಅಭಿವೃದ್ಧಿಯನ್ನು ಕಳೆದ 50 ವರ್ಷಗಳಲ್ಲಿ ಯಾವತ್ತೂ ಕಂಡಿರಲಿಲ್ಲ. ನಾನು ಕ್ಷೇತ್ರಕ್ಕೆ ಹಲವು ಮೂಲಗಳಿಂದ, ಹಲವು ಬಗೆಯಲ್ಲಿ ಸಮನ್ವಯ ಸಾಧಿಸಿ, ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಮುಂದಿನ 30 ವರ್ಷಗಳನ್ನು ಗಮನದಲ್ಲಿರಿಸಿಕೊಂಡು ಇಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದೆ.
ನಿಮ್ಮ ನಿಜವಾದ ಎದುರಾಳಿ ಯಾರು?
ಪ್ರಜಾಪ್ರಭುತ್ವ ಎಂದ ಮೇಲೆ ಸ್ಪರ್ಧೆಯನ್ನು ಗೌರವಿಸಬೇಕು. ವ್ಯವಸ್ಥೆಯ ಆರೋಗ್ಯದ ದೃಷ್ಟಿಯಿಂದ ಎಲ್ಲ ಪಕ್ಷದ ಅಭ್ಯರ್ಥಿಗಳನ್ನೂ ನಾನು ಗಂಭೀರವಾಗಿಯೇ ಸ್ವೀಕರಿಸಿದ್ದೇನೆ. ಮಲ್ಲೇಶ್ವರದ ಮತದಾರರ ಪಾಲಿಗೆ ಮನೆಮಗ ಎನ್ನುವ ವಿನೀತ ಭಾವನೆ ನನ್ನಲ್ಲಿದೆ.
ಜನ ನಿಮಗೆ ಯಾವ ಕಾರಣಕ್ಕೆ ಮತ ಹಾಕಬೇಕು?
ಮಲ್ಲೇಶ್ವರದ ಮೂಲ ನಿವಾಸಿಯಾಗಿದ್ದು, ಬಾಲ್ಯವನ್ನು ಇಲ್ಲೇ ಕಳೆದಿರುತ್ತೇನೆ. ಸುಶಿಕ್ಷಿತ, ಸಂಸ್ಕಾರವಂತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನಾನು ಪದವಿ ಮುಗಿಸಿದ್ದು, ಚಿಕ್ಕಂದಿನಿಂದಲೂ ಜನಸೇವೆ ಮಾಡಬೇಕೆಂಬ ಹಂಬಲವಿತ್ತು. ಬಡವರಿಗೆ, ನಿರ್ಗತಿಕರಿಗೆ ಸೇವೆ, ಸಹಾಯ, ಕನ್ನಡ ಕಟ್ಟುವ ಕೆಲಸ, ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸುವ ಕನಸು ನನ್ನದು.
ಇಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆಯೇ? ಇದ್ದರೆ ಕಾರಣಗಳೇನು?
ಎಚ್.ಡಿ. ಕುಮಾರಸ್ವಾಮಿ ಅವರ ಆಡಳಿತದ ಪರ ಜನರ ಒಲವು ಇದೆ. ಪಂಚರತ್ನದಂತಹ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಯೋಜನೆಗಳು ಹಾಗೂ ಜೆಡಿಎಸ್ ಪಕ್ಷದ ಸಿದ್ಧಾಂತದ ಅಡಿಯಲ್ಲಿ ಮತ ಯಾಚಿಸುತ್ತಿದ್ದೇನೆ. ನೀರಿನ ಸಮಸ್ಯೆ, ಸಂಚಾರ, ಅಸಮರ್ಪಕ ಕಾಮಗಾರಿ, ಪಾದಚಾರಿ ಮಾರ್ಗ ಒತ್ತುವರಿ, ಶುಚಿತ್ವದ ಕೊರತೆ, ಕಸ ವಿಲೇವಾರಿ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಇವುಗಳನ್ನು ಬಗೆಹರಿಸುತ್ತೇನೆ
ನಿಮ್ಮ ನಿಜವಾದ ಎದುರಾಳಿ ಯಾರು?
ನಿಜವಾದ ಎದುರಾಳಿ ರಾಷ್ಟ್ರೀಯ ಪಕ್ಷಗಳು ಹಾಗೂ ಅವುಗಳ ನಿರಂತರ ಭ್ರಷ್ಟಾಚಾರ.
ಜನ ಯಾವ ಕಾರಣಕ್ಕೆ ನಿಮಗೆ ಮತ ಹಾಕಬೇಕು?
ಮಲ್ಲೇಶ್ವರ ಜನರಿಗಾಗಿ ಮಾರ್ವೆಲಸ್ ಮಲ್ಲೇಶ್ವರ ಅಭಿಯಾನ ಶುರು ಮಾಡಿದ್ದೇವೆ. ಸುಮಾರು ಎರಡು ಸಾವಿರ ಜನರಿಗೆ ಮಾತನಾಡಿದ್ದೇವೆ. ಕೊಳಗೇರಿ ನಿವಾಸಿಗಳು, ಸದಾಶಿವನಗರ, ಮಲ್ಲೇಶ್ವರದ ವಿವಿಧ ಭಾಗಗಳು, ಸುಬ್ರಹ್ಮಣ್ಯಪುರ, ಎಲ್.ಎನ್.ಪುರ, ಮಿಲ್ಕ್ ಕಾಲೋನಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಣಾಳಿಕೆ ರೂಪಿಸಿದ್ದೇವೆ. ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆ ಸದಾ ಸಿದ್ಧನಿದ್ದೇನೆ. ಸಂಚಾರ ಸಮಸ್ಯೆಗಳ ನಿವಾರಣೆಗೆ ಬಹು ಅಂತಸ್ತಿನ ಪಾರ್ಕಿಂಗ್ ಸಂಕೀರ್ಣವನ್ನು
ಸ್ಥಾಪಿಸಲಾಗುವುದು. ಹೆಚ್ಚು ಆಮ್ಲಜನಕವನ್ನು ನೀಡುವ ಸಸ್ಯಗಳನ್ನು ಬೆಳೆಸುವ ಮೂಲಕ ಆರೋಗ್ಯಕರ ಪರಿಸರವನ್ನು ಸೃಷ್ಟಿಸಲು ಒತ್ತು ನೀಡುತ್ತೇನೆ.
ಇಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆಯೇ? ಇದ್ದರೆ ಕಾರಣಗಳೇನು?
ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಸಾಕಷ್ಟು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರಗಳು ನಡೆದಿವೆ. ಕಳಪೆ ಕಾಮಗಾರಿಗಳು ನಡೆದಿವೆ. ಹೀಗಾಗಿ ಜನ ಬೇಸತ್ತಿದ್ದಾರೆ. ಪರ್ಯಾಯಕ್ಕಾಗಿ ಎದುರು ನೋಡುತ್ತಿದ್ದು, ಕಾಂಗ್ರೆಸ್ ಪಕ್ಷವನ್ನೇ ಆಯ್ಕೆ ಮಾಡಲಿದ್ದಾರೆ. ನಾವು ಸುಮಾರು 40 ಸಾವಿರ ಮನೆಗಳಿಗೆ ಹೋಗಿದ್ದೇವೆ. ನಮ್ಮ ಪರವಾಗಿ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೇ, ಮಾದರಿ ಮಲ್ಲೇಶ್ವರದ ಕನಸುಗಳನ್ನು ಜನರ ಮುಂದಿಟ್ಟಿದ್ದೇವೆ. ಜನರಿಗೆ ಅದು ಒಪ್ಪಿಗೆಯಾಗಿದೆ.
ನಿಮ್ಮ ನಿಜವಾದ ಎದುರಾಳಿ ಯಾರು?
ಅವ್ಯವಹಾರ, ಭ್ರಷ್ಟಾಚಾರಗಳಿಗೆ ಕಾರಣರಾದವರೇ ಆಗಿದ್ದಾರೆ. ಅವರೇ ನನ್ನ ನಿಜವಾದ ಎದುರಾಳಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.