ADVERTISEMENT

ಬೊಳುವಾರು ಮಹಮದ್ ಕುಂಞಿ ಸಂದರ್ಶನ: ಮೋನು ಸ್ಮೃತಿ ಕಾಲ್ಪನಿಕ ಬರಹವಲ್ಲ

ಬಿ.ಎಂ.ಹನೀಫ್
Published 22 ಜನವರಿ 2022, 19:30 IST
Last Updated 22 ಜನವರಿ 2022, 19:30 IST
ಬೊಳುವಾರು ಮಹಮದ್ ಕುಂಞಿ 
ಬೊಳುವಾರು ಮಹಮದ್ ಕುಂಞಿ    

70 ದಾಟಿರುವ ಬೊಳುವಾರು ಮಹಮದ್ ಕುಂಞಿ, ಬದುಕಿನಲ್ಲಿ ಕಂಡುಂಡ ನೋವು, ನಲಿವು, ಬೇವು, ಬೆಲ್ಲಗಳ ಕಡೆಗೊಂದು ಚಿಕಿತ್ಸಕ ಹಿನ್ನೋಟ ಹರಿಸಿ ಬರೆದಿರುವ ಆತ್ಮಕತೆ- ಮೋನು ಸ್ಮೃತಿ. ಮುಂದಿನ ವಾರ ಓದುಗರ ಕೈಗೆ ಸಿಗಲಿರುವ ಈ ಕೃತಿಯ ನೆಪದಲ್ಲಿ ಹೀಗೊಂದು ಮಾತುಕತೆ...

***

ನಿಮ್ಮ ಮೋನು ಸ್ಮೃತಿ ಎಂಬ ಹೆಸರಿನ ‘ಆತ್ಮಕಥನ’ ನೂರು ಶೇಕಡಾ ನಿಜವೇ? ಹಾಗಾದರೆ, ನೀವು ಆತ್ಮವನ್ನು ನಂಬುತ್ತೀರಾ? ಇಲ್ಲವಾದಲ್ಲಿ ಇದು ಆತ್ಮಕಥನ ಹೇಗಾಗುತ್ತದೆ? ಮೋನು ಸ್ಮೃತಿ ಎಂಬ ಹೆಸರಿಡಲು, ಏನಾದರೂ ವಿಶೇಷವಾದ ಕಾರಣಗಳಿವೆಯೇ?

ADVERTISEMENT

ಕೃತಿಯ ಹೆಸರಿನ ಬಗ್ಗೆ ನಿಮಗಿರುವ ಈ ಅನುಮಾನ ನನಗೂ ಇತ್ತು. ‘ನನ್ನ ಬದುಕಿನ ಕತೆ’ ಎಂಬ ಪದವನ್ನು ಬಳಸಿದರೆ ಹೇಗೆ ಅಂತ ಆರಂಭದಲ್ಲಿ ಯೋಚಿಸಿದ್ದೂ ಉಂಟು. ಅದರೆ, ‘ಕತೆ’ ಕಟ್ಟಿ ಹೇಳುವುದೆಂದರೆ ‘ಸುಳ್ಳು’ ಹೇಳುವುದು ಎಂದೇ ಪ್ರತಿಪಾದಿಸುತ್ತಿದ್ದವನು ನಾನೆಂಬುದು, ನಿಮ್ಮ ಪತ್ರಿಕೆಯಲ್ಲೇ ಹಲವು ಬಾರಿ ಪ್ರಿಂಟಾಗಿದೆ. ಈ ಸಲ ನಿಜವನ್ನೇ ಹೇಳಹೊರಟಿದ್ದರಿಂದ, ‘ಆತ್ಮಕತೆ’ ಎಂಬ ಬಹುಜನ ಬಳಕೆಯ ಪದವನ್ನೇ ಉಳಿಸಿಕೊಂಡೆ.

ಆಂಗ್ಲ ಭಾಷೆಯಲ್ಲಿ 1977ರಲ್ಲಿ ಮೊತ್ತಮೊದಲ ಬಾರಿಗೆ ವಿಲಿಯಮ್ ಟೇಲರ್ ಎಂಬಾತ ಬಳಸಿದ್ದ ಎನ್ನಲಾಗುತ್ತಿರುವ ಗ್ರೀಕ್ ಮೂಲದ, ‘ಅಟೋಬಯಾಗ್ರಫಿ’ ಎಂಬ, ‘ತನ್ನ ಜೀವನದ ಬಗ್ಗೆ ತಾನೇ ವಿವರಿಸುವ’ ಪದಜೋಡಿಯನ್ನು, ಕನ್ನಡದಲ್ಲಿ ಆತ್ಮಕತೆ ಎಂಬುದಾಗಿ ಸಾಕಷ್ಟು ಮಂದಿ ಬಳಸಿದ್ದಾರೆ. ಕಾರು, ಬಸ್ಸು, ರೈಲು, ಲೈಟು, ಫ್ಯಾನು ಇತ್ಯಾದಿ ಪರದೇಶೀ ಪದಗಳು ಹೇಗೆ ನಮ್ಮ ಕನ್ನಡದ್ದಾಗಿವೆಯೋ ಹಾಗೆಯೇ ‘ಆತ್ಮಕಥನ’ ಎಂಬ ಸಂಸ್ಕೃತ ಪದವೂ ಈಗ ನಮ್ಮದೇ. ಒಟ್ಟಿನಲ್ಲಿ ತಾವು ಓದುತ್ತಿರುವ ಕೃತಿಯು, ಕತೆಯೋ ಕಾದಂಬರಿಯೋ ಕವನವೋ ಪ್ರಬಂಧವೋ ಎಂಬುದನ್ನು ಓದುಗರಿಗೆ ಪೂರ್ವಭಾವಿಯಾಗಿ ತಿಳಿಸುವ ಏಕೈಕ ಬಯಕೆಯಿಂದ ಸುಲಭವಾಗಿ ಸಂವಹನವಾಗಬಲ್ಲ, ಆ ಜನಪ್ರಿಯ ಪದವನ್ನೇ ಬಳಸಿರುವೆ.

ಪೌರಾಣಿಕ ಕೃತಿಗಳಲ್ಲಿ ನಾವು ಓದಿರುವ ‘ಆತ್ಮ’ ಎಂಬ ಅಧ್ಯಾತ್ಮ ಪದಕಲ್ಪನೆಯನ್ನು, ನಾನು ನಂಬುವುದಿಲ್ಲ ಎಂಬುದೆಷ್ಟು ನಿಜವೋ, ನನ್ನ ‘ಆತ್ಮಕಥನ’ದಲ್ಲಿ ದಾಖಲಾಗಿರುವ ಪ್ರತಿಯೊಂದು ಪದವೂ ಅಷ್ಟೇ ನಿಜ.

‘ಮೋನು ಸ್ಮೃತಿ ಕಾಲ್ಪನಿಕ ಬರಹವಲ್ಲ. ಬಳಸಲಾಗಿರುವ ಹೆಸರು, ಊರು, ಘಟನೆ ಅಥವಾ ಲಿಖಿತ ದಾಖಲೆಗಳಲ್ಲಿ ಯಾವುದೂ ಬರಹಗಾರನ ಕಲ್ಪನೆಯಲ್ಲ. ಯಾವುದೇ ಜೀವಂತ ಅಥವಾ ತೀರಿಹೋಗಿರುವ ವ್ಯಕ್ತಿಯ ಹೆಸರು, ಊರು, ಘಟನೆಗಳು ಅಕಸ್ಮಾತ್ ಹೋಲಿಕೆಯಾಗಿರದಿದ್ದರೆ, ಅದು ಉದ್ದೇಶಪೂರ್ವಕವಲ್ಲ’ ಎಂಬುದಾಗಿ, ಕೃತಿಯ ಆರಂಭದ ಪುಟದಲ್ಲೇ ದಪ್ಪಕ್ಷರಗಳಲ್ಲಿ ಪ್ರಿಂಟು ಮಾಡಿಸಿರುವೆ.

ನನ್ನ ಆತ್ಮಕತೆಗೆ ‘ಮೋನು ಸ್ಮೃತಿ’ ಎಂಬ ಹೆಸರಿಡಲು ವಿಶೇಷ ಕಾರಣವೇನೂ ಇಲ್ಲ. ನನ್ನನ್ನು ಬಾಲ್ಯದಲ್ಲಿ ಎಲ್ಲರೂ ಗುರುತಿಸುತ್ತಿದ್ದದ್ದು ‘ಮೋನು’ ಎಂದೇ. ಮೋನುವಿನ ನೆನಪುಗಳಿಗೆ ಅದಕ್ಕಿಂತ ಸೂಕ್ತವಾದ ಹೆಸರು ಬೇರೆ ಹೊಳೆದಿರಲಿಲ್ಲ.

ಅಷ್ಟು ವರ್ಷಗಳ ಹಿಂದೆ ಕಂಡು ಹಿಡಿದ ನಿಮ್ಮ ಮುತ್ತುಪ್ಪಾಡಿ ಈಗಲೂ ಹಾಗೆಯೇ ಇದೆಯಾ?

ಖಂಡಿತವಾಗಿಯೂ ಹಾಗೆಯೇ ಇಲ್ಲ. ನಲುವತ್ತೈದು ವರ್ಷಗಳಷ್ಟು ಕಾಲದ ನನ್ನೆಲ್ಲಾ ಬರಹಗಳಲ್ಲಿ ‘ಮುತ್ತುಪ್ಪಾಡಿ’ ಎಂಬ ‘ಕೋಮುಸೌಹಾರ್ದ'ಕ್ಕೆ ಮಾದರಿಯಾದ, ‘ಸ್ತ್ರೀ ಪಕ್ಷಪಾತಿ’ ಅಕ್ಷರಸ್ಥರ ಕಾಲ್ಪನಿಕ ನಾಡೊಂದನ್ನು ಕಟ್ಟಿಕೊಳ್ಳಲು ಯತ್ನಿಸಿದ್ದು ಖಂಡಿತವಾಗಿಯೂ ವ್ಯರ್ಥವಾಗಲಿಲ್ಲ. ‘ಮುತ್ತುಪ್ಪಾಡಿಯಲ್ಲಿರುವ ಎಲ್ಲರೂ ಒಳ್ಳೆಯವರು’ ಎಂಬುದಾಗಿ ಸುಳ್ಳು ಸುಳ್ಳೇ ಬರೆದದ್ದರಲ್ಲಿ ಬಹಳಷ್ಟು ಇಂದು ನಿಜವಾಗಿದೆ.

‘ಸಾಹಿತ್ಯವು ಬದುಕಿನ ಪ್ರತಿಬಿಂಬ’ ಎಂಬ ನಮ್ಮ ಹಿರಿಯರ ವಾದಗಳನ್ನು ವಿನಯದಿಂದಲೇ ನಿರಾಕರಿಸಿ, ಸಾಹಿತ್ಯವು ಬದುಕಿನ ಪ್ರತಿಬಿಂಬವಲ್ಲ, ಅದು ಮುಂದಿನ ಜನಬದುಕಿಗೆ ‘ಗತಿಬಿಂಬ’ವಾಗಬೇಕು; ಮುತ್ತುಪ್ಪಾಡಿಯ ಜನಬದುಕು, ಒಂದಲ್ಲ ಒಂದು ದಿನ ಹಾಗೆಯೇ ಬದಲಾಗಲೇಬೇಕು ಎಂದೆಲ್ಲ ಕನಸು ಕಾಣುತ್ತಿದ್ದದ್ದು ಸಂಪೂರ್ಣ ವ್ಯರ್ಥವೇನೂ ಆಗಲಿಲ್ಲ.

‘ಒಡೆದು ಆಳುವುದೊಂದೇ ನಮ್ಮ ಸಂವಿಧಾನ’ ಎಂಬುದಾಗಿ ಪ್ರತಿಪಾದಿಸುತ್ತಿರುವ ನಮ್ಮ ರಾಜಕೀಯ ಪಕ್ಷಗಳ ಓಲೈಕೆಯ ರಾಜಕಾರಣಗಳನ್ನು ‘ಮುತ್ತುಪ್ಪಾಡಿ’ಯ ಸಮುದಾಯವು ಇಂದು ತಿರಸ್ಕರಿಸಿದೆ. ಮುಸ್ಲಿಮ್ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಗೆ, ಹೆಣ್ಣು ಮಕ್ಕಳನ್ನು ಆಧುನಿಕ ಓದಿನಿಂದ ದೂರ ಉಳಿಸಿದ್ದೇ ಕಾರಣವೆಂಬ ‘ಅಂತಿಮಸತ್ಯ’ ಅವರಿಗೆ ಅರಿವಾಗಿದೆ. ಮಕ್ಕಳಿಗೆ ಶಾಲೆಗೆ ಸೇರುವ ವಯಸ್ಸಾಗುತ್ತಿದ್ದಂತೆಯೇ, ಗಂಡು ಹೆಣ್ಣೆಂಬ ಭೇದವಿಲ್ಲದೆ ಕನ್ನಡ/ಇಂಗ್ಲಿಷ್ ಕಲಿಸುವ ಶಾಲೆಗಳಿಗೆ ಅವರು ಸೇರಿಸತೊಡಗಿದ್ದಾರೆ.

ಕನ್ನಡ/ಇಂಗ್ಲಿಷ್ ಶಾಲೆಗೆ ಸೇರಿದ್ದ ಆ ಹೆಣ್ಣು ಮಕ್ಕಳಲ್ಲಿ ಹಲವರು, ಇಂದು ಸುಪ್ರಸಿದ್ಧ ವೈದ್ಯೆಯರುಗಳಾಗಿ, ವಕೀಲೆಯರುಗಳಾಗಿ, ನ್ಯಾಯಾಧೀಶೆಯರುಗಳಾಗಿ, ಅಧ್ಯಾಪಕಿಯರುಗಳಾಗಿ, ಎಂಜಿನಿಯರುಗಳಾಗಿ, ಸಾಹಿತಿಗಳಾಗಿ, ಪತ್ರಕರ್ತೆಯರಾಗಿ, ದೃಶ್ಯಮಾಧ್ಯಮಗಳ ನಿರೂಪಕಿಯರುಗಳಾಗಿ, ‘ಮುತ್ತುಪ್ಪಾಡಿ’ಯ ಜನಬದುಕಿಗೆ ಹೊಸ ‘ಗಂತಿಬಿಂಬ’ವಾಗುತ್ತಿದ್ದಾರೆ.

ಹೊಸ ಸಮುದಾಯವೊಂದು, ಮುಖ್ಯವಾಗಿ ಹೆಣ್ಣು ಸಮುದಾಯವು, ಅಲೌಕಿಕ ಓದಿನ ಜೊತೆಗೆ ಲೌಕಿಕ ಓದಿಗೂ ತೆರೆದುಕೊಂಡಾಗ ಏನೇನೆಲ್ಲ ಆದೀತು ಎಂಬುದಕ್ಕೆ, ಇಂದೆಲ್ಲ ನಮ್ಮ ಕಾಲೇಜುಗಳು ಕಾಲ ಕಾಲಕ್ಕೆ ಪ್ರಕಟಿಸುತ್ತಿರುವ ಬಹುತೇಕ ‘ರ‍್ಯಾಂಕ್ ಪಟ್ಟಿ’ಗಳು ಹಾಗೂ ಲ್ಯಾಪ್ ಟಾಪ್‌ಗಳನ್ನು ಹೆಗಲಿಗೇರಿಸಿಕೊಂಡು, ಸ್ವಾಭಿಮಾನದಿಂದ ವಿಮಾನಗಳಲ್ಲಿ ಓಡಾಡುತ್ತಿರುವ ನವತರುಣಿಯರ ಕಣ್ಣುಗಳಲ್ಲಿ ಹೊಳೆಯುತ್ತಿರುವ ‘ಸ್ವಾತಂತ್ರ್ಯದ ಓಟ’ಗಳು ಸಾಕ್ಷಿ ಹೇಳುತ್ತಿವೆ.

ಗಟ್ಟಿಯಾಗಿ ಮಾತನಾಡಲಾಗದ ಸಮುದಾಯವೊಂದರಿಂದ ಬಂದವರು ನೀವು. ಗಟ್ಟಿಯಾಗಿ ಬರೆಯಲು ಹೇಗೆ ಸಾಧ್ಯವಾಯಿತು?

ಎರಡು ಕಾರಣಗಳುಂಟು. ಮೊದಲನೆಯದು ಮಾನಸಿಕ, ಎರಡನೆಯದು ದೈಹಿಕ. ಎರಡನೆಯದನ್ನೇ ಮೊದಲು ಹೇಳುವೆ.

ಒಂದುವೇಳೆ ನಾನು ಗಟ್ಟಿಯಾಗಿ ಮಾತನಾಡಲು ಅವಕಾಶವಿರುವ ಸಮುದಾಯದಿಂದ ಬಂದಿರುತ್ತಿದ್ದರೂ ನನ್ನಿಂದ ಅದು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ, ಬಾಲ್ಯದಿಂದಲೇ ನಾನೊಬ್ಬ ಉಗ್ಗುರೋಗಿ. ಬಾಲ್ಯದಲ್ಲಿ ನಾನು ಗುರುತಿಸಲ್ಪಡುತ್ತಿದ್ದದ್ದೇ ‘ಬೆಬ್ಬೆ ಮಮ್ಮದೆ’ ಎಂದು. ಪಿಯುಸಿ ಮುಗಿಸುವವರೆಗೂ, ನನ್ನ ಹೆಸರನ್ನು ಹೇಳಲೂ ಸಾಧ್ಯವಾಗುತ್ತಿದ್ದಿರಲಿಲ್ಲ. ಆ ಬಳಿಕದ ದಿನಗಳಲ್ಲಿ, ಡಾ. ಪಿ.ಎಸ್. ಭಟ್ ಎಂಬ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯರ ಕೃಪೆಯಿಂದ, ಹೊಸದಾಗಿ ಮಾತು ಕಲಿತಿದ್ದವನು ನಾನು. ಆ ರೋಗದಿಂದ ಇಂದೂ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಇಷ್ಟಾದರೂ ಹೇಗೆ ಸಾಧ್ಯವಾಯಿತು ಎಂಬುದನ್ನು, ನನ್ನಂತಹ ಬೇರೆ ಉಗ್ಗು ರೋಗಿಗಳಿಗೂ ನೆರವಾಗುವಂತೆ ಆತ್ಮಕತೆಯಲ್ಲಿ ವಿವರಿಸಿರುವೆ.

ಇನ್ನು, ನನ್ನ ಗಟ್ಟಿಯಾದ ಬರಹಕ್ಕೆ ಮೊದಲ ಕಾರಣ ನನ್ನ ಅಪ್ಪ. ಮಕ್ಕಳನ್ನಾರನ್ನೂ ಮದರಸಕ್ಕೆ ಕಳುಹಿಸಿದವರಲ್ಲ ಅವರು. ನಮಗೆಲ್ಲ ಮನೆಯಲ್ಲೇ ಕುರ್‌ಆನ್ ಓದಿಸಿದ್ದರು. ನಮ್ಮನ್ನು ‘ಕಾಫರರ ಕನ್ನಡ’ ಶಾಲೆಗೂ ಸೇರಿಸಿದ್ದರು. ಅಷ್ಟೇ ಅಲ್ಲ. ಗಂಡು ಮಕ್ಕಳಾಗಿ ಹುಟ್ಟಿರದಿದ್ದ ನನ್ನ ಅಕ್ಕ ಮತ್ತು ತಂಗಿಯನ್ನೂ ಸೇರಿಸಿಬಿಟ್ಟಿದ್ದರು.

ಶಾಲೆ ಓದಿನಿಂದಾಗಿ ನನಗೆ ನಾನೆಲ್ಲಿದ್ದೇನೆ, ನಾನೆಲ್ಲಿರಬೇಕು ಎಂಬುದು ಹೊಳೆದಿತ್ತು.

ಶಾಲೆ ಓದಿನ ಕಾರಣದಿಂದಾಗಿಯೇ, ಬಾಲ್ಯದಲ್ಲಿ ಎದುರಿಸಬೇಕಾಗಿ ಬಂದ ರಗಳೆಗಳ ವಿರುದ್ಧದ ಬಂಡಾಯವೇ ನನ್ನ ಬರವಣಿಗೆಗಳನ್ನು ಗಟ್ಟಿಗೊಳಿಸಿತು. ಮುಸ್ಲಿಮ್ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಿ ಎಂಬುದೊಂದೇ ನನ್ನ ಬರವಣಿಗೆಗಳ ಪ್ರಮುಖ ಅಜೆಂಡಾ ಆಯಿತು. ಆದ್ದರಿಂದಲೇ, ನಾಲ್ಕು ದಶಕಗಳ ಹಿಂದೆ ಪ್ರಕಟವಾಗಿದ್ದ ನನ್ನ ಮೊತ್ತಮೊದಲ ಕಾದಂಬರಿಯನ್ನು, ‘ಶಾಲೆಗೆ ಹೋಗುವ ಹುಡುಗಿಗೆ’ ಎಂದೇ ಅರ್ಪಣೆ ಮಾಡಿಕೊಂಡಿದ್ದೆ.

* ಎಲ್ಲವನ್ನೂ ರಾಜಕೀಯ ಆಪೋಶನ ತೆಗೆದುಕೊಳ್ಳುತ್ತಿರುವ ಈ ಮುಸ್ಸಂಜೆ ಹೊತ್ತಲ್ಲಿ, ನಿಮ್ಮಂತಹ ಬಂಡಾಯ ಬರಹಗಾರ ಕೇವಲ ಬರೆಯುತ್ತಾ ಕುಳಿತರೆ ಪ್ರಯೋಜನ ಇದೆಯಾ?

‘ಇಲ್ಲ’ ಎಂಬುದು ಪೂರ್ತಿ ನಿಜವಲ್ಲ.

ಕೊರೊನಾಪೂರ್ವದ ನಾಲ್ಕು ದಶಕಗಳಲ್ಲಿ, ‘ಬರವಣಿಗೆಗಳ ಜೊತೆಯಲ್ಲೇ, ಕರ್ನಾಟಕ ಸಮುದಾಯ ಸಂಘಟನೆ’ಯ ಅಧ್ಯಕ್ಷನಾಗಿ, ‘ಬಂಡಾಯ ಸಾಹಿತ್ಯ ಸಂಘಟನೆ’ಯ ರಾಜ್ಯಸಂಚಾಲಕನಾಗಿ ಬೀದಿಗಿಳಿದು ಕೆಲಸ ಮಾಡಿದ್ದವನು ನಾನು, ರಾಜ್ಯದ ಮೂಲೆ ಮೂಲೆಗಳಿಗೂ ಹೋಗಿ, ಜನಪರ ಚಳವಳಿಗಳಲ್ಲಿ ತೊಡಗಿಸಿಕೊಂಡು, ಹೊಸ ಹೊಸ ಗೆಳೆಯರನ್ನು ಗಳಿಸಿಕೊಂಡವನು ನಾನು. ಆದ್ದರಿಂದ, ನಿಮ್ಮ ಆರೋಪ ನನಗೆ ಅನ್ವಯವಾಗದು.

ಹಾಗೆಂದ ಮಾತ್ರಕ್ಕೆ, ಬೀದಿಗಿಳಿಯದೆ ಬರೆಯುತ್ತಾ ಕುಳಿತವರಿಂದ ಪ್ರಯೋಜನವಿಲ್ಲ ಎಂಬ ಆರೋಪವೂ ಸರಿಯಲ್ಲ. ಹೋರಾಟದ ಸಾಗರಕ್ಕೆ ಸಾವಿರ ನದಿಗಳಿರುತ್ತವೆ.

* ನಿಮ್ಮ ಕಥೆ, ಕಾದಂಬರಿಗಳ ಲೋಕದಲ್ಲಿ ನಾಟಕೀಯತೆಯೇ ಶಕ್ತಿ ಮತ್ತು ದೌರ್ಬಲ್ಯ ಎನ್ನುವವರಿದ್ದಾರೆ, ಒಪ್ಪುತ್ತೀರಾ? ಇಲ್ಲ- ಹೌದುಗಳಿಗೆ ಕಾರಣ ತಿಳಿಸಿ.

ಹಹ್ಹ. ನಾವೆಲ್ಲ ಓದಬಯಸುವುದು ನಮ್ಮ ಮಾತುಗಳನ್ನು ಮಾತ್ರ. ಓದುತ್ತಿರುವ ಬರಹವೊಂದರಲ್ಲಿ ನಮ್ಮ ಮಾತುಗಳು ಧ್ವನಿಸುತ್ತಿದ್ದರೆ, ಆಲಿಸುತ್ತಿರುವ ವೇದಿಕೆಯ ಉಪನ್ಯಾಸಗಳಲ್ಲಿ ನಮ್ಮ ಮಾತುಗಳೇ ಕೇಳಿಸುತ್ತಿದ್ದರೆ, ‘ಭೇಷ್’ ಎಂದು ಚಪ್ಪಾಳೆ ತಟ್ಟುತ್ತೇವೆ. ನಮ್ಮ ಮಾತುಗಳಲ್ಲದಿದ್ದರೆ ತಿರಸ್ಕರಿಸುತ್ತೇವೆ. ಇದು ಲೋಕನಿಯಮ. ಇದನ್ನು ಅಳೆಯಲು ಯಾವುದೇ ಮಾನದಂಡಗಳಿಲ್ಲ.

* ನಿಮ್ಮನ್ನು ಓದುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓದು ಅವರನ್ನು ಬದಲಾಯಿಸಿದೆಯೆ?

‘ಹೌದು’. ನನ್ನ ಇಷ್ಟೂ ವರ್ಷಗಳ ಎಲ್ಲ ಬರಹಗಳ ಪ್ರಮುಖ ‘ಆಶಯ’ ಮುತ್ತುಪ್ಪಾಡಿಯ ಮುಸ್ಲಿಮ್ ಹೆಣ್ಣು ಮಕ್ಕಳಿಗೆ, ಉಳಿದ ಮಕ್ಕಳಂತೆ ಬದುಕಲು ‘ಸ್ವಾತಂತ್ರ್ಯ’ ನೀಡುವುದು. ಅದು ಯಶಸ್ಸಾಗಿದೆ ಎಂಬುದಕ್ಕೆ, ನಿಮ್ಮ ಎರಡನೆಯ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಾಕ್ಷಿಗಳನ್ನು ಒದಗಿಸಿದ್ದೇನೆ.

ನಮ್ಮ ರಾಜ್ಯವನ್ನಾಳಿರುವ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಎಚ್. ಡಿ. ಕುಮಾರಸ್ವಾಮಿಯವರು, ಮಂಗಳೂರಿನ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ, ‘ನಮ್ಮ ಪಕ್ಷವನ್ನು ಗೆಲ್ಲಿಸಿದರೆ, ನಿಮ್ಮೂರನ್ನು ಬೊಳುವಾರರ ಮುತ್ತುಪ್ಪಾಡಿಯಂತೆ ಬದಲಾಯಿಸುತ್ತೇನೆ’ ಅಂತ ಭರವಸೆ ನೀಡಿದ್ದನ್ನು ಬರಿಯ ತಮಾಷೆ ಎನ್ನುತ್ತೀರಾ?

* ಆತ್ಮಕತೆ ನಿಮ್ಮ ಕೊನೆಯ ಬರವಣಿಗೆಯಾ? ಅಥವಾ ಇನ್ನೂ ಬರೆಯುವುದು ಉಳಿದಿದೆಯಾ?

‘ಮೋನು ಸ್ಮೃತಿ’ಯ ಕೊನೆಯ ಪುಟದಲ್ಲಿ ಮುದ್ರಿತವಾಗಿರುವ ಈ ಕೆಳಗಿನ ಪ್ಯಾರಾದಲ್ಲಿ, ನಿಮ್ಮ ಪ್ರಶ್ನೆಗೆ ಉತ್ತರಗಳುಂಟು:

‘ಜೀವಂತವಾಗಿಯಾಗಲೀ, ತೀರಿಕೊಂಡ ಬಳಿಕವಾಗಲೀ ಒಮ್ಮೆಯೂ ಕಂಡಿರದಿದ್ದ ಮನುಷ್ಯನೊಬ್ಬನನ್ನು ಕೊಂದ ಆರೋಪವನ್ನು ಹೊತ್ತುಕೊಂಡು, ಸುಮಾರು ಎಂಟು ತಿಂಗಳ ಕಾಲ ಭೂಗತನಾಗಿದ್ದು, ಅಂತಿಮವಾಗಿ ಮಂಗಳೂರಿನ ಜಿಲ್ಲಾ ಕಾರಾಗೃಹದ ಕತ್ತಲಲ್ಲಿ ಕಂಬಿ ಎಣಿಸಿದ್ದ ‘ಆ ದಿನಗಳನ್ನು’ ಪ್ರತ್ಯೇಕವಾಗಿಯೇ ದಾಖಲಿಸಬೇಕೆಂಬ ಅಸೆಯಿಂದ, ಇದರಲ್ಲಿ ಸೇರಿಸಿಕೊಂಡಿಲ್ಲ. ಅಂತೆಯೇ, ಕಾನ್ಪುರದ ‘ಐಐಟಿ ಮತ್ತು ಇಂದೋರ್‌ನ ‘ಐಐಎಂ’ನಲ್ಲಿ ಓದಿದ್ದ ಲಖನೌದ ಚಂದದ ಹುಡುಗರಿಬ್ಬರನ್ನು ಅನುಕ್ರಮವಾಗಿ ‘ಜೆಹಾದ್ ಲವ್’ ಮತ್ತು ‘ಲವ್ ಜೆಹಾದ್’ ಮಾಡಿಕೊಂಡಿದ್ದ ನನ್ನಿಬ್ಬರು ಹೆಣ್ಣುಮಕ್ಕಳು, ಹೇಳದೆ ಕೇಳದೆ ಉತ್ತರ ಪ್ರದೇಶದಿಂದ ಪಲಾಯನ ಮಾಡಿದ್ದರಿಂದ, ಅವರಿಬ್ಬರ ಮೂವರು ಮುದ್ದುಮಕ್ಕಳನ್ನು ತಬ್ಬಿ ಮುದ್ದಾಡುವ ಆಸೆಯಿಂದ ಜುಬೇದಾಳೊಂದಿಗೆ ಆರು ಬಾರಿ ಏಳು ಕಡಲು ದಾಟಿದ್ದು; ಅಲ್ಲಿ ಅಮೆರಿಕದಲ್ಲಿ ನಾನಿದ್ದ ಸುಮಾರು ಮೂರು ವರ್ಷಗಳ ಒಟ್ಟಾರೆ ಅವಧಿಯಲ್ಲಿ ಕಣ್ಣಿಗೆ ಬಿದ್ದ ಕಸಕಡ್ಡಿಗಳು, ಪುರಾತನ ಕಾಲದಲ್ಲಿ ನಾನು ಓದಿಕೊಂಡಿದ್ದ ಸುಪ್ರಸಿದ್ಧ ‘ಪ್ರವಾಸ ಕಥನ'ಗಳ ಬಗ್ಗೆ ಸಣ್ಣ ಅನುಮಾನ ಮೂಡಿಸಿದ್ದು... ಇತ್ಯಾದಿ, ‘ಅಂತಿಮ ಸತ್ಯ'ಗಳನ್ನೆಲ್ಲ, ‘ಪ್ರವಾಸ ಕಥನ’ದ ರೂಪದಲ್ಲೇ ಸಂದರ್ಭಸಹಿತ ವಿವರಿಸಲೆಂದು ಇದರಲ್ಲಿ ಸೇರಿಸಿಕೊಂಡಿಲ್ಲ. ಈಗಲೇ ಕೃತಿ 350 ಪುಟಗಳನ್ನು ದಾಟಿದೆ.

ಪರಿಪೂರ್ಣವಾದದ್ದು ಯಾವುದೂ ಭೂಮಿಯ ಮೇಲೆ ಇರುವುದಿಲ್ಲವಂತೆ.

ನನ್ನ ‘ಮುತ್ತುಪ್ಪಾಡಿ’ಯೂ ಪರಿಪೂರ್ಣವಲ್ಲ; ‘ಮೋನು ಸ್ಮೃತಿ’ಯೂ ಅಲ್ಲ. ಧರ್ಮರಾಯನಿರುವಲ್ಲಿ ಶಕುನಿಗಳೂ ಇರುತ್ತಾರೆ; ‘ನಾವು ಮತ್ತು ಅವರು’ ಎಂಬಂತಹ, ಕಟಿಪಿಟಿಗಳನ್ನು ಮಾಡುತ್ತಲೇ ಇರುತ್ತಾರೆ. ಯಾವ ದಿನದಂದು, ತಮ್ಮ ಒಂದೇ ಒಂದು ಹೆಣ್ಣು ಮಗು ಕೂಡಾ ಆಧುನಿಕ ಶಿಕ್ಷಣದಿಂದ ವಂಚಿತವಾಗಿಲ್ಲ ಎಂಬುದಾಗಿ, ಮುತ್ತುಪ್ಪಾಡಿಯ ಮಹನೀಯರೆಲ್ಲ ಹೆಮ್ಮೆಯಿಂದ ಸಾಬೀತುಪಡಿಸುತ್ತಾರೋ, ಯಾವ ದಿನದಂದು ‘ನಾವೆಲ್ಲರೂ ಒಂದೇ’ ಎಂಬ ವೇದಿಕೆಯ ಮಾತುಗಳು, ನಿಜವಾದ ಅರ್ಥದಲ್ಲಿ ನಮ್ಮೆಲ್ಲರ ಸಮುದಾಯಗಳೊಳಗೆ ಬೇರೂರುತ್ತವೆಯೋ, ಆ ಶುಭ ದಿನದಂದು ನಾನು ಬರವಣಿಗೆಯನ್ನು ಕೊನೆಗೊಳಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.