ADVERTISEMENT

ದಪ್ಪ ಚರ್ಮಕ್ಕೆ ಹೋರಾಟವೇ ಅಸ್ತ್ರ; ದರ್ಪ, ದಬ್ಬಾಳಿಕೆಗೆ ಸೊಪ್ಪು ಹಾಕಲ್ಲ:ಆರ್.ಅಶೋಕ

ಎಸ್.ರವಿಪ್ರಕಾಶ್
Published 21 ನವೆಂಬರ್ 2023, 0:30 IST
Last Updated 21 ನವೆಂಬರ್ 2023, 0:30 IST
<div class="paragraphs"><p>ಆರ್.ಅಶೋಕ</p></div>

ಆರ್.ಅಶೋಕ

   

‘ರಾಜ್ಯದ ಸಮಗ್ರ ಹಿತವೇ ನಮ್ಮ ಗುರಿ. ವಿಧಾನಸಭೆಯಲ್ಲಿ ಚರ್ಚೆ, ಚಿಂತನ– ಮಂಥನಕ್ಕೆ ಮೊದಲ ಆದ್ಯತೆ. ಸಣ್ಣ ಪುಟ್ಟ ವಿಚಾರಗಳಿಗೆಲ್ಲ ಸದನದ ಸಮಯವನ್ನು ಹಾಳು ಮಾಡುವುದಿಲ್ಲ. ಧರಣಿ, ಸಭಾತ್ಯಾಗ ನಮ್ಮ ಕಡೆಯ ಅಸ್ತ್ರ. ಸರ್ಕಾರ ಸಮಸ್ಯೆಗಳಿಗೆ ಕಿವುಡಾದಾಗ, ದಪ್ಪ ಚರ್ಮದವರಂತೆ ವರ್ತಿಸಿದಾಗ ಹೋರಾಟ ಅನಿವಾರ್ಯ. ದರ್ಪ, ದಬ್ಬಾಳಿಕೆ, ಬೇಜವಾಬ್ದಾರಿ, ದಮನದ ನಡವಳಿಕೆಗಳಿಗೆ ಸೊಪ್ಪು ಹಾಕುವುದಿಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ವಿಪಕ್ಷ ನಾಯಕರಾದ ಬಳಿಕ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮನದ ಮಾತು ಹಂಚಿಕೊಂಡಿದ್ದಾರೆ.

ADVERTISEMENT

ವಿಧಾನಸಭೆಯ ಆಡಳಿತದ ಸಾಲಿನಲ್ಲಿ ಘಟಾನುಘಟಿ ನಾಯಕರೇ ಇದ್ದಾರೆ. ಸಿದ್ದರಾಮಯ್ಯ ಜತೆ ನಿಮ್ಮ ಸಂಬಂಧವೂ ಚೆನ್ನಾಗಿದೆ. ಹೀಗಿದ್ದಾಗ ವಿಪಕ್ಷ ನಾಯಕನ ಸ್ಥಾನ ನಿಭಾಯಿಸುವುದು ಕಷ್ಟವಲ್ಲವೇ?

ಯಾವ ಹುದ್ದೆಯನ್ನು ನಿರ್ವಹಿಸುತ್ತೇವೆಯೋ ಅದಕ್ಕೆ ತಕ್ಕಂತೆ ಇರಬೇಕು. ಗೃಹ ಸಚಿವನಾಗಿದ್ದಾಗ ನಿಷ್ಠುರವಾಗಿಯೇ ಕೆಲಸ ಮಾಡಿದ್ದೆ. ಕಂದಾಯ ಸಚಿವನಾಗಿದ್ದಾಗ ರಾಜ್ಯದ ಉದ್ದಗಲ ಓಡಾಡಿ ಜನರ ಸಣ್ಣಪುಟ್ಟ ಸಮಸ್ಯೆಗಳಿಗೂ ಸ್ಪಂದಿಸಿದ್ದೆ. ಹೋರಾಟದ ಹಿನ್ನೆಲೆ ಇರುವ ಯಾವುದೇ ವ್ಯಕ್ತಿಗೆ ಯಾರ ಎದುರು ನಿಂತು ಮಾತನಾಡಲು ಅಳುಕು, ಅಂಜಿಕೆ ಇರುವುದಿಲ್ಲ. ವಿಪಕ್ಷ ನಾಯಕ ಎಂದರೆ ಗದರಿಸುವುದು– ಅಬ್ಬರಿಸುವುದಲ್ಲ. ಗಟ್ಟಿ ಮಾತುಗಳಲ್ಲಿ ಸರ್ಕಾರದ ಕಿವಿ ಹಿಂಡಬೇಕು. ನಮ್ಮ ಎದುರು ಯಾರಿದ್ದಾರೆ ಎನ್ನುವುದು ಮುಖ್ಯ ಅಲ್ಲ. ವಿರೋಧಿ ಸ್ಥಾನದಲ್ಲಿ ಗೆಳೆಯರು, ಗುರುಗಳು, ಸ್ನೇಹಿತರು, ಬಂಧು– ಬಳಗ ಯಾರೇ ಇದ್ದರೂ ಧೈರ್ಯಗೆಡದೇ ಹೋರಾಡು ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಆ ಮಾತುಗಳೇ ನನಗೆ ಮಾರ್ಗದರ್ಶನ. ಯಾರ ಜತೆಗೂ ಹೊಂದಾಣಿಕೆ ಪ್ರಶ್ನೆಯೇ ಇಲ್ಲ.

ನಿಮ್ಮ ಮತ್ತು ಅಧ್ಯಕ್ಷರ ಸ್ಥಾನದ ಆಯ್ಕೆ ಬಗ್ಗೆ ಪಕ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಅಸಮಾಧಾನ ಹುಟ್ಟು ಹಾಕಿದೆಯಲ್ಲವೇ? ಇದನ್ನು ಹೇಗೆ ತಣ್ಣಿಸುತ್ತೀರಿ?

ನನಗೆ ನೀಡಿದ ಹುದ್ದೆಯ ಬಗ್ಗೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ.  ನನ್ನ ಹಿರಿತನವನ್ನು ಎಲ್ಲರೂ ಒಪ್ಪಿದ್ದಾರೆ. ಅಸಮಾಧಾನಗೊಂಡವರನ್ನು ಮಾತನಾಡಿಸಿ, ಸಮಾಧಾನ ಪಡಿಸುವ ಕೆಲಸ ನಾನು ಮತ್ತು ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಒಟ್ಟಿಗೆ ಮಾಡುತ್ತಿದ್ದೇವೆ. ನನ್ನ ಮತ್ತು ವಿಜಯೇಂದ್ರ ಮಧ್ಯೆ ಉತ್ತಮ ಬಾಂಧವ್ಯವಿದೆ. ನಮ್ಮ ಜೋಡಿ ಡಿಕೆಶಿ– ಸಿದ್ದರಾಮಯ್ಯ ಜೋಡಿಯಂತಲ್ಲ. ನಮ್ಮದು ಹಳೇ ಬೇರು ಹೊಸ ಚಿಗುರು. ನಮ್ಮ ಅಧ್ಯಕ್ಷರಿಂದ ಕಾರ್ಯಕರ್ತರ ಪಡೆ ಉತ್ಸಾದಿಂದ ಪುಟಿದೆದ್ದಿದೆ.

ಜೆಡಿಎಸ್‌ ಜತೆಗೆ ಹೊಂದಾಣಿಕೆ ಹೇಗಿರುತ್ತದೆ?

ಜೆಡಿಎಸ್‌–ಬಿಜೆಪಿಯ 20–20 ಸರ್ಕಾರ ಅತ್ಯುತ್ತಮ ಸರ್ಕಾರವಾಗಿತ್ತು. ಎರಡೂ ಪಕ್ಷಗಳ ಮಧ್ಯೆ ಉತ್ತಮ ಬಾಂಧವ್ಯವಿತ್ತು. ಈಗಲೂ ಅದು ಮುಂದುವರೆಯುತ್ತದೆ. ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಸೇರಿ 28 ಸ್ಥಾನ ಗೆಲ್ಲುವ ವಿಶ್ವಾಸವಿದೆ. ನಮ್ಮದ ಸಹಜ ಮೈತ್ರಿ.

‘ಹಿರಿತನ ಹೋರಾಟದ ಹಿನ್ನೆಲೆಯೇ ಆಯ್ಕೆಗೆ ಕಾರಣ’

‘ಹಿರಿತನ ಮತ್ತು ಸರ್ಕಾರದಲ್ಲಿ ಮಾಡಿದ ಕೆಲಸಗಳನ್ನು ಪರಿಗಣಿಸಿ ವರಿಷ್ಠರು ಆಯ್ಕೆ ಮಾಡಿದ್ದಾರೆ. ನಾನು ಹೋರಾಟದ ಹಿನ್ನೆಲೆಯಿಂದ ಬಂದವನು. ತುರ್ತುಪರಿಸ್ಥಿತಿಯಲ್ಲಿ ಇಂದಿರಾಗಾಂಧಿ ವಿರುದ್ಧ ಹೋರಾಟ ಮಾಡಿ ಜೈಲಿಗೆ ಹೋಗಿದೆ. ಆಗ ನನ್ನ ವಯಸ್ಸು 17. ಬಿಜೆಪಿ ನಗರ ಅಧ್ಯಕ್ಷನಾಗಿದ್ದಾಗ ಪ್ರತಿ ವಾರ ಹೋರಾಟ ಹಮ್ಮಿಕೊಳ್ಳುತ್ತಿದ್ದೆ. ನಮ್ಮ ಸರ್ಕಾರ ರಚನೆ ಆದ ಸಂದರ್ಭದಲ್ಲಿ ಶಾಸಕರ ಸಂಖ್ಯೆ ಕಡಿಮೆ ಆದಾಗ ಶಾಸಕರನ್ನು ಹೊಂದಿಸುವ ಮತ್ತು ಟ್ರಬಲ್‌ ಶೂಟರ್‌ ಆಗಿಯೂ ಕೆಲಸ ಮಾಡಿರುವುದನ್ನು ವರಿಷ್ಠರು ಗಮನಿಸಿದ್ದಾರೆ. ಪಕ್ಷದಲ್ಲಿ ಯಾವುದೇ ಗುಂಪಿನ ಜತೆ ಗುರುತಿಸಿಕೊಂಡವನಲ್ಲ. ಎಲ್ಲ ನಾಯಕರ ಜತೆಗೂ ಇದ್ದೆ. ಇದು ನನ್ನ ಆಯ್ಕೆಗೆ ಕಾರಣ‘ ಎಂದು ಅಶೋಕ ‍‍ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.