ADVERTISEMENT

ಒಳನೋಟ–ಸಂದರ್ಶನ| ಪ್ರೋತ್ಸಾಹ ನೀಡದೇ ಪದಕ ನಿರೀಕ್ಷಿಸುವುದು ಸರಿಯೇ?: ಈಜುಪಟು

ಜಿ.ಶಿವಕುಮಾರ
Published 2 ಅಕ್ಟೋಬರ್ 2021, 18:23 IST
Last Updated 2 ಅಕ್ಟೋಬರ್ 2021, 18:23 IST
ಶ್ರೀಹರಿ ನಟರಾಜ್
ಶ್ರೀಹರಿ ನಟರಾಜ್   

ಬೆಂಗಳೂರು: ‘ಸೂಕ್ತ ಪ್ರೋತ್ಸಾಹ ನೀಡದೆ ಒಲಿಂಪಿಕ್ಸ್‌, ಕಾಮನ್‌ವೆಲ್ತ್‌, ಏಷ್ಯನ್‌ ಸೇರಿ ಇತರ ಮಹತ್ವದ ಕೂಟಗಳಲ್ಲಿ ಅಥ್ಲೀಟ್‌ಗಳು ಪದಕ ಗೆದ್ದು ತರಲಿ ಎಂದು ನಿರೀಕ್ಷಿಸುವುದು ಎಷ್ಟು ಸರಿ?...’

ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್‌ ಅವರ ಪ್ರಶ್ನೆ ಇದು.

ಟೋಕಿಯೊ ಒಲಿಂಪಿಕ್ಸ್‌ನ ಪುರುಷರ 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಶ್ರೀಹರಿ, ರಾಜ್ಯದಲ್ಲಿನ ಕ್ರೀಡಾ ಬೆಳವಣಿಗೆ ಕುರಿತು‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ADVERTISEMENT

*ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಸಿಗುತ್ತಿರುವ ಬೆಂಬಲದ ಬಗ್ಗೆ ಹೇಳಿ?

ಮಹತ್ವದ ಕೂಟಗಳಲ್ಲಿ ಪದಕ ಗೆಲ್ಲುವ ಮಹದಾಸೆ ಎಲ್ಲಾ ಕ್ರೀಡಾಪಟುಗಳಲ್ಲೂ ಇರುತ್ತದೆ. ಅದಕ್ಕೆ ಅಗತ್ಯವಿರುವ ಪ್ರೋತ್ಸಾಹ ಸಿಗಬೇಕಲ್ಲ? ಬೇರೆ ರಾಜ್ಯಗಳಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಅಲ್ಲಿನ ಸರ್ಕಾರಗಳು ನಗದು ಬಹುಮಾನ ಪ್ರಕಟಿಸುತ್ತವೆ. ಸರ್ಕಾರಿ ಉದ್ಯೋಗ ನೀಡುವ ಪ್ರತೀತಿಯೂ ಇದೆ. ನಮ್ಮಲ್ಲಿ ಅದಕ್ಕೆ ತದ್ವಿರುದ್ಧ ಪರಿಸ್ಥಿತಿ. ನಾವೇ ಅಂಗಲಾಚಿದರೂ ನೆರವು ನೀಡಲು ಯಾರೂ ಮುಂದೆ ಬರುವುದಿಲ್ಲ.

*ಸರ್ಕಾರದಿಂದ ಅಥ್ಲೀಟ್‌ಗಳು ನಿರೀಕ್ಷಿಸುವುದೇನು?

ಸರ್ಕಾರವು ನಗದು ಪುರಸ್ಕಾರ, ಬೋನಸ್‌ ಸೇರಿ ವಿವಿಧ ಪ್ರೋತ್ಸಾಹಕ ಕ್ರಮಗಳ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸುವ ಕೆಲಸಕ್ಕೆ ಮುಂದಾಗಬೇಕು. ಅಮೆರಿಕದಲ್ಲಿ 20 ಮಂದಿ ಈಜುಪಟುಗಳನ್ನು ಗುರುತಿಸಿ ಅವರ ತರಬೇತಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಅಲ್ಲಿನ ಫೆಡರೇಷನ್‌ ಭರಿಸುತ್ತದೆ. ನಮ್ಮಲ್ಲಿ ಆ ವ್ಯವಸ್ಥೆ ಇಲ್ಲ. ಖಾಸಗಿ ಸಂಸ್ಥೆಗಳೂ ಪ್ರಾಯೋಜಕತ್ವ ನೀಡಲು ಹಿಂದೇಟು ಹಾಕುತ್ತವೆ. ಹೀಗಾಗಿ ಬಹುಪಾಲು ಮಂದಿ ಕ್ರೀಡೆಯಿಂದಲೇ ವಿಮುಖರಾಗುತ್ತಿದ್ದಾರೆ.

*ಸರ್ಕಾರದ ಹೊಸ ಯೋಜನೆ ಬಗ್ಗೆ ?

75 ಮಂದಿ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ಒಲಿಂಪಿಕ್ಸ್‌ಗೆ ಸಜ್ಜುಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ. ಇದರಿಂದ ರಾಜ್ಯದ ಅಥ್ಲೀಟ್‌ಗಳಲ್ಲಿ ಹೊಸ ಭರವಸೆ ಚಿಗುರೊಡೆಯುತ್ತದೆ. ನಾನು ಈಜು ಕಲಿಕೆ ಆರಂಭಿಸಿದ ದಿನಗಳಿಗೆ ಹೋಲಿಸಿದರೆ ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಬೆಂಗಳೂರು ಈಜು ಕ್ರೀಡೆಯ ಶಕ್ತಿಕೇಂದ್ರವಾಗಿ ರೂಪುಗೊಂಡಿದೆ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದವರೆಲ್ಲಾ ನಗರದಲ್ಲೇ ತರಬೇತಿ ಪಡೆದಿದ್ದರು. ಆದರೆ ಬೇರೆ ಕ್ರೀಡೆಗಳಿಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ. ಅದರತ್ತ ಸರ್ಕಾರ ಗಮನಹರಿಸಲಿ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.