ಕೇಂದ್ರ ಕೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಜೈಪುರ ಗ್ರಾಮೀಣ ಕ್ಷೇತ್ರದಲ್ಲಿ ಎರಡನೇ ಬಾರಿ ಗೆಲುವು ದಾಖಲಿಸುವತ್ತ ದೃಷ್ಟಿ ನೆಟ್ಟಿದ್ದಾರೆ. ಒಲಿಂಪಿಯನ್ ಕೂಡಾ ಆಗಿರುವ ರಾಥೋಡ್ ಅವರ ಎದುರಾಳಿ ಕಾಂಗ್ರೆಸ್‌ನ ಹಾಲಿ ಶಾಸಕಿ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಕೃಷ್ಣಾ ಪೂನಿಯಾ. ಭಾರತೀಯ ಸೇನೆಯಿಂದ ಕ್ರೀಡೆಗೆ, ಕ್ರೀಡೆಯಿಂದ ರಾಜಕೀಯಕ್ಕೆ ಸಾಗಿಬಂದಿರುವ ಹಾದಿ ಹಾಗೂ ಭವಿಷ್ಯದ ತಮ್ಮ ಯೋಜನೆಗಳನ್ನು ‘ಪ್ರಜಾವಾಣಿ’ಯ ತಬೀನಾ ಅಂಜುಂ ಜೊತೆ ರಾಥೋಡ್ ಹಂಚಿಕೊಂಡಿದ್ದಾರೆ.
* ಸೇನೆಯಲ್ಲಿ ಯೋಧನಾಗಿ, ಅಲ್ಲಿಂದ ಕ್ರೀಡಾಪಟುವಾಗಿ, ಇದೀಗ ನುರಿತ ರಾಜಕಾರಣಿಯಾಗಿ ನಡೆದು ಬಂದ ಈ ಪಯಣವನ್ನು ನೀವು ಹೇಗೆ ನೋಡುತ್ತೀರಿ?
ಈ ಪಯಣ ತೃಪ್ತಿಕರ ಹಾಗೂ ಅಷ್ಟೇ ಸವಾಲಿನಿಂದ ಕೂಡಿತ್ತು. ಇಡೀ ಜೀವನವೇ ಅನುಭವದ ಮೂಟೆ. 23 ವರ್ಷಗಳ ಸೇನಾ ಜೀವನ, ಕ್ರೀಡಾಳುವಾಗಿ ಅತ್ಯುನ್ನತ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಅಪೂರ್ವ ಅವಕಾಶ, ಇದೀಗ ಆಡಳಿತ ಮತ್ತು ಚುನಾವಣಾ ರಾಜಕೀಯ. ಜಗತ್ತಿನೆಲ್ಲೆಡೆ ಗೌರವಾದರಕ್ಕೆ ಪಾತ್ರರಾಗಿರುವ ನರೇಂದ್ರ ಮೋದಿ ಅವರ ತಂಡದ ಭಾಗವಾಗಿರುವುದು ನನ್ನ ಅದೃಷ್ಟ. ನಿಮ್ಮ ಕಲಿಕೆ ಹಾಗೂ ಅನುಭವಗಳನ್ನು ನಿಮ್ಮ ಸಮುದಾಯದಲ್ಲಿ ಬದಲಾವಣೆ ತರಲು ಬಳಸಿಕೊಂಡರೆ ಅದು ನಿಜಕ್ಕೂ ಸಾರ್ಥಕ ಜೀವನ.
* ನಿಮ್ಮನ್ನು ರಾಜಕೀಯಕ್ಕೆ ಕರೆತಂದ ಪ್ರೇರಣೆ ಏನು? ಆ ಬಗ್ಗೆ ವಿಷಾದವಿದೆಯೇ?
ಭಾರತೀಯ ಆಡಳಿತ ವ್ಯವಸ್ಥೆ ಜೊತೆಗಿನ ನನ್ನ ವೈಯಕ್ತಿಕ ಹೋರಾಟದಿಂದಾಗಿ ವ್ಯವಸ್ಥೆ ಸುಧಾರಿಸುವ ಕಡೆಗೆ ನನ್ನ ಗಮನವಿತ್ತು. ಒಬ್ಬ ಸೈನಿಕನಾಗಿ, ಒಬ್ಬ ಕ್ರೀಡಾ ಸ್ಪರ್ಧಿಯಾಗಿ ಸವಾಲುಗಳನ್ನು ಸ್ವೀಕರಿಸಲು ಸಾಧ್ಯವಿರುವಾಗ, ರಾಜಕಾರಣಿಯಾಗಿ ವ್ಯವಸ್ಥೆ ಬದಲಾವಣೆಯ ಸವಾಲು ಸ್ವೀಕರಿಸಲು ಏಕೆ ಸಾಧ್ಯವಾಗುವುದಿಲ್ಲ? ನರೇಂದ್ರ ಮೋದಿ ಅವರು ರಾಷ್ಟ್ರ ರಾಜಕಾರಣಕ್ಕೆ ಬರುತ್ತಾರೆ ಎಂಬ ವಾತಾವರಣ ಆಗ ಇತ್ತು. ಇದೇ ಬದಲಾವಣೆಯ ಹೆಜ್ಜೆ. ಸೇನೆಯಲ್ಲಿದ್ದಾಗ, ಇಡೀ ದೇಶವೇ ಸೈನಿಕನ ಮೇಲೆ ಅವಲಂಬಿತವಾಗಿದೆ ಎಂಬ ಭಾವ ಇತ್ತು. ಅದೇ ರೀತಿ ನಾನು ಕ್ರೀಡಾ ಕ್ಷೇತ್ರಕ್ಕೆ ಅಡಿಯಿಟ್ಟಾಗ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಲು ಸಾಧ್ಯವಿಲ್ಲ ಎಂಬುದು ಭಾರತೀಯರ ಅಭಿಪ್ರಾಯವಾಗಿತ್ತು. ಇದೀಗ ಸಾಧನೆಗೈದ ಎಷ್ಟೋ ಜನರು ನನ್ನ ಸುತ್ತ ಇರುವುದನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ.
*2014ರಲ್ಲಿ ನೀವು ಮೊದಲ ಬಾರಿ ಸ್ಪರ್ಧೆ ಮಾಡಿದಾಗ ರಾಜಸ್ಥಾನದಲ್ಲಿ ಮೋದಿ ಅಲೆ ಇದ್ದ ಕಾರಣ ಎಲ್ಲ 25 ಕ್ಷೇತ್ರಗನ್ನು ಬಿಜೆಪಿ ಗೆದ್ದುಕೊಂಡಿತ್ತು. ಆದರೆ ಉಪಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ನಷ್ಟ ಅನುಭವಿಸಿತು. ಇದು ಪರಿಸ್ಥಿತಿಯನ್ನು ಇನ್ನಷ್ಟು ಕಠಿಣವಾಗಿಸಿದೆ ಎಂದು ಅನ್ನಿಸುತ್ತಿಲ್ಲವೇ?
ಉಪಚುನಾವಣೆ ಹಾಗೂ ವಿಧಾನಸಭೆ ಚುನಾವಣಾ ಸೋಲಿಗೆ ಬೇರೆ ಬೇರೆ ಕಾರಣಗಳಿವೆ. ಮತದಾರರು ಬುದ್ಧಿವಂತರಿದ್ದು, ವ್ಯತ್ಯಾಸಗಳನ್ನು ಅವರು ಗಮನಿಸುತ್ತಾರೆ. ಕ್ಷೇತ್ರದ ಜನರು ಸಂಪೂರ್ಣ ವಿಶ್ವಾಸ ಇಟ್ಟಿದ್ದಾರೆ. ಎಲ್ಲೆಡೆಯೂ ಇರುವುದು ಮೋದಿ ಮೋದಿ ಮಾತ್ರ. ಕಾಂಗ್ರೆಸ್ ಹಾಗೂ ಅದರ ಕೂಟವು ದೇಶವನ್ನು ವಿಭಜಿಸುತ್ತಿದೆ.
* ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಹಾಗೂ ಹಾಲಿ ಶಾಸಕಿ ಕೃಷ್ಣಾ ಪೂನಿಯಾ ಅವರನ್ನು ಕಾಂಗ್ರೆಸ್ ಈ ಬಾರಿ ನಿಮ್ಮ ವಿರುದ್ಧ ಕಣಕ್ಕಿಳಿಸಿದೆ. ಇಬ್ಬರೂ ಕ್ರೀಡಾಪಟುಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ನಿಮ್ಮಿಬ್ಬರ ನಡುವಿನ ಚುನಾವಣಾ ಸ್ಪರ್ಧೆಯನ್ನು ಹೇಗೆ ನೋಡುತ್ತೀರಿ?
ನೀವು ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಿ ಎಂದಾದರೆ ಒಂದು ಸಿದ್ಧಾಂತವನ್ನು ನೀವು ಪ್ರತಿನಿಧಿಸಿದಂತೆ. ದೇಶವನ್ನು ಒಗ್ಗೂಡಿಸುವ ಸಿದ್ಧಾಂತವನ್ನು ನಾನು ಪ್ರತಿನಿಧಿಸುತ್ತಿದ್ದೇನೆ. ಕಾಂಗ್ರೆಸ್‌ನದ್ದು ಒಡೆದಾಳುವ ಹಾಗೂ ವಂಶಪಾರಂಪರ್ಯ ರಾಜಕೀಯ ಸಿದ್ಧಾಂತ. ಕಾಂಗ್ರೆಸ್‌ನ ಈ ಸಿದ್ಧಾಂತ ಹಾಗೂ ಮನಸ್ಥಿತಿಯ ವಿರುದ್ಧವೇ ನಮ್ಮ ಹೋರಾಟ.
* ಜೈಪುರ ಗ್ರಾಮೀಣ ಕ್ಷೇತ್ರದಲ್ಲಿ ಜಾಟ್ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿಮ್ಮ ಪ್ರತಿಸ್ಪರ್ಧಿಯೂ ಅದೇ ಸಮುದಾಯಕ್ಕೆ ಸೇರಿದವರು. ಇದು ನಿಮಗೆ ಕಷ್ಟವಾಗಲಿಕ್ಕಿಲ್ಲವೇ?
1969 ಮತ್ತು 1971ರ ಯುದ್ಧದಲ್ಲಿ ಹೋರಾಡಿದ ಸೈನಿಕನ ಮಗ ನಾನು. ಜಾತಿ ಬಗ್ಗೆ ಚಿಂತಿಸುವುದಿಲ್ಲ. ದೇಶವೇ ನನಗೆ ಆದ್ಯತೆ. ನನ್ನ ಜೀವನದಲ್ಲಿ ಏನೇನು ಮಾಡಿದ್ದೇನೆಯೋ, ಅದನ್ನೆಲ್ಲಾ ನನ್ನ ಸ್ವಂತ ಸಾಮರ್ಥ್ಯದಿಂದ ಸಾಧಿಸಿದ್ದೇನೆ. ಉಗ್ರರ ವಿರುದ್ಧದ ಹೋರಾಟದಲ್ಲಾಗಲೀ, ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಾಗಲೀ, ಇದೀಗ ರಾಜಕೀಯದಲ್ಲಾಗಲೀ, ನನಗೆ ಗಾಡ್‌ಫಾದರ್ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.