ADVERTISEMENT

ಮೋದಿ ಧರ್ಮಾಂಧರ ಮುಂದಾಳು: ಶಶಿ ತರೂರ್‌

​ಪ್ರಜಾವಾಣಿ ವಾರ್ತೆ
Published 9 ಮೇ 2019, 17:53 IST
Last Updated 9 ಮೇ 2019, 17:53 IST
ನಗರದ ಕೆ.ಎಚ್‌.ರಸ್ತೆಯಲ್ಲಿರುವ ದಿ ಕೋರ್ಟ್‌ ಯಾರ್ಡ್‌ನಲ್ಲಿ ಆಲ್‌ ಇಂಡಿಯಾ ಪ್ರೊಫೆಷನಲ್ಸ್ ಕಾಂಗ್ರೆಸ್‌ ಕರ್ನಾಟಕ ಆಯೋಜಿಸಿದ್ದ ಪರಿಸರ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಸಂಸದ ಡಾ.ಶಶಿ ತರೂರ್‌ ಮಾತನಾಡಿದರು -ಪ್ರಜಾವಾಣಿ ಚಿತ್ರ
ನಗರದ ಕೆ.ಎಚ್‌.ರಸ್ತೆಯಲ್ಲಿರುವ ದಿ ಕೋರ್ಟ್‌ ಯಾರ್ಡ್‌ನಲ್ಲಿ ಆಲ್‌ ಇಂಡಿಯಾ ಪ್ರೊಫೆಷನಲ್ಸ್ ಕಾಂಗ್ರೆಸ್‌ ಕರ್ನಾಟಕ ಆಯೋಜಿಸಿದ್ದ ಪರಿಸರ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಸಂಸದ ಡಾ.ಶಶಿ ತರೂರ್‌ ಮಾತನಾಡಿದರು -ಪ್ರಜಾವಾಣಿ ಚಿತ್ರ   

*ಕೋಮು ಧ್ರುವೀಕರಣದ ಉದ್ದೇಶವಿಟ್ಟುಕೊಂಡೇ ಬಿಜೆಪಿ ಕೇರಳದಲ್ಲಿ ಚುನಾವಣಾ ಪ್ರಚಾರ ನಡೆಸಿದೆ ಎಂದು ನಿಮಗೆ ಅನ್ನಿಸಿದೆಯೇ?

ಹೌದು, ದೇಶದ ಪ್ರಧಾನಿಯೇ ಧರ್ಮಾಂಧರಿಗೆ ಮುಂದಾಳುವಾಗಿದ್ದಾರೆ ಎಂಬುದು ಬೇಸರದ ವಿಚಾರ. ದೇಶದ ಪ್ರಧಾನಿಯಾಗಿರುವವರು ಭೇದಭಾವ ಮಾಡದೆ ಎಲ್ಲ ಭಾರತೀಯರನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಬಿಜೆಪಿ ಧರ್ಮಾಂಧತೆಯನ್ನು ಮುಕ್ತವಾಗಿ ಪ್ರಚಾರ ಮಾಡುತ್ತಿದೆ. ಜಾತ್ಯತೀತ ಪಕ್ಷವಾಗಿರುವ ಕೇರಳ ಯೂನಿಯನ್‌ ಮುಸ್ಲಿಂ ಲೀಗ್‌ಗೆ ಪಾಕಿಸ್ತಾನದ ಜೊತೆ ನಂಟಿದೆ ಎಂದು ಅವರು ಮಾಡಿರುವ ಆರೋಪ ಇದಕ್ಕೆ ಒಂದು ಉದಾಹರಣೆ.

* ಶಬರಿಮಲೆ ವಿಚಾರ ಈ ಚುನಾವಣೆಯಲ್ಲಿ ಎಷ್ಟು ಪ್ರಸ್ತುತವಾಗುತ್ತದೆ?

ADVERTISEMENT

ಶಬರಿಮಲೆ ವಿಚಾರದಲ್ಲಿ ಬಿಜೆಪಿ ಸುಳ್ಳು ಪ್ರಚಾರಾಂದೋಲನವನ್ನೇ ನಡೆಸಿದೆ. ‘ನಾವು ಭಕ್ತರ ಭಾವನೆಗಳಿಗೆ ಸ್ಪಂದಿಸಿದ್ದೇವೆ’ ಎಂದು ಅವರು ಹೇಳುತ್ತಿದ್ದಾರೆ. ಆದರೆ ಅವರಿಗೆ ಇದ್ದದ್ದು ರಾಜಕೀಯ ಉದ್ದೇಶ ಮಾತ್ರ. ಪವಿತ್ರ ಧಾರ್ಮಿಕ ಸ್ಥಳವನ್ನೂ ಅವರು ತಮ್ಮ ರಾಜಕೀಯ ನಾಟಕಕ್ಕೆ ಬಳಸಿಕೊಂಡಿದ್ದಾರೆ. ನಾವು ಅವರ ಸುಳ್ಳುಗಳನ್ನು ಬಯಲು ಮಾಡಲು ಶ್ರಮಿಸುತ್ತಿದ್ದೇವೆ.

* ತಿರುವನಂತಪುರ ಕ್ಷೇತ್ರದ ಮೇಲೂ ರಾಹುಲ್‌ ಗಾಂಧಿಯ ಪ್ರಭಾವ ಇದೆಯೇ?

ತಿರುವನಂತಪುರ ಕೇರಳದ ದಕ್ಷಿಣ ಭಾಗದಲ್ಲಿದೆ. ರಾಹುಲ್‌ ಗಾಂಧಿ ಉತ್ತರದ ವಯನಾಡ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಆದ್ದರಿಂದ ನೇರ ಪರಿಣಾಮ ಇಲ್ಲ ಅನ್ನಿಸುತ್ತಿದೆ. ಆದರೆ, ಒಟ್ಟಾರೆಯಾಗಿ ರಾಜ್ಯದ ಎಲ್ಲ ಕ್ಷೇತ್ರಗಳ ಮೇಲೂ ರಾಹುಲ್‌ ಪ್ರಭಾವ ಇದ್ದೇ ಇದೆ. ಅವರ ಸ್ಪರ್ಧೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ತುಂಬಿದಂತಾಗಿದೆ. ಕೇರಳದಿಂದ ಆಯ್ಕೆಯಾದವರು ದೇಶದ ಮುಂದಿನ ಪ್ರಧಾನಿಯಾಗುತ್ತಾರೆ ಎಂಬ ಕಾರಣಕ್ಕೆ ಜನರಲ್ಲೂ ಹೊಸ ಹುರುಪು ಕಾಣಿಸುತ್ತಿದೆ. ವಯನಾಡ್‌ಗೆ ಹೊಂದಿಕೊಂಡಿರುವ ತಮಿಳುನಾಡು ಮತ್ತು ಕರ್ನಾಟಕದ ಜಿಲ್ಲೆಗಳಲ್ಲೂ ಉತ್ಸಾಹ ಕಾಣಿಸುತ್ತಿದೆ.

* ತಿರುವನಂತಪುರ ಕ್ಷೇತ್ರದಲ್ಲಿ ನಿಮಗೆ ನೇರ ಸ್ಪರ್ಧಿ ಯಾರು?

ಇಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ನನಗೆ ನೇರ ಎದುರಾಳಿ ಬಿಜೆಪಿಯೇ. ಎಡರಂಗದ ಅಭ್ಯರ್ಥಿ ಸಿ. ದಿವಾಕರನ್‌ ಆರಂಭದಲ್ಲಿ ಉತ್ಸಾಹ ತೋರಿದ್ದರು. ಆದರೆ ಈಚಿನ ಕೆಲವು ದಿನಗಳಿಂದ ಅವರ ಪ್ರಚಾರದ ಅಬ್ಬರ ಕಡಿಮೆಯಾಗಿದೆ. ಆದರೆ ನಾವು ಯಾವುದನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಕೊನೆಯ ಕ್ಷಣದವರೆಗೆ ಪ್ರಚಾರ ಮಾಡುತ್ತೇವೆ.

*ಚುನಾವಣೆಯ ಫಲಿತಾಂಶ ಏನಾಗಬಹುದು?

ಕಾಂಗ್ರೆಸ್‌ ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಲಿದೆ. ಅಷ್ಟೇ ಅಲ್ಲ, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಅನ್ನು ವಿರೋಧಿಸಿದ್ದ ಕೆಲವು ಪಕ್ಷಗಳು ಬಿಜೆಪಿ ಸಖ್ಯ ತೊರೆದು ನಮ್ಮ ಜೊತೆ ಮೈತ್ರಿಗೆ ಮುಂದಾಗಬಹುದು. ಕೇರಳಕ್ಕೆ ಸೀಮಿತವಾಗಿ ಹೇಳುವುದಾದರೆ ಅನೇಕ ಸಮೀಕ್ಷೆಗಳು ಈಗಾಗಲೇ ಹೇಳಿರುವಂತೆ, ಇಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ‘ಕ್ಲೀನ್‌ ಸ್ವೀಪ್‌’ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.