ADVERTISEMENT

ಇನ್ನೂ ಸಮರ್ಥರಾಗಬೇಕಿದೆ: ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ 

ವಿಜಯಕುಮಾರ್ ಎಸ್.ಕೆ.
Published 25 ಏಪ್ರಿಲ್ 2019, 6:58 IST
Last Updated 25 ಏಪ್ರಿಲ್ 2019, 6:58 IST
ಸಂಜೀವ್‌ ಕುಮಾರ್
ಸಂಜೀವ್‌ ಕುಮಾರ್   

* ಸಾಮಾಜಿಕ ಮಾಧ್ಯಮಗಳಲ್ಲೂ ಅಭ್ಯರ್ಥಿಗಳ ಪರ ಪ್ರಚಾರ ನಡೆಯುತ್ತಿದೆ. ಇದನ್ನು ಹೇಗೆ ನಿಯಂತ್ರಣ ಮಾಡುತ್ತೀರಿ?

ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸ. ಅದರೂ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಪ್ರಚಾರ ನಡೆಯುತ್ತಿದ್ದರೆ, ಸದಸ್ಯರು ದೂರು ನೀಡಿದರೆ ಮಾತ್ರ ನಮಗೆ ಗೊತ್ತಾಗುತ್ತದೆ. ಇನ್ನು ಫೇಸ್‌ಬುಕ್‌, ಟ್ವಿಟರ್‌, ಯೂಟ್ಯೂಬ್‌ನಲ್ಲಿ ಪ್ರಚಾರ ಮಾಡುತ್ತಿದ್ದರೆ ಅದನ್ನು ಜಾಹೀರಾತು ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಜಾಹೀರಾತು ಪ್ರಕಟಿಸಲು ಮಾಧ್ಯಮ ನಿಗಾ ಸಮಿತಿಯಿಂದ ಮೊದಲೇ ಅನುಮತಿ ಪಡೆದಿರಬೇಕು. ಅನುಮತಿ ಪಡೆಯದವರ ಬಗ್ಗೆ ನಿಗಾ ವಹಿಸುವಂತೆ ಫೇಸ್‌ಬುಕ್, ಗೂಗಲ್‌ ಸೇರಿ ಸಾಮಾಜಿಕ ಜಾಲತಾಣಗಳ ಕಂಪನಿಗಳೊಂದಿಗೆ ಸಭೆ ನಡೆಸಿ ತಿಳಿಸಲಾಗಿ‌ದೆ. ರಾಜಕೀಯ ವಿಷಯಗಳನ್ನು ಅಪ್‌ಲೋಡ್‌ ಮಾಡಿದರೆ ಅವರೇ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಿದ್ದಾರೆ.

* ಈ ರೀತಿಯ ಮಾಹಿತಿಯನ್ನು ಕಂಪನಿಗಳು ನೀಡಿವೆಯೇ?

ADVERTISEMENT

ಹೌದು, ಅನುಮತಿ ಪಡೆಯದೆ ಪ್ರಚಾರ ನಡೆಸುತ್ತಿರುವ ಹಲವು ಪ್ರಕರಣಗಳ ಬಗ್ಗೆ ಕಂಪನಿಗಳು ವರದಿ ನೀಡಿವೆ. ಸಾರ್ವಜನಿಕರಿಂದಲೂ ಹಲವು ದೂರುಗಳು ಬಂದಿವೆ. ಪ್ರಚಾರ ನಡೆಸಿದವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂಬುದರ ಬಗ್ಗೆ ಕಾನೂನು ಸಲಹೆ ಕೇಳಿದ್ದೇವೆ. ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.

* ಮತದಾನಕ್ಕೆ 48 ಗಂಟೆ ಮೊದಲು ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ನಂತರವೂ ಫೇಸ್‌ಬುಕ್ ಲೈವ್‌ನಲ್ಲಿ ಪ್ರಚಾರ ಮುಂದುವರಿಸಿದರೆ ಏನು ಮಾಡುತ್ತೀರಿ?

ಈ ಸಂಬಂಧವೂ ಸಾಮಾಜಿಕ ಮಾಧ್ಯಮಗಳ ಕಂಪನಿಗಳ ಜತೆ ಚರ್ಚೆ ನಡೆಸಲಾಗಿದೆ. ನಿಯಂತ್ರಣ ಎಲ್ಲವೂ ಆ ಕಂಪನಿಗಳ ಕೈಯಲ್ಲೇ ಇದೆ. ರಾಜಕೀಯ ವಿಷಯ ಎಂದು ಕಂಡುಬಂದರೆ ಅಂಥವುಗಳನ್ನು ಅವರೇ ಸ್ಥಗಿತಗೊಳಿಸುತ್ತಾರೆ.

* ವಿದೇಶಗಳಲ್ಲಿ ಕುಳಿತು ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡುವವರ ವಿರುದ್ಧ ಏನು ಕ್ರಮ ಕೈಗೊಳ್ಳುವಿರಿ?

ಧರ್ಮದ ಹೆಸರಿನಲ್ಲಿ ಮತ ಕೇಳುವುದು ತಪ್ಪು. ಈಗಾಗಲೇ ಈ ರೀತಿ ಪ್ರಚಾರ ಮಾಡಿರುವ ಹಲವು ಪ್ರಕರಣಗಳ ವಿವರವನ್ನು ಗೂಗಲ್‌ ಕಂಪನಿಯವರು ಕಳುಹಿಸಿದ್ದಾರೆ. ಪರಿಶೀಲನೆ ನಡೆಸುತ್ತಿದ್ದೇವೆ. ಮೊದಲನೇ ಬಾರಿ ಇಷ್ಟೊಂದು ಪ್ರಕರಣಗಳು ವರದಿಯಾಗಿರುವ ಕಾರಣ ಪರಿಶೀಲನೆ ಕಷ್ಟವಾಗುತ್ತಿದೆ. ಈ ವಿಷಯದಲ್ಲಿ ನಮ್ಮ ಸಾಮರ್ಥ್ಯ ಇನ್ನೂ ಹೆಚ್ಚಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.