ADVERTISEMENT

ಸಂತರು ಜನಸೇವೆ ಮಾಡಬಾರದೇ?: ಸೊಲ್ಲಾಪುರ ಬಿಜೆಪಿ ಅಭ್ಯರ್ಥಿ ಜೈಸಿದ್ದೇಶ್ವರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 8:50 IST
Last Updated 25 ಏಪ್ರಿಲ್ 2019, 8:50 IST
ಜೈಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ
ಜೈಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ   

ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ. ಜೈಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಹಿರಿಯ ಮುಖಂಡ ಸುಶೀಲ್‌ಕುಮಾರ್‌ ಶಿಂಧೆ ಹಾಗೂ ವಂಚಿತ್‌ ಬಹುಜನ ಅಘಾಡಿಯಿಂದ ಅದರ ಸಂಸ್ಥಾಪಕ, ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಕಣದಲ್ಲಿದ್ದಾರೆ. ಅಕ್ಕಲಕೋಟೆಯ ಗುಡಗಾಂ ಮಠದ ಜೈಸಿದ್ದೇಶ್ವರ ಸ್ವಾಮೀಜಿ ಬೇಡಜಂಗಮ ಸಮುದಾಯದವರು. ‘ಪ್ರಜಾವಾಣಿ’ ಜೊತೆ ಅವರು ನಡೆಸಿದ ಮಾತುಕತೆಯ ಸಾರಇಲ್ಲಿದೆ.

* ಸಂತರು, ಸ್ವಾಮಿಗಳು ಚುನಾವಣೆಗೆ ಯಾಕೆ ಬರಬೇಕು ಎಂದು ನಿಮ್ಮ ವಿರೋಧಿಗಳು ಪ್ರಶ್ನಿಸುತ್ತಿದ್ದಾರಲ್ಲ?

ಬಂದರೆ ತಪ್ಪೇನಿದೆ? ರಾಜಕೀಯದ ಮೂಲಕ ನಾನು ಜನರ ಸೇವೆ ಮಾಡಬಹುದು ಎಂದಾದರೆ ಅದರಲ್ಲಿ ಹಾನಿಯಾಗುವಂಥದ್ದೇನಿದೆ? ಛತ್ರಪತಿ ಶಿವಾಜಿ ಅವರು ಆಡಳಿತ ವಿಚಾರಗಳಿಗೆ ಸಂಬಂಧಿಸಿದಂತೆ ತಮ್ಮ ಗುರುಗಳ ಜೊತೆ ಚರ್ಚಿಸುತ್ತಿದ್ದರು. ಸಮಾಜ ಸುಧಾರಕ ಬಸವಣ್ಣ ಸ್ವತಃ ಆಡಳಿತದ ಭಾಗವಾಗಿದ್ದರು.

ADVERTISEMENT

* ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ನಿಮ್ಮ ನಿಲುವೇನು?

ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಜನರ ಆಸೆಯಾಗಿದೆ. ಈ ವಿಚಾರದಲ್ಲಿ ನನ್ನ ನಿಲುವು ಸ್ಪಷ್ಟ– ನಾವೆಲ್ಲರೂ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಗೌರವಿಸಬೇಕು.

* ನೀವು ಧರ್ಮವನ್ನು ರಾಜಕೀಯಕ್ಕೆ ಬಳಸುತ್ತಿದ್ದೀರಿ ಎಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರಲ್ಲ?

ಅವರು ಏನು ಬೇಕಾದರೂ ಹೇಳಬಹುದು. ಧರ್ಮ ಇರುವುದು ಎಲ್ಲರಿಗಾಗಿ. ನಾನು ‘ವಸುಧೈವ ಕುಟುಂಬಕಂ’ ಎಂಬ ತತ್ವದಲ್ಲಿ ನಂಬಿಕೆ ಇಟ್ಟವನು. ಇಡೀ ವಿಶ್ವವೇ ನಮ್ಮ ಕುಟುಂಬ. ನಾನು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುತ್ತೇನೆ.

* ಸೊಲ್ಲಾಪುರ ಎದುರಿಸುತ್ತಿರುವ ಸಮಸ್ಯೆಗಳೇನು?

ಇಲ್ಲಿ ಅನೇಕ ಸಮಸ್ಯೆಗಳಿವೆ. ನೀರಿನ ಸಮಸ್ಯೆ ಅವುಗಳಲ್ಲೊಂದು. ಸರಿಯಾಗಿ ಮಳೆಯಾಗಿಲ್ಲ. ನಾವೆಲ್ಲರೂ ಒಟ್ಟಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ಭಾಗದಲ್ಲಿ ಗಡಿ ಸಮಸ್ಯೆಯೂ ಇದೆ.

* ನಿಮ್ಮ ಆದ್ಯತೆಗಳೇನು?

ಸೊಲ್ಲಾಪುರದ ಮೂಲಸೌಲಭ್ಯಗಳನ್ನು ಉತ್ತಮಗೊಳಿಸುವುದು. ಇಲ್ಲಿ ನಿರುದ್ಯೋಗ ಇದೆ. ಆದ್ದರಿಂದ ಇಲ್ಲಿ ಕೌಶಲ ಅಭಿವೃದ್ಧಿ ಕೇಂದ್ರವೊಂದನ್ನು ಆರಂಭಿಸಬೇಕು. ನೀರಿನ ಸಮಸ್ಯೆ ಪರಿಹರಿಸಬೇಕು, ಜೊತೆಗೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಬೇಕು. ನಾನು 80ರ ದಶಕದ ಮಧ್ಯಭಾಗದಿಂದಲೇ ಜನರ ಜೊತೆ ಬೆರೆಯುತ್ತಿದ್ದೇನೆ. ರಾಜಕೀಯಕ್ಕೆ ಇಳಿದಿರುವುದು ಈಗ ಅಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.