*ಅಧಿಕಾರ ಸ್ವೀಕರಿಸಿದ ಆರಂಭದ ದಿನಗಳಿಂದಲೇ ವಿವಿಧ ಸಮುದಾಯಗಳ ‘ಮೀಸಲಾತಿ’ ಬೇಡಿಕೆಯ ಇಕ್ಕಟ್ಟು– ಬಿಕ್ಕಟ್ಟಿನ ಸವಾಲು ನಿಮ್ಮೆದುರಿಗೆ ಬಂದಿದೆ. ನಿಮ್ಮ ಅಭಿಪ್ರಾಯವೇನು?
ಮೀಸಲಾತಿ ಪಟ್ಟಿಯಲ್ಲಿ ಬದಲಾವಣೆ, ಪ್ರಮಾಣ ಹೆಚ್ಚಳ ಸೇರಿದಂತೆ ಹಲವು ಅಹವಾಲುಗಳನ್ನು ರಾಜ್ಯದ ವಿವಿಧ ಸಮುದಾಯಗಳು ನಮ್ಮ (ಆಯೋಗ) ಮುಂದಿಟ್ಟಿವೆ. ಪಂಚಮಸಾಲಿ ಸಮುದಾಯ ಈ ಹಿಂದೆಯೇ ತಮ್ಮನ್ನು ಪ್ರವರ್ಗ 2ಎಗೆ ಸೇರಿಸುವಂತೆ ಮನವಿ ಸಲ್ಲಿಸಿತ್ತು. ಇದೀಗ, ಈ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಮುಖ್ಯಮಂತ್ರಿ ಟಿಪ್ಪಣಿ ಮೇಲೆ ಸರ್ಕಾರದಿಂದ ಆದೇಶ ಬಂದಿದೆ. ಆ ನಿರ್ದೇಶನದಂತೆ ಆಯೋಗ ಕ್ರಮ ತೆಗೆದುಕೊಳ್ಳಲಿದೆ.
*ಪಂಚಮಸಾಲಿ ಸಮುದಾಯದ ಪ್ರಮುಖರಿಂದ ಮಾಹಿತಿ, ದಾಖಲೆಗಳನ್ನು ಆಯೋಗ ಸಂಗ್ರಹಿಸಿದೆಯೇ?
ಪಂಚಮಸಾಲಿ ಸಮುದಾಯದ ಬಗ್ಗೆ ಅಧ್ಯಯನ ಮಾಡುವಂತೆ ಸರ್ಕಾರದ ಆದೇಶ ಬರುವ ಮೊದಲೇ ಆ ಸಮುದಾಯದಬಸವಜಯ ಮೃತ್ಯುಂಜಯ ಸ್ವಾಮೀಜಿ, ತಮ್ಮ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಕೋರಿಕೆ ಸಲ್ಲಿಸಿದ್ದರು. ಹೀಗಾಗಿ, ಸಾರ್ವಜನಿಕ ವಿಚಾರಣೆಗೆ ಬರುವಂತೆ ಫೆ. 12ರಂದೇ ಸ್ವಾಮೀಜಿಯವರನ್ನು ಆಹ್ವಾನಿಸಿದ್ದೆವು. ಆದರೆ, ಅವರು ಬೇಡಿಕೆ ಮುಂದಿಟ್ಟು ಪಾದಯಾತ್ರೆಯಲ್ಲಿ ಇದ್ದುದರಿಂದ ವಿಚಾರಣೆಗೆ ಬಂದಿಲ್ಲ. ಹೀಗಾಗಿ, ಶೀಘ್ರದಲ್ಲಿಯೇ ಮತ್ತೊಂದು ದಿನ ನಿಗದಿಪಡಿಸಿ ಅವರ ಅಹವಾಲು ಆಲಿಸುತ್ತೇವೆ. ಬಳಿಕ ಅಧ್ಯಯನ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ.
*ಪಂಚಮಸಾಲಿಗಳ ಬೆನ್ನಲ್ಲೇ ಒಕ್ಕಲಿಗ ಸಮುದಾಯ ಕೂಡಾ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದೆ. ಜೊತೆಗೆ, 110 ಉಪ ಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸುವಂತೆ ಒತ್ತಾಯಿಸುತ್ತಿದೆಯಲ್ಲ?
ಹೌದು, ಒಕ್ಕಲಿಗ ಸಮುದಾಯ ಕೂಡಾ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ಬೇಡಿಕೆ ಮಂದಿಟ್ಟಿದೆ. ಹೆಚ್ಚಿಸುವ ಬಗ್ಗೆ ಸರ್ಕಾರ ತೀರ್ಮಾನಿಸಬೇಕು. ಆ ಸಮುದಾಯದ 115 ಉಪ ಪಂಗಡಗಳ ಪೈಕಿ ಐದು ಈಗಾಗಲೇ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿವೆ. ಉಳಿದ, ಎಲ್ಲ ಉಪ ಪಂಗಡಗಳನ್ನೂ ಸೇರಿಸಬೇಕು ಎನ್ನುವುದು ಬೇಡಿಕೆ. ಈ ವಿಷಯದಲ್ಲಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು.
*ವೀರಶೈವ ಲಿಂಗಾಯತ ಸಮುದಾಯದ ಬಗ್ಗೆಯೂ ಅಧ್ಯಯನ ನಡೆಸುವಂತೆ ಸರ್ಕಾರದಿಂದ ಆಯೋಗಕ್ಕೆ ಸೂಚನೆ ಬಂದಿದೆಯಂತೆ, ಹೌದೇ?
ಇಲ್ಲ. ಅಧ್ಯಯನ ನಡೆಸುವಂತೆ ಸರ್ಕಾರದಿಂದ ಈ ಕ್ಷಣದವರೆಗೂ ಯಾವುದೇ ಆದೇಶ ಬಂದಿಲ್ಲ. ಆದರೆ, ಆ ಸಮುದಾಯದವರೂ ಮನವಿ ಸಲ್ಲಿಸಿದ್ದಾರೆ. ಅವರನ್ನೂ ಸಾರ್ವಜನಿಕ ವಿಚಾರಣೆಗೆ ಆಹ್ವಾನಿಸುತ್ತೇವೆ.
*ಮೀಸಲಾತಿ ಪ್ರಮಾಣ ಶೇ 50 ಮೀರಬಾರದೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಮೀಸಲಾತಿ ಹೆಚ್ಚಿಸುವಂತೆ ಬೇಡಿಕೆ ಮುಂದಿಟ್ಟಿರುವ ಸಮುದಾಯಗಳ ಬೇಡಿಕೆಗೆ ಪರಿಹಾರ ಹೇಗೆ?
ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ಮಾಡಿ ಯಾರಿಗೆ ಮೀಸಲಾತಿ ಕೊಡಬೇಕು, ಯಾರಿಗೆ ಕೊಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವುದಷ್ಟೆ ನಮ್ಮ ಕೆಲಸ. ಎಷ್ಟು ಪ್ರಮಾಣದಲ್ಲಿ ಕೊಡಬೇಕು ಎಂದು ಸರ್ಕಾರ ತೀರ್ಮಾನಿಸುತ್ತದೆ. ಇದೀಗ ಕೆಲವು ಸಮುದಾಯಗಳು ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ. ಮೀಸಲಾತಿ ಪ್ರಮಾಣದ ಹೆಚ್ಚಳಕ್ಕೆ ಇಟ್ಟಿರುವ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲು ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತೀರ್ಮಾನಿಸಿದೆ.
*ಮೀಸಲಾತಿ ವ್ಯಾಪ್ತಿಯ ಒಳಗೆ ಬರಲು ಏನು ಮಾಡಬೇಕು?
ಯಾವುದೇ ಸಮುದಾಯ ಆಯೋಗಕ್ಕೆ ಬಂದು ಅಹವಾಲು ಸಲ್ಲಿಸಿದರೆ, ಆ ಬಗ್ಗೆ ನಮ್ಮ ಸಭೆಯಲ್ಲಿ ಪರಿಶೀಲಿಸುತ್ತೇವೆ. ಬಳಿಕ, ಸಾರ್ವಜನಿಕ ವಿಚಾರಣೆಗೆ ದಿನ ನಿಗದಿಪಡಿಸಿ, ಸೂಕ್ತ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕೊಡುತ್ತೇವೆ. ಮೀಸಲಾತಿ ಬೇಡಿಕೆ ವಿರೋಧಿಸುವವರ ಅಹವಾಲನ್ನೂ ಆಲಿಸುತ್ತೇವೆ. ಅದಕ್ಕೂ ದಾಖಲೆ ಪಡೆಯುತ್ತೇವೆ. ಆ ನಂತರ ಅಧ್ಯಯನ ಕೈಗೊಳ್ಳುವ ಬಗ್ಗೆ ತೀರ್ಮಾನಕ್ಕೆ ಬರುತ್ತೇವೆ.
*ಮೀಸಲಾತಿ ನಿರ್ಣಯಿಸುವಲ್ಲಿ ಆಯೋಗದ ಪಾತ್ರವೇನು?
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಆಧಾರದಲ್ಲಿ ಸಮುದಾಯ ಮೀಸಲಾತಿಗೆ ಅರ್ಹವೇ, ಮೀಸಲಾತಿ ಬೇಡುವ ಸಮುದಾಯ ರಾಜ್ಯದ ಯಾವೆಲ್ಲ ಭಾಗದಲ್ಲಿದೆ, ಯಾವ ಸ್ಥಾನಮಾನ ಹೊಂದಿದೆ ಎನ್ನುವುದು ಮುಖ್ಯವಾಗುತ್ತದೆ. ಆ ಕುರಿತು ಸಮಗ್ರ ವರದಿಯನ್ನು ಸಂಗ್ರಹಿಸಿ, ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಕೊಡುತ್ತೇವೆ. ಮೀಸಲಾತಿ ಬಗ್ಗೆ ಶಿಫಾರಸು ಮಾಡುತ್ತೇವೆ. ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು.
*ಈಗಾಗಲೇ ರಾಜ್ಯದಲ್ಲಿ ನಡೆದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ನಿಮ್ಮ ಬಳಿಯೇ ಇದೆಯಲ್ಲವೇ?
ಆಯೋಗದ ಹಿಂದಿನ ಅವಧಿಯಲ್ಲಿ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ನಮ್ಮಲ್ಲಿದೆ ನಿಜ. ಆದರೆ, ಆ ವರದಿಯ ವಿಚಾರ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.
*ಹಾಗಿದ್ದರೆ, ಮೀಸಲಾತಿಗಾಗಿ ಬೇಡಿಕೆ ಮುಂದಿಟ್ಟ ಎಲ್ಲ ಸಣ್ಣಪುಟ್ಟ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನವನ್ನು ಆಯೋಗ ಕೈಗೊಳ್ಳುವುದೇ?
ಯಾರು, ಯಾರು ಬೇಡಿಕೆ ಇಡುತ್ತಾರೊ ಅವರಿಂದ ಮೊದಲು ಸಾರ್ವಜನಿಕ ಅಹವಾಲು ಸ್ವೀಕರಿಸಲಾಗುತ್ತದೆ. ಪೂರಕ ದಾಖಲೆಗಳನ್ನೂ ಪಡೆಯಲಾಗುತ್ತದೆ. ಬಳಿಕ, ಅಗತ್ಯಬಿದ್ದರೆ ಮಾತ್ರ ಕುಲಶಾಸ್ತ್ರೀಯ ಅಧ್ಯಯನಕ್ಕೆ ತೀರ್ಮಾನಿಸಲಾಗುತ್ತದೆ. ಈಗಾಗಲೇ ಕೆಲವು ಸಣ್ಣಪುಟ್ಟ ಜಾತಿಗಳೂ ಮೀಸಲಾತಿ ಬೇಡಿಕೆ ಇಟ್ಟಿವೆ.
*ಕುಲಶಾಸ್ತ್ರೀಯ ಅಧ್ಯಯನ ಬಗ್ಗೆ ರಾಜ್ಯ ಸರ್ಕಾರದ ಅನುಮೋದನೆ ಅಗತ್ಯ ಇಲ್ಲ. ಆಯೋಗವೇ ಸ್ವಯಂ ನಿರ್ಧಾರ ತೆಗೆದುಕೊಳ್ಳಬಹುದೇ?
ಖಂಡಿತ. ಆಯೋಗ ಸ್ವಾಯತ್ತ ಸಂಸ್ಥೆ. ಯಾವುದೇ ತೀರ್ಮಾನಗಳನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳಲು ಅವಕಾಶವಿದೆ. ಜೊತೆಗೆ, ಸರ್ಕಾರದ ಸೂಚನೆಯಂತೆಯೂ ಅಧ್ಯಯನ ಕೈಗೊಂಡು ಸರ್ಕಾರಕ್ಕೆ ವರದಿ ನೀಡುತ್ತೇವೆ.
*ಹಿಂದಿನ ಆಯೋಗ ನಡೆಸಿದ, ಭಾರಿಕುತೂಹಲ ಸೃಷ್ಟಿಸಿರುವ ಜಾತಿಗಣತಿ ಎಂದೇ ಬಿಂಬಿತವಾದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕಥೆ ಏನು?
ಅದಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕಿದೆ. ‘ಜಾತಿ ಗಣತಿಯನ್ನು ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ರೀತಿ ಸಮೀಕ್ಷೆಯನ್ನೇ ಮಾಡಬಾರದು’ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ನಾವು ಪ್ರತಿವಾದಿಗಳು. ನಾವು ಮಾಡಿರುವುದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯೇ ಹೊರತು, ಜಾತಿ ಗಣತಿ ಅಲ್ಲ ಎಂದು ವಾದ ಮಂಡಿಸಿದ್ದೇವೆ. ಆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮತ್ತೆ ಮಾರ್ಚ್ 17ಕ್ಕೆ ವಿಚಾರಣೆ ನಡೆಯಲಿದೆ. ಹೈಕೋರ್ಟ್ ತೀರ್ಪು ನೋಡಿಕೊಂಡು ಕಾನೂನಿನ ಪ್ರಕಾರ ಮುಂದಿನ ನಡೆ ತೀರ್ಮಾನಿಸುತ್ತೇವೆ.
*ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೊದಲು ಅದನ್ನು ಪರಾಮರ್ಶಿಸಲು ನಿಮ್ಮ ಅಧ್ಯಕ್ಷತೆಯ ಆಯೋಗಕ್ಕೆ ಅವಕಾಶ ಇದೆಯೇ?
ಹಿಂದಿನ ಆಯೋಗ, ತನ್ನ ಅವಧಿ ಮುಗಿದ ಬಳಿಕ ಆಯೋಗದ ಸದಸ್ಯ ಕಾರ್ಯದರ್ಶಿಗೆ ವರದಿಯನ್ನು ಹಸ್ತಾಂತರಿಸಿದೆ. ನಾವಿನ್ನೂ ಆ ವರದಿಯನ್ನು ತೆರೆದಿಲ್ಲ. ಹೈಕೋರ್ಟ್ ತೀರ್ಪು ಬಂದ ನಂತರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ.
*ಈ ವಿಷಯದಲ್ಲಿ ನಿಮ್ಮ ಅಂದರೆ, ಆಯೋಗದ ನಿಲುವು ಏನು?
ಹೈಕೋರ್ಟ್ ಏನು ತೀರ್ಪು ನೀಡುತ್ತದೆ ನೋಡೋಣ. ನಂತರ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಆದರೆ, ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬೇಕಿದೆ.
*ಕುಂಚಿಟಿಗ ಸಮುದಾಯವನ್ನು ಕುಲಶಾಸ್ತ್ರೀಯ ಅಧ್ಯಯನದ ಶಿಫಾರಸಿನಂತೆ ಕೇಂದ್ರದಒಬಿಸಿ ಪಟ್ಟಿಗೆ ಸೇರಿಸಬೇಕೆಂದು ಸರ್ಕಾರ ಮಾಡಿದ ಶಿಫಾರಸು ವಾಪಸು ಬಂದಿದೆಯಂತೆ. ಹೌದೇ?
ನಿಜ. ಸರ್ಕಾರ ನೇರವಾಗಿ ಅದನ್ನು ಕೇಂದ್ರಕ್ಕೆ ಕಳುಹಿಸಿತ್ತು. ರಾಜ್ಯ ಸರ್ಕಾರವು ರಾಜ್ಯ ಹಿಂದುಳಿದ ಆಯೋಗದ ಮೂಲಕ ಕೇಂದ್ರದ ಹಿಂದುಳಿದ ವರ್ಗಗಳ ಆಯೋಗಕ್ಕೆ ಕುಲಶಾಸ್ತ್ರೀಯ ಅಧ್ಯಯನ ವರದಿಯಲ್ಲಿನ ಶಿಫಾರಸುಗಳ ಸಮೇತ ಕಳುಹಿಸಬೇಕಿತ್ತು.
*ಅಧಿಕಾರ ಸ್ವೀಕರಿಸಿದ ಮೂರು ತಿಂಗಳಲ್ಲಿ ಆಯೋಗ ಏನೇನು ಮಾಡಿದೆ?
ನಿರಂತರ ಸಭೆಗಳನ್ನು ಮಾಡುತ್ತಿದ್ದೇವೆ. ಜಾತಿಗಳಿಗೆ ಸಂಬಂಧಿಸಿದ 44 ಪ್ರಕರಣಗಳನ್ನು ಫೆ. 12, 13, 14ರಂದು ನಡೆಸಿದ ಸಾರ್ವಜನಿಕ ವಿಚಾರಣೆಗಳಲ್ಲಿ ಇತ್ಯರ್ಥ ಪಡಿಸಿದ್ದೇವೆ. ಹಲವು ಸಾರ್ವಜನಿಕ ವಿಚಾರಣೆಗಳನ್ನು ನಡೆಸಿದ್ದೇವೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ, ಮೊರಾರ್ಜಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಹಿಂದುಳಿದ ಸಮುದಾಯದ ಯೋಜನೆಗಳು, ಸೌಲಭ್ಯಗಳು ಸಮರ್ಪಕವಾಗಿ ಅನುಷ್ಠಾನವಾಗಿದೆಯೇ ಎಂದು ಪರಿಶೀಲಿಸುವುದೂ ನಮ್ಮ ಕರ್ತವ್ಯ.
*ಕೇಂದ್ರದ ಮೀಸಲು ಪಟ್ಟಿಯ ಹಿಂದುಳಿದ ವರ್ಗಗಳಲ್ಲಿರುವ (ಒಬಿಸಿ) ಎಲ್ಲ ಜಾತಿ, ಉಪಜಾತಿಗಳನ್ನು ವೈಜ್ಞಾನಿಕವಾಗಿ ವರ್ಗೀಕರಿಸಲು ಕೇಂದ್ರ ಸರ್ಕಾರ ರಚಿಸಿದ ನ್ಯಾ.ಜಿ. ರೋಹಿಣಿ ಆಯೋಗ ಏನಾದರೂ ಸ್ಪಷ್ಟೀಕರಣ ಕೇಳಿದೆಯೇ?
ಕೇಂದ್ರ ಒಬಿಸಿ ಮತ್ತು ರಾಜ್ಯದಲ್ಲಿರುವಒಬಿಸಿ ಪಟ್ಟಿಯಲ್ಲಿರುವ ಜಾತಿಗಳನ್ನು ಪರಿಶೀಲಿಸಿರುವ ನ್ಯಾ. ರೋಹಿಣಿ ಆಯೋಗ 156 ಪ್ರಶ್ನೆ ಮತ್ತು ಸ್ಪಷ್ಟನೆಗಳನ್ನು ಕೇಳಿದೆ. ಕೆಲವು ಜಾತಿಗಳು ಬೇರೆ ಬೇರೆ ಕೆಟಗರಿಯಲ್ಲಿವೆ. ಇನ್ನೂ ಕೆಲವು ಜಾತಿಗಳ ಪದಗಳು ವ್ಯತ್ಯಾಸವಿದೆ. ಹೆಸರುಗಳು ಹೊಂದಾಣಿಕೆ ಆಗುತ್ತಿಲ್ಲ, ಅವುಗಳ ಬಗ್ಗೆ ವಿವರಣೆ ಕೇಳಿದೆ. ಈಗಾಗಲೇ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಶೀಘ್ರದಲ್ಲಿಯೇ ಕೇಂದ್ರಕ್ಕೆ ವಿವರಣೆ ಕೊಡುತ್ತೇವೆ.
*ಒಟ್ಟಿನಲ್ಲಿ ಸಾಲು ಸಾಲು ಸವಾಲುಗಳ ನಡುವೆ ಇದ್ದೀರಿ ಎಂದಾಯಿತು...
ದೊಡ್ಡ ಸವಾಲುಗಳಿವೆ ನಿಜ. ಸವಾಲುಗಳು ಇದ್ದಾಗಲೇ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ನಂಬಿಕೆ. ಯಾವುದೇ ಸಮಸ್ಯೆಗೂ ಪರಿಹಾರ ಇದೆ. ಆದರೆ, ಅದಕ್ಕೆ ಸರಿಯಾದ ಪರಿಹಾರ ಕಂಡುಹಿಡಿಯಬೇಕಾಗುತ್ತದೆ ಅಷ್ಟೆ, ಎಲ್ಲ ಸವಾಲುಗಳನ್ನು ಮೀರಿ ನಿಲ್ಲುವ ವಿಶ್ವಾಸವಿದೆ.
*ರಾಜ್ಯದಲ್ಲಿರುವ ಕೆಲವು ಜಾತಿಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಯೂ ಇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾತಿ ಪಟ್ಟಿಯಲ್ಲಿಯೂ ಇವೆ. ಎರಡೂ ಪಟ್ಟಿಯಲ್ಲಿ ಇರುವುದರಿಂದ ಜಾತಿಪ್ರಮಾಣ ಪತ್ರ ನೀಡಲು ಗೊಂದಲ ಉಂಟಾಗುತ್ತಿರುವ ವಿಷಯ ಆಯೋಗದ ಗಮನಕ್ಕೆ ಬಂದಿದೆಯೇ?
ಒಳ್ಳೆಯ ಪ್ರಶ್ನೆ. ಹೌದು, ಇದು ತುಂಬ ಸೂಕ್ಷ್ಮ, ಅಷ್ಟೇ ಗಂಭೀರ ವಿಷಯ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 10 ಮತ್ತು ಪರಿಶಿಷ್ಟ ಪಂಗಡದಲ್ಲಿರುವ 7 ಜಾತಿಗಳು ರಾಜ್ಯ ಹಿಂದುಳಿದ ವರ್ಗಗಳ ಜಾತಿ (ಒಬಿಸಿ) ಪಟ್ಟಿಯಲ್ಲೂ ಇವೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಸ್ಪಷ್ಟನೆ ಬೇಕಾಗಿದೆ. ಹೀಗಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಈ ಬಗ್ಗೆ ಎಸ್‌ಸಿ, ಎಸ್‌ಟಿ ಆಯೋಗಕ್ಕೂ ಮಾಹಿತಿ ನೀಡಿದ್ದೇವೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಿಗೂ ಪತ್ರ ಬರೆದಿದ್ದೇವೆ. ಎರಡೂ ಕಡೆ ಇರುವುದರಿಂದ ಜಾತಿ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಗೊಂದಲ ಉಂಟಾಗುತ್ತಿದೆ. ಯಾವ ಪಟ್ಟಿಯಿಂದ ತೆಗೆಯಬೇಕು ಎಂದು ಸರ್ಕಾರ ತೀರ್ಮಾನಿಸಬೇಕು. ಎಸ್.ಸಿ, ಎಸ್.ಟಿ ಪಟ್ಟಿಗೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಈ ಜಾತಿಗಳು ಕೇಂದ್ರದ ಪಟ್ಟಿಯಲ್ಲಿ ಸೇರಿವೆ. ಹೀಗಾಗಿ, ಇಲ್ಲಿ ಹಿಂದುಳಿದ ಪಟ್ಟಿಯಲ್ಲಿಯೂ ಮುಂದುವರಿಯಬೇಕೇ ಎಂಬ ಬಗ್ಗೆ ತೀರ್ಮಾನ ಆಗಬೇಕಿದೆ. ಕೆಲವು ಎಸ್‌ಸಿ, ಎಸ್‌ಟಿ ಜಾತಿಗಳು ಕೆಲವು ಜಿಲ್ಲೆಗಳಿಗೆ ಸೀಮಿತವಾಗಿದೆ. ನಾವು ಸಂಪೂರ್ಣ ತೆಗದುಹಾಕಿದರೆ ಮತ್ತೆ ಗೊಂದಲ ಉಂಟಾಗಬಹುದು. ಹೀಗಾಗಿ, ಈ ವಿಷಯದಲ್ಲಿ ಸರ್ಕಾರದ ಮಟ್ಟದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.