ಬೆಂಗಳೂರು: ದೀಪದ ಕೆಳಗಿನ ಕತ್ತಲಿಗೂ, ಕರ್ನಾಟಕದ ಕ್ರೀಡಾಕ್ಷೇತ್ರಕ್ಕೂ ಸಾಮ್ಯವಿದೆ. ಉನ್ನತದರ್ಜೆಯ ಸೌಲಭ್ಯಗಳ ವಿಷಯದಲ್ಲಿ ಇಲ್ಲಿ ಬಹಳಷ್ಟಿದೆ. ಆದರೆ, ಒಲಿಂಪಿಕ್ಸ್‌ನಂತಹ ಕೂಟಕ್ಕೆ ರಾಜ್ಯದಿಂದ ಸ್ಪರ್ಧಿಸುತ್ತಿರುವವರ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲ.
ಇತ್ತೀಚೆಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳಿಗೆ ಒಲಿಂಪಿಕ್ ಪೂರ್ವಸಿದ್ಧತಾ ತರಬೇತಿ ದೊರಕಿದ್ದು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಶ್ರೇಷ್ಠತಾ ಕೇಂದ್ರದಲ್ಲಿ. ಅಷ್ಟೇ ಅಲ್ಲ; ಕೊರೊನಾ ಬಿಕ್ಕಟ್ಟಿನ ಸಂದರ್ಭದ ಬಹುತೇಕ ಸಮಯ ಆಟಗಾರರು ಇಲ್ಲಿಯೇ ಸುರಕ್ಷಿತವಾಗಿದ್ದರು.
ಚಿನ್ನದ ಹುಡುಗ ನೀರಜ್ ಚೋಪ್ರಾ ಸಾಧನೆಯಲ್ಲಿ ಬಳ್ಳಾರಿಯ ಜೆಎಸ್‌ಡಬ್ಲ್ಯು ಇನ್‌ಸ್ಪೈರ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಅವರು ಉನ್ನತ ತರಬೇತಿ ಪಡೆದಿದ್ದಾರೆ. ಇದೇ ಮೊದಲ ಸಲ ‘ಎ’ ಅರ್ಹತೆ ಪಡೆದು ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದ ಕನ್ನಡಿಗ ಶ್ರೀಹರಿ ನಟರಾಜ್ ಅವರೂ ಇಲ್ಲಿಯ ಈಜುಕೊಳಗಳಿಂದಲೇ ಪ್ರವರ್ಧಮಾನಕ್ಕೆ ಬಂದವರು. ಇಲ್ಲಿಯ ಎಂಬಸಿ ಸಂಸ್ಥೆಯ ಪ್ರಾಯೋಜಕತ್ವದಿಂದಾಗಿ ಫವಾದ್ ಮಿರ್ಜಾ ಈಕ್ವೆಸ್ಟ್ರಿಯನ್‌ನಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿದೆ. ಗಾಲ್ಫ್ ತಾರೆ ಅದಿತಿ ಅಶೋಕ್ ಅವರ ಪ್ರತಿಭೆಗೆ ಪ್ರೋತ್ಸಾಹ ದೊರೆತಿದ್ದು ಕೂಡ ಇಲ್ಲಿಯ ಗಾಲ್ಫ್ ಕೋರ್ಸ್‌ಗಳಲ್ಲಿ.
ಆದರೂ ರಾಜ್ಯದಿಂದ ಏಕೆ ಕ್ರೀಡಾಪಟುಗಳು ಹೆಚ್ಚುತ್ತಿಲ್ಲ? ಬೆಂಗಳೂರೆಂಬ ಸಾಗರಕ್ಕೆ ವಿವಿಧೆಡೆಯಿಂದ ಹರಿದುಬಂದು ಸೇರಬೇಕಾದ ನದಿಗಳಿಗೆ ಸರಿಯಾದ ಮಾರ್ಗ ಕಲ್ಪಿಸುವ ಕೆಲಸವಾಗಿಲ್ಲದಿರುವುದೇ ಇದಕ್ಕೆ ಕಾರಣ. ವಿಜಯಪುರದಲ್ಲಿ ಸೈಕ್ಲಿಂಗ್ ವೆಲೊಡ್ರೋಂ ನಿರ್ಮಾಣ ಕಾಮಗಾರಿ ಆರಂಭವಾಗಿ ದಶಕವೇ ಕಳೆದುಹೋಗಿದೆ. ಹಾಕಿ ಕ್ರೀಡೆಯ ಪ್ರತಿಭೆಗಳಿರುವ ಹುಬ್ಬಳ್ಳಿಯಲ್ಲಿ ಇನ್ನೂ ಆಸ್ಟ್ರೋ ಟರ್ಫ್ ಅಂಕಣದ ಕನಸು ಈಡೇರಿಲ್ಲ. ರಾಜಧಾನಿಯ ಕ್ರೀಡಾಂಗಣಗಳ ಅವ್ಯವಸ್ಥೆಗಳು ಮುಂದುವರಿದಿವೆ. ಬೇರುಮಟ್ಟದ ಸಮಸ್ಯೆಗಳನ್ನು ಪರಿಹರಿಸಿದರೆ ಮಾತ್ರ ದೊಡ್ಡ ಕನಸು ಕಾಣಲು ಸಾಧ್ಯವಲ್ಲವೇ?
ಈ ಬಗ್ಗೆ ರಾಜ್ಯ ಸರ್ಕಾರ ರೂಪಿಸಿರುವ ಯೋಜನೆಯ ಕುರಿತು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
*ಒಲಿಂಪಿಕ್ಸ್‌ಗೆ 75 ಅಥ್ಲೀಟ್‌ಗಳನ್ನು ಸಿದ್ಧಗೊಳಿಸುವ ಯೋಜನೆ ಏನು?
ಕರ್ನಾಟಕದಿಂದ ಹೆಚ್ಚು ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಬೇಕು ಎಂಬ ಗುರಿ ನಮ್ಮದು. ಅದಕ್ಕಾಗಿ ಕರ್ನಾಟಕದ 75 ಪ್ರತಿಭಾವಂತರನ್ನು ದತ್ತು ಪಡೆದು ತರಬೇತಿ ಕೊಡುತ್ತೇವೆ. ಅದರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರನ್ನು ಕಳುಹಿಸಿಕೊಡುತ್ತೇವೆ. ಕ್ರೀಡಾ ಕ್ಷೇತ್ರದ ಅನುಭವಿಗಳು, ತಜ್ಞರನ್ನೊಳಗೊಂಡ ಆಯ್ಕೆ ಸಮಿತಿ ರಚಿಸುತ್ತಿದ್ದೇವೆ. ಅವರೇ ಕ್ರೀಡಾಪಟುಗಳನ್ನು ಆಯ್ಕೆ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಖೇಲೊ ಇಂಡಿಯಾ ಬೆಂಬಲವೂ ಸಿಗುತ್ತಿದೆ. ಮುಂದಿನ ವರ್ಷ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿಯೇ ಖೇಲೊ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ನಡೆಯಲಿದೆ. ಸುಮಾರು ಆರು ಸಾವಿರ ಅಥ್ಲೀಟ್‌ಗಳು ಭಾಗವಹಿಸುತ್ತಾರೆ. ಅದಕ್ಕಾಗಿ ಇಲ್ಲಿಯ ವಿದ್ಯಾರ್ಥಿಗಳೂ ಸಿದ್ಧರಾಗುತ್ತಾರೆ.
*ಮೂಲಸೌಲಭ್ಯಗಳ ಅಭಿವೃದ್ಧಿಗೆ ಏನು ಯೋಜನೆ ಇದೆ?
ನಮ್ಮ ರಾಜ್ಯದ 31 ಜಿಲ್ಲೆಗಳಲ್ಲಿಯೂ ಕ್ರೀಡಾ ಸೌಲಭ್ಯಗಳು ಈಗಾಗಲೇ ಇವೆ. ಅಲ್ಲಿರುವ ಕೊರತೆಗಳನ್ನು ನಿವಾರಿಸಿ ಅಭಿವೃದ್ಧಿಪಡಿಸಲಾಗುವುದು. ಕ್ರೀಡಾಂಗಣಗಳು, ಈಜುಕೊಳಗಳು, ವಸತಿನಿಲಯಗಳ ನಿರ್ವಹಣೆಯನ್ನು ಪಿಪಿಪಿ (ಸಾರ್ವಜನಿಕ, ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಮಾಡಲಾಗುವುದು. ಜಿಲ್ಲಾಮಟ್ಟದಲ್ಲಿ ಸೌಲಭ್ಯಗಳಿದ್ದರೆ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ತುಮಕೂರಿನಲ್ಲಿಯೂ ಉನ್ನತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
*ಈ ಯೋಜನೆಗೆ ಸಂಪನ್ಮೂಲ ಕ್ರೋಡೀಕರಣ ಹೇಗೆ?
ಬಹುರಾಷ್ಟ್ರೀಯ ಕಂಪನಿಗಳಲ್ಲಿರುವ ಸಿಎಸ್‌ಆರ್ ಫಂಡ್ (ಸಾಮಾಜಿಕ ಹೊಣೆಗಾರಿಕೆ ನಿಧಿ) ಪಡೆಯುವತ್ತಲೂ ಪ್ರಯತ್ನಿಸುತ್ತಿದ್ದೇವೆ. 100 ಕಂಪೆನಿಗಳಿಗೆ ಪತ್ರ ಬರೆಯಲಾಗಿದೆ. ಅದರಲ್ಲಿ ಜಿಂದಾಲ್ ಸಮೂಹ ಸೇರಿದಂತೆ 30–40 ಕಂಪೆನಿಗಳು ಆಸಕ್ತಿ ತೋರಿವೆ. ಅವರ ಪಾಲ್ಗೊಳ್ಳುವಿಕೆಯಿಂದ ಕ್ರೀಡೆಗೆ ಒಳ್ಳೆಯದಾಗುತ್ತೆ. ಅವರಿಗೂ ಖ್ಯಾತಿ ಲಭಿಸುತ್ತದೆ.
*ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಆಟೋಟಗಳ ಅರಿವಿಲ್ಲದ ಅಧಿಕಾರಿಗಳಿದ್ದಾರೆ. ಅದರಿಂದ ಹಿನ್ನಡೆಯಾಗುತ್ತಿದೆ ಎಂಬ ದೂರು ಇದೆಯಲ್ಲ?
ಅದಕ್ಕಾಗಿಯೇ ಇಲಾಖೆಯೊಳಗಿನ ತಂಡವನ್ನು ಸಬಲಗೊಳಿಸುತ್ತಿದ್ದೇವೆ. ಕಮಿಷನರ್ ಶಾಲಿನಿ ರಜನೀಶ್ ನೇತೃತ್ವದಲ್ಲಿ ಸುಧಾರಣೆಗಳು ನಡೆಯುತ್ತಿವೆ. ಇನ್ನು ಮುಂದೆ ನೇಮಕವಾಗುವ ಶೇ 50ರಷ್ಟು ಅಧಿಕಾರಿಗಳಿಗೆ ಕ್ರೀಡಾ ಸಾಧನೆಯ ಹಿನ್ನೆಲೆ ಇರುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಈ ಪ್ರಸ್ತಾವವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸಲಾಗಿದೆ. ಬೇರೆ ಬೇರೆ ಇಲಾಖೆಗಳಲ್ಲಿಯೂ ಕ್ರೀಡಾಪಟುಗಳಿಗೆ ಶೇ 2ರಷ್ಟು ಮೀಸಲಾತಿ ನೀಡಲೂ ನಿರ್ಧರಿಸಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಇದು ಜಾರಿಯಾಗಿದೆ. ಇದು ಬಾಯಿಮಾತಷ್ಟೇ ಅಲ್ಲ. ಸರ್ಕಾರಿ ನಿಯಮಾವಳಿಯನ್ನೇ ರೂಪಿಸಲಾಗುತ್ತಿದೆ. ಯಾವುದೇ ಸರ್ಕಾರ ಬಂದರೂ ಕ್ರೀಡಾಭಿವೃದ್ಧಿ ನಿರಂತರವಾಗಿರುವಂತಹ ಯೋಜನೆ ಇದು.
*ಈ ಯೋಜನೆಯಲ್ಲಿ ಕ್ರೀಡಾ ಸಂಘಟನೆಗಳ ಪಾತ್ರ ಏನು?
ಬಹಳ ಮುಖ್ಯವಾದ ಪಾತ್ರವಿದೆ. ಇದೀಗ 100 ಮಕ್ಕಳನ್ನು ವಿವಿಧ ಕ್ರೀಡೆಗಳಿಗೆ ಆಯ್ಕೆ ಮಾಡುತ್ತಿದ್ದೇವೆ. ಅದಕ್ಕಾಗಿ ಕ್ರೀಡಾ ಸಂಸ್ಥೆಗಳ ನೆರವು ಪಡೆಯುತ್ತಿದ್ದೇವೆ. ಅವರಲ್ಲಿರುವ ಅನುಭವಿಗಳು ಮತ್ತು ಪರಿಣತರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಬೇಕಾದ ನೆರವನ್ನೂ ನಾವು ನೀಡುತ್ತೇವೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.