ADVERTISEMENT

ನಟರಾಜ್‌ ಹುಳಿಯಾರ್‌ ಅಂಕಣ| ಮಹಿಳಾ ಮೀಸಲಾತಿ: ಒಣಚರ್ಚೆಯ ಬೆಳ್ಳಿಹಬ್ಬ!

ಪಕ್ಷಭೇದ ಮೀರಿ ನಮ್ಮ ನಾಯಕಿಯರು ದನಿಯೆತ್ತಿದರೆ ಮಾತ್ರ ಈ ಗುರಿ ದಕ್ಕೀತು

ನಟರಾಜ ಹುಳಿಯಾರ್
Published 16 ಸೆಪ್ಟೆಂಬರ್ 2021, 19:32 IST
Last Updated 16 ಸೆಪ್ಟೆಂಬರ್ 2021, 19:32 IST
   

ಮೊನ್ನೆ ಸೆಪ್ಟೆಂಬರ್ 12ರ ಪ್ರಜಾವಾಣಿಯ ‘ಇಪ್ಪತ್ತೈದು ವರ್ಷಗಳ ಹಿಂದೆ’ ವಿಭಾಗದಲ್ಲಿ ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡರು ಲೋಕಸಭೆಯಲ್ಲಿ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆಯ ಸುದ್ದಿ ಪ್ರಕಟವಾಯಿತು. ಅದನ್ನು ಓದಿದ ಪತ್ರಕರ್ತ ಮಿತ್ರರೊಬ್ಬರು, ಒಂದು ಮಹತ್ವದ ಮಸೂದೆಯ ಸುತ್ತ ಇಪ್ಪತ್ತೈದು ವರ್ಷ ಸುಮ್ಮನೆ ತೌಡು ಕುಟ್ಟಿದ ಇಂಡಿಯಾದ ರಾಜಕಾರಣಿಗಳ ಬೂಟಾಟಿಕೆ ಕಂಡು ನಕ್ಕರು.

ನಟರಾಜ್‌ ಹುಳಿಯಾರ್‌

ಲೋಕಸಭೆಯಲ್ಲಿ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನಗಳನ್ನು ಮೀಸಲಿರಿಸಲು ಹೊರಟಿದ್ದ ಈ ಕ್ರಾಂತಿಕಾರಕ ಮಸೂದೆಯು ದೇಶದ ಬಹುತೇಕ ರಾಜಕೀಯ ಪಕ್ಷಗಳಲ್ಲಿ ತುಂಬಿರುವ ಪುರುಷ ರಾಜಕಾರಣಿಗಳ ಸ್ವಾರ್ಥ ಹಾಗೂ ಹುನ್ನಾರದ ಫಲವಾಗಿ ಇಷ್ಟು ವರ್ಷ ಮೂಲೆ ಸೇರಿದೆ ಎಂಬ ಬಗ್ಗೆ ಯಾರಿಗೂ ಅನುಮಾನವಿರಲಾರದು.

1993ರಲ್ಲಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನದ 73ನೇ ತಿದ್ದುಪಡಿ ಕಾಯ್ದೆ ಮೂಲಕ ದೇಶದ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ತಂದು ಮಹಿಳೆಯರ ರಾಜಕೀಯ ಸಬಲೀಕರಣದತ್ತ ಮಹತ್ವದ ಹೆಜ್ಜೆಯಿಟ್ಟಿತು. 74ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಮೂಲಕ ಮುನಿಸಿಪಾಲಿಟಿಗಳಲ್ಲೂ ಶೇಕಡ 33 ಮಹಿಳಾ ಮೀಸಲಾತಿ ತಂದು ಸಬಲೀಕರಣವನ್ನು ಗಟ್ಟಿಯಾಗಿಸಿತು. ನಂತರ ಕಾಂಗ್ರೆಸ್ ಬೆಂಬಲಿತ ಎಚ್.ಡಿ.ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರವು ಮಹಿಳಾ ರಾಜಕೀಯ ಮೀಸಲಾತಿಯ ಬಹುಮುಖ್ಯ ಘಟ್ಟವಾಗಿ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಒದಗಿಸುವ ಮಸೂದೆಯನ್ನು ಮಂಡಿಸಿತು. ಮಸೂದೆ ಕುರಿತು ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ ವರದಿ ಸಲ್ಲಿಸಿದಾಗ, ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಸೇರಿದ 80 ಲೋಕಸಭಾ ಸದಸ್ಯರು ‘ಈ ಮಸೂದೆ ಕಾಯ್ದೆಯಾಗಕೂಡದೆಂದು’ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದನ್ನು ಉಲ್ಲೇಖಿಸುತ್ತಾ ನಂಬೂದರಿಪಾಡ್, ‘ಕಮ್ಯುನಿಸ್ಟ್ ಪಾರ್ಟಿಗಳ ಸದಸ್ಯರು ಮಸೂದೆಗೆ ಸಂಪೂರ್ಣ ಪರವಾಗಿದ್ದರು’ ಎಂಬುದನ್ನು ಒತ್ತಿ ಹೇಳುತ್ತಾರೆ.

ADVERTISEMENT

ಪುರುಷ ರಾಜಕಾರಣಿಗಳ ಹುನ್ನಾರದ ಜೊತೆಗೇ ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಜನತಾದಳದಂಥ ಪಕ್ಷಗಳು ಈ ಮಸೂದೆಗೆ ಸೂಚಿಸಿದ ತಿದ್ದುಪಡಿ ಕೂಡ ಈ ಮಸೂದೆ ಜಾರಿಯಾಗದಿರಲು ಕಾರಣ ಎನ್ನುವುದು ನಿಜ. ಆದರೆ ಈ ತಿದ್ದುಪಡಿಗಳು ನ್ಯಾಯಬದ್ಧ ವಾಗಿವೆ. ಕಾರಣ, ಈ ಮಸೂದೆಯ ಮೂಲ ರೂಪದಲ್ಲಿ ಮಹಿಳಾ ಮೀಸಲಾತಿ ಜಾರಿಯಾದರೆ, ಶತಮಾನಗಳಿಂದ ಸವಲತ್ತುಗಳನ್ನು ಅನುಭವಿಸಿರುವ ಪ್ರಬಲ ಜಾತಿಗಳ ಮಹಿಳೆಯರೇ ಈ ಮೀಸಲಾತಿಯ ಫಲಾನುಭವಿಗಳಾಗುವ ಸಾಧ್ಯತೆ ಹೆಚ್ಚು; ಆದ್ದರಿಂದ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಆಧಾರದ ಮೇಲೆ ಮಹಿಳಾ ಮೀಸಲಾತಿಯನ್ನು ವಿಂಗಡಿಸಬೇಕೆಂಬ ಅವರ ಬೇಡಿಕೆ ನ್ಯಾಯಬದ್ಧವಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆ ಗಳಲ್ಲಿ ರೋಸ್ಟರ್ ಪ್ರಕಾರ ಮಹಿಳಾ ಮೀಸಲಾತಿ ತಂದ ಮೇಲೆ ಲೋಕಸಭೆ, ವಿಧಾನಸಭೆಯ ಸ್ಥಾನಗಳಿಗೆ ರೋಸ್ಟರ್ ತರದೇ ಇರಲು ಯಾವ ಸಮರ್ಥನೆಯೂ ಇಲ್ಲ. ಈ ಸತ್ಯವನ್ನು ಮರೆಮಾಚಲು, ಯಾವ ಸರ್ಕಾರ ಈ ಮಸೂದೆ ಮಂಡಿಸಿದರೂ, ಪುರುಷರ ಸ್ಥಾನಗಳನ್ನು ಉಳಿಸಿಕೊಳ್ಳುವ ನಿರ್ಲಜ್ಜ ಸ್ವಾರ್ಥದ ಉದ್ದೇಶದಿಂದ ಮಸೂದೆಯ ವಿರುದ್ಧ ಕೂಗುವ ತಂಡಗಳು ತಯಾರಾಗುತ್ತವೆ ಅಥವಾ ತಯಾರು ಮಾಡಲಾಗುತ್ತದೆ! ಬಹುತೇಕ ಎಲ್ಲ ಸರ್ಕಾರಗಳಲ್ಲೂ ಮಹಿಳಾ ಮೀಸಲಾತಿಯ ನಿರಂತರ ಮುಂದೂಡಿಕೆಯ ಕಪಟ ನಾಟಕದ ಸೂತ್ರಧಾರಿ– ಪಾತ್ರಧಾರಿಗಳಿ ದ್ದಾರೆ. ತಮ್ಮ ಹಿತಾಸಕ್ತಿಗಳಿಗೆ, ಅಜೆಂಡಾಗಳಿಗೆ ಬೇಕಾದ ಮಸೂದೆಗಳನ್ನು ರಾತ್ರೋರಾತ್ರಿ ಕಾಯ್ದೆಯಾಗಿಸಬಲ್ಲ ಈ ಸೂತ್ರಧಾರಿ- ಪಾತ್ರಧಾರಿಗಳು ಮಹಿಳಾ ಮೀಸಲಾತಿಗೆ ಮಾತ್ರ ಪಿಳ್ಳೆ ನೆವ ಒಡ್ಡುತ್ತಲೇ ಬಂದಿದ್ದಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ, ಭಾರತೀಯ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಪುರುಷ ದುರಹಂಕಾರ, ಅಧಿಕಾರದ ಅತಿ ಸ್ವಾರ್ಥ ಹಾಗೂ ಸಾಂಪ್ರದಾಯಿಕ ಸ್ತ್ರೀ ವಿರೋಧಿ ಧೋರಣೆಗಳು ಈ ಮಸೂದೆಯು ಕಡತಗಳಲ್ಲಿ ಕೊಳೆಯಲು ಮುಖ್ಯ ಕಾರಣ. ಈ ಕಟು ಸತ್ಯ ದೇಶದ ಮಹಿಳೆಯರಿಗೆ, ಅದರಲ್ಲೂ ಮಹಿಳಾ ರಾಜಕಾರಣಿ ಗಳಿಗೆ ಹಾಗೂ ಬಗೆಬಗೆಯ ಅಧಿಕಾರ ಕೇಂದ್ರಗಳಲ್ಲಿರುವ ಮಹಿಳೆಯರಿಗೆ ಸ್ಪಷ್ಟವಾಗಿ ಗೊತ್ತಿರಲಿ. ಹಾಗೂ ಹೀಗೂ ಇಷ್ಟಾದರೂ ಅಧಿಕಾರ ಪಡೆದಿರುವ ಇಂಥ ಮಹಿಳೆಯರು ಗಟ್ಟಿಯಾಗಿ ನಿಲ್ಲದಿದ್ದರೆ ಮಹಿಳಾ ರಾಜಕೀಯ ಮೀಸಲಾತಿ ಎಂದೆಂದಿಗೂ ದಕ್ಕಲಾರದು.

ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಕಾಲದಲ್ಲಿ ಈ ಮಸೂದೆಯನ್ನು ಜಾರಿಗೆ ತರಲು ಪಣ ತೊಟ್ಟ ಮಹಿಳಾ ಮಂತ್ರಿಗಳ ಬದ್ಧತೆಯ ಚಿತ್ರಗಳು ಕೆಲವರಿಗಾದರೂ ನೆನಪಿರಬಹುದು. ಕಾನೂನು ಮಂತ್ರಿ ಭಾರದ್ವಾಜರ ಕೈಯಲ್ಲಿದ್ದ ಮಸೂದೆಯ ಪ್ರತಿಯನ್ನು ವಿರೋಧ ಪಕ್ಷದ ಸದಸ್ಯರೊಬ್ಬರು ಕಿತ್ತುಕೊಳ್ಳಲೆತ್ನಿಸಿದಾಗ ಕಾಂಗ್ರೆಸ್ಸಿನ ಆಗಿನ ಗಟ್ಟಿ ನಾಯಕಿ ರೇಣುಕಾ ಚೌಧರಿ ಆ ಸದಸ್ಯರನ್ನು ನೇರವಾಗಿ ಎದುರಿಸಿ ಅದನ್ನು ಭಗ್ನಗೊಳಿಸಿದ್ದರು; ಅಂಬಿಕಾ ಸೋನಿ ಹಾಗೂ ಕುಮಾರಿ ಸೆಲ್ಜಾ ಅವರು ಭಾರದ್ವಾಜರ ಅಕ್ಕಪಕ್ಕ ಕೂತು ವಿರೋಧಿಗಳಿಗೆ ಸವಾಲು ಹಾಕಿದ್ದರು! ಈ ಘಟನೆ ಎಲ್ಲ ಪಕ್ಷಗಳ ನಾಯಕಿಯರಿಗೂ ಸ್ಫೂರ್ತಿಯಾಗಬೇಕು. ಅಷ್ಟು ಹೊತ್ತಿಗೆ ಚುನಾವಣೆ ಬಂತು. ಮಸೂದೆ ಮೂಲೆ ಸೇರಿತು. ನಂತರ ಬಿಜೆಪಿ ನೇತೃತ್ವದ ಸರ್ಕಾರ ಈ ಮಸೂದೆಯನ್ನು ಮಂಡಿಸಲು ಹೊರಟಾಗ ಮಸೂದೆಯ ಪರವಾಗಿ ನಿಲ್ಲಬೇಕಾಗಿದ್ದ ಉಮಾಭಾರತಿಯಂಥವರೇ ಇದಕ್ಕೆ ತಡೆಯೊಡ್ಡಿದ್ದರು.

ಲೋಕಸಭೆಯ ಕಾಲಹರಣಗಳ ನಡುವೆಯೂ ಈ ಮಸೂದೆಗೆ ಕಾಲಕಾಲಕ್ಕೆ ಸಮರ್ಥ ಬೆಂಬಲಗಳೂ ಹುಟ್ಟಿವೆ. ಕಳೆದ ಮಹಿಳಾ ದಿನಾಚರಣೆಯ ದಿನ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ‘ಮಹಿಳೆ
ಯರಿಗೆ ರಾಜಕೀಯ ಮೀಸಲಾತಿ ನಮ್ಮ ತಾಯಂದಿರಿಗೆ, ಸೋದರಿಯರಿಗೆ ನಾವು ಸಲ್ಲಿಸಲೇಬೇಕಾದ ಬಹುಮುಖ್ಯ ಸೇವೆ’ ಎಂದರು; ‘ಜನರ ವಿರೋಧವಿದ್ದಾಗಲೂ 370ನೇ ಕಲಮನ್ನು ರದ್ದು ಮಾಡಿದ ಬಿಜೆಪಿ ನೇತೃತ್ವದ ಸರ್ಕಾರ ಇಷ್ಟೊಂದು ಬಹುಮತ ಇದ್ದಾಗಲೂ ಮಹಿಳಾ ರಾಜಕೀಯ ಮೀಸಲಾತಿಯನ್ನು ಯಾಕೆ ಜಾರಿ ಮಾಡಿಲ್ಲ?’ ಎಂದು ಕೇಳಿದರು. ಈ ಪ್ರಶ್ನೆಯನ್ನು ದೇಶದ ಅನೇಕ ವಲಯಗಳು ಕೇಳುತ್ತಲೇ ಇವೆ.

ಆದರೆ ಈ ಪ್ರಶ್ನೆಯನ್ನು ಇಂಡಿಯಾದ ರಾಜಕೀಯ ಪಕ್ಷಗಳು ಮಾತ್ರ ತಮ್ಮೊಳಗೆ ಬಿಟ್ಟುಕೊಂಡಿಲ್ಲ. ಈ ದಿಸೆಯಲ್ಲಿ ರಾಜಕೀಯ ಪಕ್ಷಗಳು ಪ್ರಾಮಾಣಿಕ ವಾಗಿದ್ದರೆ, ಮೊದಲು ತಂತಮ್ಮ ಪಕ್ಷಗಳ ಸಂಘಟನೆಗಳ ಒಳಗೆ ಈ ಮೀಸಲಾತಿಯನ್ನು ಜಾರಿ ಮಾಡಬೇಕು. ಕರ್ನಾಟಕದ ಈಚಿನ ಸಚಿವ ಸಂಪುಟಗಳಲ್ಲಿನ ಮಹಿಳಾ ಮಂತ್ರಿಗಳ ಸಂಖ್ಯೆ ನೋಡಿ: ಶೋಭಾ ಕರಂದ್ಲಾಜೆಯವರ ರಾಜೀನಾಮೆಯ ನಂತರ ಯಡಿಯೂರಪ್ಪನವರು ಒಬ್ಬ ಮಹಿಳಾ ಮಂತ್ರಿಯೂ ಇಲ್ಲದೆ ಸರ್ಕಾರ ನಡೆಸಿದ್ದರು. ನಂತರದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಇಬ್ಬರು ಸಚಿವೆಯರಿದ್ದರು. ಮತ್ತೆ ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದ ಸಂಪುಟಗಳಲ್ಲೂ ಒಬ್ಬರೇ ಸಚಿವೆ. ಎಲ್ಲ ರಾಜಕೀಯ ಪಕ್ಷಗಳ ಈ ಸ್ತ್ರೀ ವಿರೋಧಿ ಸಂಚನ್ನು ಮಹಿಳಾ ಲೀಡರುಗಳು, ಮತದಾರ್ತಿಯರು, ಚಿಂತಕಿಯರು, ವಿದ್ಯಾರ್ಥಿನಿಯರು ತಾತ್ವಿಕವಾಗಿಯಾ ದರೂ ವಿರೋಧಿಸಲಾರಂಭಿಸಿದರೆ ಮಹಿಳಾ ರಾಜಕೀಯ ಮೀಸಲಾತಿಯ ಪ್ರಶ್ನೆಗೆ ಮತ್ತೆ ಬಲ ಬಂದೀತು.

ಈ ಪುರುಷ ರಾಜಕೀಯದ ವರಸೆ- ಹುನ್ನಾರಗಳು ಗೊತ್ತಿರುವಾಗಲೂ ಮಹಿಳಾ ರಾಜಕಾರಣಿಗಳು ಪಕ್ಷಭೇದ ಮೀರಿ ಒಟ್ಟಾಗಿ ಒಂದು ‘ವರ್ಗ’ವಾಗಿ ರೂಪುಗೊಂಡು ಈ ಚರ್ಚೆಯೆತ್ತಿದ್ದು ಕಡಿಮೆ. ಈ ಶತಮಾನದಲ್ಲಾ ದರೂ ದೇಶದ ಮುಂಚೂಣಿ ಮಹಿಳಾ ರಾಜಕಾರಣಿಗಳಾದ ಸೋನಿಯಾ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ, ವಸುಂಧರಾ ರಾಜೆ, ಪ್ರಿಯಾಂಕಾ ಗಾಂಧಿ, ಮೆಹಬೂಬಾ ಮುಫ್ತಿ, ಸ್ಮೃತಿ ಇರಾನಿ, ಕೇರಳದ ಶೈಲಜಾ ಟೀಚರ್ ಥರದ ಕೆಲವು ನಾಯಕಿಯರಾದರೂ ಪಕ್ಷದ ಗಡಿ ಮೀರಿ ಮಹಿಳಾ ಮೀಸಲಾತಿ ಕುರಿತು ಚರ್ಚಿಸಲಿ; ನಮ್ಮ ಮಾಧ್ಯಮಗಳಲ್ಲಿರುವ, ಸೋಷಿಯಲ್ ಮೀಡಿಯಾ ದಲ್ಲಿರುವ ಮಹಿಳೆಯರೆಲ್ಲ ಒಟ್ಟಾಗಿ ಈ ಪ್ರಶ್ನೆಯನ್ನು ಮುಂಚೂಣಿಗೆ ತರಲಿ. ಜಾತಿ, ವರ್ಗಾಧಾರಿತ ಮಹಿಳಾ ಮೀಸಲಾತಿಯ ಸರಳ ಪ್ರಶ್ನೆಯನ್ನು ಕೂಡಲೇ ಬಗೆಹರಿಸಿಕೊಂಡು ಒಂದೇ ದನಿಯಲ್ಲಿ ಮಾತಾಡಲಿ.

ಮಹಿಳಾ ಮೀಸಲಾತಿ ಚಿಂತನೆಯ ಬೆಳ್ಳಿಹಬ್ಬದ ಸ್ತ್ರೀ ಬೈಗುಳಗಳಿಂದಾದರೂ ಪುರುಷಕೇಂದ್ರಿತ ಅಧಿಕಾರದ ರಾಜಕೀಯದ ಬೇರುಗಳು ಅಲುಗಾಡಲಿ; ದೇಶದಲ್ಲಿ ಮಹಿಳಾ ರಾಜಕಾರಣ ಹಾಗೂ ಮಹಿಳಾ ಸ್ವಾತಂತ್ರ್ಯದ ಹೊಸ ಘಟ್ಟ ಶುರುವಾಗಲಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.