ಬುದ್ಧ ಗುರುವಿನ ಬಳಿಗೆ ಒಬ್ಬ ಪಂಡಿತ ಸಮಸ್ಯೆಯೊಂದನ್ನು ತೆಗೆದುಕೊಂಡು ಬಂದ. ಅವನಿಗೆ ತನ್ನ ಧರ್ಮದ ಒಳ ಹೊರಗು ಗೊತ್ತಿತ್ತು. ಹಳೆಯ ಸಂಗತಿಗಳೆಲ್ಲವೂ ಒಳ್ಳೆಯದು ಎನ್ನುವುದನ್ನು ಆತ ನಂಬಿಯೂ ಇಲ್ಲ. ಆದರೆ ಬುದ್ಧ ಬೋಧಿಸುತ್ತಿರುವ ಎಲ್ಲ ಸಂಗತಿಗಳು ಹೊಸವೇ ಆಗಿದ್ದರಿಂದ ಅವು ಯಾವ ಧರ್ಮದ ಒಳಗೂ ಕಾಣಸಿಗುತ್ತಿರಲಿಲ್ಲ. ಅವನು ಅದನ್ನು ಬುದ್ಧ ಗುರುವಿನಲ್ಲಿ ವಿನಂತಿಸಿಕೊಂಡ, ‘ನೀನು ಬೋಧಿಸುತ್ತಿರುವ ಈ ಸೂಕ್ತಿಗಳು ನನಗೆ ಗೊತ್ತಿರುವ ಯಾವ ಧರ್ಮಗ್ರಂಥಗಳ ಒಳಗೂ ಇಲ್ಲ’ ಎಂದ. ಬುದ್ಧಗುರು ನಕ್ಕ, ‘ಇಲ್ಲದಿದ್ದರೆ ಏನಂತೆ? ನಿನಗೆ ಎಲ್ಲಿ ಅದನ್ನು ಅಳವಡಿಸಲು ಸಾಧ್ಯವೋ ಅಲ್ಲಿ ಅದನ್ನು ಅಳವಡಿಸಿಕೋ’ ಎಂದ.
ಆ ಪಂಡಿತೋತ್ತಮನಿಗೆ ನಿಜಕ್ಕೂ ಮುಜುಗರ ಅನ್ನಿಸಿತು. ‘ನೂರಾರು ವರ್ಷಗಳಿಂದ ನಿಂತ ಬೃಹತ್ ಮರದ ಹಾಗಿರುವ ಧರ್ಮಗ್ರಂಥವನ್ನು ಹೀಗೆ ಬದಲಾಯಿಸುವುದೇ? ಬುದ್ಧಗುರುವೇ ನಿನ್ನಲ್ಲಿ ಒಂದು ಅರಿಕೆ, ಹೀಗೆ ಬದಲಿಸುವುದು ಧರ್ಮ ಶಾಸ್ತ್ರಕ್ಕೆ ವಿರುದ್ಧವಲ್ಲವೇ? ಅದೂ ಅಲ್ಲದೆ ನೀನು ಬೋಧಿಸುತ್ತಿರುವ ಕೆಲ ಸೂಕ್ತಿಗಳಂತೂ ಧರ್ಮ ಗ್ರಂಥಗಳಲ್ಲಿರುವ ಅನೇಕ ವಿಚಾರಗಳನ್ನು ವಿರೋಧಿಸುತ್ತವೆ. ಇದನ್ನು ಹೇಗೆ ಅಳವಡಿಸಲು ಸಾಧ್ಯ?’ ಎನ್ನುತ್ತಾನೆ. ಬುದ್ದದೇವ ಕಿರುನಗೆ ನಕ್ಕು, ‘ಹೌದೇ ನಿನ್ನ ಧರ್ಮ ಗ್ರಂಥದಲ್ಲಿ ಇದಕ್ಕೆ ಜಾಗವಿಲ್ಲವೇ? ಮನುಷ್ಯನಿಗೆ ಬೇಕಾದ ಸಂಗತಿಗಳನ್ನು ಅಲ್ಲಿ ಅಳವಡಿಸಲು ಸಾಧ್ಯವಿಲ್ಲ ಎಂದರೆ ನನಗನ್ನಿಸುತ್ತಿದೆ ನಿನ್ನ ಧರ್ಮಗ್ರಂಥಕ್ಕೆ ತಿದ್ದುಪಡಿ ಅಗತ್ಯವಿದೆ’ ಎನ್ನುತ್ತಾನೆ.
ಬುದ್ಧನ ಈ ಮಾತಿನಿಂದ ತೀರಾ ಹತಾಶಗೊಂಡ ಪಂಡಿತ ಕೇಳಿದ, ‘ಇದು ಹೇಗೆ ಸಾಧ್ಯ?’ ಬುದ್ಧ ನುಡಿದ, ‘ಬೇಸಿಗೆಯ ನಂತರ ಮಳೆ ಮಳೆಯ ನಂತರ ಚಳಿಗಾಲ ಬರುತ್ತದೋ ಇಲ್ಲವೋ?’ ಪಂಡಿತ ಹೇಳಿದ ‘ಹೌದು ಅದು ಪ್ರಕೃತಿ ನಿಯಮ’. ಬುದ್ಧ ನಕ್ಕ, ‘ಹಾಗಾದರೆ ಇರುವುದು ಮೂರೇ ಕಾಲವೋ? ಇಲ್ಲ ಅಲ್ಲವೇ? ವಸಂತ ಬಾರದಿದ್ದರೆ ಗಿಡ ಮರಗಳು ಚಿಗುರುವುದೇ ಇಲ್ಲ, ಗ್ರೀಷ್ಮ ಬಾರದಿದ್ದರೆ ಹಣ್ಣೆಲೆಗಳು ಉದುರುವುದೇ ಇಲ್ಲ. ಪ್ರಕೃತಿ ಎಂಥ ಚಲನಶೀಲ... ಮನುಷ್ಯ ಮಾತ್ರ ತಾನು ಬರೆದದ್ದು, ನಂಬಿದ್ದು ಮಾತ್ರ ಸರಿ ಎನ್ನುತ್ತಾನೆ’ ಎಂದ.
ಪಂಡಿತನಿಗೆ ಇನ್ನೂ ಅನುಮಾನ, ‘ಅನುಭವ ಆಧ್ಯಾತ್ಮಿಕತೆ ಎಲ್ಲವನ್ನೂ ಹಾಸುಹೊಕ್ಕು ಬಂದ ವಿಚಾರ ಇಷ್ಟಲ್ಲದೆ ಎಲ್ಲವನ್ನೂ ಗ್ರಹಿಸಲು ಸಾಧ್ಯವಾ?’ ಎನ್ನುತ್ತಾನೆ. ಅದಕ್ಕೆ ಬುದ್ಧ ದೇವ ಹೇಳುತ್ತಾನೆ, ‘ಧರ್ಮ ಇರುವುದು ಮನುಷ್ಯನಿಗಾಗಿಯೇ ಹೊರತು, ಧರ್ಮಕ್ಕಾಗಿ ಮನುಷ್ಯ ಇರಬಾರದು. ಮನುಷ್ಯನಿಗೆ ಮಾರಕವಾದದ್ದು ಅನ್ನಿಸಿದರೆ ಅದನ್ನು ಬದಲಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಈ ಸೃಷ್ಟಿಯ ನಿಯಮವೇ ಪರಿವರ್ತನೆಯಾಗಿರುವಾಗ, ಒಳಿತಿಗಾಗಿ ಯಾವುದನ್ನು ಬೇಕಾದರೂ ಪರಿವರ್ತಿಸಬಹುದು’ ಎಂದ.
ಕ್ರಿಸ್ತನೂ ಇದನ್ನೇ ಹೇಳುತ್ತಾನೆ, ‘ಮನುಷ್ಯನ ಘನತೆಯನ್ನು ಮರೆಸುವ ಯಾವ ಸಂಗತಿಗಳೂ ಅನಗತ್ಯ. ಅಂಥ ಸಂಗತಿಗಳು ಮಾರ್ಪಾಡಾಗದೆ ದಾರಿಯಿಲ್ಲ. ಮಾರ್ಪಾಡಾಗದೆ ಹೋದರೆ ಮನುಷ್ಯನಲ್ಲಿ ಕ್ರೌರ್ಯ ತಲೆದೋರುತ್ತದೆ. ಅದಕ್ಕೆ ದಾರಿಕೊಡಬಾರದು ಎಂದರೆ ಕಾಲ ಕಾಲಕ್ಕೆ ನಮ್ಮ ಆಲೋಚನೆಗಳಲ್ಲಿ ಮಾರ್ಪಾಡು ಅನಿವಾರ್ಯ’ ಎಂದು.
ಬುದ್ಧಿ ಮೌಢ್ಯಕ್ಕೆ ಬಲಿಯಾದರೆ ಕುರುಡು ನಂಬಿಕೆಗಳ ಹಿಂದೆ ಬೀಳುತ್ತೇವೆ. ಅದು ಮನುಷ್ಯನಿಗೆ ಮಾರಕ. ಕಾಲ ಕಾಲಕ್ಕೆ ಬದಲಾವಣೆ ಅನಿವಾರ್ಯ ಎನ್ನುವುದನ್ನು ಎಲ್ಲ ಯುಗಪ್ರವರ್ತಕರೂ ಹೇಳಿದ್ದಾರೆ. ಅನುಸರಿಸುವವರು ಮಾತ್ರ ಕಡ್ಡಾಯಗಳಲ್ಲಿ ಉಳಿದಿದ್ದೇವೆ. ಹೇಳಿದವರ ಮಾತಿನ ಅರ್ಥ ದೊಡ್ಡದೆಂದು ಅರ್ಥಮಾಡಿಕೊಳ್ಳಬೇಕಲ್ಲವೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.