ಅದೊಂದು ಸರ್ಕಸ್ ಕಂಪನಿ. ಅಲ್ಲೊಬ್ಬ ಕಲಾವಿದ. ಅವನದು ಎಂಥ ರೋಚಕ ಕಲೆ ಗೊತ್ತೆ? ಅವನ ಎದುರು ಒಂದು ವೃತ್ತಾಕಾರದ ಮರದ ಹಲಗೆಗೆ ಅವನ ಹೆಂಡತಿಯನ್ನು ಕಟ್ಟಿರುತ್ತಾರೆ. ಈ ಕಲಾವಿದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹರಿತವಾದ ಇಪ್ಪತ್ತು ಚೂರಿಗಳನ್ನು, ಅವನ ಪ್ರೀತಿಯ ಹೆಂಡತಿಯ ಕಡೆಗೆ ರಭಸದಿಂದ ಎಸೆಯಬೇಕು. ಅಚ್ಚರಿಯೇನೆಂದರೆ ಆ ಇಪ್ಪತ್ತೂ ಚೂರಿಗಳು ಆ ಹಲಗೆಗೆ ನಾಟುತ್ತವೆಯೇ ವಿನಾ ಒಂದೂ ಅವನ ಹೆಂಡತಿಗೆ ತಾಕುವುದಿಲ್ಲ. ಒಂದಲ್ಲ, ಎರಡಲ್ಲ, ಇಪ್ಪತ್ತು ವರ್ಷದಿಂದ ಸರ್ಕಸ್‌ನಲ್ಲಿ ಅವನು ಈ ಆಟ ಪ್ರದರ್ಶಿಸುತ್ತಿದ್ದಾನೆ. ಒಮ್ಮೆಯಾದರೂ ಗುರಿ ತಪ್ಪಿದನೆ? ಇಲ್ಲ, ಇಲ್ಲವೇ ಇಲ್ಲ.
ಒಮ್ಮೆ ಹೀಗಾಯಿತು. ಗಂಡ ಹೆಂಡಿರ ನಡುವೆ ಯಾತಕ್ಕೋ ವಿರಸ. ಮಾತಿಗೆ ಮಾತು ಬೆಳೆಯಿತು.ಇವನಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಈ ಹೆಂಡತಿಯನ್ನು ಕೊಂದೇಬಿಡಬೇಕು ಅನ್ನುವಂಥ ಸಿಟ್ಟು ಅದು. ಅವಳನ್ನು ಕೊಂದು ಬಿಡುವುದು ಕಷ್ಟವೇನಲ್ಲವಲ್ಲ ಅವನಿಗೆ... ಚೂರಿ ಎಸೆಯುವಾಗ ಅವಳ ಎದೆಗೆ ಗುರಿಯಿಟ್ಟರಾಯಿತು. ಆದರೆ ತತ್ ಕ್ಷಣಕ್ಕೆ ಕೊಲ್ಲಬಾರದು. ಇಂದು ಜಗಳ ಆಡಿ ನಾಳೆಗೇ ಅವಳೆದೆಗೆ ಚೂರಿ ಎಸೆದರೆ ಕೊಲ್ಲುವ ಉದ್ದೇಶದಿಂದಲೇ ಚೂರಿ ಎಸೆದಿದ್ದಾನೆಂದು ಅನುಮಾನ ಬರುತ್ತದೆ. ಕೆಲವು ದಿನ ಕಳೆಯಲಿ ಎಂದು ಅವಡುಗಚ್ಚಿಕೊಂಡು ಕಾಯುತ್ತಿದ್ದ. ಈ ಮಧ್ಯೆ ಆಟ ಎಂದಿನಂತೆ ನಡೆಯುತ್ತಲೇ ಇತ್ತು. ಅದೊಂದು ದಿನ ನಿರ್ಧಾರ ಮಾಡಿಬಿಟ್ಟ. ಈವತ್ತು ಸಂಜೆಯ ಆಟದಲ್ಲಿ ಕೊಲ್ಲಲೇಬೇಕು ಅಂದುಕೊಂಡ.
ಆಟದ ಸಮಯ ಬಂತು. ಎಂದಿನಂತೆ ಅವನ ಹೆಂಡತಿಯನ್ನು ಹಲಗೆಗೆ ಕಟ್ಟಲಾಯಿತು. ಅವಳೆದುರಿಗೆ ಇವನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಂತ. ಪಕ್ಕದ ಹರಿವಾಣವೊಂದರಲ್ಲಿ ಮೊನೆ ಹರಿತವಾದ ಇಪ್ಪತ್ತು ಚೂರಿಗಳು. ಎಂದಿನ ಗುರಿ ಬಿಟ್ಟು ಅವಳ ಎದೆಗೆ ಗುರಿಯಿಟ್ಟು ಎಸೆದರೆ ಎದೆಯನ್ನು ಸೀಳಿಬಿಡುವಷ್ಟು ಹರಿತ. ಸರ್ಕಸ್‌ನ ಪ್ರೇಕ್ಷಕರು ಭಯಕುತೂಹಲದಿಂದ ಕುರ್ಚಿಯ ತುದಿಗೆ ಬಂದುಬಿಟ್ಟಿದ್ದಾರೆ. ಅವನು ಚೂರಿಗಳನ್ನು ಎಸೆಯಲು ಶುರು ಮಾಡಿದ. ಒಂದು..ಎರಡು...ಮೂರು... ನಾಲ್ಕು... ಹದಿನೆಂಟು... ಹತ್ತೊಂಬತ್ತು... ಆಯಿತು. ಆಹ್ ಈಗಲೀಗ ಅವಳನ್ನು ಕೊಲ್ಲಲೇಬೇಕೆಂದು ಕೊನೆಯ ಚೂರಿಯನ್ನು ಅವಳ ಎದೆಗೆ ರಭಸವಾಗಿ ಎಸೆದ. ಪ್ರೇಕ್ಷಕರಿಂದ ಭಾರೀ ಕರತಾಡನ. ಅಚ್ಚರಿ ಆಯಿತವನಿಗೆ. ಅವಳ ಎದೆಗೆ ನಾಟಲಿಲ್ಲವೆ ಚೂರಿ? ಸಾಯಲಿಲ್ಲವೆ ಅವಳು? ಥಟ್ಟನೆ ಕಣ್ಣಿನ ಕಟ್ಟು ಬಿಚ್ಚಿ ನೋಡಿದ. ಸಾಯಲಿಲ್ಲ ಅವಳು. ನಗುನಗುತ್ತಾ ಪ್ರೇಕ್ಷಕರಿಗೆ ನಮಸ್ಕಾರ ಮಾಡುತ್ತಿದ್ದಾಳೆ.
ಯಾಕೆ ಹೀಗಾಯಿತು?
ನೀವು ಶ್ರುತಿ ತಾಳ ಬದ್ಧವಾಗಿ ಹಾಡುವುದನ್ನು ಕಲಿತ ಮೇಲೆ ಶ್ರುತಿ ತಾಳ ಬಿಟ್ಟು ಹಾಡಲು ನೋಡಿ. ಆಗುವುದಿಲ್ಲ. ನೀವು ಸೈಕಲ್ ಸವಾರಿ ಕಲಿತ ಮೇಲೆ ಬೀಳುವುದಕ್ಕೆ ಪ್ರಯತ್ನಿಸಿ ನೋಡಿ. ಆಗುವುದಿಲ್ಲ. ನೀವು ಸದಭಿರುಚಿಯುಳ್ಳವರಾದರೆ ರುಚಿಹೀನರಾಗುವುದು ಕಷ್ಟ.
ನಿಮ್ಮ ದೇಹ ಮನಸ್ಸುಗಳ ನಡುವೆ ಲಯ ಸಾಧಿಸಿದ ಮೇಲೆ ಆ ಲಯ ತಪ್ಪುವುದು ಕಷ್ಟ. ಸಂಸ್ಕಾರಗೊಂಡ ಮನಸ್ಸು ಪ್ರಯತ್ನ ಪಟ್ಟರೂ ತಪ್ಪೆಸಗುವುದು ಕಷ್ಟ. ಹಾಗೆಯೇ ಗುರಿಕಾರನಿಗೆ ಗುರಿ ತಪ್ಪುವುದೂ ಕಷ್ಟ. ಅಲೋಚಿಸಿ ನೋಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.