ADVERTISEMENT

ನುಡಿ ಬೆಳಗು: ಅವರಿಗೆ ಹೇಳುವವರು ಯಾರು?

ಪ್ರೊ. ಎಂ. ಕೃಷ್ಣೇಗೌಡ
Published 6 ಜೂನ್ 2024, 23:54 IST
Last Updated 6 ಜೂನ್ 2024, 23:54 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ನಾನು ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ಬಿ.ಎಸ್‌ಸಿ ಓದುತ್ತಿದ್ದಾಗ ಕನ್ನಡದ ಶ್ರೇಷ್ಠ ವಿದ್ವಾಂಸರೂ ಕವಿಗಳೂ ಆಗಿದ್ದ ಪ್ರೊ. ಸುಜನಾ ನನ್ನ ಗುರುಗಳಾಗಿದ್ದರು. ನಾನದೆಷ್ಟು ಬಾರಿ ಅಂದುಕೊಂಡಿದ್ದೇನೆಯೋ- ಅಂಥವರು ಗುರುಗಳಾಗಿ ದೊರೆಯವುದೇ ಒಂದು ಅದೃಷ್ಟ, ಪುಣ್ಯ.

ತರಗತಿಯಲ್ಲೋ, ಹೊರಗೋ ಅವರು ಆಡುತ್ತಿದ್ದ ಮಾತುಗಳು, ನುಡಿಗಳಾ ಅವು... ಅಲ್ಲ, ಬೆಳಕಿನ ಕಿಡಿಗಳು... ಯಾವ್ಯಾವಾಗಲೋ ಥಟ್ಟನೆ ಸಿಡಿದುಬಿಡುತ್ತಿದ್ದ ನುಡಿಗಳನ್ನು ಹಿಡಿದಿಟ್ಟುಕೊಳ್ಳುತ್ತಿದ್ದೆವು... ಈಗಲೂ ನಾವು ಹಳೆಯ ಗೆಳೆಯರು ಸೇರಿದಾಗ ಅವನ್ನು ನೆನಪಿಸಿಕೊಂಡು ಚಪ್ಪರಿಸುತ್ತೇವೆ. ಅಂಥದೊಂದು ಮಾತಿನ ಉದಾಹರಣೆ, ಈ ಸಂದರ್ಭಕ್ಕೆ-ಅಂದಿನ ದಿನಗಳಲ್ಲಿ ಕಾಲೇಜಿನ ಚುನಾವಣೆಗಳೆಂದರೆ ಅವುಗಳ ಬಣ್ಣ ಭರಾಟೆಗಳೇ ಬೇರೆ. ಆ ಅಭ್ಯರ್ಥಿಗಳು ಇದೇ ತಮ್ಮ ಜೀವನದ ಪರಮೋದ್ದೇಶವೇನೋ ಎಂಬಂತೆ ಓಡಾಡಿಕೊಂಡು ಚುನಾವಣೆ ನಡೆಸುತ್ತಿದ್ದರು. ಆವತ್ತು

ADVERTISEMENT

ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯ ಗುಂಪಿನ ಹುಡುಗರು ಕೂಗುತ್ತಾ, ಸಿಳ್ಳೆ, ಕೇಕೆ ಹಾಕುತ್ತಾ, ಗೆದ್ದ ಅಭ್ಯರ್ಥಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುತ್ತಿದ್ದರು.

ಕೆಳಗಡೆ ಇಂಥ ಕುಣಿತ ಮೆರೆತ ಮೋಜು ಮಸ್ತಿಗಳು ನಡೆಯುತ್ತಿರುವಾಗ ಮೇಷ್ಟರುಗಳು ಕಾಲೇಜಿನ‌ ಮಹಡಿಯ ಮೇಲಿಂದ ಅದನ್ನು ನೋಡುತ್ತಾ ನಿಲ್ಲುತ್ತಿದ್ದರು- ಹಿಂದೆ ಭೂಲೋಕದಲ್ಲೇನಾದರೂ ಇಂಥ ‘ಅದ್ಭುತ’ಗಳು ನಡೆದಾಗ ಅದನ್ನು ನೋಡಲು ದೇವತೆಗಳು ಆಕಾಶದಲ್ಲಿ ಬಂದು ನೆರೆದು ನಿಲ್ಲುತ್ತಿದ್ದರಂತಲ್ಲಾ, ಥೇಟ್ ಹಾಗೇ... ಹುಡುಗರು ತಮ್ಮ ಗೆಳೆಯನ ಚುನಾವಣೆಯ ವಿಜಯೋತ್ಸವ ಮಾಡಲು ಮೈಮೇಲೆ ಬಂದವರಂತೆ ಕುಣಿಯುತ್ತಿದ್ದರಲ್ಲ, ಅದನ್ನು ನೋಡಿ ಸುಜನಾ ಅಂದರು: ‘ನೋಡಿ ನೋಡಿ, ಗೆಲುವಿಗೆ ಉನ್ಮಾದ, ಉತ್ಸಾಹ, ಅಹಂಕಾರಗಳಷ್ಟೇ ಗೊತ್ತು. ವಿನಯ, ಔದಾರ್ಯಗಳು ಗೊತ್ತಿರುವುದಿಲ್ಲ. ಗೆದ್ದವನು ವಿನಯ, ಔದಾರ್ಯಗಳನ್ನು ತುಂಬಿಕೊಳ್ಳದಿದ್ದರೆ ಅಹಂಕಾರ ಅವನಿಗೇ ಗೊತ್ತಿಲ್ಲದಂತೆ ಅವನಲ್ಲಿ ತುಂಬಿಕೊಂಡುಬಿಡುತ್ತದೆ. ಅಷ್ಟೇ ಅಲ್ಲ, ಈ ಹುಡುಗರು ಇಲ್ಲಿ ಅವರ ಸಂತೋಷ ತಡೆದುಕೊಳ್ಳಲಾಗದೆ ಕುಣೀತಾ ಇದ್ದಾರೆ. ಏನು ಗೊತ್ತಾ? ಸಣ್ಣ ಸಂತೋಷಗಳನ್ನೂ ತಡೆದುಕೊಳ್ಳಲಾರದವರು ಸಣ್ಣ ದುಃಖಗಳನ್ನೂ ತಡೆದುಕೊಳ್ಳಲಾರರು. ಸೋಲನ್ನು ನಿಭಾಯಿಸುವುದಕ್ಕಿಂತಲೂ ಕಷ್ಟ, ಗೆಲುವನ್ನು ನಿಭಾಯಿಸುವುದು. ಆದರೆ ಈ ಹುಡುಗರಿಗೆ ಹೇಳುವವರು ಯಾರು? ಹೇಗೆ?’

ಹುಡುಗರ ಮಾತಿರಲಿ, ಈಗ ಎಷ್ಟೋ ಜನ ದೊಡ್ಡವರು ಗೆದ್ದಿದ್ದಾರೆ, ಊರೂರಿನಲ್ಲಿ ಪಟಾಕಿಗಳು ಸಿಡಿಯುತ್ತಿವೆ. ಬಾಣ ಬಿರುಸುಗಳು ಆಕಾಶಕ್ಕೆ ಎಗರುತ್ತಿವೆ. ಅವರಿಗೆ ಹೇಳುವವರು ಯಾರು? ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.