ಅಶೋಕ ವನದ ಶಿಂಶುಪಾ ವೃಕ್ಷದ ಕೆಳಗೆ ಕುಳಿತಿದ್ದಾಳೆ ಶೋಕಾಕುಲಿತೆ ಸೀತೆ. ಆಗ ಅಲ್ಲಿಗೆ ಬಂದಳು ವಿಭೀಷಣನ ಹೆಂಡತಿ ಸರಮಾದೇವಿ. ಸೀತೆಯೊಂದಿಗೆ ಮಾತಾಡುವುದಕ್ಕೆಂದೇ ಬಂದಿದ್ದಳು ಅವಳು. ಆದರೆ ಸೀತೆಗೆ ಯಾರೊಂದಿಗೆ ಮಾತಾಡುವುದಕ್ಕೂ ಇಷ್ಟವಿಲ್ಲ. ಸರಮೆ, ‘ನಾನು ನಿನ್ನೊಂದಿಗೆ ಮಾತಾಡಬೇಕು ಸೀತೆ’ ಅಂದಾಗ ಸೀತೆ ‘ನಾನು ದೌರ್ಭಾಗ್ಯೆ, ದುಃಖಿ, ಪೂಜ್ಯ ಪತಿಯನ್ನಗಲಿರುವವಳು, ನನ್ನೊಂದಿಗೆ ಮಾತಾಡುವುದಕ್ಕೇನಿದೆ?’ ಅಂದಳು. ಆಗ ಸರಮೆ, ‘ಸೀತೆ, ನೀನು ದುಃಖಿ ನಿಜ, ನಿನಗಿಂತಲೂ ಹೆಚ್ಚು ದುಃಖಿತಳು ನಾನು. ದಯವಿಟ್ಟು ಅವಕಾಶ ಕೊಡು, ನಾನು ನಿನ್ನೊಂದಿಗೆ ಮಾತಾಡಬೇಕು’ ಸೀತೆಗೆ ಅಚ್ವರಿ. ರಾವಣನ ನಾದಿನಿ ನನಗಿಂತಲೂ ಹೆಚ್ಚು ದುಃಖಿತಳೆ?
ಆಗ ಸೀತೆಯ ಮುಖಭಾವವನ್ನು ಗ್ರಹಿಸಿ ಸರಮೆಯೇ ಹೇಳಿದಳು- ‘ಹೌದು ಸೀತೆ, ನೀನು ನನ್ನ ಭಾವ ರಾವಣನಿಂದ ಅಪಹೃತಳಾಗಿ, ನಮ್ಮ ರಾಕ್ಷಸರ ಹಿಂಸೆಯನ್ನೂ ಅನುಭವಿಸುತ್ತ ದುಃಖಿತಳಾಗಿದ್ದೀಯೆ. ಆದರೆ ನಿನಗೆ ಲೋಕಾನುಕಂಪೆ ಎಂಬುದೊಂದಿದೆ. ನಿನ್ನ ಪರಿಸ್ಥಿತಿಯನ್ನು ಕಂಡವರು, ಕೇಳಿದವರು ನಿನಗಾಗಿ ಮರುಗುತ್ತಾರೆ. ಆದರೆ ನಮ್ಮ ಪರಿಸ್ಥಿತಿ ನೋಡು, ನಾವು ಲೋಕ ನಿಂದಿತರು. ನಮ್ಮ ಭಾವ ಅವರ ವಯಸ್ಸಿಗೆ, ವಿದ್ಯೆಗೆ, ಘನತೆಗೆ, ಪೌರುಷಕ್ಕೆ ತಕ್ಕುದಲ್ಲದ ನೀಚ ಕೆಲಸ ಮಾಡಿದ್ದಾರೆ. ಅದು ನಮ್ಮ ಕುಟುಂಬಕ್ಕೊಂದು ಅಸಹ್ಯ ಕಳಂಕ. ಅವಮಾನ. ಲಂಕೆಯ ಜನರೇ ನಮ್ಮನ್ನು ಛೀ ಥೂ ಅನ್ನುತ್ತಿದ್ದಾರೆ. ದುಃಖದಲ್ಲಿದ್ದಾಗಲೂ ಲೋಕದ ಅನುಕಂಪೆಯಿದ್ದರೆ ಅದೊಂದು ಸಮಾಧಾನ. ಆದರೆ ಎಷ್ಟೇ ಸಿರಿ, ಸಂಪತ್ತು ಅಧಿಕಾರಗಳಿದ್ದರೂ ಲೋಕ ಅಸಹ್ಯ ಪಡುವಂತಿದ್ದರೆ ಅಂಥ ಮನೆಯವರಾಗಿರುವುದು ತುಂಬಾ ಅವಮಾನ. ರಾವಣನ ಅರಮನೆಯ ರಾಣೀವಾಸವೆಲ್ಲವೂ ಇಂಥದೊಂದು ಅವಮಾನದಲ್ಲಿ ಬೇಯುತ್ತಿದ್ದೇವೆ ಸೀತೆ’ ಎಂದು ಗಳಗಳನೆ ಅತ್ತುಬಿಟ್ಟಳು ಸರಮೆ.
ದುಃಖಿಗಳಿಗೆ ಮಾತ್ರ ಇನ್ನೊಬ್ಬ ದುಃಖಿಯ ಬೇಗುದಿ ತಾಕುತ್ತದೆ. ಹಾಗಾಗಿ ಸೀತೆಯೇ ಈಗ ಸರಮೆಯನ್ನು ಸಮಾಧಾನಮಾಡಿ ಸಂತೈಸುತ್ತಾಳೆ. ಆಗ ಸರಮೆ ಇನ್ನೊಂದು ಮಾತು ಹೇಳುತ್ತಾಳೆ- ‘ಸೀತೆ ನನ್ನ ಮಗಳೊಬ್ಬಳಿದ್ದಾಳೆ ಅನಲೆ. ಒಂಬತ್ತು ವರ್ಷದ ಮುಗ್ಧ ಮಗು. ಅವಳನ್ನು ಕಂಡರೆ ನನ್ನ ಭಾವನಿಗೆ ಪ್ರಾಣ. ಅವಳಿಗೂ ದೊಡ್ಡಪ್ಪನಲ್ಲಿ ತುಂಬಾ ಸಲಿಗೆ. ಆದರೆ ಮೊನ್ನೆ ಅವಳು ಹೇಳಿದಳು- ಅಮ್ಮಾ, ದೊಡ್ಡಪ್ಪ ಈ ಸೀತೆಯನ್ನು ಕದ್ದು ತಂದ ಮೇಲೆ ನನಗೇಕೋ ಅವರು ಇಷ್ಟವಾಗುತ್ತಿಲ್ಲ, ಅಷ್ಟೇ ಅಲ್ಲ, ಈಚೀಚೆಗೆ ಅವರು ಏಕಾಂತದಲ್ಲಿರುವಾಗ ಅವರ ಬಳಿ ಹೋಗಲು ನನಗೂ ಭಯ- ಅನ್ನುತ್ತಾಳೆ. ನಾವು ಯಾರು ಯಾರಿಂದ ಎಂತೆಂಥ ಮಾತುಗಳನ್ನು ಕೇಳಬೇಕಾಯಿತಲ್ಲ ಸೀತೆ, ಹೇಳು, ನಿನಗಿಂತ ದುಃಖಿಗಳಲ್ಲವಾ ನಾವು?’
ನಿಜ, ಎಷ್ಟೇ ಸಿರಿ ಸಂಪತ್ತು ಅಧಿಕಾರವಿದ್ದರೂ ಲೋಕನಿಂದೆ ಎನ್ನುವುದು ಎಷ್ಟು ಅವಮಾನಕರ ಅಲ್ಲವಾ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.