ADVERTISEMENT

ನುಡಿ ಬೆಳಗು: ಯಾವುದರಿಂದ ಕುಟುಂಬ ಕಟ್ಟಬೇಕು?

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 10 ಸೆಪ್ಟೆಂಬರ್ 2024, 23:10 IST
Last Updated 10 ಸೆಪ್ಟೆಂಬರ್ 2024, 23:10 IST
   

ಒಂದು ಕುಟುಂಬ ಸುಖವಾಗಿರಬೇಕು ಅಂದರ ಏನು ಮಾಡಬೇಕು? ಯಾವುದರಿಂದ ಕಟ್ಟಿದರೆ ಸೌಧ ಚೆನ್ನಾಗಿರುತ್ತದೆ? ಕುಟುಂಬ ಚೆನ್ನಾಗಿರಬೇಕು ಅಂದರ ಅದನ್ನು ಪ್ರೇಮದಿಂದ ಕಟ್ಟಬೇಕು. ಒಂದು ಮನೆಯನ್ನು ಸಿಮೆಂಟ್‌ನಿಂದ ಕಟ್ಟೋದಲ್ಲ, ಭಾವನೆಗಳಿಂದ ಕಟ್ಟಬೇಕು.

ಈಗೊಂದು ಮದುವೆ ವಾರ್ಷಿಕೋತ್ಸವ ಇರತೈತಿ. ಎಲ್ಲರೂ ಬಂದಿರ್ತಾರ. ಬ್ರೇಸ್‌ಲೆಟ್, ಹಣ, ಅಂತೆಲ್ಲ ಗಿಫ್ಟ್ ತಂದು ಕೊಡ್ತಾರ. ಆದರ ರಾತ್ರಿ ಮಲಗುವ ಹೊತ್ತಿಗೆ ನಿಮ್ಮ ಪುಟ್ಟ ಮಗ ಬಂದು ಒಂದು ಗುಲಾಬಿ ಕೊಡ್ತಾನ. ವಿಶ್ ಮಾಡ್ತಾನ. ಅದನ್ನು ಪಡೆದ ನಿಮಗ, ಮಲಗಿದಾಗ ಇತರ ಯಾರೇ ಕೊಟ್ಟ ಗಿಫ್ಟ್ ನೆನಪಿರೋದಿಲ್ಲ. ಮಗನ ಕೈಯಾಗಿನ ಗುಲಾಬಿ, ಎದೆಯೊಳಗಿನ ಪ್ರೇಮ ಮಾತ್ರ ನೆನಪಿರುತ್ತದೆ. ಯಾಕೆಂದರೆ ಪ್ರೇಮ ಉಳೀತದೆ. ವಸ್ತುಗಳು ಉಳಿಯಲ್ಲ. ಸಣ್ಣ ಸಣ್ಣ ವಿಷಯಗಳಲ್ಲಿ ಸಂತೋಷ ಕಾಣುವುದನ್ನು ಮನುಷ್ಯ ಕಲಿಯಬೇಕು. ಪ್ರೇಮದಿಂದ ಬದುಕು ದೊಡ್ಡದಾಗುತ್ತದೆ. ದೊಡ್ಡ ಮನೆ ಕಟ್ಟಿಸಿದವ ದೊಡ್ಡವನಾಗುವುದಿಲ್ಲ. ದೊಡ್ಡ ಮನಸ್ಸಿದ್ದವನು ದೊಡ್ಡವನಾಗುತ್ತಾನೆ.

ಈ ಭೂಮಿಯ ಮೇಲೆ ಧರ್ಮ ದ್ವೇಷಗಳು, ಜಾತಿ ದ್ವೇಷಗಳು, ಅಣ್ಣ ತಮ್ಮಂದಿರ ದ್ವೇಷಗಳು ಬೇಕಾದಷ್ಟೈತಿ. ಆದರೆ ದ್ವೇಷದಿಂದ ಬದುಕು ಕಟ್ಟಲು ಸಾಧ್ಯವಿಲ್ಲ. ಕೂಡಿ ಬದುಕಬೇಕು. ಎಲ್ಲರೂ ಕೂಡಿ ಬದುಕಿದಾಗ ಮಾತ್ರ ಪ್ರೇಮ ಸೌಧ ನಿರ್ಮಾಣವಾಗುತ್ತದೆ. ಉದ್ಯಾನದಲ್ಲಿ ಒಂದೇ ಜಾತಿಯ ಹೂವುಗಳಿದ್ದರೆ ಅದನ್ನು ಉದ್ಯಾನ ಎನ್ನಲಿಕ್ಕಾಗದು. ಅದು ಕಂಗೊಳಿಸುವುದೂ ಇಲ್ಲ. ನೂರಾರು ಜಾತಿಯ ಹೂವುಗಳಿದ್ದರೆ ಮಾತ್ರ ಉದ್ಯಾನ ಕಂಗೊಳಿಸುತ್ತದೆ. ಹಾಗೆಯೇ ನೂರಾರು ಜಾತಿ ಧರ್ಮದ ಜನರು ಕೂಡಿ ಬಾಳಿದರೆ ಭವ್ಯ ಭಾರತ ನಿರ್ಮಾಣವಾಗುತ್ತದೆ. ಅದೇ ಸ್ವರ್ಗವಾಗುತ್ತದೆ.

ADVERTISEMENT

ಭೂಮಿ ಸ್ವರ್ಗವಾಗಬೇಕು ಎಂದರೆ ಎಲ್ಲರೂ ಕೂಡಿ ಬಾಳಬೇಕು. ನಾನು ಪೂಜಿಸುವ ದೇವರು ಬೇರೆಯಾಗಿರಬಹುದು. ನೀವು ಪೂಜಿಸುವ ದೇವರು ಭಿನ್ನವಾಗಿರಬಹುದು. ನಾವೂ ದೇವರ ಮುಂದೆ ದೀಪ ಹಚ್ಚತೀವಿ. ನೀವೂ ದೇವರ ಮುಂದೆ ದೀಪ ಹಚ್ಚತೀರಿ. ದೇವರು ಭಿನ್ನ ಆಗಿರಬಹುದು. ಆದರ ದೇವರ ಮುಂದೆ ಹಚ್ಚಿಟ್ಟ ದೀಪದ ಬೆಳಕು ಒಂದೇ ಆಗಿರತೈತಿ. ಅದನ್ನು ನಾವೆಲ್ಲರೂ ಅರಿಯಬೇಕು.

ಒಂದು ಸಲ 9ರ ಅಂಕೆಗೆ ಸೊಕ್ಕು ಬಂತು. ಅಂಕೆಗಳ ಪೈಕಿ ತಾನು ದೊಡ್ಡವ ಅಂತ. ಅದಕ್ಕೆ ಅದು 8ಕ್ಕೆ ಹೊಡೆಯಿತು.‘ಯಾಕೆ ಹೊಡೆದೆ’ ಎಂದು ಕೇಳಿತು 8. ‘ನಾನು ದೊಡ್ಡವ ಅದಕ್ಕೆ ಹೊಡೆದೆ’ ಎಂತು 9. ಹೊಡೆತ ತಿಂದ 8 ತಾನೇನು ಕಡಿಮೆ ಅಂತ 7ಕ್ಕೆ ಹೊಡೀತು. ‘ಯಾಕೆ ಹೊಡೆದೆ’ ಅಂತ 7 ಪ್ರಶ್ನೆ ಮಾಡಿದಾಗ, ‘ನಾನು ನಿನಗಿಂತ ದೊಡ್ಡವ’ ಅಂತು. 7 ಸುಮ್ಮನಿರಲಿಲ್ಲ 6ಕ್ಕೆ ಹೊಡೀತು. 6, 5ಕ್ಕೆ ಹೊಡೀತು. 5, 4ಕ್ಕೆ ಹೊಡೀತು. ಹೀಗೇ ಆಗಿ ಎರಡು ಒಂದಕ್ಕೆ ಹೊಡೀತು. ಆದರೆ ಒಂದು ಮಾತ್ರ ತನಗಿಂತ ಕೆಳಕ್ಕಿರುವ ಸೊನ್ನೆಗೆ ಹೊಡೆಯಲಿಲ್ಲ. ಇಬ್ಬರೂ ಕೂಡಿ ಇರೋಣ ಅಂತು.

ಹೀಗೆ ಒಂದು ಮತ್ತು ಸೊನ್ನೆ ಕೂಡಿದ್ದರಿಂದ ಅದು ಹತ್ತಾತು. ಆಗ 9 ಮೆತ್ತಗಾತು. ಕೂಡಿದ್ದರೆ ಹೆಚ್ಚಾಗುತ್ತದೆ. ಕೂಡಿಬಾಳಿದರೆ ಭೂಮಿ, ಬಾಳು ಸ್ವರ್ಗವಾಗುತ್ತದೆ. ಕಚ್ಚಾಡಿದರೆ ಯಾವುದೂ ಸ್ವರ್ಗವಾಗಲ್ಲ. ಪ್ರೇಮದಿಂದ ಕಟ್ಟಿದ್ದು ಉಳಿಯುತ್ತದೆ. ದ್ವೇಷದಿಂದ ಕಟ್ಟಿದ್ದು ಅಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.