ADVERTISEMENT

ನುಡಿ ಬೆಳಗು: ಚೆಂದ ಬದುಕ ಬದುಕಬೇಕು!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 12 ಸೆಪ್ಟೆಂಬರ್ 2024, 19:20 IST
Last Updated 12 ಸೆಪ್ಟೆಂಬರ್ 2024, 19:20 IST
   

ಇನ್ನೂ ವಸಂತ ಮಾಸ ಬಂದಿರದಿಲ್ಲ, ಆಗಲೇ ಕೋಗಿಲೆ ಹಾಡಾಕ ಶುರುಮಾಡತೈತಿ. ಇನ್ನೂ ಮಳೆಗಾಲ ಶುರುವಾಗಿಲ್ಲ, ಆಕಾಶದಲ್ಲಿ ಮೇಘಗಳ ಗರ್ಜನೆ ಕೇಳಿದರೆ ಸಾಕು ನವಿಲು ಕುಣಿಯಾಕ ಶುರುಮಾಡತೈತಿ. ಆದರ ಮನುಷ್ಯಗ? ಮಳಿ ಬಂದು, ಚಿಗುರು ಬಂದು, ಹೂವು ಬಿಟ್ಟು, ಹಣ್ಣು ಮನ್ಯಾಗ ಬಂದು ಬಿದ್ದಿತ್ತು. ಆದರೂ ಇವ ಅಳಕೋತ ಕುಂತಿದ್ದ. ದೇವರು ಬಂದು ಕೇಳಿದ ‘ಯಾಕಪ ಅಳಾಕತ್ತಿ’ ಅಂತ. ‘ಇನ್ನೂ ರೇಟ್ ಸಿಗವಲ್ದು’ ಅಂದ ಇವ. ಇವ ರೇಟಿನ ಮ್ಯಾಲೆ ಬದುಕಾಂವ.

ಚಲೋ ಮಾವಿನಹಣ್ಣು ರಫ್ತು ಮಾಡ್ತಾರ, ಕೆಟ್ಟದ್ದು ಮಕ್ಕಳಿಗೆ ತಿನ್ನಿಸ್ತಾರ, ಚಲೋ ಹಾಲು ಹೊಟೇಲ್‌ಗೆ ಕಳಿಸ್ತಾರ, ಮಕ್ಕಳಿಗೆ ಚಾ ಕುಡುಸ್ತಾರ. ದೇವರು ಇಷ್ಟು ಅದ್ಭುತ ಜಗತ್ತು ಕೊಟ್ಟಿದ್ದರೂ ನಮಗೆ ಅನುಭವಿಸಲು ಬರಲಿಲ್ಲ. ನಿಸರ್ಗ ಎಲ್ಲಾ ಕೊಟ್ಟಿದ್ದರೂ ಮನುಷ್ಯರದ್ದು ಅಳಲು ತಪ್ಪಲಿಲ್ಲ. ಟೆನ್ಷನ್, ಡಿಪ್ರೆಷನ್ ಎಲ್ಲಾ ಶಬ್ದಗಳೂ ಅದಾವ. ಚಿಂತೈತಿ ಅಂತಾರ. ಮೇಲೆ ಚಲೋ ಕಾಣತಿರ್ತಾನ, ಒಳಗ ಕೊತಕೊತ. ಬಾಳ ಚಿಂತೆ ಆಗೈತಿ ಅಂತಾರ, ಜೀವನದ ತುಂಬಾ ಚಿಂತೆನೇ ತುಂಬೈತಿ, ಜೀವನ ಅಂದ್ರ ಒಟ್ಟ ಸುಖ ಇಲ್ಲ ನೋಡ್ರಿ ಅಂತ ಹಿಮಾಲಯದಿಂದ ಬಂದ ಸಂತನಂಗ ಒಂದೇ ಮಾತಲ್ಲಿ ಹೇಳ್ತಾರ. ಕಣ್ಣು ಮುಚ್ಚಿಬಿಡಬೇಕು ಅಂತಿರ್ತಾರ, ದೇವರು ಕರಕಂಡಬಿಡಬೇಕು ಅಂತನೂ ಹೇಳ್ತಾರ. ಅವ ಯಾಕ್ ಕರಕಂಡಬಿಡಬೇಕು? ಅಲ್ಲಿ ಹೋಗಿಯಾದ್ರೂ ಏನು ಮಾಡ್ತೀರಿ? ಅಲ್ಲೇನ್ ಟಿವಿ ಐತಾ, ಧಾರಾವಾಹಿ ಅದಾವ? ಮೇಲೆ ಹೋಗಿ ಏನ್ ಮಾಡಾವ ನೀನು?

ಅವ ಕರಕೊಂಡು ಹೋಗಾಕ ಇಲ್ಲಿ ಕಳಿಸಿಲ್ಲ ನಮ್ಮನ್ನ. ಚಂದ ಬದುಕು ಅಂತ ಕಳಿಸ್ಯಾನ. ಡಿಪ್ರೆಷನ್, ಟೆನ್ಷನ್ ಅಂತೀರಲ್ಲ ಅದು ಎಲ್ಲೈತಿ? ನಾವು ಸಂತೋಷ ಇಲ್ಲ ಅಂತೀವಿ. ಆದರೆ ಮುರುಕು ಗುಡಿಸಿಲಿನೊಳಗ ಹರುಕು ಸೀರಿ ಜೋಳಿಗೆ ಮಾಡಿ ಮಗೂನ ತೂಗುತಿರ್ತಾಳ ತಾಯಿ, ಆಗ ಮಗು ನಗುತಿರತೈತಿ. ಮತ್ತ ಅದಕ್ಕೂ ಒಂದೇ ಜಗತ್ತು, ನಮಗೂ ಒಂದೇ ಜಗತ್ತು. ಮಗು ಯಾಕ ನಗತೈತಿ, ನಿನಗೆ ಯಾಕೆ ದುಃಖ? ಸಂಸಾರದೊಳಗ ದುಃಖ ಐತಿ ಅಂದರ ನಿನಗೂ ದುಃಖ ಇರಬೇಕು, ಮಗೂಗೂ ದುಃಖ ಇರಬೇಕಾಗಿತ್ತಲ್ಲ. ಮಕ್ಕಳಿಗೆ ಯಾಕೆ ದುಃಖ ಆಗೋದಿಲ್ಲ ಅಂದರ ಅವರು ಗಟ್ಟಿ ಇರ್ತಾರ. ದೀಪಾವಳಿಯೊಳಗ ಮಕ್ಕಳು ಆಕಾಶಬುಟ್ಟಿ ಕಟ್ತಾರ, ಯಾರು ಜಗತ್ತನ್ನು ದೀಪದಿಂದ ಬೆಳಗುತ್ತಾನೋ ಅವನಿಗೆ ಬೆಳಕು ಕೊಡ್ತಾರ. ನನ್ನ ಬೆಳಕು ನೋಡು ಅಂತಾರ. ಅಷ್ಟು ಮುಗ್ದ. ಹಾಂಗೆ ಇದ್ದುಬಿಡಿ.

ADVERTISEMENT

ಒಂದು ಸಿನಿಮಾ ನೋಡ್ತಿರ್ತೀರಿ. ಪರದೆ ಮೇಲೆ ಎಲ್ಲಾ ಕಾಣತೈತಿ. ಹೀರೋ, ಹೀರೋಯಿನ್ ನಕ್ಕಾಗ ನಕ್ಕು, ಅತ್ತಾಗ ಅತ್ತು ಬರ್ತೀವಿ. ಮಧ್ಯದಲ್ಲಿ ಕರೆಂಟ್ ಹೋಯ್ತು ಅಂದರ ಸಿನಿಮಾ ಕಾಣವಲ್ದು. ಪ್ರೊಜೆಕ್ಟರ್ ಬಂದ್ ಆಗೈತಿ. ಅದಕ್ಕೆ ಸಿನಿಮಾ ಇರಲ್ಲ. ಅಂದರೆ ಪ್ರೊಜೆಕ್ಟರ್ ಬಂದ್ ಆದರೆ ಪರದೆಯೊಳಗೆ ಏನೂ ಇರಲ್ಲ. ಜಗತ್ತು ಅನ್ನೋದು ಒಂದು ಪರದೆ. ಉದ್ವೇಗ, ಖಿನ್ನತೆ ಯಾವುದೂ ಅಲ್ಲಿ ಇಲ್ಲ. ಎಲ್ಲಾ ಇರೋದು ನಿನ್ನ ಮನಸ್ಸಿನೊಳಗೆ. ಮನಸ್ಸು ಪ್ರೊಜೆಕ್ಟರ್. ಅದು ಸುಖ ದುಃಖ ಎಲ್ಲಾ ತೋರಸತೈತಿ. ಹಂಗಾರೆ ಯಾಕೆ ದುಃಖ ಪಡ್ತಿ? ಸಂತೋಷವಾಗಿ ಬದುಕು ಅಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.