ನಾವು ಹೊಟ್ಟೆಗೆ ತಿನ್ನೋದು ಮಾತ್ರ ಆಹಾರವಲ್ಲ. ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಎಂಬ ಪಂಚೇಂದ್ರಿಯಗಳಿಂದ ಏನೇನು ಸ್ವೀಕಾರ ಮಾಡ್ತೀವಲ್ಲ ಅದೆಲ್ಲವೂ ಆಹಾರವೆ. ಕಣ್ಣಿಗೆ ರೂಪ, ಕಿವಿಗೆ ಶಬ್ದ, ಚರ್ಮಕ್ಕೆ ಸ್ಪರ್ಶ, ನಾಲಿಗೆಗೆ ರುಚಿ, ಮೂಗಿಗೆ ಗಂಧ ಆಹಾರ. ನಾಲಿಗೆಗೆ ಮಾತ್ರ ಮಿತಿ ಹಾಕೋದಲ್ಲ. ಕಣ್ಣಿಗೆ ರೂಪ ಆಹಾರ ಎಂದರೆ ನೋಡೋದನ್ನು ಕಡಿಮೆ ಮಾಡಬೇಕು.
ಮೊದಲೆಲ್ಲಾ ದೇವರ ಹೆಸರಿನಲ್ಲಿ ಉಪವಾಸ ಮಾಡುತ್ತಿದ್ದರು. ಈಗಲೂ ಉಪವಾಸ ಅಗತ್ಯ. ಅದರಲ್ಲೂ ಡಿಜಿಟಲ್ ಉಪವಾಸ ಇನ್ನೂ ಅಗತ್ಯ. ವಾರದಲ್ಲಿ ಒಂದು ದಿನ ಮೊಬೈಲ್ ಮುಟ್ಟಲ್ಲ, ಟಿವಿ ನೋಡಲ್ಲ ಅಂತ ಇದ್ದರೆ ಅದೂ ಉಪವಾಸ. ನಾವು ಏನನ್ನು ಬಳಸಿದರೂ ಅದನ್ನು ಮಿತವಾಗಿ ಬಳಸಬೇಕು. ನಾವು ವಿದ್ಯುತ್ ಉಪಯೋಗ ಮಾಡೋದನ್ನು ಕಡಿಮೆ ಮಾಡಬೇಕು. ಮನೆಯಲ್ಲಿ ಎಲ್ಲಾ ಲೈಟ್ ಹಾಕಿ ಉರಿಸೋದಕ್ಕಿಂತ ಅಗತ್ಯಕ್ಕೆ ಬೇಕಾದಷ್ಟು ಲೈಟ್‌ಗಳನ್ನು ಹಾಕಿ ಒಂದಿಷ್ಟು ಯುನಿಟ್ ವಿದ್ಯುತ್ ಉಳಿತಾಯ ಮಾಡಿದರೆ ಅದೇ ವಿದ್ಯುತ್‌ನಲ್ಲಿ ರೈತನೊಬ್ಬ ಪಂಪ್ ಚಾಲೂ ಮಾಡಿ ಬೆಳೆ ಬೆಳೀತಾನೆ. ಇದೂ ಉಪವಾಸವೆ. ನಮ್ಮಲ್ಲಿ 50 ಜೊತೆ ಬಟ್ಟೆ ಇದಾವೆ ಎಂದರೆ ಅದರಲ್ಲಿ ಒಂದೆರಡು ಜೊತೆ ಬಟ್ಟೆ ತ್ಯಾಗ ಮಾಡಿದರೆ ಎಲ್ಲೋ ಭಿಕ್ಷುಕರು ತಮ್ಮ ಮಾನಮುಚ್ಚಿಕೊಳ್ತಾರೆ. ಇದೂ ಮಿತ ಆಹಾರ ಪದ್ಧತಿ.
ತಟ್ಟೆಗೆ ಅನ್ನ ಹಾಕಿಕೊಂಡು ಕೆಡಸತೀವಿ ಎಂದರೆ ನಮ್ಮಿಂದ ಎರಡು ತಪ್ಪುಗಳಾಗುತ್ತವೆ. ಒಂದು ಯಾವುದೋ ರೈತ ಉಪವಾಸ ಇದ್ದು ದುಡಿದು ಆಹಾರ ಬೆಳೆದಿದ್ದರಿಂದ ಅನ್ನ ನಮ್ಮ ತಟ್ಟೆಗೆ ಬಂದೈತೆ. ನಾನು ದಂಡ ಮಾಡಿದರೆ ಅದು ರೈತನಿಗೆ ಅವಮಾನ ಮಾಡಿದ ಹಾಗೆ. ನಾನು ಅನ್ನ ದಂಡ ಮಾಡದೆ ಮಿತವಾಗಿ ಬಳಸಿದ್ದರೆ ಮಧ್ಯಾಹ್ನ ಬಿಸಿಯೂಟ ಮಾಡುವ ಮಕ್ಕಳಿಗೆ ಬೆಳಿಗ್ಗೆಯೂ ಆಹಾರ ಸಿಗುತ್ತಿತ್ತು ಅನ್ನೋದು ನೆನಪಿದ್ದರೆ ಅದೂ ಮಿತ ಆಹಾರ ತಿನ್ನುವ ವಿಧಾನವೆ. ಮನೆ ಎಂದರೆ ಸಾಮಾನುಗಳನ್ನು ಇಡೋ ಉಗ್ರಾಣ ಅಲ್ಲ. ಎಷ್ಟು ಬೇಕೋ ಅಷ್ಟಿರಬೇಕು.
ಮಿತವಾಗಿ ಬದುಕುವುದು ಯಾಕೆಂದರೆ ಮಿತ ಎಂದರೆ ಅಮೃತ. ನಾವು ತಿನ್ನುವ ಆಹಾರ ಯಾವಾಗ ಅಮೃತವಾಗುತ್ತದೆ? ನಾವು ದುಡಿದಿದ್ದರಲ್ಲಿ ತಂದ ಅನ್ನವಾಗಿದ್ದರೆ ಅದು ಅಮೃತ. ಇಲ್ಲವಾದರೆ ವಿಷ. ಪ್ರತಿ ತುತ್ತು ಅನ್ನ ಉಣ್ಣುವಾಗಲೂ ನಾವು ಕೇಳಿಕೊಳ್ಳಬೇಕು ಈ ಅನ್ನಬೇಯಿಸಿದ ನೀರು ನಮ್ಮ ಶ್ರಮದ ಬೆವರಿನ ನೀರೋ ಅಥವಾ ಪರರ ಕಣ್ಣೀರೋ ಅಂತ. ನಮ್ಮ ಶ್ರಮವಾದರೆ ನಾವು ಉಣ್ಣುವ ಅನ್ನ ಅಮೃತ. ಇತರರ ಕಣ್ಣೀರಾದರೆ ಅದು ವಿಷ. ಇದರ ಜೊತೆಗೆ ವ್ಯಾಯಾಮ ಕೂಡಾ ಇರಬೇಕು. ಯಾಕ ಎಕ್ಸಸೈಸ್ ಮಾಡಬೇಕು ಅಂದರೆ ದೇಹ ಎಕ್ಸ್ ಟ್ರಾ ಸೈಜ್ ಆಗಬಾರದು ಅದಕ್ಕೆ.
ಇರುವೆಗೆ ಯಾರೋ ಕೇಳಿದರಂತೆ ‘ನೀನು ಇಷ್ಟೊಂದು ಸಕ್ಕರೆ ತಿನ್ನುತ್ತಿ. ಆದರೂ ನಿನಗೆ ಯಾಕೆ ಮಧುಮೇಹ ಬರೋದಿಲ್ಲ’ ಅಂತ. ಅದಕ್ಕೆ ಇರುವೆ ‘ನಾನು ಕಾಯಂ ವಾಕಿಂಗ್ ಮಾಡ್ತಾನೇ ಇರ್ತೀನಿ ಅದಕ್ಕೆ’ ಅಂತ ಉತ್ತರಿಸಿತಂತೆ. ಹಿತ, ಮಿತವಾದ ಆಹಾರದ ಜೊತೆಗೆ ನಿರಂತರ ವ್ಯಾಯಾಮ ಕೂಡ ಮುಖ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.