ADVERTISEMENT

ನುಡಿ ಬೆಳಗು –60 | ದೇಹ ಎಂಬ ಅದ್ಭುತ!

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 0:25 IST
Last Updated 6 ನವೆಂಬರ್ 2024, 0:25 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ದೇಹದ ಆರೋಗ್ಯ ಮುಖ್ಯ. ದೇಹ ಎಷ್ಟು ಅದ್ಭುತ ನೋಡಿ. ಅಲ್ಲಮಪ್ರಭು ಈ ದೇಹಕ್ಕೆ ಅದ್ಭುತ ಎಂದರು. ಯಾಕೆ ಅದ್ಭುತ? ಯಾಕೆಂದರ, ‘ಭೂತ ಭೂತವ ಕೂಡಿ ಅದ್ಭುತವಾಯ್ತು’ ಅಂತಾರ ಅಲ್ಲಮಪ್ರಭು. ಈ ದೇಹ ಪಂಚಮಹಾಭೂತಗಳಿಂದ ತಯಾರಾಗೈತಿ. ಪಂಚ ಭೂತಗಳು ಜೀವಿಗಳಲ್ಲ. ಜಡ ವಸ್ತುಗಳು. ಜಡದಿಂದ ಜೀವ ಉತ್ಪತ್ತಿಯಾಗುತ್ತದಲ್ಲ ಅದು ಅದ್ಭುತ. ತಾಯಿಯ ಗರ್ಭದಿಂದ ಭೂಗರ್ಭ ಸೇರುವವರೆಗೆ ನಮ್ಮ ಜೊತೆ ಇರೋದು ಈ ದೇಹ. ಸಂಪತ್ತು ಬಂದಾವ ಹೋಗ್ಯಾವ, ಸಂಬಂಧಗಳು ಬಂದಾವ ಹೋಗ್ಯಾವ, ಆಸ್ತಿ ಅಂತಸ್ತು ಬಂದಾವ ಹೋಗ್ಯಾವ, ಗೌರವ ಆದರಗಳು ಬಂದಾವ ಹೋಗ್ಯಾವ. ಆದರೆ ದೇಹ ಯಾವಾಗಲೂ ನಮ್ಮ ಜೊತೆ ಐತಿ.

ಐದಾರು ಮಂದಿ ಇರುವ ಮನೆಯೊಳಗೇ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವಲ್ದು. ಅಣ್ಣನನ್ನು ಕಂಡರೆ ತಮ್ಮನಿಗೆ, ಅತ್ತೆಯನ್ನು ಕಂಡರೆ ಸೊಸೆಗೆ, ತಂಗಿಯನ್ನು ಕಂಡರೆ ಅಕ್ಕನಿಗೆ ಆಗೋವಲ್ದು. ಆದರ ಈ ದೇಹದೊಳಗೆ ಎಷ್ಟು ನರಗಳಿದಾವೆ, ಅಪಧಮನಿ, ಅಭಿಧಮನಿ, ಜೀರ್ಣಾಂಗ, ಸಾವಿರಾರು ಕೋಟಿ ಕೋಟಿ ಜೀವ ಕೋಶಗಳಿದಾವಲ್ಲ. ನಾವು ಬೆಳಿಗ್ಗೆ ತಿಂದ ಒಂದು ಕಟಿರೊಟ್ಟಿ ಈ ಎಲ್ಲ ಜೀವಕೋಶಗಳಿಗೆ ತಲುಪತೈತಿ. ಯಾವ ಜೀವಕೋಶವೂ ಇವತ್ತು ನನಗೆ ಆಹಾರ ಕೊಟ್ಟಿಲ್ಲ ಅಂತ ದೂರು ಹೇಳಿಲ್ಲ. ಎಷ್ಟೊಂದು ಸಹಕಾರದಿಂದ ಬದುಕ್ಯಾವೆ? ಇದು ನಿಸರ್ಗ ಸೃಷ್ಟಿಸಿದ ಅದ್ಭುತ ಸಹಕಾರಿ ವ್ಯವಸ್ಥೆ. ಎಷ್ಟು ಚೊಲೋ ಐತಿ. ಹಾಗಾಗಿ, ಈ ದೇಹ ಕೆಡಲಾರದಂತೆ ನೋಡಿಕೊಳ್ಳುವುದು ಮುಖ್ಯ.

ADVERTISEMENT

ದೇಹ ಕೆಡದಂತೆ ನೋಡಿಕೊಳ್ಳಲು ನಮ್ಮ ಪೂರ್ವಜರು, ಋಷಿಗಳು ಮೂರು ಸೂತ್ರ ಹೇಳ್ಯಾರ. ಹಿತ, ಮಿತ ಮತ್ತು ಋತ. ಹಿತ ಅಂದರ ನಮ್ಮ ದೇಹಕ್ಕೆ ಯಾವುದು ಹಿತ ಐತಿ ಅದನ್ನು ಉಣ್ಣು ಅಂತ. ಮಿತ ಅಂದರ ಆಹಾರವನ್ನು ಮಿತವಾಗಿ ಉಣ್ಣು ಅಂತ. ಋತ ಎಂದರೆ ಋತುಗಳನ್ನು ನೋಡಿ ಉಣ್ಣು ಅಂತ. ನಾವು ಈಗ ಉಣ್ಣುವುದು ದೇಹಕ್ಕೆ ಹಿತವಾಗಿಲ್ಲ. ಹೊಟ್ಟೆ ಸ್ಮಶಾನ ಅಲ್ಲ. ಕೊಳಚೆ ಗುಂಡಿಯೂ ಅಲ್ಲ. ಬೇಕು ಬೇಡದ್ದನ್ನು ಅಲ್ಲಿ ಹಾಕಬಾರದು. ಸ್ವಚ್ಛವಾಗಿದ್ದು ಮತ್ತು ಹಿತವಾಗಿದ್ದನ್ನು ಮಾತ್ರ ತಿನ್ನಬೇಕು.

ಭಾರತ ಸರ್ಕಾರದವರು ಫಿಟ್ ಇಂಡಿಯಾ
ಅಂತ ಘೋಷಣೆ ಮಾಡ್ಯಾರ. ಏನಿದು ಫಿಟ್ ಇಂಡಿಯಾ? ದೇಹ ಸದೃಢವಾಗಿರಬೇಕು. ಅದಕ್ಕೆ ನಾವು ತಿನ್ನುವ ಆಹಾರವೂ ಶುದ್ಧವಾಗಿರಬೇಕು. ಮನಸ್ಸು ತಾಳ್ಮೆಯಿಂದ ಇರಬೇಕು. ಇನ್ನೊಬ್ಬರ ಕಣ್ಣೀರು ಒರೆಸುವ ಹೃದಯ ಇರಬೇಕು. ಅಂತಹವನಿಗೆ ಆರೋಗ್ಯವಂತ ಅಂತಾರ.
ಅದೇ ಫಿಟ್ ಇಂಡಿಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.