ADVERTISEMENT

ನುಡಿ ಬೆಳಗು: ಕೆಲಸದ ಮಹತ್ವ

ಪಿ. ಚಂದ್ರಿಕಾ
Published 4 ಜೂನ್ 2024, 0:20 IST
Last Updated 4 ಜೂನ್ 2024, 0:20 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಒಬ್ಬ ವ್ಯಕ್ತಿ ದಾರಿಯಲ್ಲಿ ನಡೆಯುತ್ತಾ ಬರುತ್ತಿದ್ದಾನೆ. ಕಾಡಿನ ಅಂಚಿಗೆ ಬರುವಾಗ ಸ್ವಲ್ಪ ದೂರದಲ್ಲಿ ಊರಿರುವ ಸೂಚನೆಯಂತೆ ಒಂದಿಷ್ಟು ದನಗಾಹಿಗಳು ಅಲ್ಲಲ್ಲಿ ಹರಟೆ ಹೊಡೆಯುತ್ತಾ, ದನಗಳನ್ನು ದಾರಿಗೆ ತರುವಂತೆ ಕೂಗುತ್ತಲಿದ್ದಾರೆ. ದಾರಿಹೋಕ ವ್ಯಕ್ತಿಗೆ ಇದ್ದಕ್ಕಿದ್ದ ಹಾಗೆ ಬಾಣವೊಂದು ಬಂದು ಎದೆಗೆ ಚುಚ್ಚಿಕೊಳ್ಳುತ್ತದೆ. ಅವನು ನೋವನ್ನು ಸಹಿಸಿಕೊಳ್ಳಲಾಗದೆ ಚೀರಿಕೊಳ್ಳುತ್ತಾನೆ. ಅಲ್ಲಿದ್ದ ದನಗಾಹಿಗಳು ಅವನೆಡೆಗೆ ಓಡಿಬಂದು ಅವನ ಎದೆಗೆ ಚುಚ್ಚಿಕೊಂಡಿದ್ದ ಬಾಣವನ್ನು ತೆಗೆಯಲು ನೋಡುತ್ತಾರೆ ಆದರೆ ದಾರಿಹೋಕ ಅವರನ್ನು ತಡೆದು ‘ದಯವಿಟ್ಟು ಯಾರೂ ಈ ಬಾಣವನ್ನು ತೆಗೆಯಬೇಡಿ’ ಎಂದು ಬೇಡಿಕೊಳ್ಳುತ್ತಾನೆ. ದನಗಾಹಿಗಳಿಗೆ ಅಚ್ಚರಿ, ‘ಅಯ್ಯಾ ಯಾಕೆ ನೀನು ಬಾಣವನ್ನು ತೆಗೆಯಬೇಡಿ ಎನ್ನುತ್ತಿರುವೆ? ನೋಡು ಒಂದೇ ಸಮನೆ ರಕ್ತ ಸುರಿಯುತ್ತಿದೆ. ಹೀಗೆಯೇ ಬಿಟ್ಟರೆ ನೋವು ಹೆಚ್ಚಾಗುತ್ತದೆ’ ಎನ್ನುತ್ತಾರೆ.

ಆ ಮಾತನ್ನು ಕೇಳಿ ದಾರಿಹೋಕ, ‘ಹೌದು ಬಾಣವನ್ನು ತೆಗೆಯುವ ಮೊದಲು ಯಾರು ಈ ಬಾಣವನ್ನು ಬಿಟ್ಟರು? ಯಾಕೆ ಬಿಟ್ಟರು ಮತ್ತು ಅದನ್ನು ನನಗೇ ಬಿಟ್ಟರೇ? ಅಥವಾ ಬೇರೆ ಯಾರಿಗೋ ಬಿಟ್ಟ ಬಾಣ ನನಗೆ ತಾಕಿತೇ? ಈ ಎಲ್ಲ ಸಂಗತಿಗಳನ್ನು ತಿಳಿದುಕೊಳ್ಳಬೇಕು’ ಎಂದನು. ಆಗ ದನಗಾಹಿಗಳು, ‘ಅಯ್ಯಾ ಅದನ್ನೆಲ್ಲಾ ತಿಳಿದುಕೋ, ಬೇಡ ಅಂದವರು ಯಾರು? ಆದರೆ ಅದಕ್ಕೂ ಮೊದಲು ನಿನ್ನ ಎದೆಗೆ ನೆಟ್ಟ ಬಾಣದಿಂದಾಗಿ ಸುರಿಯುತ್ತಿರುವ ರಕ್ತ ನಿಲ್ಲಬೇಕು. ಅದಕ್ಕೆ ಔಷಧ ಮಾಡಬೇಕು’ ಎನ್ನುತ್ತಾರೆ. ಅದಕ್ಕೆ ದಾರಿಹೋಕ, ‘ಇಲ್ಲ ಇಲ್ಲ ನನಗೆ ಸತ್ಯ ಗೊತ್ತಾಗುವವರೆಗೂ ಈ ಬಾಣವನ್ನು ತೆಗೆಯಲು ಬಿಡುವುದಿಲ್ಲ’ ಎಂದು ಹಟ ಮಾಡುತ್ತಾನೆ. ಹೇಳುವವರು ಕೇಳುವವರ ಮಧ್ಯೆ ಮಾತುಕತೆ ಹೀಗೆ ನಡೆಯುತ್ತಲೇ ಇತ್ತು. 

ADVERTISEMENT

ಸ್ವಲ್ಪ ಹೊತ್ತಿನ ನಂತರ ದಾರಿಹೋಕ ರಕ್ತಸ್ರಾವದಿಂದ ನರಳುತ್ತಲೇ ಸಾಯುವ ಸ್ಥಿತಿ ತಲುಪುತ್ತಾನೆ. ಇದನ್ನೆಲ್ಲಾ ಗಮನಿಸುತ್ತಿದ್ದ ದಾರಿಯಲ್ಲಿ ಹೋಗುತ್ತಿದ್ದ ಯುವಕ ಹಿಂದೂ ಮುಂದೂ ಯೋಚಿಸದೆ ಸೀದಾ ಮುಂದೆ ಬಂದು ನಾಟಿದ್ದ ಬಾಣವನ್ನು ಪ್ರತಿಭಟನೆಯ ನಡುವೆಯೂ ಕಿತ್ತುಹಾಕಿದ. ಕೋಪಗೊಂಡ ದಾರಿಹೋಕ ಅವನನ್ನು ಬಯ್ಯಲು ಆರಂಬಿಸಿದ ಇದರಿಂದ ಕೋಪಗೊಂಡ ಯುವಕ ‘ಬದುಕಯ್ಯ, ಮೊದಲು ಬದುಕು. ಪ್ರಶ್ನೆಗೆ ಉತ್ತರ ಸಿಗದಿದ್ದರೆ ಅಷ್ಟೇ ಹೋಯಿತು. ಅದರಿಂದ ನಿನಗೆ ನಷ್ಟವೇನೂ ಇಲ್ಲ. ಮೊದಲು ನಿನ್ನ ಜೀವದ ಬಗ್ಗೆ ಯೋಚಿಸು. ಜೀವ ಹೋದರೆ ಮತ್ತೆ ದಕ್ಕುವುದಿಲ್ಲ’ ಎಂದ. ಅಷ್ಟು ಹೊತ್ತು ಅವನನ್ನು ಸಂತೈಸಿ ಬುದ್ಧಿ ಹೇಳಿದವರೂ ಮತ್ತು ದಾರಿಹೋಕ ಇಬ್ಬರೂ ಅಚ್ಚರಿಗೊಳಗಾದರು. ಆ ಯುವಕ ಹೇಳಿದ, ‘ನಿಮ್ಮಿಬ್ಬರಿಗೂ ಬುದ್ಧಿಯಿಲ್ಲ, ಇದು ಇವನನ್ನು ಸಂತೈಸಿ ಬುದ್ಧಿಹೇಳುವ ಸಮಯವೂ ಅಲ್ಲ, ಜೀವಕ್ಕಿಂತ ಪ್ರಶ್ನೆಗೆ ಉತ್ತರ ಹುಡುಕುವುದೂ ಮುಖ್ಯವಲ್ಲ. ಕಷ್ಟದ ಕ್ಷಣಗಳನ್ನು ದಾಟಿಕೊಳ್ಳಲು ಉಪಾಯವನ್ನು ಮಾತ್ರ ಹುಡುಕಿಕೊಳ್ಳಬೇಕು. ವ್ಯರ್ಥವಾದ ವಾದಗಳು ಯೋಚನೆಗಳು ಯಾವತ್ತೂ ಸರಿಯಲ್ಲ’ ಎನ್ನುತ್ತಾನೆ. 

ನಿಜ, ಬಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೇ ಹೊರತು ನಮಗೆ ನಾವೇ ಸಮಸ್ಯೆಯಾಗಬಾರದು. ಸಂದರ್ಭ ಕೆಲಸ ಮಾಡುವುದೇ ಆದರೆ ಅದನ್ನಷ್ಟನ್ನು ಮಾತ್ರ ಮಾಡಬೇಕು. ಅಂತಹ ಸಂದರ್ಭದಲ್ಲಿ ಮಾತು ವ್ಯರ್ಥ ಅಲ್ಲವೇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.