ನಾವು ವಾಸಿಸುವ ಈ ಭೂಮಿ ಸ್ವರ್ಗ ಸಮಾನವಾದುದು. ಇದು ಋಷಿಗಳ ಅಭಿಪ್ರಾಯ. ಇಂತಹ ಭೂಮಿ ಇನ್ನೊಂದು ಸಿಗಾಕೆ ಸಾಧ್ಯವಿಲ್ಲ. ಒಂದು ಜೀವ ಹುಟ್ಟಿ ವಿಕಾಸ ಆಗಲು ಏನೇನು ಬೇಕೋ ಅದೆಲ್ಲವನ್ನೂ ನಿಸರ್ಗ ನಿರ್ಮಾಣ ಮಾಡೈತಿ. ಅನ್ನ, ನೀರು, ಗಾಳಿ, ಬೆಳಕು ಯಾವುದಕ್ಕೂ ಕೊರತೆ ಇಲ್ಲ. ಎಲ್ಲವನ್ನೂ ನಿಸರ್ಗ ನಮಗಾಗಿ ನಿರ್ಮಾಣ ಮಾಡಿದೆ. ಅನ್ನಕ್ಕಾಗಿ, ನೀರಿಗಾಗಿ, ಗಾಳಿಗಾಗಿ, ಬೆಳಕಿಗಾಗಿ ಏನಾದರೂ ದುಡ್ಡು ಕೊಡಬೇಕೇನು? ಎಲ್ಲವೂ ಪುಕ್ಕಟೆ ಸಿಗುತೈತಿ. ಕೆಲವರು ಮಂಗಳ ಗ್ರಹಕ್ಕೆ ಹೋಗಿ ಬಂದಾರ. ಇನ್ನು ಕೆಲವರು ಚಂದ್ರ ಗ್ರಹಕ್ಕೆ ಹೋಗ್ಯಾರ. ಆದರೆ, ಹೋಗುವಾಗ ಅನ್ನ, ನೀರು, ಗಾಳಿಯನ್ನು ಕಟಗೊಂಡೇ ಹೋಗ್ಯಾರ. ಬೇರೆ ಯಾವುದೇ ಗ್ರಹಗಳಲ್ಲಿ ನೀರು ಗಾಳಿ, ಅನ್ನ ಸಿಗೋದಿಲ್ಲ. ಜೀವಿಗಳು ಬದುಕೋಕೆ ಯೋಗ್ಯವೇ ಇಲ್ಲ. ಜೀವಿ ಸಂತೋಷವಾಗಿ ಬದುಕಲು ಏನೇನು ಬೇಕೋ ಅದೆಲ್ಲವನ್ನೂ ನಿಸರ್ಗ ನಮಗೆ ಕೊಟ್ಟೈತಿ. ಅದಕ್ಕಾಗಿಯೇ ಈ ಭೂಮಿ ನಿಜವಾದ ಸ್ವರ್ಗ.
ಗಗನಯಾತ್ರಿಗಳು, ಜಲಯಾತ್ರಿಗಳು ಹುಡುಕಾಟ ನಡೆಸಿದರೂ ಇಂತಹ ಗ್ರಹ ಇನ್ನೊಂದು ಸಿಕ್ಕಿಲ್ಲ. ಸನ್ಯಾಸಿಗಳು ಪವಾಡ ಮಾಡ್ತಾರೆ ಅಂತಾರ. ಕೈ ಅಲ್ಲಾಡಿಸಿ ಭಸ್ಮ ತರ್ತಾರೆ. ಬಂಗಾರದ ಉಂಗುರ ತರ್ತಾರೆ. ಆದರೆ ಇವೆಲ್ಲ ಪವಾಡಗಳಲ್ಲ. ಕೇವಲ ಕೈಚಳಕ ಅಷ್ಟೆ. ನಿಜವಾಗಿ ಪವಾಡ ಮಾಡೋಳು ಭೂಮಿ ತಾಯಿ. ನೀವು ಹಣ್ಣು ತಿಂದು ಗೊಟ್ಟ ಹುಗಿದರೂ ಅದು ಚಿಗುರಿ ಸಾವಿರ ಹಣ್ಣು ಕೊಡುತ್ತದಲ್ಲ ಅದು ನಿಜವಾದ ಪವಾಡ. ಇಂತಹ ಭೂಮಿಯಲ್ಲಿ ಸಂತೋಷವಾಗಿ ಬದುಕಲು ಬರದಿದ್ದರೆ ಅವ ಇನ್ನು ಎಲ್ಲಿ ಸಂತೋಷವಾಗಿ ಬದುಕಬಹುದು? ಹುಟ್ಟಿದ ಪ್ರತಿಯೊಬ್ಬನಿಗೂ ತಾನು ಸಂತೋಷವಾಗಿ ಇರಬೇಕು ಎಂದಿರತೈತಿ. ನಾವು ಗುಡಿಗುಂಡಾರ ಗಳಿಗೆ ಹೋಗಿದ್ದು, ಜ್ಯೋತಿಷಿಗಳ ಬಳಿಗೆ ಹೋಗಿದ್ದು, ಮಠ ಮಂದಿರಗಳಿಗೆ ಹೋಗಿದ್ದು ಯಾತಕ್ಕೆ? ನಾವು ಸಂತೋಷವಾಗಿರಬೇಕು ಅಂತ ಹೋಗೇವಿ. ಆದರೆ ಅಲ್ಲೆಲ್ಲಾ ನಮಗೆ ಭೆಟ್ಟಿಯಾಗಿದ್ದು ದುಃಖನೇ. ಸಂತೋಷವನ್ನು ಅನುಭವಿಸಲು ಯಾವ ಸಾಧನ ಇರಬೇಕು? ನಾವೆಲ್ಲ ಏನು ಅಂದಕೊಂಡೀವಿ ಅಂದರೆ ಒಂದು ದೊಡ್ಡ ಬಂಗಲೆ ಇದ್ದರೆ ಸಂತೋಷವಾಗಿ ಇರ್ತೀವಿ ಅಂತ.
ಒಬ್ಬ ಒಂದು ಭಾರೀ ಮನೆ ಕಟ್ಟಿಸಿದ್ದ. ಒಂದು ಎಕರೆ ಗಾರ್ಡನ್ ಮಾಡಿದ್ದ. ಸ್ವಿಮ್ಮಿಂಗ್ ಪೂಲ್ ಇತ್ತು. ವಾಕಿಂಗ್ ಟ್ರ್ಯಾಕ್ ಇತ್ತು. ಅವ ಮಾತ್ರ ಕುರ್ಚಿ ಮೇಲೆ ಸುಮ್ಮನೆ ಕುಳಿತಿದ್ದ. ಅದನ್ನು ನೋಡಿದ ಒಬ್ಬ ‘ನೀವು ಯಾಕ್ ವಾಕ್ ಮಾಡೋದಿಲ್ಲ’ ಎಂದು ಕೇಳಿದ. ಅದಕ್ಕೆ ಇವ ‘ಏನ್ ಮಾಡೋದ್ರಿ ಮಂಡಿನೋವು’ ಎಂದ. ದೊಡ್ಡ ಬಂಗ್ಲೆ ಐತಿ, ವಾಕಿಂಗ್ ಟ್ರ್ಯಾಕ್ ಐತಿ. ಆದರೆ ಅಡ್ಡಾಡಕ್ಕೇ ಬರಲಿಲ್ಲ ಅಂದ್ರ ಏನ್ ಸುಖ? ಇನ್ನೊಬ್ಬ ಹತ್ತು ಸಕ್ಕರೆ ಕಾರ್ಖಾನೆ ಮಾಲೀಕ ಇದ್ದ. ಆದರೆ, ಅವ ದಿನಾ ಬೆಳಿಗ್ಗೆ ಎದ್ದು ಹಾಗಲಕಾಯಿ ರಸ ಕುಡೀತಿದ್ದ. ರಾತ್ರಿ ರಾಗಿ ಗಂಜಿ. ಮಧ್ಯಾಹ್ನ ಅನ್ನ ಮಜ್ಜಿಗಿ ಇಷ್ಟೆ. ಮೊದಲು ಸೈಕಲ್ ತುಳೀತಿದ್ದ. ಕಾಲು ನೋವು ಬಂತು ಅಂತ ಬೈಕ್ ತಗಂಡ. ಬೆನ್ನು ನೋವು ಬಂತು. ಅದಕ್ಕೆ ಕಾರು ತಗಂಡ. ಆಗ ಹೊಟ್ಟೆ ಬಂತು. ಈಗ ಹೊಟ್ಟೆ ಕರಗಿಸಲು ಮತ್ತೆ ಸೈಕಲ್ ಹೊಡೀತಾನೆ. ಇದೇ ರೀಸೈಕಲ್. ಸಂತೋಷಕ್ಕಾಗಿ ನಿರಂತರ ಹುಡುಕಾಟ ಅಷ್ಟೆ.
v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.