ಒಂದೂರಿನಲ್ಲಿ ಬಹುಚುರುಕಿನ ಹುಡುಗನೊಬ್ಬನಿದ್ದ. ಆದರೆ ಸಿಟ್ಟು ಮಾಡಿಕೊಂಡು ಒರಟಾಗಿ ಮಾತಾಡುವುದು ಅವನ ಸ್ವಭಾವ. ಹೀಗೇ ಆದರೆ ಮುಂದೇನು ಎಂದು ಬಹಳ ಯೋಚಿಸಿ ತಂದೆ ಒಂದು ಉಪಾಯ ಮಾಡುತ್ತಾರೆ. ಮಗನನ್ನು ಕರೆದು ಒಂದು ದೊಡ್ಡ ಚೀಲದ ತುಂಬ ಮೊಳೆಗಳು ಹಾಗೂ ಒಂದು ದೊಡ್ಡ ಸುತ್ತಿಗೆಯನ್ನು ಕೊಟ್ಟು, ಕೋಪ ಬಂದಾಗಲೆಲ್ಲ ಹಿತ್ತಿಲಿನಲ್ಲಿ ಇರುವ ಒಂದು ಮರದ ದಪ್ಪನೆಯ ಹಲಗೆಗೆ ಒಂದೊಂದು ಮೊಳೆಯನ್ನು ಜೋರಾಗಿ ಹೊಡೆಯಲು ಹೇಳುತ್ತಾರೆ. ಕಬ್ಬಿಣದಷ್ಟು ಗಟ್ಟಿಯಿರುವ ಆ ಹಲಗೆಗೆ ಮೊದಲ ದಿನವೇ ಎಂಟು ಮೊಳೆ ಹೊಡೆಯುತ್ತಾನೆ ಆ ಹುಡುಗ!
ಗಟ್ಟಿಯಾದ ಆ ಹಲಗೆಗೆ ಕಷ್ಟಪಟ್ಟು ಮೊಳೆ ಹೊಡೆಯುವುದಕ್ಕಿಂತ ಸಿಟ್ಟನ್ನು ತಡೆಹಿಡಿಯುವುದೇ ಸುಲಭವೆಂದು ಆತನಿಗೆ ದಿನಗಳೆದಂತೆ ಅನಿಸತೊಡಗುತ್ತದೆ. ಹಂತಹಂತವಾಗಿ ಪ್ರಯತ್ನಿಸುತ್ತ ಆತ ಒಮ್ಮೆಯೂ ಕೋಪಿಸಿಕೊಳ್ಳದಿರುವ ದಿನವೂ ಬರುತ್ತದೆ. ತಾನಿವತ್ತು ಹಲಗೆಗೆ ಒಂದೂ ಮೊಳೆ ಹೊಡೆದಿಲ್ಲವೆಂದು ಹೆಮ್ಮೆಯಿಂದ ತಂದೆಯ ಹತ್ತಿರ ಹೇಳಿಕೊಳ್ಳುತ್ತಾನೆ. ಆಗ ಅಪ್ಪ ಶಹಬ್ಬಾಸ್‌ಗಿರಿ ನೀಡಿ, ‘ಹಾಗಾದರೆ ನೀನು ಒಮ್ಮೆಯೂ ಕೋಪಿಸಿಕೊಳ್ಳದಿರುವ ದಿನ ಒಂದೊಂದೇ ಮೊಳೆಯನ್ನು ಕೀಳುತ್ತ ಬಾ’ ಎನ್ನುತ್ತಾರೆ.
ಹಲವಾರು ವಾರಗಳ ನಂತರ, ‘ಎಲ್ಲ ಮೊಳೆಗಳನ್ನೂ ಕಿತ್ತುಬಿಟ್ಟೆ’ ಎಂದಾತ ಹೇಳಿದಾಗ ತಂದೆ ಆತನನ್ನು ಹಲಗೆಯ ಹತ್ತಿರ ಕರೆದುಕೊಂಡು ಹೋಗುತ್ತಾರೆ. ‘ನಿಜಕ್ಕೂ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧ್ಯ ಎಂದು ನೀನು ತೋರಿಸಿಕೊಟ್ಟೆ. ಆದರೆ ಮೊಳೆಗಳನ್ನು ಕಿತ್ತ ಹಲಗೆಯನ್ನು ನೋಡಿದ್ದೀಯಾ? ಈಗ ಅದು ಮುಂಚಿನಂತಾಗಲು ಸಾಧ್ಯವಿದೆಯೇ? ಇಲ್ಲ ತಾನೇ, ಅದೇ ರೀತಿ ಕೋಪದಲ್ಲಿ ನೀನಾಡಿದ ಮಾತುಗಳು ಇತರರ ಮನಸ್ಸಿನ ಮೇಲೆ ಮಾಯದ ಕಲೆಗಳನ್ನುಂಟು ಮಾಡುತ್ತವೆ. ನೀನೆಷ್ಟೇ ಕ್ಷಮೆ ಕೋರಿದರೂ ಆ ಕಲೆ ಹಾಗೇ ಉಳಿಯುತ್ತದೆ’ ಎಂದು ಅಪ್ಪ ಹೇಳುತ್ತಾರೆ. ಆಗ ಮಗನಿಗೆ ತನ್ನ ತಪ್ಪಿನ ತೀವ್ರತೆ ಅರ್ಥವಾಗಿ ಇನ್ನೆಂದೂ ಕೋಪದ ಕೈಲಿ ಬುದ್ಧಿಯನ್ನು ಕೊಡುವುದಿಲ್ಲವೆಂದು ತೀರ್ಮಾನಿಸುತ್ತಾನೆ.
ಈ ಮಾತುಗಳು ಬಹು ವಿಚಿತ್ರ. ಒಬ್ಬರ ಹೃದಯದಲ್ಲಿ ಹೂವನ್ನರಳಿಸಬಲ್ಲ ಮಾತುಗಳಿಗೆ ಮತ್ತೊಬ್ಬರ ಬದುಕನ್ನು ಕಾಳ್ಗಿಚ್ಚಿನಂತೆ ಸುಟ್ಟು ಬಿಡುವ ತಾಕತ್ತೂ ಇದೆ. ಮಾತುಗಳು ಜಗತ್ತಿನ ಇತಿಹಾಸವನ್ನೇ ಬದಲಾಯಿಸಿವೆ. ಮಾಣಿಕ್ಯದ ದೀಪ್ತಿಯಂತೆ, ಮುತ್ತಿನ ಹಾರದಂತೆ ಇರಬೇಕಾದ ಮಾತುಗಳನ್ನು ಬಳಸುವಾಗ ಬಲು ಜಾಗೃತೆಯಿಂದಿರಬೇಕು. ಆಡದಿರುವ ಮಾತುಗಳ ಮಾಲೀಕರು ನಾವಾದರೂ ಬಾಯಿಂದ ಹೊರಬಿದ್ದ ಮೇಲೆ ಪದಗಳು ನಮ್ಮನ್ನು ಆಳುತ್ತವೆ. ಮಾತುಗಳು ನಮ್ಮನ್ನು ಕೊಲ್ಲಬಲ್ಲವು, ಕಾಯಬಲ್ಲವು, ಗಾಸಿಗೊಳಿಸಬಲ್ಲವು, ಗುಣಪಡಿಸಬಲ್ಲವು! ಹಕ್ಕಿಯ ರೆಕ್ಕೆಯಷ್ಟು ಹಗುರವಾಗಿ ತೇಲಾಡಿಸಬಲ್ಲ ಮಾತುಗಳೇ ಕಬ್ಬಿಣದ ಗುಂಡು ಕಟ್ಟಿ ಮುಳುಗಿಸಬಲ್ಲವು. ಹಾಗಾಗಿ ಪದಗಳನ್ನು ಎಚ್ಚರಿಕೆಯಿಂದ ಉಪಯೋಗಿಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.