ADVERTISEMENT

ನುಡಿ ಬೆಳಗು | ಬೆನ್ನ ಹಿಂದೆ ಬಿದ್ದಿದೆ, ಸ್ಪರ್ಧೆ ಎಂಬ ಹೆಬ್ಬುಲಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 1:07 IST
Last Updated 1 ಜುಲೈ 2024, 1:07 IST
   

ರಾಮ ಹಾಗೂ ಶ್ಯಾಮ ಎಂಬ ಇಬ್ಬರು ಗೆಳೆಯರು ದಟ್ಟವಾದ ಕಾಡೊಂದಕ್ಕೆ ಚಾರಣ ಹೋಗಿದ್ದರು. ಆಗ ಅವರನ್ನು ಭಾರಿ ಗಾತ್ರದ ಹುಲಿಯೊಂದು ಅಟ್ಟಿಸಿಕೊಂಡು ಬಂದಿತು. ಇಬ್ಬರೂ ತಮ್ಮ ಜೀವ ಉಳಿಸಿಕೊಳ್ಳಲು ವೇಗವಾಗಿ ಓಡಲಾರಂಭಿಸಿದರು. ಸ್ವಲ್ಪ ದೂರ ಓಡಿದ ನಂತರ, ರಾಮ ಥಟ್ಟೆಂದು ನಿಂತ ಹಾಗೂ ತನ್ನ ಬೆನ್ನಿಗೆ ಸಿಕ್ಕಿಸಿಕೊಂಡಿದ್ದ ಬ್ಯಾಗಿನಿಂದ, ವೇಗವಾಗಿ ಓಡಲು ಬಳಸುವ ಬೂಟನ್ನು ತೆಗೆದು ಅದನ್ನು ಕಟ್ಟಿಕೊಳ್ಳಲಾರಂಭಿಸಿದ.‌ ಇದನ್ನು ಕಂಡ ಶ್ಯಾಮನಿಗೆ ನಿಜಕ್ಕೂ ಅಚ್ಚರಿಯಾಯಿತು ಹಾಗೂ ಇವನಿಗೆಲ್ಲೋ ಖಂಡಿತಾ ತಲೆ ಕೆಟ್ಟಿರಬೇಕು ಎಂದೆನಿಸಿತು. ಆತ ರಾಮನನ್ನು ‘ಅಲ್ಲಯ್ಯಾ ರಾಮ, ಈ ಬೂಟು ಹಾಕಿಕೊಂಡ ಮಾತ್ರಕ್ಕೆ ನೀನು ಹುಲಿಗಿಂತ ವೇಗವಾಗಿ ಓಡಬಲ್ಲೆಯಾ’ ಎಂದು ಪ್ರಶ್ನಿಸಿದ. ಆಗ ರಾಮ ಹೇಳಿದ, ‘ಇಲ್ಲ ಮಿತ್ರ, ಖಂಡಿತ ನಾನು ಹುಲಿಗಿಂತ ವೇಗವಾಗಿ ಓಡಲಾರೆ. ಆದರೆ ನಿನಗಿಂತ ಎರಡು ಹೆಜ್ಜೆ ವೇಗವಾಗಿ ಓಡಬಲ್ಲೆ. ಆಗ ಮೊದಲು ಸಿಕ್ಕುವ ನಿನ್ನನ್ನು ಹುಲಿ ಹಿಡಿದು ತಿನ್ನುತ್ತದೆ, ನಾನು ಬಚಾವಾಗುತ್ತೇನೆ’.

ಇಂದಿನ ಈ ತೀವ್ರವಾದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಎಂಬ ಹುಲಿ ಎಲ್ಲರ ಬೆನ್ನ ಹಿಂದೆ ಬಿದ್ದಿದೆ. ನಾವು ಎಷ್ಟರಮಟ್ಟಿಗೆ ಇನ್ನೊಬ್ಬರಿಗಿಂತ ವೇಗವಾಗಿ ಓಡಬಲ್ಲೆವು ಎಂಬುದೇ ಈ ಜಗತ್ತಿನಲ್ಲಿ ಉಳಿವಿನ ಮುಖ್ಯ ಅಗತ್ಯ. Survival of the fittest ಅಂದರೆ ಸಮರ್ಥರಿಗೆ ಮಾತ್ರ ಉಳಿವು ಎಂಬುದು ಡಾರ್ವಿನ್ನನ ವಿಕಾಸವಾದದ ನಿಯಮ. ಈ ಜಗತ್ತು ಸಹಾ ಅದೇ ಪ್ರಕಾರವಾಗಿ ವಿಕಾಸವಾಗುತ್ತಾ ಬಂದಿದೆ. ಹೀಗಾಗಿ ಇಂದಿನ ಈ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ಬದುಕುಳಿಯಬೇಕಾದರೆ ನಮ್ಮಲ್ಲಿ ಬರಿ ವಿದ್ಯೆ, ಶಕ್ತಿಗಳಿದ್ದರೆ ಸಾಲದು, ಅವುಗಳನ್ನು ಸೂಕ್ತ ಸಮಯಕ್ಕೆ ಬಳಸುವ ಯುಕ್ತಿ ಹಾಗೂ ವಿಶೇಷ ಕೌಶಲಗಳೂ ಅತ್ಯಗತ್ಯ.

ಇಲ್ಲಿ ರಾಮ ತನ್ನ ಕಾಲಿಗೆ ಕಟ್ಟಿಕೊಂಡ, ವೇಗವಾಗಿ ಓಡಲು ಬಳಸುವ ಬೂಟು, ನಾವು ಕಲಿತ ವಿದ್ಯೆಯ ಜೊತೆಗೆ ಹೆಚ್ಚುವರಿಯಾಗಿ ಅಳವಡಿಸಿಕೊಳ್ಳಬೇಕಾದ ಕೌಶಲವನ್ನು ಪ್ರತಿನಿಧಿಸುತ್ತದೆ. ವಿದ್ಯೆಯೊಂದಿಗೆ ಅದಕ್ಕೆ ಪೂರಕವಾದ ಕೌಶಲವನ್ನು ರೂಢಿಸಿಕೊಂಡಾಗ ಮಾತ್ರ ನಾವು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಬಹುದು. ಕೌಶಲ ಎಂಬುದು ಅನುಭವ ಹಾಗೂ ಜ್ಞಾನದ ಮಿಶ್ರಣ. ಇದು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸಿನ ಮೂಲಭೂತ ಅಗತ್ಯ. ಇದನ್ನು ವೃದ್ಧಿಪಡಿಸಿಕೊಂಡಾಗ ಮಾತ್ರ ನಾವು ಯಾವುದೇ ಕೆಲಸವನ್ನಾಗಲಿ ಪರಿಣಾಮಕಾರಿಯಾಗಿ ಮಾಡಲು ಸಾಧ್ಯ. ಹಾಗೆಯೇ ಸಮಯಕ್ಕೆ ತಕ್ಕಂತೆ ಬದಲಾಗುವ, ಮನೋಧರ್ಮದಿಂದ ನಮ್ಮನ್ನು ನಾವು ಸದಾ update ಮಾಡಿಕೊಳ್ಳಬೇಕು. ‘ಜಗತ್ತು ಎಷ್ಟೇ ಬದಲಾಗಲಿ, ನಾನು ಮಾತ್ರ ಹೀಗೆಯೇ ಇರುತ್ತೇನೆ’ ಎಂದು ಕೈಕಟ್ಟಿ ಕುಳಿತರೆ ಖಂಡಿತವಾಗಿಯೂ ಬೆನ್ನ ಹಿಂದೆ ಬಿದ್ದಿರುವ ಸ್ಪರ್ಧೆ ಎಂಬ ಹುಲಿ ನಮ್ಮನ್ನು ಇಲ್ಲವಾಗಿಸಿ ಬಿಡುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.