ADVERTISEMENT

ನುಡಿ ಬೆಳಗು: ಮನಸ್ಸು ಮಹಾದೇವನ ಗೂಡು!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 10 ನವೆಂಬರ್ 2024, 23:35 IST
Last Updated 10 ನವೆಂಬರ್ 2024, 23:35 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಮನಸ್ಸಿನ ಆರೋಗ್ಯ ಚೆನ್ನಾಗಿರಬೇಕು ಅಂದರ ಏನು ಮಾಡಬೇಕು? ಮನವೆಂಬುದಿದೇನು ಮಹಾದೇವನ ಇರುವು ನೋಡಾ ಅಂತಾರ ಶರಣರು. ಮನಸ್ಸು ಕೂಡ ಮಹಾದೇವನ ಸ್ವರೂಪ. ಮನುಷ್ಯ ನೆಮ್ಮದಿ ಇಲ್ಲದವನಾಗ್ಯಾನ. ಮನುಷ್ಯ ದೆವ್ವಗಳ ಹಾಗೆ ಆಡ್ತಾನ. ಒಂದು ತಿಳಕೋಬೇಕು, ಮನುಷ್ಯರು ಮಾತ್ರ ದೆವ್ವಗಳಾಗ್ಯಾರ, ಕುರಿ, ಕೋಳಿ, ದನ ಯಾವುದೂ ದೆವ್ವಗಳಾಗಿಲ್ಲ. ಅವು ಯಾಕೆ ಆಗಿಲ್ಲ? ಯಾಕೆಂದರ ಅವುಗಳಿಗೆ ಮಾನಸಿಕ ಸಮಸ್ಯೆಗಳಿಲ್ಲ. ಪಶು ಪಕ್ಷಿಗಳಿಗೆ ಮಾನಸಿಕ ಆಸ್ಪತ್ರೆಗಳಿಲ್ಲ. ಅವು ಇರೋದು ಬರೀ ಮನುಷ್ಯರಿಗೆ ಮಾತ್ರ. ಪಶು ಆಸ್ಪತ್ರೆಗಳಿದಾವಲ್ಲ ಅಂತ ನೀವು ಕೇಳಬಹುದು. ಮನುಷ್ಯನ ಸಂಪರ್ಕಕ್ಕೆ ಬಂದ ಪ್ರಾಣಿಗಳಿಗೆ ಮಾತ್ರ ಆಸ್ಪತ್ರೆಗಳಿದಾವೆ. ಕಾಡಿನಲ್ಲಿರುವ ಪ್ರಾಣಿಗಳಿಗೆ ದವಾಖಾನೆ ಇಲ್ಲ. ಕುಂತ್ರೆ, ನಿಂತ್ರೆ ಮನುಷ್ಯನ ಮನಸ್ಸಿಗೆ ಸಮಾಧಾನ ಇಲ್ಲ.

ಮನಸ್ಸು ಯಾಕೆ ವಿಕೃತ ಆತು ಅಂಬೋದನ್ನು ನೋಡಬೇಕಲ್ಲ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶರೀರ ಶಾಸ್ತ್ರ ಅಂತ ಇರ್ತದ. ಹೆಣಗಳನ್ನು ಸೀಳಿ ಸೀಳಿ ದೇಹದ ಯಾವ ಯಾವ ಭಾಗಗಳು ಎಲ್ಲಿವೆ, ತೊಂದರೆಗಳು ಎಲ್ಲೆಲ್ಲಿ ಬರ್ತವೆ ಅಂತ ತಿಳಿಸುತ್ತಾರೆ. ದೇಹ ಕಾಣಿಸ್ತದೆ ತೋರಿಸ್ತಾರೆ. ಆದರೆ ಮನಸ್ಸಿನ ತೊಂದರೆಗಳನ್ನು ತೋರಿಸುವುದು ಹೇಗೆ? ಅದಕ್ಕೆ ಗಾತ್ರವೂ ಇಲ್ಲ, ಹಿಡಿಯಲೂ ಆಗಲ್ಲ. ಮುಟ್ಟಲೂ ಆಗಲ್ಲ. ಆದರೆ ನಮ್ಮ ಋಷಿ ಮುನಿಗಳು ಇದಕ್ಕೂ ಒಂದು ಪ್ರಯತ್ನ ಮಾಡಿದರು. ಮನಸ್ಸನ್ನು ಬಗೆದು ನೋಡುವ ಕೆಲಸ ಮಾಡಿದರು. ಮನಸ್ಸಿನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಬರುತ್ತವೆ. ಮನಸ್ಸಿನಲ್ಲಿ ಎಲ್ಲಿ ಹುಟ್ಟುತ್ತವೆ ಇವು? ಅದರ ಗಂಗೋತ್ರಿ ಎಲ್ಲೈತಿ? ಅದನ್ನು ಹುಡುಕಲು ಯತ್ನಿಸಿದರು.

ADVERTISEMENT

ಮನುಷ್ಯನೊಬ್ಬ ಸುಮ್ಮನೆ ಒಂದು ವಸ್ತು ನೋಡಿದ. ಸುಂದರ ಐತಿ ಅಂದ. ಸುಂದರ ಐತಿ ಅಂದರೆ ಏನರ್ಥ? ಅದು ನನಗೆ ಬೇಕು ಎನ್ನುವುದೇ ಪರೋಕ್ಷ ಅರ್ಥ. ಕಣ್ಣು ನೋಡಿದ್ದನ್ನು ಬಯಸುತ್ತದೆ. ಬಯಸಿದ್ದು ಸಿಗದಿದ್ದರೆ ಸಿಟ್ಟು ಶುರುವಾಗುತ್ತದೆ. ಏನಾದರೂ ಮಾಡಿ ಪಡಕೋಬೇಕು ಎಂಬ ಮೋಹ ಹುಟ್ಟುತ್ತದೆ. ಮೊದಲು ಬಯಕೆ ಬಂತು. ನಂತರ ಕ್ರೋಧ. ಆ ಮೇಲೆ ಮೋಹ. ಮೋಹ ಆತು ಅಂದ್ರೆ ಬುದ್ಧಿ ಕಳಕೋತೀವಿ. ವಿವೇಕ ಕಳಕೋತೀವಿ. ಸಿಟ್ಟು ಬಂತು ಅಂದರ ಏನ್ ಬೇಕಾರು ಮಾಡ್ತೀವಿ. ಸಿಟ್ಟಿನ ಕೈಯಾಗ ಬುದ್ಧಿ ಕೊಡಬೇಡ ಅಂತಾರ ನಮ್ಮ ಗ್ರಾಮೀಣ ಜನ. ಮನುಷ್ಯ ವಿವೇಕ ಶೀಲದಿಂದ ವರ್ತನೆ ಮಾಡಬೇಕು. ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು.

ಮನುಷ್ಯನಿಗೆ ಅಧಿಕಾರದ ದಾಹ. ಯಾರೋ ಕುಂತವರನ್ನು ನೋಡ್ತಾರ. ನಾವೂ ಹೀಂಗೆ ಕುರ್ಚಿ ಮೇಲೆ ಕೂಡಬೇಕು, ಕೆಂಪು ಗೂಟದ ಕಾರಿನಲ್ಲಿ ಓಡಾಡಬೇಕು ಅನಸತೈತಿ. ಏನಾರಮಾಡಿ ಪಡಕೋಬೇಕು ಅಂತ ಹೊಲ, ಮನೆ ಮಾರಿ ಎಲ್ಲ ಕಳಕೋತಾರ. ಕುರ್ಚಿ ಇರಬೇಕು, ಕುರ್ಚಿ ಸಿಕ್ಕಾಗ ಸಮಾಜಕ್ಕಾಗಿ ಕೆಲಸ ಮಾಡಬೇಕು. ಕುರ್ಚಿ ಮೇಲೆ ನಾವು ಕುಂತಿರಬೇಕು. ಆದರೆ ಕುರ್ಚಿ ಬಂದು ನಮ್ಮ ತಲೆಯಾಗ ಕುಂತಿರಬಾರದು. ಇದೇ ಅಧ್ಯಾತ್ಮ. ಕುರ್ಚಿ ಮೇಲೆ ಕೂಡಬೇಡ ಅಂತ ಅಧ್ಯಾತ್ಮ ಹೇಳಲ್ಲ. ಸಂಸಾರ ಮಾಡಬೇಡ ಎಂದು ಅಧ್ಯಾತ್ಮ ಹೇಳುವುದಿಲ್ಲ. ಆದರ ಸಂಸಾರ ತಲೆಗೆ ತಗಂಡು ತಿರುಗಬ್ಯಾಡ ಅನತೈತಿ ಅಧ್ಯಾತ್ಮ. ಇದನ್ನು ಮನುಷ್ಯ ತಿಳಕೋಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.