ADVERTISEMENT

ನುಡಿ ಬೆಳಗು-36: ಕಣ್ಣು ತೆರೆದು ನೋಡಬೇಕು!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಒಬ್ಬ ಕುಡುಕನಿಗೆ ಹೆಂಡತಿ ಇದ್ಲು. ಗಂಡ ರಾತ್ರಿ ಕುಡಿದು ಬಂದು ಬಡೀತಾನ, ಬೆಳಿಗ್ಗೆ ರೊಕ್ಕ ಇಸಗಂಡು ಹೋಗ್ತಾನ. ಆದರೂ ಆಕಿ ಅಲ್ಲಿ ಇಲ್ಲಿ ಕಸಮುಸರೆ ಕೆಲ್ಸಾ ಮಾಡಿ, ತನ್ನ ತಾಳಿಯನ್ನೇ ಅಡಾ ಇಟ್ಟು ಮಕ್ಕಳನ್ನು ಓದಸ್ತಾಳ. ಇಂತಹ ಕಷ್ಟಗಳಲ್ಲೂ ಬದುಕಿನ ಭರವಸೆಯನ್ನು ಕಳೆದುಕೊಳ್ಳದ ಆ ತಾಯಿಯನ್ನೊಮ್ಮೆ ನೋಡಿ. ಎಷ್ಟೋ ಜನ ತಾಯಂದಿರು ಗಂಡನನ್ನು ಕಳೆದುಕೊಂಡರೂ, ಗುಡಿಸಿಲಿನಲ್ಲಿ ಬದುಕುತ್ತಿದ್ದರೂ ಜೀವನ ಕಟ್ಟಿಕೊಂಡಾರ. ಅವರನ್ನು ನೋಡಿ ಕಲೀಬೇಕು.

ಮನೆ ಮುಂದ ಸ್ಕೂಲ್ ಬಸ್ ಬಂದು ಕರಕೊಂಡು ಹೋದರೂನು ‘ನಮಗೆ ತ್ರಾಸು ತ್ರಾಸು ಅನ್ನೋ ಮಕ್ಕಳೂ ಒಂದು ಕಡೆ, ದಿನಾ 4–5 ಕಿಮೀ ದೂರ ಬರಿಗಾಲಲ್ಲಿ ನಡ್ಕೊಂಡು ಶಾಲೆಗೆ ಹೋಗಿ ಐಎಎಸ್ ಅಧಿಕಾರಿಗಳಾದವರು ಒಂದು ಕಡೆ. ಆ ಮಕ್ಕಳನ್ನೂ ನೋಡಬೇಕು.

ADVERTISEMENT

ಟೇಬಲ್ ಮೇಲೆ ಉಪ್ಪಿಟ್ಟು, ಇಡ್ಲಿ ಸೇರಿ ನಾಲ್ಕೈದು ತಿಂಡಿ ಇಟ್ಟಾರ. ಆದರೂ ನಮಗ ತಿಂಡಿ ಸೇರದು ಅಂತೀವಿ. ಇನ್ನೊಬ್ಬರ ಮನೆಯ ತಂಗಳನ್ನ ತಿಂದು ಬದುಕೋ ಮಕ್ಕಳು ಒಂದು ಕಡೆ. ರೈತರನ್ನು ನೋಡಿ. ಮುಗಿಲ ಮ್ಯಾಲ ಮಳಿ ಇಲ್ಲ, ಭೂಮಿ ಮ್ಯಾಲ ಬೆಳಿ ಇಲ್ಲ, ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲ. ಆದರೂ ಅವನ ಮುಖದ ಮ್ಯಾಲ ಕಳೆ ಹೋಗಿಲ್ಲ. ಭೂಮಿ ತಾಯಿ ಕೊಟ್ಟೇ ಕೊಡುತಾಳ ಎಂಬ ಭರವಸೆ ಅವನಿಗೆ. ನಿಮಗೆ ತಿಂಗಳಾ ತಿಂಗಳಾ ಸಂಬಳ ಬರತೈತಿ. ಟೇಬಲ್ ಮ್ಯಾಲೂ ಬರತೈತಿ, ಟೇಬಲ್ ಕೆಳಗೂ ಬರತೈತಿ. ಆದರೂ ತ್ರಾಸು ತ್ರಾಸು ಅನ್ನೋದು ಬಿಡೋದಿಲ್ಲ. ಏನೂ ಇಲ್ಲದ ರೈತನ್ನ ನೋಡಿ ಕಲೀಬೇಕು. ಸುತ್ತಮುತ್ತಲ ನೋಡಿ ಬದುಕ ಬೇಕು ಮನುಷ್ಯ.

ಹೆಲೆನ್ ಕೆಲ್ಲರ್ ಅಂತಾ ಒಬ್ಬಳಿದ್ದಳು. ಆಕಿಗೆ 19 ತಿಂಗಳಾದಾಗ ಅವಳ ಕಣ್ಣು, ಕಿವಿ ಎರಡೂ ಹೋಯ್ತು. ಕಣ್ಣಿಲ್ಲ, ಕಿವಿ ಇಲ್ಲ, ಒಬ್ಬ ಶಿಕ್ಷಕಿ ಸಹಾಯದಿಂದ ಶಾಲೆ ಕಲಿತಳು. ಲೇಖಕಿಯಾದಳು. ಸಮಾಜ ಸೇವಕಿಯಾದಳು. ಒಂದು ಎನ್‌ಜಿಒ ಮಾಡಿಕೊಂಡು ವಿಶ್ವದಲ್ಲಿ ಎಲ್ಲೆಲ್ಲಿ ಕಣ್ಣು ಕಾಣದವರು ಅದಾರ, ಅವರ ಸಲುವಾಗಿ 35 ಸಂಸ್ಥೆಗಳನ್ನು ಕಟ್ಟಿದಳು. 20ನೇ ಶತಮಾನದೊಳಗ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಆಕಿನೂ ಒಬ್ಬಳಾಗಿದ್ದಳು. ಆಕಿ ಒಮ್ಮೆ ದೇವರಲ್ಲಿ ಪ್ರಾರ್ಥನೆ ಮಾಡಿ, ‘ಭಗವಂತ ನನಗೆ ಮೂರು ದಿನ ಕಣ್ಣು ಕೊಡು’ ಎಂದು ಬೇಡಿಕೊಂಡಳು. ‘ಮೂರು ದಿನಾನೆ ಯಾಕೆಂದರೆ, ಮೊದಲ ದಿನ ನಾನು ನನ್ನನ್ನು ಈ ಜಗತ್ತಿಗೆ ತಂದ ತಂದೆ ತಾಯಿಯರನ್ನು ಮತ್ತು ಶಿಕ್ಷಕರನ್ನು ಕಣ್ಣುತುಂಬಾ ನೋಡಿಕೊಳ್ಳುತ್ತೇನೆ. ಎರಡನೇ ದಿನ ಸೂರ್ಯನನ್ನು ಮತ್ತು ಸೂರ್ಯನಿಂದ ಬೆಳಗಿದ ಈ ಜಗತ್ತನ್ನು ನೋಡುತ್ತೀನಿ, ಮೂರನೇ ದಿನ ನನ್ನ ಕಣ್ಣುಗಳಿಗೆ ಹೇಳ್ತೀನಿ ಈ ಸೂರ್ಯನ ಬೆಳಕೇ ಕತ್ತಲಾಗುತೈತಿ ಅಂತ’ ಎಂದು.

ಕಣ್ಣಿಲ್ಲದವರ ಬದುಕು ನೋಡಿ ನಾವು ಕಲಿಯಬೇಕು. ನಮಗ ದೇವ್ರು ಕಣ್ಣು ಕೊಟ್ಟಾನ, ಆದರೆ ನಮಗ ಇನ್ನೊಬ್ಬರು ಊಟ ಮಾಡೋದನ್ನು ನೋಡಿದರೆ ಹೊಟ್ಟೆ ಕಡೀತೈತಿ. ಹಿಂಗಾದ್ರ ಹ್ಯಾಂಗ? ನಮ್ಮ ಸುತ್ತಮುತ್ತ ಇರೋರನ್ನು ನೋಡಿ ನಾವು ಕಲಿಯಬೇಕು. ನೋಡಿ ಬದುಕ ಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.