ಕಾಡಲ್ಲಿ ಒಂದು ಗಿಡ ಇತ್ತು. ಅದರಲ್ಲಿ ಒಂದು ಪಕ್ಷಿ ಗೂಡು ಕಟ್ಟಿತ್ತು. ಅದರಲ್ಲಿ ಎರಡು ಪುಟ್ಟಪುಟ್ಟ ಮರಿಗಳಿದ್ದವು. 3–4 ತಿಂಗಳ ಮರಿಗಳು ಅವು. ಒಂದು ದಿನ ತಾಯಿ ಪಕ್ಷಿ ಆಹಾರ ತರಲು ಹೊರಗೆ ಹೋಗಿತ್ತು. ಅದು ವಾಪಸು ಬರೋದ್ರೊಳಗೆ ಒಬ್ಬ ಮನುಷ್ಯ ಆ ಪಕ್ಷಿ ಗೂಡನ್ನು ಎಳೆದಿದ್ದ. ಗೂಡು ಹರಿದಿತ್ತು. ಮರಿಗಳು ಕೆಳಕ್ಕೆ ಬಿದ್ದು ವಿಲಿವಿಲಿ ಒದ್ದಾಡಿ ಸತ್ತು ಹೋದವು. ತಾಯಿ ಪಕ್ಷಿ ವಾಪಸು ಬಂದಾಗ ಗೂಡು ಹರಿದಿದ್ದು, ಮರಿ ಪಕ್ಷಿಗಳು ಸತ್ತಿದ್ದು ನೋಡಿತು. ಎರಡು ಹನಿ ಕಣ್ಣೀರು ಹಾಕಿತು. ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿತ್ತು. ನಂತರ ಗೂಡು ಸೇರಿತು. ಕತ್ತಲಾತು. ಮತ್ತೆ ಬೆಳಗಾತು.
ಬೆಳಿಗ್ಗೆ ಆ ಪಕ್ಷಿ ಗಿಡದಲ್ಲಿ ಕುಳಿತು ಸಂತೋಷದಿಂದ ಹಾಡು ಹಾಡುತ್ತಿತ್ತು. ಆಗ ಹತ್ತಿರದಲ್ಲಿಯೇ ಇದ್ದ ಆಶ್ರಮದ ಸಂತನೊಬ್ಬ ಬಂದು ಪಕ್ಷಿಗೆ ‘ನಿನ್ನೆ ನಿನ್ನ ಎರಡು ಪುಟ್ಟ ಮರಿಗಳು ಕೆಳಕ್ಕೆ ಬಿದ್ದು ಸತ್ತು ಹೋಗ್ಯಾವ, ನೀನು ಇವತ್ತು ಸಂತೋಷದಿಂದ ಹಾಡಾಕತ್ತೀಯಲ್ಲ, ನಿನಗ ದುಃಖ ಆಗಿಲ್ಲೇನು’ ಎಂದು ಕೇಳಿದ. ಆವಾಗ ಪಕ್ಷಿ, ‘ಹಿಂದಿನದನ್ನು ನೆನೆಸಿಕೊಂಡು ಅಳಾಕ ನಾವೇನು ಮನುಷ್ಯರು ಅಂದಕೊಂಡಿಯೇನು? ನಾವು ಹಾಂಗೆಲ್ಲ ಅಳಲ್ಲ’ ಅಂತು. ‘ನಿನ್ನೆ ಸತ್ತೋದವು ನಿನ್ನದೇ ಮಕ್ಕಳಲ್ಲೇನು?’ ಎಂದು ಕೇಳಿದ ಸಂತ. ‘ಅವು ನನ್ನ ಮಕ್ಕಳಲ್ಲ. ದೇವರ ಮಕ್ಕಳು. ಈಗ ನಿಮ್ಮ ವಿಷ್ಯಾನೇ ತಗೊಳೋಣ. ನಿಮ್ಮ ಹೆಣ್ಣುಮಗಳೊಬ್ಬಳು ಬಜಾರದಾಗ ಕೆಲಸ ಐತಿ ಅಂತ ಹೋಗುವಾಗ ಮಕ್ಕಳನ್ನು ನೋಡಿಕೊಳ್ಳಾಕ ಅಂತ ಬಾಜು ಮನ್ಯಾಗ ಬಿಟ್ಟು ಹೋಗಿರ್ತಾಳ. ಅವ್ರೂ ನೋಡಿಕೊಳ್ಳತಾರ. ತನ್ನ ಕೆಲಸ ಮುಗಿಸಿ ಬಂದು ತಾಯಿ ತನ್ನ ಮಕ್ಕಳನ್ನು ತಾನು ಕರಕೊಂಡು ಹೋಗ್ತಾಳ. ಹಾಂಗಾ ದೇವರು ಎಲ್ಲೋ ಹೋಗುವಾಗ ತನ್ನ ಮಕ್ಕಳನ್ನು ನನ್ನ ಗೂಡಿನಲ್ಲಿ ಬಿಟ್ಟು ಹೋಗಿದ್ದ. ಎರಡು ತಿಂಗಳು ನಾನು ಜೋಪಾನ ಮಾಡಿದ್ದೆ. ಈಗ ಆತ ತನ್ನ ಮಕ್ಕಳನ್ನು ತಾನು ಕರಕೊಂಡು ಹೋಗ್ಯಾನ. ನಾನ್ಯಾಕ ಅಳಬೇಕು’ ಅಂತಾ ಕೇಳ್ತು. ಪಕ್ಷಿಯ ಜ್ಞಾನ ನೋಡಿ. ಅದರಿಂದ ಮನುಷ್ಯ ಕಲಿಯುವುದು ಬಹಳ ಇದೆ.
ಮಕ್ಕಳು ದೂರವಾದಾಗ ಮನಸ್ಸಿಗೆ ಕಷ್ಟ ಆಗತೈತಿ. ಆದರೆ, ಇವು ದೇವರ ಮಕ್ಕಳು, ತನ್ನ ಮಕ್ಕಳನ್ನು ನನ್ನ ಮನ್ಯಾಗ ಆಡಾಕ ಅಂತ ಬಿಟ್ಟಿದ್ದ. ಈಗ ಅವರನ್ನು ಕರಕೊಂಡು ಹೋಗ್ಯಾನ ಅಂತ ತಿಳಕೊಂಡರ ಮನಸ್ಸಿಗೆ ಕೊಂಚ ಸಮಾಧಾನ ಆಗ್ತದ. ದೇವರ ಮಕ್ಕಳೊಂದಿಗೆ ಆಡಿ ಸಂತೋಷಪಟ್ಟೆ ಎಂದು ನಾವು ಅಂದಕೋಬೇಕು.
ಖಲೀಲ್ ಗಿಬ್ರಾನ್ ಅಂತಾ ಒಬ್ಬ ತತ್ವಶಾಸ್ತ್ರಜ್ಞ ಇದ್ದ. ಆತ ಹೇಳ್ತಾನ, ‘ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ನಿಮ್ಮ ಮೂಲಕ ಬಂದವರು ಅಷ್ಟೆ. ನಿಮ್ಮಿಂದ ಬಂದವರಲ್ಲ’ ಎಂದು. ಸುಮ್ಮನೆ ಹಾಂಗೆ ಒಂದು ಕೊಳಲನ್ನು ಇಡರಿ. ಅದರಿಂದ ಸ್ವರಗಳು ಬರ್ತಾವೇನು? ಹಿಂದೆ ನುಡಿಸುವವ ಇದ್ದರ ಕೊಳಲಿನ ಮುಖಾಂತರ ಸ್ವರಗಳು ಬರ್ತಾವ. ಹಾಂಗೇ ಇದು. ನಾವು ಕೊಳಲು ಅಷ್ಟೆ. ಹಿಂದೆ ಭಗವಂತ ನುಡಿಸಿದಾಗ ಸ್ವರಗಳು ಬರ್ತಾವ. ಅವನು ನುಡಿಸಿದಾಗ ಬರುವ ಸ್ವರಗಳೇ ನಮ್ಮ ಮಕ್ಕಳು. ಇದನ್ನು ತಿಳಕೋಬೇಕು. ಸತ್ಯವನ್ನು ಅರಿತುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.