ಕಡಲ ತೀರದ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರು, ಶಿಸ್ತು ಹಾಗೂ ನುಡಿದಂತೆ ನಡೆಯುವ ವ್ಯಕ್ತಿತ್ವದ ಪ್ರತೀಕವಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಕೃಷಿ ಮಾಡದ ಸಾಹಿತ್ಯ ಪ್ರಕಾರವೇ ಇಲ್ಲ. ಅವರ ಜೊತೆಗಿನ ಕ್ಷಣ ಕಾಲದ ಒಡನಾಟ ಕೂಡ ವಿದ್ಯುತ್ ಸಂಚಲನ ಮೂಡಿಸುವಂಥದ್ದು. ಇದಕ್ಕಾಗಿಯೇ ವಿದೇಶಗಳಲ್ಲಿ ವಿದ್ವಾಂಸರು ‘ಹೌ ಈಸ್ ಯುವರ್ ಕರೆಂಟ್?’ ಎಂಬುದಾಗಿ ಕಾರಂತರ ಕುರಿತು ವಿಚಾರಿಸುತ್ತಿದ್ದರು ಎಂಬ ಪ್ರತೀತಿಯೂ ಇದೆ. ಇದರ ಒಂದು ಸುಂದರ ಅನುಭವ ನನಗೆ ನನ್ನ ಬಾಲ್ಯದಲ್ಲಾಗಿತ್ತು.
ನಾನು 7ನೇ ತರಗತಿಯಲ್ಲಿದ್ದಾಗ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ಓದಿ ಪ್ರಭಾವಿತನಾದೆ. ಆಗ ಕಾರಂತರಿಗೊಂದು ಪೋಸ್ಟ್ ಕಾರ್ಡಿನಲ್ಲಿ ಪತ್ರ ಬರೆದೆ ‘ನಿಮ್ಮ ಕಾದಂಬರಿ ಓದಿದೆ. ಬಹಳ ಚೆನ್ನಾಗಿದೆ’ ಎಂಬುದಾಗಿ ನಾನು ನನ್ನ ಬಾಲ ಭಾಷೆಯಲ್ಲಿ ಬರೆದಿದ್ದ ಪುಟ್ಟ ಪತ್ರಕ್ಕೆ ಕೆಲವೇ ದಿನಗಳಲ್ಲಿ ಕಾರಂತರಿಂದ ಮರಳಿ ಉತ್ತರ ಬಂತು. ಎಲ್ಲಿಯ ಜ್ಞಾನಪೀಠ ಪುರಸ್ಕೃತ ದಿಗ್ಗಜ ಸಾಹಿತಿ ಹಾಗೂ ಎಲ್ಲಿಯ ಏಳನೇ ತರಗತಿಯ ಬಾಲಕ? ಕಾರಂತರ ವಿಶೇಷವೆಂದರೆ ಇದೇ. ಅವರು ತಮಗೆ ಪ್ರತಿದಿನ ಸಾವಿರ ಪತ್ರ ಬಂದಿದ್ದರೂ, ಅದು ಯಾರದ್ದೇ ಆಗಿದ್ದರೂ ಅಷ್ಟೂ ಪತ್ರಗಳಿಗೆ ತಮ್ಮದೇ ಕೈಬರಹದಲ್ಲಿ ಉತ್ತರ ಬರೆದು ಕಳಿಸುತ್ತಿದ್ದರಂತೆ. ಇದು ಅವರ ಶಿಸ್ತು. ಈ ಶಿಸ್ತೇ ಅವರನ್ನು ಸಾಹಿತ್ಯ ಲೋಕದ ಮೇರು ಶಿಖರವನ್ನಾಗಿಸಿದ್ದು. ಕಾರಂತರು ತಮ್ಮ ಪತ್ರದಲ್ಲಿ ‘ನಾನು ಇಂಥ ದಿನ ಶೃಂಗೇರಿ ಸಮೀಪದ ಅಡ್ಡಗದ್ದೆಗೆ ಪರಿಸರ ಸಂರಕ್ಷಣೆ ಕುರಿತಾಗಿ ಒಂದು ಉಪನ್ಯಾಸ ನೀಡಲು ಬರುತ್ತಿದ್ದೇನೆ. ನೀನು ಅಲ್ಲಿ ನನ್ನನ್ನು ಭೇಟಿಯಾಗಬಹುದು’ ಎಂಬುದಾಗಿ ಬರೆದಿದ್ದರು.
ಎಂತಹ ಸುವರ್ಣಾವಕಾಶ. ಆ ದಿನ ಅಲ್ಲಿಗೆ ತೆರಳಿದ ನಾನು ಪರಿಸರ ಕಾಳಜಿಯ ಕುರಿತು ಕಾರಂತರ ಅದ್ಭುತ ವಾಗ್ಝರಿಯನ್ನು ಆಲಿಸಿ, ಮೂಕವಿಸ್ಮಿತನಾದೆ. ಅದರ ನಂತರ ಇದ್ದ ಸಂವಾದ ಕಾರ್ಯಕ್ರಮದಲ್ಲಿ ಎಂದಿನಂತೆ ಮೊದಲು ಪ್ರಶ್ನೆ ಕೇಳಲು ನಾನು ಎದ್ದುನಿಂತೆ. ‘ಪರಿಸರ ಸಂರಕ್ಷಿಸಲು ಜನರ ಮನಸ್ಸನ್ನು ತಿದ್ದಲು ನಾವೇನು ಮಾಡಬೇಕು?’ ಎಂಬುದಾಗಿತ್ತು ನನ್ನ ಪ್ರಶ್ನೆ.
ಆಗ ಬಂತು ಕಾರಂತರಿಂದ ಚಾಟಿ ಏಟಿನಂಥ ಉತ್ತರ ‘ಜನರನ್ನು ತಿದ್ದಲು ನೀನು ಯಾರು? ಮೊದಲು ನಿನ್ನನ್ನು ನೀನು ತಿದ್ದಿಕೋ ನಿನ್ನ ಮನೆಯ ಹಿತ್ತಿಲಿನಲ್ಲಿ ಮೊದಲು ಗಿಡ ನೆಡು’.
ಇನ್ನೊಬ್ಬರನ್ನು ಬದಲಾಯಿಸುತ್ತೇವೆ ಎಂಬ ಭ್ರಮೆಯ ಬದಲು ನಾವು ಬದಲಾದರೆ ಜಗತ್ತು ಬದಲಾಗುತ್ತದೆ, ಅದಕ್ಕೆ ನಾವು ನುಡಿದಂತೆ ನಡೆಯಬೇಕು ಎನ್ನುವ ಅದ್ಭುತ ಸಂದೇಶ ಕಾರಂತರ ಈ ಮಾತಿನಲ್ಲಿತ್ತು. ಮಹಾತ್ಮ ಗಾಂಧೀಜಿಯವರು ಹೇಳಿದಂತೆ You be the change to change the world. ಅಂದರೆ ಈ ಜಗತ್ತಿನಲ್ಲಿ ಬದಲಾವಣೆ ಮೂಡಬೇಕಾದರೆ ನಾವೇ ಬದಲಾವಣೆಯ ಬಿಂದುವಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.