ADVERTISEMENT

ನುಡಿ ಬೆಳಗು: ದೇವರು ಎಲ್ಲಿದ್ದಾನೆ?

ನುಡಿ ಬೆಳಗು

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 2 ಸೆಪ್ಟೆಂಬರ್ 2024, 18:35 IST
Last Updated 2 ಸೆಪ್ಟೆಂಬರ್ 2024, 18:35 IST
<div class="paragraphs"><p>ನುಡಿ ಬೆಳಗು: ದೇವರು ಎಲ್ಲಿದ್ದಾನೆ?</p></div>

ನುಡಿ ಬೆಳಗು: ದೇವರು ಎಲ್ಲಿದ್ದಾನೆ?

   

ರವೀಂದ್ರನಾಥ ಟ್ಯಾಗೋರ್‌ ಒಂದು ಕಡೆ ಹೇಳ್ತಾರೆ. 'ದೇವರು ಎಲ್ಲಿದ್ದಾನೆ? ದೇವರನ್ನು ಕಗ್ಗತ್ತಲೆಯ ಗರ್ಭದಲ್ಲಿ ಹುಡುಕಬೇಡ. ನಿನ್ನ ಕಣ್ ತೆರೆದು ನೋಡು. ದೇವರು ಗರ್ಭಗುಡಿಯಲ್ಲಿ ಇಲ್ಲ. ಬಿಸಿಲು, ಮಳೆ ಲೆಕ್ಕಿಸದೆ ದುಡಿಯುವ ರೈತನ ನೇಗಿಲೊಳಗೆ ದೇವರಿದ್ದಾನೆ. ಕಷ್ಟಪಟ್ಟು ಕಲ್ಲು ಕಟೆದು ಮಂದಿರ ಮಹಲು ನಿರ್ಮಿಸುವ ಕಲ್ಲುಕುಟುಕನ ಉಳಿಯೊಳಗೆ ದೇವರಿದ್ದಾನೆ’ ಎಂದು ಅವರು ಹೇಳ್ತಾರೆ. ಅದು ದೇವರ ನಿವಾಸ. ಸಮಾಜವನ್ನು ಮೇಲೆತ್ತುವ ಕಾಯಕವೇ ದೇವಪೂಜೆ. ದೀನದಲಿತರಿಗೆ, ಬಡವಬಲ್ಲಿದರಿಗೆ ಅನ್ನ, ಅಕ್ಷರ, ಅರಿವು, ಆಶ್ರಯ, ಅಧ್ಯಾತ್ಮ ದಾಸೋಹ ನಡೆಸುವುದೇ ದೇವ ಪೂಜೆ.

ಒಮ್ಮ ಬಸವಣ್ಣನವರಿಗೆ ಯಾರೋ ಕೇಳಿದರಂತೆ. ‘ನೀವು ಕೆಳಗಿದ್ದವರಿಗೆ ಸೇವೆ ಮಾಡಿ ಅಂತೀರಿ. ನಮ್ಮ ನಂಬಿಕೆ ಪ್ರಕಾರ ದೇವರು ಮೇಲಿದ್ದಾನೆ. ಕೆಳಗಿರುವ ಜನರ ಸೇವೆ ಮಾಡಿದರೆ ಮೇಲಿರುವ ದೇವರಿಗೆ ಹ್ಯಾಂಗ ಪ್ರೀತಿ ಬರ್ತದೆ ಹೇಳಿ’ ಎಂದು. ಅದಕ್ಕೆ ಬಸವಣ್ಣ, ‘ಒಂದು ತೆಂಗಿನ ಗಿಡಕ್ಕೆ ಬೇರಿಗೆ ನೀರು ಹಾಕಿದರೆ ತೆಂಗಿನ ಕಾಯಿಯಲ್ಲಿ ಸಿಹಿ ನೀರು ಬರುತ್ತದೆ. ಕಾಯಿಯ ಒಳಗೆ ಯಾರಾದರೂ ಸಿಹಿ ನೀರು ತುಂಬಿಸ್ಯಾರೇನು? ಹಾಂಗ ಇದು. ಬೇರಿಗೆ ನೀರು ಹಾಕಿದರೆ ಕಾಯಿಗೆ ಹ್ಯಾಂಗ ಮುಟ್ಟತೈತೋ ಹಾಂಗೆ. ‘ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರನೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ’ ಅಂತಾರೆ ಅವರು.

ADVERTISEMENT

ಕುಣಕೇರಿ ಅಂತ ಒಂದು ಊರದ. ಆ ಊರಲ್ಲಿ ಒಂದು ಎಕರೆ ಜಮೀನಿಗೆ ಒಂದು ಕೋಟಿ ರೂಪಾಯಿ ಬೆಲೆ ಇದೆ. ಆ ಊರಿಗೆ ಒಂದು ಸರ್ಕಾರಿ ಶಾಲೆ ಬಂತು. ಆ ಶಾಲೆಗೆ ಎರಡು ಎಕರೆ ಜಮೀನು ಬೇಕಾಗಿತ್ತು. ಊರಿನ ಶ್ರೀಮಂತರು ಯಾರೂ ಶಾಲೆಗೆ ಜಾಗ ಕೊಡಲು ಮುಂದೆ ಬರಲಿಲ್ಲ. ಆ ಊರಲ್ಲಿ ಹುಚ್ಚಮ್ಮ ಅಂತ ಒಬ್ಬ ಹೆಣ್ಮಗಳು ಇದ್ದಳು. ಆಕಿಗೆ ಮಕ್ಕಳಿರಲಿಲ್ಲ. ಗಂಡ ಸತ್ತಿದ್ದ.  ಜಮೀನು ಸಿಗದಿದ್ದರೆ ಶಾಲೆ ಇರಲ್ಲ. ಶಾಲೆ ಇರಲ್ಲ ಅಂದರ ಮಕ್ಕಳು ಓದಲ್ಲ ಅಂತೇಳಿ ಅವಳು ತನ್ನ ಎರಡು ಎಕರೆ ಜಮೀನನ್ನು ಶಾಲೆಗೆ ಪುಕ್ಕಟೆಯಾಗಿ ನೀಡಿದಳು. ಈಗ ಆಕಿ ಆ ಶಾಲೆಯಲ್ಲಿಯೇ ಅಡುಗೆ ಮಾಡಕೋತಾ ಇದಾಳೆ. ಇದು ದೇವರು ಮೆಚ್ಚುವ ಕೆಲಸ. ದೇವರು ಎಲ್ಲಿದ್ದಾನ ಎಂದರ ಆಕಿ ಮನದೊಳಗೆ, ಹೃದಯದೊಳಗೆ ಇದಾನೆ.

ನೂರು ಎಕರೆ ಹೊಲ ಇದ್ದರೂ ಅಲ್ಲಿ ಏನೂ ಬೆಳೆಯೋದಿಲ್ಲ ಅಂತೀವಿ. ಒಬ್ಬ ಮನುಷ್ಯ ಇನ್ನೊಬ್ಬರ ಹೊಲದಲ್ಲಿ ದುಡೀತಿದ್ದ. ಮಾಲಕರು ಅವನಿಗೆ ಎರಡು ಎಕರೆ ಹೊಲ ಕೊಟ್ಟರು. ಗುಡ್ಡದ ಮೇಲಿನ ಹೊಲ ಕೊಟ್ಟಿದ್ದರು. ಅಲ್ಲಿ ನೀರು ಇರಲಿಲ್ಲ. ಅದಕ್ಕೆ ಅವ ಸುರಂಗ ತೆಗೆದ. ಒಂದು ಸುರಂಗ ಅಲ್ಲ, 8–10 ಸುರಂಗ, ನೂರಾರು ಅಡಿ ಸುರಂಗ ತೆಗೆದ. ಅಲ್ಲಿ ನೀರು ಬಂತು. ಅದನ್ನು ಗುಡ್ಡಕ್ಕೆ ಹತ್ತಿಸಿದ. ಆ ಎರಡು ಇಂಚು ನೀರಲ್ಲಿ ಕೃಷಿ ಮಾಡಿದ. ಶ್ರೇಷ್ಠ ಕೃಷಿಕ ಅನಿಸಿಕೊಂಡ. ಅವನಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಅವನೇ ಮಹಾಲಿಂಗ ನಾಯಕ. ದೇವರು ಎಲ್ಲಿದ್ದಾನೆಂದರೆ ರೈತನ ಶ್ರಮದೊಳಗೆ ಇದ್ದಾನೆ. ದೇವರು ಎಷ್ಟೆಲ್ಲಾ ಕೊಟ್ಟಿದ್ದಾನೆ. ಅದನ್ನು ಅನುಭವಿಸುವ ಮನಸ್ಸು ಇಲ್ಲದಿದ್ದರೆ ಏನು ಕೊಟ್ಟರೂ ಅಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.