12ನೇ ಶತಮಾನದೊಳಗ ಒಬ್ಬ ಶರಣ ಇದ್ದ. ಮರುಳ ಶಂಕರದೇವ ಅಂತ ಅವನ ಹೆಸರು. 12 ವರ್ಷ ಶರಣರ ಮಹಾಮನೆಯಲ್ಲಿ ಶರಣರ ಎಂಜಲು ಎಲೆ ತೆಗೆದು ಅದರಲ್ಲಿ ಅಳಿದುಳಿದ ಅನ್ನವನ್ನು ಸಂಗ್ರಹಿಸಿ ತಿನ್ನುತ್ತಿದ್ದ. ಅಷ್ಟು ವರ್ಷ ಹೀಗೇ ಮಾಡಿದರೂ ಅದು ಯಾರಿಗೂ ಗೊತ್ತಾಗಿರಲಿಲ್ಲ. ಒಂದಿನ ಅಲ್ಲಮಪ್ರಭುಗಳು ಅದನ್ನು ನೋಡಿದರು. ‘ಕಂಡೆನೊಂದ ಆಶ್ಚರ್ಯವ, ಮಾಣಿಕ್ಯ ಕಂಡೆ’ ಎಂದು ಉದ್ಗರಿಸುತ್ತಾರೆ ಅವರು. ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಚಿತ್ತದಲಿ ನಿರಪೇಕ್ಷೆ ಇದು ಮರುಳ ಶಂಕರದೇವ. ಅನ್ನದ ಕಣ, ಸಂತೋಷದ ಕ್ಷಣ.
ಜೀವನದಲ್ಲಿ ಎಂದೂ ಅನ್ನದ ಕಣ ಹಾಳುಮಾಡಬಾರದು ಎಂದು ಕಲಿಸಿದವ ಮರುಳ ಶಂಕರದೇವ. 12 ವರ್ಷ ಹೀಗೇ ಮಾಡಿದ್ದರೂ ಅದನ್ನು ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದ. ಆದರೆ, ನಾವು ಗುಡಿಗೆ ಒಂದು ಟ್ಯೂಬ್ ಲೈಟ್ ಕೊಟ್ಟಿರ್ತೀವಿ. ಅದರ ತುಂಬಾ ನಮ್ಮ ಹೆಸರು ಹಾಕಿಕೊಂಡಿರ್ತೀವಿ. ಹೆಸರು ಎಷ್ಟಿರುತ್ತದೆಂದರ ಗುಡ್ಯಾಗ ಬೇಳಕಾ ಬರೋದಿಲ್ಲ ಅಷ್ಟು. ಏನೇನೂ ಇರಲಿಲ್ಲ. ಆದರ ಅವರು ಸಂತೋಷದ ಬದುಕು ಕಟ್ಟಿದರು. ಅವರ ಬದುಕು ಎಷ್ಟು ದೊಡ್ಡದು, ಎಷ್ಟು ವಿಶಾಲ. ನಮ್ಮ ಬದುಕು ಹ್ಯಾಂಗೈತಿ? ಅದೇ 30X40 ಸೈಟು, ಸಾಲ ಮಾಡಿ ಕಟ್ಟಿದ ಮನೆ, ಅದರೊಳಗೊಂದು ಟಿವಿ ಹಾಲ್, ಟಿವಿ ಮ್ಯಾಲೊಂದು ಗಂಡ ಹೆಂಡತಿ ಫೋಟೊ. ಅದಾ ಫೋಟೊನ ಎಲ್ಲರಿಗೂ ವಾಟ್ಸಾಪ್ ಮಾಡಿರ್ತೀವಿ. ಇಷ್ಟ ನಮ್ಮ ಬದುಕು.
ಮನುಷ್ಯ ಹ್ಯಾಂಗ ಸಂತೋಷದಿಂದ ಬದುಕಬೇಕು ಅನ್ನೊದನ್ನ ನಿಸರ್ಗ ಕಲಿಸಿಕೊಡುತ್ತದ. ನಿಸರ್ಗದ ಪ್ರತಿ ಕ್ಷಣದಲ್ಲಿಯೂ ಸಂತೋಷ ಅದ. ನಿಮ್ಮ ಬಳಿ ಒಂದು ಮೋಟಾರು ಸೈಕಲ್ ಇದೆ. ಅದಕ್ಕೆ ಇಂಧನ ಹಾಕಿಸಬೇಕು ಅಂದರ ನೀವೇ ಪೆಟ್ರೋಲ್ ಬಂಕ್‌ಗೆ ಹೋಗಬೇಕು. ಅದೇ ರೀತಿ ನಮ್ಮ ದೇಹನೂ ಒಂದು ವಾಹನ. ಅದಕ್ಕೂ ಇಂಧನ ಬೇಕು. ಆದರೆ ನಿಸರ್ಗ ನಮ್ಮ ಮೂಗಿದ್ದಲ್ಲೇ ಗಾಳಿ ತಂದು ಇಟ್ಟೈತಲ್ಲ. ಅದು ದೊಡ್ಡದು. ನಾವು ಸದಾ ಸಂತೋಷವಾಗಿರಬೇಕು ಅಂತ ನಿಸರ್ಗ ಕಲಿಸುತ್ತಾ ಇದೆ.
ಒಂದು ಬೇಸಿಗೆ ದಿನ ಒಬ್ಬ ದಾರಿಯಲ್ಲಿ ಸಾಗುತ್ತಿದ್ದ. ಒಂದು ಮಾವಿನ ಮರ ಕಾಣಿಸಿತು. ಅದರ ತುಂಬಾ ರಸವತ್ತಾದ ಹಣ್ಣುಗಳಿದ್ದವು. ಇವ ಒಂದು ಕಲ್ಲು ತೆಗೆದು ಒಗೆದ. ಅದು ಎರಡು ಹಣ್ಣು ಕೊಟ್ಟಿತು. ತಿಂದ. ಮತ್ತೊಂದು ಕಲ್ಲು ಒಗೆದ. ಇನ್ನೆರಡು ಹಣ್ಣು ಕೊಟ್ಟಿತು. ಮತ್ತೆ ಒಗೆದ ಮತ್ತೆರಡು ಹಣ್ಣು ಕೊಟ್ಟಿತು. ಇವ ಮಾವಿನ ಗಿಡದ ಬಳಿಗೆ ಹೋಗಿ ‘ಮನುಷ್ಯ ಜಾತಿಯಲ್ಲಿ ಯಾರಾದರೂ ಕೈಯಲ್ಲಿ ಕಲ್ಲು ಹಿಡಿದುಕೊಂಡರೆ ಸಾಕು ಕಣ್ಣು ಕಿತ್ತು ಕೈಗೆ ಕೊಡ್ತಾರೆ, ಆದರೆ ನೀನು ಕಲ್ಲು ಹೊಡೆದರೂ ಹಣ್ಣು ಕೊಡ್ತೀಯಲ್ಲ, ಯಾಕೆ ನಿನ್ನ ಮನಸ್ಸಿಗೆ ನೋವಾಗಿಲ್ವಾ?’ ಎಂದು ಕೇಳಿದ. ಅದಕ್ಕೆ ಆ ಮರ ‘ನನಗೇನೂ ನೋವಾಗಲಿಲ್ಲ. ಯಾಕೆಂದರೆ ಎತ್ತರಕ್ಕೆ ಬೆಳೆದವರಿಗೆ ಕಲ್ಲು ಒಗೆಯೋದು ಮನುಷ್ಯರ ಹಳೆ ಚಾಳಿ. ಆದರ ನನ್ನ ಅಮ್ಮ ನನಗೊಂದು ಮಾತು ಹೇಳಿದ್ದಾಳೆ. ನೀನು ದೊಡ್ಡವನಾದ ಮ್ಯಾಲೆ ಕಲ್ಲು ಒಗೆಯೋರು ಬಹಳ ಮಂದಿ ಇರ್ತಾರೆ. ಕಲ್ಲು ಒಗೆದವರಿಗೆಲ್ಲಾ ಎರಡೆರಡು ಹಣ್ಣು ಕೊಡು ನಿನ್ನ ಬದುಕು ಸಾರ್ಥಕ ಆಗತ್ತೆ ಅಂತ’ ಎಂದು ಹೇಳಿತು.
ಇದು ನಿಸರ್ಗ ಕಲಿಸುವ ಪಾಠ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.