ADVERTISEMENT

ನುಡಿ ಬೆಳಗು 45 | ನಮ್ಮದಲ್ಲದ ದೇಹ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 16 ಅಕ್ಟೋಬರ್ 2024, 0:29 IST
Last Updated 16 ಅಕ್ಟೋಬರ್ 2024, 0:29 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಭಾವ ಬಂಧನ ಅಂತೀವಿ, ಭೌತಿಕ ಬಂಧನ ಅಂತೀವಿ. ಏನಿದು ಬಂಧನ? ಯಾಕಾತು ಬಂಧನ?. ಯಾಕಾತು ಅಂದ್ರ ಅಜ್ಞಾನದಿಂದ ಆತು. ಏನು ಅಜ್ಞಾನ? ತಪ್ಪು ತಿಳಕೊಳ್ಳೋದೆ ಅಜ್ಞಾನ. ಈ ನಮ್ಮ ದೇಹ ಐತಲ್ಲ, ಇದನ್ನು ನಮ್ಮದು ಅಂತಾ ತಿಳಕೊಂಡೇವಿ. ಆದರೆ ಇದು ನಮ್ಮದಲ್ಲ. ಮತ್ತ ಮಂದೀದು ದೇಹ ಅಂತಾ ಅನಕೋತ ಹೋಗಾಣೇನು ಅಂತಾ ನೀವು ಕೇಳ್ತೀರಿ ಅಂತಾ ನನಗೆ ಗೊತ್ತು. ಹಾಂಗಲ್ಲ, ಸುಮ್ಮನೆ ವಿಚಾರ ಮಾಡಿ. ಇವ ನಮ್ಮ ಸೇವಕ ಅನಬೇಕಾದರೆ ಅವ ನಾವು ಹೇಳಿದಂಗೆ ಕೇಳಬೇಕಲ್ಲ?

ಈ ದೇಹ ನನ್ನದು ಅಂತೀನಿ ಖರೆ, ಆದರೆ ಇದು ನಾನು ಹೇಳಿದ್ಹಂಗ ಎಲ್ಲಿ ಕೇಳತೈತಿ? ಈಗ ಒಳಗೆ ಹೃದಯ ಬಡಿತೈತಿ. ನಾನು ಬಡಿ ಅಂದಾಗ ಅದು ಬಡಿತೈತೇನು? ನಿಲ್ಲು ಅಂದಾಗ ನಿಲ್ಲುತೈತೇನು? ಬಡಿಯೋದು, ನಿಲ್ಲಿಸೋದು ಎರಡೂ ನನ್ನ ಕೈಯಾಗಿಲ್ಲ. ನಾನು ಮಲಗಿದ್ದಾಗಲೂ ಬಡಿತೈತೆ. ಅಂದರೆ ಇದು ಬೇರೆ ಯಾರದ್ದೋ ಕೈಯಾಗೆ ಐತೆ. ಮುಖದ ಸೌಂದರ್ಯ ಮಾಸಬಾರದು ಅಂತಾ ಸೌಂದರ್ಯ ಸಾಮಗ್ರಿ ಬಳಸತೀವಿ, ನಾವು ಎಷ್ಟೇ ಪ್ರಯತ್ನ ಮಾಡಿದರೂ ಮುಪ್ಪು ಮಾಡುವ ತಯಾರಿ ಒಳಗಿಂದಲೇ ನಡೀತೈತೆ. ಅದನ್ನು ತಡೆಯೋದು ನಮ್ಮ ಕೈಯಲ್ಲಿ ಐತೇನು? ಕಣ್ಣು ಮಬ್ಬಾಗಬಾರದು ಅಂತ ಪ್ರಯತ್ನ ಮಾಡತೇವಿ, ಆದರೆ ಅದು ಸಾಧ್ಯವಿಲ್ಲ. ಅಂದರೆ ಈ ದೇಹ ನಮ್ಮ ಮಾತನ್ನು ಯಾವಾಗಲೂ ಕೇಳಿಲ್ಲ. ದೇಹದಲ್ಲಿ ಮೊದಲು ಸೊಕ್ಕಿತ್ತು. ಈಗ ಸುಕ್ಕುಗಟ್ಟೈತಿ. ಮೊದಲು ಉಸೇನ್ ಬೋಲ್ಟ್ ತರಹ, ಪಿ.ಟಿ.ಉಷಾ ತರಹ ಓಡುತ್ತಿತ್ತು. ಈಗ ‌ಕಾಲು, ಕಾಲಿಗೊಂದು ಕೋಲು ಬಂದೈತಿ. ನಡ್ಯಾಕ ಬರವಲ್ದು.

ADVERTISEMENT

ನಿಮಗೆ ಗೊತ್ತಿರಬಹುದು ತೇನ್ ಸಿಂಗ್ ಅಂತ ಒಬ್ಬ ಇದ್ದ. ಅವ ಯುವಕ ಇದ್ದಾಗ ಹಿಮಾಲಯದ ಮೌಂಟ್ ಎವರೆಸ್ಟ್ ಹತ್ತಿದ್ದ. ಮುಪ್ಪಾದಾಗ ಒಮ್ಮೆ ಅವನಿಗೆ ಸನ್ಮಾನ ಇಟ್ಟುಕೊಂಡಿದ್ದರು. ಇವಗೆ ವೇದಿಕೆ ಹತ್ತಲು ಆಗಲಿಲ್ಲ. ಇಬ್ಬರು ಹಿಡಕೊಂಡು ಹತ್ತಿಸಿದರು. ಆಗ ಅವ ಅಳಾಕತ್ತಿದ. ‘ಯಾಕೆ ಅಳ್ತಿ’ ಎಂದು ಕೇಳಿದರು. ಅದಕ್ಕೆ ತೇನ್ ಸಿಂಗ್, ‘ಒಂದು ಕಾಲಕ್ಕೆ ಈ ತೇನ್ ಸಿಂಗ್ 30 ಸಾವಿರ ಅಡಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತಿ  ಅದನ್ನು ತನ್ನ ಕಾಲ ಕೆಳಗೆ ಹಾಕಿಕೊಂಡಿದ್ದ. ಈಗ ಮೂರು ಮೆಟ್ಟಿಲು ಹತ್ತಕೆ ಆಗವಲ್ದು. ಇದು ಬದುಕಿನ ವಿಪರ್ಯಾಸ. ಅದಕ್ಕೆ ದುಃಖ ಆಗಾಕ ಹತ್ತೈತಿ’ ಅಂದ.

ನನ್ನ ಹೆಜ್ಜೆ ನನಗೇ ಸಂಭಾಳಿಸಲು ಆಗುವುದಿಲ್ಲ. ಹಲ್ಲು ಬಿದ್ದಾವ. ಯಾವ ಜಗತ್ತು ಬೆಳಕಾಗಿ ಕಂಡಿತ್ತೋ ಅದೇ ಈಗ ಕತ್ತಲಾಗೈತಿ. ಕಿವಿ ಕಿವುಡಾಗೈತಿ. ಮುಪ್ಪು ಎಷ್ಟು ಕಷ್ಟ ಎಂದರೆ ಹೊಟ್ಯಾಗೆ ಹುಟ್ಟಿದ ಮಕ್ಕಳೂ ವೈರಿ ತರಹ ಆಗಿಬಿಡ್ತಾರ. ಈ ದೇಹ ನನ್ನ ಮಾತು ಕೇಳೋದಿಲ್ಲ ಅಂದ ಮ್ಯಾಲ ಇದನ್ನು ನಂದು ಅಂತ ಹ್ಯಾಂಗ್ ಹೇಳೋದು.

ಮನೆ ಕಟ್ಟತೀರಿ. ಮನೆ ನಂದು ಅನ್ತೀರಿ. ನೀವು ಹೋದಾಗ ಆ ಮನೆ ಅಳತೈತೇನು? ನನ್ನ ಹೊಲ, ನನ್ನ ಜಾತಿ ಅಂತೆಲ್ಲಾ ಹೇಳ್ತೀರಿ. ಇದೆಲ್ಲ ನಾವು ಸುಮ್ಮನೆ ಹೇಳೋದಷ್ಟೆ. ಯಾವುದೂ ನಮ್ಮದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.