ADVERTISEMENT

ನುಡಿ ಬೆಳಗು 46 | ಮನುಷ್ಯನನ್ನು ಮನುಷ್ಯನಂತೆ ನೋಡುವುದೇ ಅಧ್ಯಾತ್ಮ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 16 ಅಕ್ಟೋಬರ್ 2024, 21:45 IST
Last Updated 16 ಅಕ್ಟೋಬರ್ 2024, 21:45 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಗ್ರೀಕ್ ದೇಶದೊಳಗ ಡಯೋಜನಿಸ್ ಅಂತ ಒಬ್ಬ ಸಂತ ಇದ್ದ. ನಮ್ಮಲ್ಲಿ ಸರ್ವಜ್ಞ ಇದ್ದ ಹಾಂಗ. ಆತ ಒಂದಿನ ಎರಡು ತಲೆಬುರಡೆ ಇಟಕೊಂಡು ಸ್ಮಶಾನದಲ್ಲಿ ಕುಳಿತಿದ್ದ. ಅದನ್ನು ನೋಡಿದ ಅವನ ಸ್ನೇಹಿತ ‘ಸ್ಮಶಾನದಲ್ಲಿ ಯಾಕೆ ಕುಳಿತಿದ್ದಿ’ ಎಂದು ಕೇಳಿದ. ‘ಸ್ಮಶಾನದಲ್ಲಿ ಮಸ್ತ್ ಅರಾಂ ಐತಪ. ಅದಕ್ಕೆ ಇಲ್ಲೇ ಕುಳಿತೆ’ ಅಂದ ಡಯೋಜನಿಸ್. ‘ತಲೆ ಬುರಡೆ ಯಾಕೆ ಇಟಕೊಂಡಿದ್ದಿ’ ಎಂದು ಕೇಳಿದ ಸ್ನೇಹಿತ. ‘ಇದರಲ್ಲಿ ಒಂದು ಅತ್ಯಂತ ಶ್ರೀಮಂತನ ತಲೆಬುರಡೆ, ಇನ್ನೊಂದು ಕಡು ಬಡವನ ತಲೆ ಬುರಡೆ. ಇವ ಉಚ್ಚ ಜಾತಿ ಅಂತಿದ್ದ. ಇನ್ನೊಬ್ಬ ಕೀಳು ಜಾತಿ ಅಂತಿದ್ದ. ಈಗ ನೋಡು ಎರಡೂ ಒಂದೇ ಕಡೆ ಜೋಡಿಯಾಗಿ ಕುಳಿತಿವೆ. ನಿಮ್ಮ ಸಮಾಜದಲ್ಲಿ ಇಲ್ಲದ ಸಮಾನತೆ ಸ್ಮಶಾನದೊಳಗೆ ಐತಿ ನೋಡು’ ಅಂದ. ಇಲ್ಲಿ ಬಡವ ಅದಾನ ಆದರ ಬಡತನ ಇಲ್ಲ. ಶ್ರೀಮಂತಅದಾನ ಆದರ ಶ್ರೀಮಂತಿಕೆ ಇಲ್ಲ. ಮನುಷ್ಯ ಇದನ್ನು ಅರ್ಥ ಮಾಡಿಕೊಳ್ಳಬೇಕು.

ಎಲ್ಲೋ ಒಂದು ಕಡೆ ಅಪಘಾತ ಆಗಿತ್ತು. ಸಾಯುವ ಸಂದರ್ಭದಲ್ಲಿ ಒಂದು ಗುಟುಕು ನೀರು ಹಾಕಲು ಒಬ್ಬ ಬಂದಾಗ ಯಾವ ಜಾತಿಯವ ಅಂತಾ ಕೇಳ್ತೀರೇನು? ನಿಮ್ಮ ತಾಯಿ ಹೆರಿಗೆ ನೋವಿನಿಂದ ಒದ್ದಾಡುವಾಗ ಹೆರಿಗೆ ಮಾಡಿಸಲು ಬಂದ ನರ್ಸ್ ಯಾವ ಜಾತಿ ಅಂತಾ ಕೇಳ್ತಾರೇನು? ಹುಟ್ಟುವ ಸಂದರ್ಭದಲ್ಲಿ ಇಲ್ಲದ, ಸಾಯುವ ಸಂದರ್ಭದಲ್ಲಿಯೂ ಇಲ್ಲದ, ಜೀವನದ ತುಂಬಾ ತುಂಬಿಕೊಂಡ ಜಾತಿ ನನ್ನದು ಹೇಗಾಗುತ್ತದೆ? ಮನುಷ್ಯ ತಪ್ಪು ಕಲ್ಪನೆಗಳಿಂದ ಬಳಲುತ್ತಿದ್ದಾನ.

ADVERTISEMENT

ಮಾವಿನ ಗಿಡಕ್ಕೆ ನಾವು ಬೇವಿನ ಗಿಡ ಅನ್ನೋದಿಲ್ಲ. ಬೇವಿನ ಗಿಡಕ್ಕೆ ಜಾಲಿ ಗಿಡ ಅಂದಿಲ್ಲ. ಜಾಲಿ ಗಿಡಕ್ಕೆ ಹುಣಸೆ ಗಿಡ ಅಂದಿಲ್ಲ. ಬೇವಿನ ಗಿಡವನ್ನು ಬೇವಿನ ಗಿಡವಾಗಿಯೇ ನೋಡ್ತೀವಿ. ಮಾವಿನ ಗಿಡವನ್ನು ಹಾಗೆಯೇ ನೋಡ್ತೀವಿ. ಹುಣಸೆ ಗಿಡವನ್ನೂ ಹುಣಸೆ ಗಿಡವನ್ನಾಗಿಯೇ ನೋಡ್ತೀವಿ. ಆದರೆ ಮನುಷ್ಯನನ್ನು ಮನುಷ್ಯನನ್ನಾಗಿ ಮಾತ್ರ ನೋಡಲ್ಲ. ಇದು ಸುಧಾರಣೆಯಾಗುವುದು ಯಾವಾಗ? ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುವ ದಿನ ಯಾವಾಗ ಬರತೈತಿ ಎನ್ನುವುದೇ ಗೊತ್ತಾಗವಲ್ದು. ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದೇ ಅಧ್ಯಾತ್ಮ. ಮನುಷ್ಯನನ್ನು ಮನುಷ್ಯ ಪ್ರೀತಿಸುವುದೇ ನಿಜವಾದ ಧರ್ಮ. ನಮ್ಮನ್ನು ನೋಡಿದರೆ ನಿಮಗೆ ಸಂತೋಷ ಆಗಬೇಕು, ನಿಮ್ಮನ್ನು ನೋಡಿದರೆ ನಮಗೆ ಸಂತೋಷ ಆಗಬೇಕು. ಅದೇ ಧರ್ಮ.

ಬೊಂತಾದೇವಿ ಅಂತ ಒಬ್ಬಾಕಿ ಶರಣೆ ಇದ್ದಳು. ಕಾಶ್ಮೀರದ ರಾಜಕುಮಾರಿಯಾಗಿದ್ದ ಅವಳು ಕಲ್ಯಾಣಕ್ಕೆ ಬಂದು ಶರಣಳಾದವಳು. ಆಕೆ, ‘ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ? ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ? ಎಲ್ಲಿ ನೋಡಿದೊಡೆ ಬಯಲೊಂದೆ; ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ. ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ’ ಎನ್ನುತ್ತಾಳೆ. ಬಿಡಾಡಿ ಅಂದರೆ ಕಟ್ಟಿಹಾಕಲು ಸಾಧ್ಯವಿಲ್ಲದ್ದು. ಆಕೆ ತನ್ನ ದೇವನಿಗೆ ಬಿಡಾಡಿ ಎಂದು ಕರೆದಳು. ನಮ್ಮ ಬದುಕು ಬಯಲಾಗಬೇಕು. ಯಾವ ಸಂಪತ್ತೂ ನಮ್ಮ ಜೊತೆಗೆ ಬರಲ್ಲ. ಮಾರುತಿ ಕಾರು ಖರೀದಿ ಮಾಡಿದ್ದರೂ ನೀವು ಮೇಲಕ್ಕೆ ಹೋಗುವಾಗ ಅದು ನಿಮ್ಮ ಜೊತೆ ಮೂರು ಮಾರೂ ಬರಲ್ಲ. ಇನ್ನೊವಾ ಕಾರಿದ್ದರೂ ನಿಮ್ಮ ಕೊನೆಗಾಲದಲ್ಲಿ ಇವ ನಮ್ಮವ ಎನ್ನಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.