ADVERTISEMENT

ನುಡಿ ಬೆಳಗು 47 | ‘ನ’ ತೆಗೆದು ‘ನಿ’ ಹಾಕಿ ಅಷ್ಟೆ!

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 18 ಅಕ್ಟೋಬರ್ 2024, 0:58 IST
Last Updated 18 ಅಕ್ಟೋಬರ್ 2024, 0:58 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಅಲೆಗ್ಸಾಂಡರ್ ಮಹಾರಾಜ ಇಡೀ ಜಗತ್ತನ್ನೇ ಗೆದ್ದಿದ್ದ. ಆತ ಒಂದು ಮಾತು ಹೇಳಿದ್ದ. ‘ನಾನು ಸತ್ತ ನಂತರ ಹೆಣವನ್ನು ಪೆಟ್ಟಿಗೆಯಲ್ಲಿ ತುಂಬುವಾಗ ನನ್ನ ಎರಡೂ ಕೈಗಳು ಹೊರಗೆ ಕಾಣುವಂತೆ ಇರಲಿ. ಯಾಕೆಂದರೆ ಜಗತ್ತನ್ನೇ ಗೆದ್ದ ರಾಜ ಸಾಯುವಾಗ ಖಾಲಿ ಕೈಯಲ್ಲಿ ಹೋದ ಎನ್ನುವುದು ಜಗತ್ತಿಗೆ ಗೊತ್ತಾಗಲಿ’ ಎಂದು. ‘ನಾನು ಶ್ರೀಮಂತ ರಾಷ್ಟ್ರದ ಬಡ ರಾಜ’ ಎಂದು ಅವ ಹೇಳುತ್ತಿದ್ದ.

ಒಬ್ಬನಿಗೆ 20 ಲಕ್ಷ ರೂಪಾಯಿ ಲಾಟರಿ ಬಂದಿತ್ತು. ಅದನ್ನು ಆತನಿಗೆ ತಿಳಿಸಿದರೆ ಆಘಾತವಾಗಬಹುದು ಎಂದು ಆತನ ಸಂಬಂಧಿಗಳು ಈ ವಿಷಯವನ್ನು ಮಠದ ಸ್ವಾಮೀಜಿಗಳಿಂದ ಹೇಳಿಸುವುದು ಎಂದು ನಿರ್ಧರಿಸಿದರು. ವಿಷಯವನ್ನು ನಿಧಾನವಾಗಿ ತಿಳಿಸುವಂತೆ ಸ್ವಾಮೀಜಿಯನ್ನು ಕೇಳಿಕೊಂಡರು. ಅದರಂತೆ ಸ್ವಾಮೀಜಿ ಆತನಿಗೆ, ‘ನಿನಗೆ 2.5 ಲಕ್ಷ ರೂಪಾಯಿ ಲಾಟರಿ ಹಣ ಬಂದರೆ ಏನು ಮಾಡ್ತಿ’ ಎಂದು ಕೇಳಿದರು. ಆತ ‘ಒಂದಿಷ್ಟು ಸಾಲ ಇದೆ, ಅದನ್ನು ತೀರಿಸುತ್ತೇನೆ’ ಎಂದ. ‘5 ಲಕ್ಷ ರೂಪಾಯಿ ಬಂದರೆ?’ ಅಂತ ಕೇಳಿದರು ಅಜ್ಜಾರು. ‘ಮನೆ ದುರಸ್ತಿ ಮಾಡಿಸ್ತೀನಿ’ ಅಂದ ಆತ. ’10 ಲಕ್ಷ ರೂಪಾಯಿ ಬಂದರೆ?’ ಮತ್ತೆ ಕೇಳಿದರು ಸ್ವಾಮಿಗಳು. ’10 ಲಕ್ಷ ಬಂದರೆ ಮಗಳ ಮದುವೆ ಮಾಡಿಸ್ತೀನಿ. ಒಂದಿಷ್ಟು ಹೊಲ ತಗೋತೀನಿ’ ಅಂದ. ‘ಅಕಸ್ಮಾತ್ 20 ಲಕ್ಷ ರೂಪಾಯಿ ಲಾಟರಿ ಹಣ
ಬಂತು ಅಂದ್ರೆ ಏನ್ ಮಾಡ್ತಿ’ ಎಂದು ಕೇಳಿದಾಗ ‘ಅದರಲ್ಲಿ 10 ಲಕ್ಷ ರೂಪಾಯಿ ಮಠಕ್ಕೆ ಕೊಡ್ತೀನಿ’ ಎಂದ. ಆ ಮಾತನ್ನು ಕೇಳಿದ ಗುರುಗಳಿಗೇ ಹಾರ್ಟ್ ಅಟ್ಯಾಕ್ ಆಗಿತ್ತು. ಗುರುಗಳಿಗೇ ಹೀಗಾದರೆ ಇನ್ನು ಸಾಮಾನ್ಯ ಜನರ ಕತೆ ಏನು?

ADVERTISEMENT

ನಂದು ಅನ್ನೋದು ಒಳಕ್ಕೆ ಕುಂತಿದ್ದಕ್ಕೇ ಇಷ್ಟೆಲ್ಲಾ ದುಃಖ ಆಗತೈತಿ ಮನುಷ್ಯಗ. ಯಾವುದನ್ನೂ ನಂದು ಅನಬ್ಯಾಡಿ ಅಂತೀರಿ. ದೇಹ ನಂದಲ್ಲ. ಹೊಲ ನಂದಲ್ಲ. ಸಂಪತ್ತು ನಂದಲ್ಲ ಅಂತೀರಿ. ಏನ್ ನಿಮ್ದು, ನಿಮ್ದು
ಅಂತ ಹೇಳಕೋತ ಹೋಗಬೇಕೇನು? ಹಂಗೇನಿಲ್ಲ, ಆದರ ಬಸವಣ್ಣನವರು ಒಂದು ಮಾತು ಹೇಳ್ಯಾರ ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ ಅಂತ. ಹೊರಗೆ ವ್ಯವಹಾರದೊಳಗೆ ನಂದು ಅಂತಲೇ ಇರಬೇಕು. ಆದರೆ ಒಳಗೆ ಇದು ಶಿವ ನಿಂದು ಎಂಬ ಬೆಳಕು ಇರಬೇಕು. ಇದು ಅಧ್ಯಾತ್ಮ.

ಮನೆ ಕಟ್ಟಿದ ಮೇಲೆ ನಂದು ಅನ್ತೀವಿ ಖರೆ. ಆದರೆ ಕಲ್ಲು, ಮಣ್ಣು, ನೀರು ಇರದಿದ್ದರೆ ನಾವೆಲ್ಲಿ ಮನೆ ಕಟ್ಟಲು ಸಾಧ್ಯವಿತ್ತು? ಅದಕ್ಕೆ ಹೊರಗೆ ನಂದು ಅನಬೇಕು. ಒಳಗೆ ನಿಂದು ಅನಬೇಕು. ಪ್ರತಿ ದಿನ ಬೆಳಿಗ್ಗೆ ದೀಪ ಹಚ್ಚುವಾಗ ಇದು ನಾ ಹಚ್ಚಿದ ದೀಪವಲ್ಲ, ನೀ ಕೊಟ್ಟ ಬೆಳಕು ಅಂದರೆ ಜೀವನ ತಾಪ ಆಗಲ್ಲ. ಉಣ್ಣುವಾಗ ಇದು ನೀ ಕೊಟ್ಟ ಅನ್ನ ಅಂತ ಉಣ್ಣಬೇಕು. ಮನೆಯ ನೆರಳಲ್ಲಿ ಇರುವಾಗ ಇದು ನೀ ಕೊಟ್ಟ ನೆರಳು ಅಂತ ಇರಬೇಕು. ಅಡುಗೆ ಮನೆಗೆ ಹೋಗಿ ಹೆಂಡತಿಗೆ ಎಲ್ಲಾ ನಿಂದೇ ಅನಬೇಕು. ಹೊರಕ್ಕೆ ಬಂದರೆ ಸ್ನೇಹಿತರಿಗೆ ನನ್ನದೇನಿಲ್ಲ. ನೀವಿದ್ದಿದ್ದಕ್ಕೆ ನಾನು ಅನಬೇಕು. 'ನ’ ಅಂದರೆ ಬಂಧನ, ‘ನಿ’ ಅಂದರೆ ಮುಕ್ತ. ‘ನ’ ತೆಗೆದು ‘ನಿ’ ಹಾಕೋದು ಅಷ್ಟೆ. ಇದು ಮನುಷ್ಯನನ್ನು ಹಗುರ ಮಾಡತೈತಿ. ಇಲ್ಲವಾದರೆ ಜೀವನ ಒಜ್ಜೆ ಆಗತೈತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.