ಜೀವನ ಅಂದರೆ ಮೂರು ಅಂಶಗಳ ನಿರ್ಮಾಣ. ಮೈ, ಮಾತು, ಮನಸ್ಸು ಇವುಗಳ ಸಂಗಮವೇ ಜೀವನ. ಇವುಗಳನ್ನು ಸರಿಯಾಗಿ ಬಳಸಬೇಕು. ಇವುಗಳನ್ನು ಕೆಟ್ಟದ್ದಕ್ಕೆ ಉಪಯೋಗ ಮಾಡಬಾರದು. ನಮಗೆ ಕೈಗಳು ಇದಾವೆ. ಅವುಗಳನ್ನು ಬಳಸುವ ವಿಧಾನವನ್ನು ಗಮನಿಸಿ. ಪ್ರಜ್ಞೆ ಇದ್ದರೆ ಬಳಸುವ ವಿಧಾನವೇ ಬೇರೆ. ಪ್ರಜ್ಞೆ ಇಲ್ಲದಿದ್ದರೆ ಬಳಸುವ ವಿಧಾನವೇ ಬೇರೆ. ಪ್ರಜ್ಞೆ ಇಲ್ಲದಿದ್ದರೆ ನನಗೆ ತೋಳ್ಬಲ ಐತಿ ಅಂತ 10 ಮಂದಿಗೆ ಹೊಡೀತೀವಿ. ನಾನು ಶಕ್ತಿವಂತ ಅಂತ ತಿಳ್ಕೋತೀವಿ. ಅದೇ ಒಂದು ವೇದಿಕೆ ಹತ್ತಿ ಕೈ ಮುಗಿದರೆ 10 ಸಾವಿರ ಮಂದಿಯನ್ನು ಮುಟ್ಟಬಹುದು. ಇದು ಕೈಗಳ ಸಾಮರ್ಥ್ಯ. ಯಾವುದೇ ಅಂಗವನ್ನು ಪ್ರಜ್ಞೆಯಿಂದ ಬಳಸಬೇಕಾಗುತ್ತದೆ.
ಸತ್ಯಕ್ಕ ಅಂತ ಒಬ್ಬಳು ಶರಣೆ 12ನೇ ಶತಮಾನದಲ್ಲಿ ಇದ್ದಳು. ಆಕೆಯ ಕೆಲಸ ಏನು ಅಂದರ ಕಸ ಹೊಡೆಯುವುದು. ಕಲ್ಯಾಣದ ಬೀದಿಬೀದಿಗಳಲ್ಲಿ ಆಕೆ ಕಸ ಗುಡಿಸುತ್ತಿದ್ದಳು. ಆಕೆ ಒಂದು ವಚನ ಬರೀತಾಳೆ. ‘ಅರ್ಚನೆ, ಪೂಜನೆ ನೇಮವಲ್ಲ, ಮಂತ್ರ ತಂತ್ರಗಳು ನೇಮವಲ್ಲ, ಧೂಪ ದೀಪಾರತಿ ನೇಮವಲ್ಲ, ಪರಧನ, ಪರಸ್ತ್ರೀ
ಪರದ್ರವ್ಯಂಗಗಳಿಗೆರಗದಿಪ್ಪುದೇ ನೇಮ ಶಂಭುಜಕ್ಕೇಶ್ವರನಲ್ಲಿ ಕಾಣಿ’ ಅಂತ. ಪೂಜೆ ಅಂದರೆ ಯಾವುದಕ್ಕೆ ಅನ್ನಬೇಕು ಎನ್ನುವುದು ಆಕೆಯ ಜಿಜ್ಞಾಸೆ.
ನಮ್ಮ ಪೂಜೆನೇ ಬೇರೆ. ನಾವು ಪೂಜೆಗೆ ಹೂವು ಬೇಕು ಅಂತ ಗಿಡಗಳನ್ನೇ ಉಳಿಸೋದಿಲ್ಲ. ಕುರಿ, ದನ ಮೇಯ್ದಾಂಗ ಹರಕೊ ಬರ್ತೀವಿ. ಶರಣರ ದೃಷ್ಟಿಕೋನದ ಪೂಜೆಗೂ ನಮ್ಮ ದೃಷ್ಟಿಕೋನದ ಪೂಜೆಗೂ ವ್ಯತ್ಯಾಸ ಇದೆ. ನೀರು ಹಾಕಿ ಮಾಡುವುದು ಪೂಜೆಯಲ್ಲ. ಪತ್ರಗಳಿಂದಲೂ ಪೂಜೆಯಲ್ಲ. ಧೂಪ ದೀಪಗಳಿಂದಲೂ ಪೂಜೆಯಲ್ಲ. ಪೂಜೆ ಅಂದರ ಇನ್ನೊಬ್ಬರ ವಸ್ತುಗಳನ್ನು ಮುಟ್ಟದೇ ಇರುವುದು. ಮನಸ್ಸು ಆಸೆ ಮಾಡದಂಗೆ ಇದ್ದರೆ ಅದೇ ಪೂಜೆ.
ಪಶ್ಚಿಮ ಬಂಗಾಳದಲ್ಲಿ ಈಶ್ವರಚಂದ್ರ ವಿದ್ಯಾಸಾಗರ ಅಂತ ಒಬ್ಬರು ಇದ್ದರು. ಶ್ರೇಷ್ಠ ಶಿಕ್ಷಣ ತಜ್ಞರು, ಸಮಾಜಸುಧಾರಕರೂ ಆಗಿದ್ದರು. ಹೆಣ್ಣು ಮಕ್ಕಳೂ ಓದಬೇಕು ಎನ್ನುವುದು ಅವರ ಬಯಕೆ. ಅಲ್ಲದೆ ವಿಧವಾ ವಿವಾಹವನ್ನೂ ಮಾಡಿಸುತ್ತಿದ್ದರು. ಒಂದು ದಿನ ಅವರು ತಳ್ಳೋ ರಿಕ್ಷಾದಲ್ಲಿ ಹೋಗುತ್ತಿದ್ದರು. ದಾರಿಯಲ್ಲಿ ಒಂದು ಸೇತುವೆ ಬಂತು. ರಿಕ್ಷಾವಾಲನಿಗೆ ಅದನ್ನು ಹತ್ತಿಸಲು ಸಾಧ್ಯವಾಗಲಿಲ್ಲ. ಇವರು ಕೆಳಕ್ಕೆ ಇಳಿದು ರಿಕ್ಷಾವನ್ನು ಸೇತುವೆ ಹತ್ತಿಸಿದರು. ಮನೆ ಸೇರಿದ ಮೇಲೆ ರಿಕ್ಷಾ ವಾಲನಿಗೆ ಎಷ್ಟು ಬಿಲ್ಲಾತು ಎಂದು ಕೇಳಿದರು. ಆತ 50 ರೂಪಾಯಿ ಕೊಡಿ ಎಂದ. ಆಗ ಬಿಸಿಲು ಬಹಳ ಇತ್ತು. ಬಡಕಲು ದೇಹದ ರಿಕ್ಷಾವಾಲ ಬೆವರುತ್ತಿದ್ದ. ಅದನ್ನು ನೋಡಿ ವಿದ್ಯಾಸಾಗರರು ನೂರು ರೂಪಾಯಿ ಕೊಟ್ಟರು. ಆದರೆ ರಿಕ್ಷಾವಾಲ ತನಗೆ 50 ರೂಪಾಯಿ ಸಾಕು ಎಂದ. ‘ಪರವಾಗಿಲ್ಲ. 50 ರೂಪಾಯಿ ಹೆಚ್ಚಿಗೆ ಇಟ್ಟುಕೊ’ ಎಂದರು ವಿದ್ಯಾಸಾಗರರು. ಅದಕ್ಕೆ ರಿಕ್ಷಾವಾಲ ‘ನನ್ನ ರಿಕ್ಷಾದ ಬಾಡಿಗೆ 50 ರೂಪಾಯಿ ಅಷ್ಟೆ. ಅಷ್ಟನ್ನೇ ಕೊಡಿ. ಹೆಚ್ಚಿಗೆ ಬೇಡ. ಯಾಕೆಂದರೆ ನಾನು ರಿಕ್ಷಾವಾಲನೇ ಹೊರತು ಭಿಕ್ಷಾದವನಲ್ಲ’ ಎಂದ.
ಇದನ್ನೇ ಪ್ರಜ್ಞೆಯಿಂದ ಮಾಡುವ ಕೆಲಸ ಅನ್ನೋದು. ಅಂದರ ಕೈಯಿಂದ ಇನ್ನೊಬ್ಬರ ಸಂಪತ್ತು ಮುಟ್ಟೋದಲ್ಲ, ಇನ್ನೊಬ್ಬರಿಗೆ ಹಿಂಸೆ ಕೊಡೋದಲ್ಲ. ಕೈಗಳನ್ನು ಒಳ್ಳೆಯ ಕೆಲಸಕ್ಕೆ ಬಳಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.