ADVERTISEMENT

ನುಡಿ ಬೆಳಗು –56: ಮಾತು ನೋವು ತರಬಾರದು

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 31 ಅಕ್ಟೋಬರ್ 2024, 0:28 IST
Last Updated 31 ಅಕ್ಟೋಬರ್ 2024, 0:28 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಮಾತು ಇನ್ನೊಬ್ಬರಿಗೆ ನೋವು ತರಬಾರದು. ನಾವು ಒಬ್ಬರಿಗೆ ಚುಚ್ಚು ಮಾತನ್ನು ಆಡಿರ್ತೀವಿ. ನಿಂದನೆ ನುಡಿಯನ್ನಾಡಿರ್ತೀವಿ. ಒಬ್ಬರ ಬಗ್ಗೆ ಚಾಡಿ ಹೇಳಿರ್ತೀವಿ. ಮನುಷ್ಯ ಒಂದನ್ನು ತಿಳಕೋಬೇಕು, ಯಾವ ಪಶು ಪಕ್ಷಿ ಪ್ರಾಣಿಗಳಿಗೆ ಇರಲಾರದ ಮಾತಿನ ಶಕ್ತಿಯನ್ನು ನಿಸರ್ಗ ನಮಗೆ ಕರುಣಿಸಿದೆ. ನೋಡಿ, ಕಾಗೆ ಐತಲ್ಲ, ಅದಕ್ಕೆ 'ಕ’ ಎಂಬ ಒಂದೇ ಅಕ್ಷರ ಗೊತ್ತೈತಿ. ಒಂದೇ ಅಕ್ಷರ ಗೊತ್ತಿರುವ ಕಾಗೆ ಕಾ ಕಾ ಎಂದೇ ತನ್ನ ಬಳಗವನ್ನೆಲ್ಲಾ ಕರೆಯುತ್ತದೆ. ಕೋಗಿಲೆಗೆ ಕೂ ಕೂ ಅಷ್ಟೇ ಗೊತ್ತು. ಆದರೂ ಅದಕ್ಕೆ ಎಂತಹ ಮಾನ್ಯತೆ. ನಮ್ಮಲ್ಲಿ ಯಾರಾದರೂ ಚೆನ್ನಾಗಿ ಹಾಡಿದರೆ ಗಾನ ಕೋಗಿಲೆ ಅಂತಾರ. ನಮ್ಮ ಮನೆಯಲ್ಲಿ ಸಣ್ಣ ಕರು ಐತಿ. ಆ ಕರು ಅಂಬಾ ಎಂದು
ಕರೆದರೆ ತಾಯಿ ಹಸು ಹಗ್ಗ ಹರಕೊಂಡಾದರೂ ಬರತೈತಿ. ಕಾಗೆಗೆ ಕ, ಕೋಗಿಲೆಗೆ ಕೂ, ಕರುವಿಗೆ ಅಂಬಾ ಅಷ್ಟೇ ಐತಿ. ಆದರೆ ನಮಗೆ 49 ಮೂಲಾಕ್ಷರ ಇದ್ದರೂ ನಾವು ದೇಶಕ್ಕೇ ಮೂಲಾಗೀವಿ. ಬರೇ ಬೆಂಕಿ ಹಚ್ಚುವ ಕೆಲಸ ಮಾಡ್ತೀವಿ. ನಮ್ಮ ಬಾಯಿಯಿಂದ ಚಂದ ಮಾತು ಬರಬೇಕು. 

ಗಾಂಧೀಜಿ ಎರಡೇ ಎರಡು ಶಬ್ದ ಹೇಳಿದರು. ಕ್ವಿಟ್ ಇಂಡಿಯಾ ಅಥವಾ ಚಲೋಜಾವ್. ಅಂದರ ಬ್ರಿಟಿಷ್ ಸಾಮ್ರಾಜ್ಯ ಭಾರತದಿಂದ ಓಡಿರಬೇಕಾದರೆ ಗಾಂಧಿಯ ಎರಡು ಮಾತಿನಲ್ಲಿ ಎಂತಹ ಶಕ್ತಿ ಇತ್ತು!

ADVERTISEMENT

ಒಬ್ಬ ಹೆಣ್ಣುಮಗಳು ಇದ್ದಳು. ಆಕಿ ಗಂಡ ಊಟಕ್ಕೆ ಕುಳಿತಿದ್ದ. ಮಜ್ಜಿಗೆ ನೀಡು ಅಂದ. ಆದರೆ, ಮನೆಯಲ್ಲಿ ಮಜ್ಜಿಗೆ ಇರಲಿಲ್ಲ. ಆಕಿ, ಪಕ್ಕದ ಮನಿಗೆ ಹೋಗಿ ಮಜ್ಜಿಗೆ ಕೇಳಿದಳು. ಪಕ್ಕದ ಮನೆಯವಳು ‘ಹಾಂಗೇ ಕೊಡೋದಿಲ್ಲ. ನೀನು ರಾಮಾಯಣ ಹೇಳು’ ಅಂದಳು. ಅದಕ್ಕೆ ಇವಳು ‘ಅಯ್ಯೋ ರಾಮಾಯಣ ಹೇಳಲು ಒಂದು ವರ್ಷ ಬೇಕಾಗುತ್ತದೆ. ಈಗ ನನ್ನ ಗಂಡ ಊಟಕ್ಕೆ ಕುಳಿತಿದ್ದಾನೆ’ ಎಂದಳು. ಅದಕ್ಕೆ ಪಕ್ಕದ ಮನೆಯವಳು ಒಪ್ಪಲಿಲ್ಲ. ರಾಮಾಯಣ ಕತೆ ಹೇಳಿದರೆ ಮಾತ್ರ ಮಜ್ಜಿಗೆ ಕೊಡ್ತೀನಿ ಅಂದಳು. ಆಗ ಇವಳು ‘ದಶರಥನ ಕಂದ, ರಾವಣನ ಕೊಂದ, ಸೀತೆಯ ತಂದ’ ಎಂದು ಹೇಳಿ ‘ರಾಮಾಯಣ ಮುಗೀತು, ಮಜ್ಜಿಗೆ ಕೊಡು’ ಎಂದಳು. ಅಂದರ ರಾಮಾಯಣವನ್ನೂ ಹೇಳಬೇಕು, ಗಂಡನ ಊಟವೂ ಕೆಟ್ಟಿರಬಾರದು ಹಾಗೆ ಹೇಳಿದಳು. ಮಾತನ್ನು ಚಲೋದಕ್ಕೆ ಬಳಸಬೇಕು.

ಸಾಕ್ರೆಟಿಸ್ ಹತ್ತಿರ ಒಬ್ಬ ಬಂದು, ಇನ್ನೊಬ್ಬನ ಬಗ್ಗೆ ಟೀಕೆ ಮಾಡಲು ಹತ್ತಿದ. ತಕ್ಷಣ ಅದನ್ನು ತಡೆದ ಸಾಕ್ರೆಟಿಸ್, ‘ಅವನ ಬಗ್ಗೆ ನಿಂದನೆಯ ಮಾತುಗಳನ್ನು ಹೇಳುತ್ತಿದ್ದೀಯಲ್ಲ. ಅದರಿಂದ ನಿನಗೇನಾದರೂ ಲಾಭ ಇದೆಯಾ’ ಎಂದು ಕೇಳಿದ. ಅದಕ್ಕೆ ಅವ ‘ಇಲ್ಲ’ ಎಂದ. ‘ನನಗೇನಾದರೂ ಲಾಭ ಇದೆಯಾ’ ಎಂದು ಕೇಳಿದ. ‘ಇಲ್ಲ’ ಎಂದ. ‘ನೀನು ಯಾರ ಬಗ್ಗೆ ನಿಂದನೆಯ ಮಾತನ್ನು ಆಡುತ್ತಿದ್ದೀಯಲ್ಲ ಅವನಿಗಾದರೂ ಏನಾದರೂ ಪ್ರಯೋಜನ ಇದೆಯಾ’ ಎಂದು ಕೇಳಿದ. ‘ಇಲ್ಲ ಅವನಿಗೂ ಪ್ರಯೋಜನ ಇಲ್ಲ’ ಎಂದ. ‘ನಿನಗೂ ಪ್ರಯೋಜನ ಇಲ್ಲ, ನನಗೂ ಪ್ರಯೋಜನ ಇಲ್ಲ. ಅವನಿಗೂ ಪ್ರಯೋಜನ ಇಲ್ಲ. ಅಂದ ಮೇಲೆ ಅಂತಹ ಮಾತುಗಳನ್ನು ಆಡಿ ನಿನ್ನ ಬಾಯಿ, ನನ್ನ ಕಿವಿ ಯಾಕೆ ಹೊಲಸು ಮಾಡುತ್ತಿ ನಡೀ ಅತ್ಲಾಗೆ’ ಎಂದು ಕಳಿಸಿದ. 

ಮಾತು ನೋವು ತರಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.